Sunday, 11th May 2025

Stock Market: ಷೇರುಪೇಟೆಯಲ್ಲಿ ಕರಡಿ ಕುಣಿತ; ಸೆನ್ಸೆಕ್ಸ್ 463 ಪಾಯಿಂಟ್ಸ್ ಕುಸಿತ

Stock Market

ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಭಾರತೀಯ ಷೇರುಪೇಟೆ (Stock Market)ಯ ಮೇಲೂ ಪರಿಣಾಮ ಬೀರಿದ್ದು, ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಬುಧವಾರ ತಮ್ಮ ಲಾಭವನ್ನು ಕಳೆದುಕೊಂಡು ನಷ್ಟದಲ್ಲೇ ವಹಿವಾಟು ನಡೆಸಿವೆ. ಮಧ್ಯಾಹ್ನ ಬಿಎಸ್ಇ ಸೆನ್ಸೆಕ್ಸ್ (BSE Sensex) 463 ಪಾಯಿಂಟ್ಸ್ ಅಥವಾ ಶೇಕಡಾ 0.57ರಷ್ಟು ಕುಸಿದು 81,458ಕ್ಕೆ ತಲುಪಿದರೆ, ನಿಫ್ಟಿ 50 (Nifty50) 146 ಪಾಯಿಂಟ್ಸ್ ಅಥವಾ ಶೇಕಡಾ 0.58ರಷ್ಟು ಕುಸಿದು 24,894ಕ್ಕೆ ಬಂದು ಮುಟ್ಟಿದೆ.

1,619 ಷೇರುಗಳು ಲಾಭದಲ್ಲಿದ್ದರೆ, 2,345 ಷೇರುಗಳು ನಷ್ಟದಲ್ಲೇ ವ್ಯವಹಾರ ನಡೆಸಿದವು. 106 ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಏಷಿಯನ್ ಪೈಂಟ್ಸ್‌, ಬಜಾಜ್ ಫೈನಾನ್ಸ್ ಮತ್ತು ಸನ್ ಫಾರ್ಮಾ ಲಾಭ ಗಳಿಸಿದರೆ, ಟಾಟಾ ಮೋಟಾರ್ಸ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್ಸ್ & ಎಸ್ಇಝಡ್ ಹೆಚ್ಚು ನಷ್ಟ ಅನುಭವಿಸಿದವು. ಇನ್ನು ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಡಾಲರ್‌ ಎದುರು ರೂಪಾಯಿ 83.98 ಮೌಲ್ಯ ಕಾಯ್ದುಕೊಂಡಿದೆ.

ʼʼಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಮತ್ತು ಮೂಲ ಲೋಹದ ಬೆಲೆಗಳ ಕುಸಿತ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 70 ಡಾಲರ್‌ಗಿಂತ ಕಡಿಮೆಗೆ ಕುಸಿದಿರುವುದು ಜಾಗತಿಕವಾಗಿ ಬೇಡಿಕೆ ಕುಸಿದಿರುವುದರ ಸಂಕೇತ. ಇದು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ನಿರೀಕ್ಷೆಗಳನ್ನು ದುರ್ಬಲಗೊಳಿಸುವುದನ್ನು ಸೂಚಿಸುತ್ತದೆʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಾರುಕಟ್ಟೆ

ಏಷ್ಯಾದ ಷೇರುಗಳು ಬುಧವಾರ ತೀವ್ರವಾಗಿ ಕುಸಿದರೆ, ತೈಲ ಬೆಲೆಗಳು ದುರ್ಬಲ ಬೇಡಿಕೆಯ ಕಾರಣದಿಂದ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದವು. ಜಪಾನ್‌ನ ನಿಕೈ 225 ಷೇರುಪೇಟೆ ಸೂಚ್ಯಂಕ ಶೇ. 0.7ರಷ್ಟು ಕುಸಿತ ಕಂಡಿದ್ದರೆ, ಟೋಪಿಕ್ಸ್ ಸೂಚ್ಯಂಕ ಶೇ. 0.86 ರಷ್ಟು ಕುಸಿತ ದಾಖಲಿಸಿದೆ. ದಕ್ಷಿಣ ಕೋರಿಯಾದ ಕೋಸ್ಪಿ ಶೇ. 0.20ರಷ್ಟು ಕಡಿಮೆಯಾಗಿದೆ. ಅದಾಗ್ಯೂ ಸ್ಮಾಲ್ ಕ್ಯಾಪ್ ಕೊಸ್ಡಾಕ್ ಶೇಕಡಾ 1.61ರಷ್ಟು ಏರಿಕೆಯಾಗಿದೆ. ಆಸ್ಟ್ರೇಲಿಯಾದ ಎಸ್ & ಪಿ / ಎಎಸ್ಎಕ್ಸ್ 200 ಸೂಚ್ಯಂಕ ತುಸು ಚೇತರಿಸಿಕೊಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು 17,190 ಪಾಯಿಂಟ್ಸ್‌ನಿಂದ ಕುಸಿದು 17,072ಕ್ಕೆ ತಲುಪಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್ ಅನ್ನು ಜಾಗತಿಕ ಮಾರುಕಟ್ಟೆಗಳಿಗೆ ದುರ್ಬಲ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಇದು ನಿಜವಾಗಿದೆ. ಆರಂಭಿಕ ಪ್ರವೃತ್ತಿಗಳನ್ನು ಗಮನಿಸಿದರೆ, ಇದು ಈ ವರ್ಷವೂ ನಿಜವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆ ಕುಸಿತದ ಹಿಂದಿನ ಕಾರಣವೇನು?

ಅಮೇರಿಕದಲ್ಲಿ ಉದ್ಯೋಗ ವರದಿಗೆ ಮುಂಚಿತವಾಗಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಇದು ಬಡ್ಡಿದರ ಕಡಿತಕ್ಕೆ ಫೆಡರಲ್ ರಿಸರ್ವ್‌ನ ವಿಧಾನದ ಮೇಲೆ ಪರಿಣಾಮ ಬೀರಲಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಇತ್ತೀಚಿನ ಹೇಳಿಕೆಗಳು ಕಾರ್ಮಿಕ ಮಾರುಕಟ್ಟೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ಉಂಟು ಮಾಡಿದೆ. ಇದು ಸೆಪ್ಟೆಂಬರ್‌ನಲ್ಲಿ ಸಂಭಾವ್ಯ ದರ ಕಡಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು 165,000 ಹೊಸ ಉದ್ಯೋಗಗಳ ಹೆಚ್ಚಳ ಮತ್ತು ನಿರುದ್ಯೋಗ ದರವು ಶೇ. 4.2ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Richest Man: ಸಂಪತ್ತಿನಲ್ಲಿ ನಾರಾಯಣ ಮೂರ್ತಿ ಅವರನ್ನು ಹಿಂದಿಕ್ಕಿದ ಇನ್ಫೋಸಿಸ್ ಸಹಸಂಸ್ಥಾಪಕ ಗೋಪಾಲಕೃಷ್ಣನ್!

Leave a Reply

Your email address will not be published. Required fields are marked *