Sunday, 11th May 2025

Varun Aradhya: ರೀಲ್ಸ್‌ ಸ್ಟಾರ್‌ ವರುಣ್‌ ಆರಾಧ್ಯ ವಿರುದ್ಧ ದೂರು ದಾಖಲಿಸಿದ ಮಾಜಿ ಪ್ರೇಯಸಿ

Varun Aradhya

ಬೆಂಗಳೂರು: ರೀಲ್ಸ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದು ಬಳಿಕ ಕಿರುತೆರೆ ಕಾಲಿಟ್ಟ ‘ಬೃಂದಾವನ’ (Brundavana) ಧಾರಾವಾಹಿ ಖ್ಯಾತಿಯ ವರುಣ್ ಆರಾಧ್ಯ (Varun Aradhya) ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಮಾಜಿ ಪ್ರಿಯತಮೆ ವರ್ಷಾ ಕಾವೇರಿ (Varsha Kaveri) ಆರೋಪಿಸಿದ್ದಾರೆ. ಅಲ್ಲದೆ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ಹಲವು ವರ್ಷ ಪರಸ್ಪರ ಪ್ರೀತಿಸುತ್ತಿದ್ದರು. ಪ್ರತಿದಿನ ಇಬ್ಬರು ರೀಲ್ಸ್‌ ಮಾಡುವ ಮೂಲಕ ಜನರನ್ನು ರಂಜಿಸುತ್ತಿದ್ದರು. ಆದರೆ ಕಳೆದ ವರ್ಷ ಕಾರಣಾಂತರದಿಂದ ಈ ಜೋಡಿ ಬೇರ್ಪಟ್ಟಿತ್ತು. ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು. ಇದೀಗ ವರ್ಷಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರೇಮಿಗಳಾಗಿದ್ದಾಗ ಖಾಸಗಿ ಫೋಟೊ, ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ವರುಣ್ ಆರಾಧ್ಯ ಬಳಿಕ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರ್ಷಾ ಕಾವೇರಿ ತಿಳಿಸಿದ್ದಾರೆ. ತಾವು ಪ್ರೀತಿಸುತ್ತಿದ್ದಾಗ ವರುಣ್ ಬೇರೆ ಯುವತಿಯ ಖಾಸಗಿ ಫೋಟೊ, ವೀಡಿಯೊಗಳನ್ನು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ. ಇದು ಯಾರ ಫೋಟೊ ಎಂದು ಪ್ರಶ್ನೆ ಮಾಡಿದಾಗ ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ʼʼಈ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ತನ್ನ ಬಳಿ ಇರುವ ನಿನ್ನ ಖಾಸಗಿ ಫೋಟೊ, ವೀಡಿಯೋಗಳನ್ನು ಹರಿಯಬಿಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ ನೀನು ಬೇರೆಯವರನ್ನು ಮದುವೆಯಾದರೂ ನಿನ್ನನ್ನು, ನಿನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆʼʼ ಎಂದು ವರ್ಷಾ ಕಾವೇರಿ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲಿದ್ದು, ಅದರಲ್ಲಿ ವರ್ಷಾ ಕಾವೇರಿ ಭಾಗಿಯಾಗಲಿದ್ದಾರೆ ಎನ್ನುವ ಗಾಳಿಸುದ್ದಿ ಇತ್ತೀಚೆಗೆ ಹಬ್ಬಿತ್ತು. ಆದರೆ ಈ ಸುದ್ದಿಯನ್ನು ನಿರಾಕರಿಸಿದ್ದ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ʼʼನೀವು ನೋಡುತ್ತಿರುವ, ಕೇಳುತ್ತಿರುವ ಸುದ್ದಿ ಕೇವಲ ಸುದ್ದಿ ಮಾತ್ರ. ನಾನು ಯಾವುದೇ ರಿಯಾಲಿಟಿ ಶೋಗೆ ಹೋಗುತ್ತಿಲ್ಲ. ನನ್ನಿಂದ ಮಾಹಿತಿ ಬಂದರೆ ಮಾತ್ರ ನಂಬಿ. ಹೋಗುವುದಿದ್ದರೆ ನಾನು ತಿಳಿಸುತ್ತೇನೆ. ಸದ್ಯಕ್ಕೆ ನನಗೆ ಬೇರೆ ಬೇರೆ ಜವಾಬ್ದಾರಿಗಳಿವೆ, ಮಾಡುವುದಕ್ಕೆ ಹಲವು ಕೆಲಸಗಳಿವೆ. ಸಾಧನೆ ಮಾಡಿರುವ ಅದೆಷ್ಟೋ ಜನರು ಮುಂದೆ ನಾನು ಏನೂ ಅಲ್ಲ. ನಾನು ಈಗಷ್ಟೇ ಬೆಳೆಯುತ್ತಿರುವ ವ್ಯಕ್ತಿʼʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದರು.

ಅದಕ್ಕೂ ಮೊದಲು ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ವರುಣ್‌ ಆರಾಧ್ಯ-ವರ್ಷಾ ಕಾವೇರಿ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಆ ವೇಳೆ ಜೋಡಿ ಬ್ರೇಕಪ್‌ ಮಾಡಿಕೊಂಡಿತ್ತು.

ಈ ಸುದ್ದಿಯನ್ನೂ ಓದಿ: Actress Ramya: ಈ ಬಾರಿಯಾದರೂ ಮದುವೆಯಾಗುತ್ತಾರಾ ರಮ್ಯಾ? ಸ್ಯಾಂಡಲ್‌ವುಡ್‌ ಕ್ವೀನ್‌ ಹೇಳಿದ್ದೇನು?

Leave a Reply

Your email address will not be published. Required fields are marked *