Monday, 12th May 2025

UI Movie: ‘ಯುಐ’ ಚಿತ್ರದ ವಾರ್ನರ್‌ ಔಟ್‌; ಮತ್ತೊಮ್ಮೆ ವೀಕ್ಷಕರ ತಲೆಗೆ ಹುಳ ಬಿಟ್ಟ ಉಪೇಂದ್ರ: 2040ರ ಕ್ರೂರ ಜಗತ್ತಿನ ಅನಾವರಣ

UI Movie

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಉಪೇಂದ್ರ (Upendra) ನಿರ್ದೇಶನದ ಚಿತ್ರಗಳೆಂದರೆ ಹಾಗೆ. ಅದರಲ್ಲೇನೋ ವಿಶೇಷತೆ ಇದ್ದೇ ಇರುತ್ತದೆ. ಇದು ಅವರ ಮೊದಲ ʼತರ್ಲೆ ನನ್ಮಗʼ ಚಿತ್ರದಿಂದಲೇ ಸಾಬೀತಾಗಿದೆ. ಇದೀಗ ಉಪೇಂದ್ರ ಆ್ಯಕ್ಷನ್‌ ಕಟ್‌ ಹೇಳಿರುವ ʼಯುಐʼ ಸಿನಿಮಾ (UI Movie) ಬಿಡುಗಡೆಗೆ ಸಜ್ಜಾಗಿದ್ದು, ಅದರಲ್ಲಿಯೂ ಹಲವು ಗಮನ ಸೆಳೆಯುವ ಅಂಶಗಳಿಗೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ. ಟೀಸರ್‌, ಹಾಡುಗಳಿಂದಲೇ ಸಿನಿಪ್ರಿಯರನ್ನು ಆಕರ್ಷಿಸಿದ ʼಯುಐʼ ಚಿತ್ರದ ವಾರ್ನರ್‌ ಹೆಸರಿನ ಹೊಚ್ಚ ಹೊಸ ವಿಡಿಯೊ ರಿಲೀಸ್‌ ಆಗಿದೆ (UI ‘warner’ out).

ಎಲ್ಲರೂ ಟೀಸರ್‌, ಟ್ರೈಲರ್‌‌ ಬಿಡುಗಡೆ ಮಾಡಿದರೆ ಉಪೇಂದ್ರ ಮಾತ್ರ ವಾರ್ನರ್‌ ರಿಲೀಸ್‌ ಮಾಡಿ ಭಿನ್ನ ಆಲೋಚನೆಯನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ಅಚ್ಚರಿ ಎಂದರೆ ಉಪೇಂದ್ರ ಈ ಬಾರಿ 16 ವರ್ಷ ಬಳಿಕದ ಕಥೆ ಹೇಳಲಿದ್ದಾರೆ. ಅಂದರೆ 2040ರಲ್ಲಿ ಜಗತ್ತು ಹೇಗಿರಲಿದೆ ಎನ್ನುವುದನ್ನು ʼಯುಐʼ ಮೂಲಕ ಬಿಟ್ಟಿಡಲಿದ್ದಾರೆ. ಇದರ ಝಲಕ್‌ ವಾರ್ನರ್‌ನಲ್ಲಿ ಕಂಡು ಬಂದಿದ್ದು, ಕುತೂಹಲ ಕೆರಳಿಸಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ನೀರು, ಆಹಾರಕ್ಕಾಗಿ ಯುದ್ದವೇ ನಡೆಯಬಹುದು ಎನ್ನುವ ಮಾತಿದೆ. ಈ ವಿಚಾರದ ಜತೆಗೆ ಜಗತ್ತು ಎದುರಿಸುವ ಜ್ವಲಂತ ಸಮಸ್ಯೆಗಳಾದ ಜಾಗತಿಕ ತಾಪಮಾನ, ಕೋವಿಡ್‌ 19, ಹಣದುಬ್ಬರ, ಎಐ, ನಿರುದ್ಯೋಗ, ಯುದ್ಧ ಮುಂತಾದವುಗಳ ಬಗ್ಗೆಯೂ ಉಪೇಂದ್ರ ಬೆಳಕು ಚೆಲ್ಲಿದ್ದಾರೆ. ಅದು 2040ನೇ ಇಸವಿ. ಯುದ್ಧದಿಂದ ಜಗತ್ತೆಲ್ಲ ನಾಶವಾಗಿದೆ. ಬದುಕುಳಿದವರು ಬಟ್ಟೆ ಇಲ್ಲದೆ, ಹೊಟ್ಟೆಗೆ ಹಿಟ್ಟು ಇಲ್ಲದೆ ಕಂಗಾಲಾಗಿದ್ದಾರೆ. ಒಂದೇ ಒಂದು ಬಾಳೆಹಣ್ಣಿಗಾಗಿ ಮುಗಿ ಬೀಳುವ ಪರಿಸ್ಥಿತಿ ಎದುರಾಗಿದೆ. ಆಹಾರದ ಬದಲು ಮೊಬೈಲ್‌ ಫೋನ್‌ಗಳನ್ನು ಸರ್ಕಾರ ಉಚಿತವಾಗಿ ಹಂಚುತ್ತದೆ. ಜತೆಗೆ ಜಾತಿ ಸಂಘರ್ಷ ಮುಗಿಲು ಮುಟ್ಟಿದೆ. ಮಕ್ಕಳಿಗೆ ಜಾತಿ ಮುದ್ರೆ ಹಾಕಿಸುವುದು ಕಡ್ಡಾಯಗೊಳಿಸಲಾಗಿದೆ.

ಈ ಮಧ್ಯೆ ಸರ್ವಾಧಿಕಾರಿ ಉಪೇಂದ್ರ ಅವರ ಎಂಟ್ರಿಯಾಗುತ್ತದೆ. ಉದ್ರಿಕ್ತರ ಗುಂಪು ಸರ್ವಾಧಿಕಾರಿಯ ವಾಹನ ತಡೆದು ನಿಲ್ಲಿಸುತ್ತದೆ. ಧಿಕ್ಕಾರ ಕೂಗುತ್ತದೆ. ಆಗ ಸರ್ವಾಧಿಕಾರಿ ಪಾತ್ರಧಾರಿ ಉಪೇಂದ್ರ ಕಾರಿನಿಂದ ಕೆಳಗಿಳಿದು ʼʼಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿʼʼ ಎಂದು ಹೇಳಿ ಗುಂಡಿನ ಮಳೆಗೆಳೆಯುತ್ತಾರೆ. ಸದ್ಯ ಇದಿಷ್ಟು ವಾರ್ನರ್‌ನಲ್ಲಿ ಕಂಡು ಬಂದಿದೆ.

ಸದ್ಯ ಈ ವಿಡಿಯೊ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಉಪೇಂದ್ರ ಅವರ ಕ್ರಿಯೇಟಿವಿಟಿಗೆ ಜೈ ಎಂದಿದ್ದಾರೆ. ಎಐ ಜಗತ್ತು ಆಳುತ್ತಿರುವಾಗ ಉಪೇಂದ್ರ ಯುಐ ಜಗತ್ತನ್ನು ಸೃಷ್ಟಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಹುಭಾಷೆಯಲ್ಲಿ ತೆರೆಗೆ

ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದೆ. ಕನ್ನಡ ಜತೆಗೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಈ ಚಿತ್ರ ಡಿ. 20ರಂದು ತೆರೆಗೆ ಬರಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಪಕರಾದ ಜಿ.ಮನೋಹರನ್‌ ಮತ್ತು ಶ್ರೀಕಾಂತ್‌ ಕೆ.ಪಿ. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್‌, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ತೆರೆಕಂಡ ʼಉಪ್ಪಿ 2ʼ ಚಿತ್ರದ ಬಳಿಕ ಉಪೇಂದ್ರ ನಿರ್ದೇಶಿಸುತ್ತಿರುವ ಸಿನಿಮಾ ಇದು ಎನ್ನುವುದು ವಿಶೇಷ.

ಈ ಸುದ್ದಿಯನ್ನೂ ಓದಿ: UI Movie: ಬಹುನಿರೀಕ್ಷಿತ ʼಯುಐʼ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಉಪೇಂದ್ರ ಸಿನಿಮಾ ಯಾವಾಗ ರಿಲೀಸ್‌?