Sunday, 11th May 2025

Sunny Deol: ಬರ್ತ್‌ಡೇ ಸಂಭ್ರಮದಲ್ಲಿ ಸನ್ನಿ ಡಿಯೋಲ್; ‘ಜಾಟ್’ಗಾಗಿ ಮಾಸ್ ಅವತಾರವೆತ್ತಿದ ‘ಬಾರ್ಡರ್’ ಬಾಯ್

Sunny Deol

ಮುಂಬೈ: ದೇಶಪ್ರೇಮದ ಚಿತ್ರಗಳಿಗೆ ಕೇರ್ ಆಫ್ ಅಡ್ರೆಸ್ ಎನಿಸಿಕೊಂಡಿರುವ ಬಾಲಿವುಡ್‌ ನಟ ಸನ್ನಿ ಡಿಯೋಲ್ (Sunny Deol) ಬರ್ತಡೇ ಸಂಭ್ರಮದಲ್ಲಿದ್ದಾರೆ. ‘ಗದರ್-2’ (Gadar 2) ಚಿತ್ರ ಹಿಟ್ ಆದ ಬಳಿಕ ಸನ್ನಿ ಡಿಯೋಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ತೆಲುಗಿನ ‘ಜಾಟ್’ (Jaat). ಟಾಲಿವುಡ್‌ನ ʼಕ್ರ್ಯಾಕ್ʼ, ʼವೀರ ಸಿಂಹ ರೆಡ್ಡಿʼ ಸಿನಿಮಾಗಳ ನಿರ್ದೇಶಕ ಗೋಪಿಚಂದ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸನ್ನಿ ಡಿಯೋಲ್ ಹುಟ್ಟುಹಬ್ಬದ ಪ್ರಯುಕ್ತ ಇದೀಗ ʼಜಟ್ʼ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

ʼಜಟ್ʼ ಚಿತ್ರಕ್ಕಾಗಿ ಸನ್ನಿ ಡಿಯೋಲ್ ಮಾಸ್ ಅವತಾರ ಎತ್ತಿದ್ದಾರೆ. ಕೈಯಲ್ಲಿ ಭಾರೀ ಗಾತ್ರದ ಫ್ಯಾನ್ ಹಿಡಿದು ಗಂಭೀರವಾದ ಲುಕ್ ಕೊಟ್ಟಿರುವ ಸನ್ನಿ ಡಿಯೋಲ್‌ ಅವರ ಪೋಸ್ಟರ್‌ ಗಮನ ಸೆಳೆದಿದೆ. ಕೈ ತುಂಬಾ ಹಾಗೂ ಫ್ಯಾನ್ಸ್ ಮುಂಭಾಗ ಮೆತ್ತಿಕೊಂಡಿರುವ ರಕ್ತ ಪೋಸ್ಟರ್‌ನಲ್ಲಿ ಹೈಲೆಟ್ ಆಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಂಪ್ಲೀಟ್ ಮಾಸ್ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ ಎಂದು ಸಿನಿಮಾ ತಂಡ ತಿಳಿಸಿದೆ.

ಆ್ಯಕ್ಷನ್‌ ಪ್ಯಾಕ್ಡ್ ʼಜಟ್ʼ ಸಿನಿಮಾದಲ್ಲಿ ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್, ಸೈಯಾಮಿ ಖೇರ್ ಮತ್ತು ರೆಜಿನಾ ಕ್ಯಾಸಂದ್ರ ಸೇರಿದಂತೆ ಹಲವು ಘಟಾನುಘಟಿಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮನ್ ಎಸ್. ಸಂಗೀತ, ರಿಷಿ ಪಂಜಾಬಿ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ. ಪೀಟರ್ ಹೆನ್, ಅನ್ಲ್ ಅರಸು, ರಾಮ್ ಲಕ್ಷ್ಮಣ್ ಮತ್ತು ವೆಂಕಟ್ ಸಾಹಸ ನಿರ್ದೇಶನ ʼಜಟ್ʼ ಸಿನಿಮಾದಲ್ಲಿರಲಿದೆ.

ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ನಡಿ ನವೀನ್ ಯೆರ್ನೇನಿ ಹಾಗೂ ವೈ.ರವಿಶಂಕರ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಡಿ ಟಿ.ಜಿ. ವಿಶ್ವ ಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯಾರಾಗುತ್ತಿರುವ ಚಿತ್ರದ ಶೂಟಿಂಗ್ ಸದ್ಯ ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿದೆ.

1983ರಲ್ಲಿ ತೆರೆಕಂಡ ʼಬೆತಾಬ್‌ʼ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸನ್ನಿ ಡಿಯೋಲ್‌ ಹಲವು ದಶಕಗಳಿಂದ ನಟನೆಯಲ್ಲಿ ಸಕ್ರೀಯರಾಗಿದ್ದಾರೆ. 1990ರಲ್ಲಿ ಬಿಡುಗಡೆಯಾದ ʼಗಾಯಲ್‌ʼ ಬಾಲಿವುಡ್‌ನ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಜತೆಗೆ 1993ರಲ್ಲಿ ರಿಲೀಸ್‌ ಆದ ʼದಾಮಿನಿʼ ಹಿಂದಿ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಸನ್ನಿ ಡಿಯೋಲ್‌ ಅವರಿಗೆ ಲಭಿಸಿದೆ.

ಹಿಂದಿಯ ʼಬಾರ್ಡರ್‌ʼ, ʼಗದರ್‌: ಏಕ್‌ ಪ್ರೇಮ್‌ ಕಥಾʼ, ʼಯಮ್ಲಾ ಪಗ್ಲಾ ದೀವಾನʼ, ʼಗದರ್‌ 2ʼ-ಇವರಿಗೆ ಬಹು ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳು. ಅದರಲ್ಲಿಯೂ ಕಳೆದ ವರ್ಷ ತೆರೆಕಂಡ ʼಗದರ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಸದ್ಯ ಅವರು ʼಜಾಟ್‌ʼ ಜತೆಗೆ ʼಲಾಹೋರ್‌ 1947ʼ, ʼಬಾರ್ಡರ್‌ 2ʼ, ʼರಾಮಾಯಣʼ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Akshay Kumar: ಮತ್ತೊಂದು ಬಯೋಪಿಕ್‌ನಲ್ಲಿ ಅಕ್ಷಯ್‌ ಕುಮಾರ್‌; ಅನನ್ಯ ಪಾಂಡೆ, ಮಾಧವನ್‌ ಸಾಥ್‌