Monday, 12th May 2025

Saira Banu: ಎ.ಆರ್‌.ರೆಹಮಾನ್‌‌ ಜತೆಗಿನ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ ಹೇಳಿದ್ದೇನು?

Saira Banu

ಮುಂಬೈ: ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌‌ (AR Rahman) ಹಾಗೂ ಪತ್ನಿ ಸಾಯಿರಾ ಬಾನು (Saira Banu) ನ. 19ರಂದು ಬೇರ್ಪಡುವುದಾಗಿ (AR Rahman-Saira Banu Divorce) ಘೋಷಣೆ ಮಾಡಿದ್ದರು. ಅವತ್ತಿನಿಂದ ಇಲ್ಲಿಯವರೆಗೆ ಇವರ ಖಾಸಗಿ ಜೀವನದ ಬಗ್ಗೆ ವದಂತಿಗಳು ಹಬ್ಬುತ್ತಿವೆ. ರೆಹಮಾನ್‌ ವಿಚ್ಛೇದನ ಪಡೆದುಕೊಂಡ ದಿನವೇ ಅವರ ತಂಡದ ಸದಸ್ಯೆ ಮೋಹಿನಿ ಡೇ (Mohini Day) ಕೂಡ ತನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ ಎಂದು ಸೋಶಿಯಲ್‌ ಮೀಡಿಯದಲ್ಲಿ ಹಂಚಿಕೊಂಡಿದ್ದರು. ನಂತರ ರೆಹಮಾನ್‌ ಹಾಗೂ ಮೋಹಿನಿ ನಡುವೆ ನಂಟನ್ನು ಕಲ್ಪಿಸಿ ಸುದ್ದಿಯಾಗಿತ್ತು. ರೆಹಮಾನ್‌ ಕೂಡ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಸಾಯಿರಾ ಬಾನು ಕೂಡ ಮಾತನಾಡಿದ್ದು, ತಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ.

ಭಾನುವಾರ ಸಾಯಿರಾ ಬಾನು ಅವರ ಆಡಿಯೋವೊಂದು ಬಿಡುಗಡೆಯಾಗಿದ್ದು, ಕೊನೆಗೂ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ʼʼರೆಹಮಾನ್‌ ಮೇಲೆ ನನಗೆ ಪ್ರೀತಿ , ಗೌರವವಿದೆ. ನಾನು ಮಾಧ್ಯಮಗಳು ಹಾಗೂ ಯೂಟ್ಯೂಬರ್‌ಗಳಿಗೆ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನಮ್ಮ ಮನ ನೋಯಿಸಬೇಡಿʼʼ ಎಂದು ವಿನಂತಿಸಿಕೊಂಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ ಅವರು, ಕೆಲವು ತಿಂಗಳಿನಿಂದ ಮುಂಬೈನಲ್ಲಿ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ʼʼನಾನು ಚೆನ್ನೈಯಲ್ಲಿ ಇಲ್ಲದಿರುವುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ. ನಾನು ನನ್ನ ಪತಿ ಹಾಗೂ ಮಕ್ಕಳಿಗೆ ತೊಂದರೆ ನೀಡಲು ಬಯಸುವುದಿಲ್ಲʼʼ ಎಂದು ಹೇಳಿದ್ದಾರೆ.

ರೆಹಮಾನ್‌ ಬಗ್ಗೆ ಹೇಳಿದ್ದೇನು?

ರೆಹಮಾನ್‌ ಬಗ್ಗೆ ಮಾತನಾಡಿದ ಅವರು ರೆಹಮಾನ್‌ ರತ್ನದಂತೆ. ಅವರು ವಿಶ್ವದ ಅತ್ಯುತ್ತಮ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ʼʼಜೀವನದಲ್ಲಿ ನಾನು ಅವರನ್ನು ನಂಬುತ್ತೇನೆ, ಅವರೂ ನನನ್ನು ನಂಬುತ್ತಾರೆ. ಈ ನಿರ್ಧಾರವನ್ನು ಇಬ್ಬರೂ ತೆಗದುಕೊಂಡಿದ್ದೇವೆ. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ. ಈ ಊಹಾಪೋಹಗಳನ್ನು ತಕ್ಷಣ ನಿಲ್ಲಿಸಿʼʼ ಎಂದು ಮನವಿ ಮಾಡಿದ್ದಾರೆ.

ಕಾನೂನು ಮೊರೆ ಹೋದ ರೆಹಮಾನ್‌

ಮೋಹಿನಿ ಡೇ ಜತೆ ನಂಟಿನ ಕುರಿತು ವದಂತಿಗಳನ್ನು ಸೃಷ್ಟಿಸಿದವರಿಗೆ ಕಾನೂನು ಬಿಸಿ ಮುಟ್ಟಿಸಲು ರೆಹಮಾನ್‌ ಕಾನೂನು ಮೊರೆ ಹೋಗಿದ್ದಾರೆ. ಅವರು ತಮ್ಮ ಹಾಗೂ ಕುಟುಂಬದವರ ಮಾನಹಾನಿ ಮಾಡಲು ಯತ್ನಿಸಿದವರ ವಿರುದ್ಧ ಕೇಸ್‌ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಎಚ್ಚರಿಕೆ ನೀಡಿರುವ ಅವರು, ʼʼಇದು ಎ.ಆರ್‌.ರೆಹಮಾನ್‌ ತಂಡದಿಂದ ಕೊಡಲಾಗುತ್ತಿರುವ ನೋಟಿಸ್‌. 24 ಗಂಟೆಗಳ ಗಡುವು ನೀಡುತ್ತೇವೆ. ನಮ್ಮ ವಿರುದ್ಧ ಮಾಡಿರುವ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿ, ವದಂತಿಗಳನ್ನು ಹರಡಬೇಡಿ. ಒಂದು ವೇಳೆ ಪೋಸ್ಟ್‌ ಡಿಲೀಟ್‌ ಮಾಡದೆ ಹೋದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : AR Rahman : ವಿಚ್ಚೇದನದ ನಂತರ ಎ ಆರ್ ರೆಹಮಾನ್‌‌ ಮೊದಲ ಪೋಸ್ಟ್‌… ಫ್ಯಾನ್ಸ್‌ ದಿಲ್‌ ಖುಷ್‌!