Sunday, 11th May 2025

ಆರ್​ಆರ್​ಆರ್​ನ ನಾಟು ನಾಟು ಹಾಡಿಗೆ ‘ಗೋಲ್ಡನ್​ ಗ್ಲೋಬ್ಸ್​-2023’ ಅಂತಾರಾಷ್ಟ್ರೀಯ ಪ್ರಶಸ್ತಿ ಗೌರವ

ವದೆಹಲಿ: ನಿರ್ದೇಶಕ ರಾಜಮೌಳಿ ನಿರ್ದೇಶನದ ಹಾಗೂ ಜೂ.ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ ‘ಆರ್​ಆರ್​ಆರ್​’ ಸಿನಿಮಾ ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ‘ಗೋಲ್ಡನ್​ ಗ್ಲೋಬ್ಸ್​-2023’ ಅಂತಾರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.

ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ನೃತ್ಯಕ್ಕೆ ಎಲ್ಲರು ಫಿದಾ ಆಗಿದ್ದರು. ಇದೀಗ ಸಿನಿಮಾ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು, ಹಾಲಿವುಡ್‌ನ ಅತಿದೊಡ್ಡ ಪ್ರಶಸ್ತಿ ಗಳಲ್ಲಿ ಒಂದಾದ ಗೋಲ್ಡನ್​ ಗ್ಲೋಬ್ಸ್​ ಗೌರವಕ್ಕೆ ಸಿನಿಮಾ ಪಾತ್ರ ವಾಗಿದೆ.

ಬೆಸ್ಟ್​ ಒರಿಜಿನಲ್​ ಸಾಂಗ್​​ ವಿಭಾಗದಲ್ಲಿ ವೇರ್ ದಿ ಕ್ರಾಡಾಡ್ಸ್ ಸಿಂಗ್‌ನಿಂದ ಟೇಲರ್ ಸ್ವಿಫ್ಟ್‌ನ ಕ್ಯಾರೊಲಿನಾ, ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೊದಿಂದ ಸಿಯೊ ಪಾಪಾ, ಟಾಪ್ ಗನ್‌ನಿಂದ ಲೇಡಿ ಗಾಗಾಸ್ ಹೋಲ್ಡ್ ಮೈ ಹ್ಯಾಂಡ್: ಮೇವರಿಕ್ ಮತ್ತು ಲಿಫ್ಟ್ ಮಿ ಅಪ್ ಫ್ರಮ್ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ ನಾಮನಿರ್ದೇಶನಗೊಂಡಿದ್ದವು. ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಆರ್​ಆರ್​ಆರ್​, ಗೋಲ್ಡನ್ ಗ್ಲೋಬ್ಸ್‌ನಲ್ಲಿ ಎರಡನೇ ವಿಭಾಗದಲ್ಲಿಯೂ ಸ್ಪರ್ಧಿಸುತ್ತಿದೆ.

ಗೋಲ್ಡನ್ ಗ್ಲೋಬ್ಸ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಆರ್​ಆರ್​ಆರ್​ ಸಿನಿಮಾದ ನಿರ್ದೇಶಕರು ಮತ್ತು ಕಲಾವಿದರು ಪ್ರತಿನಿಧಿಸಿದ್ದಾರೆ. ಎಸ್‌.ಎಸ್. ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರು ತಮ್ಮ ಪತ್ನಿ ಉಪಾಸನಾ ಕಾಮಿನೇನಿ ಅವರೊಂದಿಗೆ ಭಾಗವಹಿಸಿದ್ದಾರೆ.

ಅಂದಹಾಗೆ ಆರ್​ಆರ್​ಆರ್​ ಸಿನಿಮಾದಲ್ಲಿ ಜೂ. ಎನ್​ಟಿಆರ್​ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸಿದ್ದು, 1920ರ ಬ್ರಿಟೀಷ್ ಆಕ್ರಮಿತ ಭಾರತದಲ್ಲಿ ಈ ಕತೆ ನಡೆಯುತ್ತದೆ. ಬ್ರಿಟಿಷ್​ ವಿರುದ್ಧದ ಹೋರಾಟ ಇದಾಗಿದೆ. ಪಾತ್ರವರ್ಗದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಜೊತೆಗೆ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಇದ್ದಾರೆ.

ಗೋಲ್ಡನ್ ಗ್ಲೋಬ್ಸ್ ಅನ್ನು ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದ್ದು, ಹಾಸ್ಯನಟ ಜೆರೋಡ್ ಕಾರ್ಮೈಕಲ್ ಹೋಸ್ಟ್ ಆಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
Read E-Paper click here