Tuesday, 13th May 2025

Pushpa 2 The Rule review: ಪುಷ್ಪಾ-2 ಹೇಗಿದೆ?, 3 ಗಂಟೆ 20 ನಿಮಿಷದ ಸಿನಿಮಾ ಬೋರ್ ಆಗುತ್ತಾ?

Pushpa 2 review

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 (Pushpa 2: The Rule) ಸಿನಿಮಾ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಈ ಸಿನಿಮಾ ನೋಡಿ ಈಗಾಗಲೇ ಬ್ಲಾಕ್ ಬಸ್ಟರ್ ಟಾಕ್ ಪಡೆಯುತ್ತಿದೆ. ಪುಷ್ಪ-1 ಮೀರಿದ ಸಿನಿಮಾ ಇದಾಗಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪುಷ್ಪ: ದಿ ರೈಸ್ ಎಲ್ಲಿಗೆ ಮುಕ್ತಾಯಗೊಂಡಿತ್ತೊ ಅಲ್ಲಿಂದಲೇ ಪುನಃ ಪುಷ್ಪ-2 ಶುರುವಾಗುತ್ತದೆ. ಪುಷ್ಪ ರಾಜ್ (ಅಲ್ಲು ಅರ್ಜುನ್) ಈಗ ಇಂಟರ್​ನ್ಯಾಷನಲ್ ರೆಡ್ ಸ್ಯಾಂಡರ್ ಸ್ಮಗ್ಲರ್. ತನ್ನ ಪ್ರೀತಿಯ ಹೆಂಡತಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಮತ್ತು ತಾಯಿ (ಕಲ್ಪಲತಾ) ಜೊತೆ ಅದ್ದೂರಿ ಬಂಗಲೆಯಲ್ಲಿ ಪುಷ್ಪ ನೆಲೆಸಿರುತ್ತಾನೆ. ಸದಾ ಜಿಗಿಮಿಗಿ ಮುಂಚುವ ಶರ್ಟ್‌ಗಳು, ಚಿನ್ನಾಭರಣಗಳಿಂದ ಪುಷ್ಪ ಸಖತ್ ರಿಚ್ ಆಗಿ ಕಾಣಿಸುತ್ತಾನೆ. ಪುಷ್ಪ ಮೊದಲ ಭಾಗದಲ್ಲಿ ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಪಾತ್ರಗಳ ಮಧ್ಯೆ ಕಿತ್ತಾಟ ಇತ್ತು. ಈಗ ಎರಡನೇ ಪಾರ್ಟ್​​ನಲ್ಲಿಯೂ ಅದು ಮುಂದುವರಿದಿದೆ. ಇಡೀ ಸಿನಿಮಾದ ಹೈಲೈಟ್ ಇದುವೇ ಆಗಿದೆ.

ಎರಡನೇ ಪಾರ್ಟ್‌ನಲ್ಲಿ ರಶ್ಮಿಕಾ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಒಬ್ಬ ಸ್ಮಗ್ಲರ್ ಆದರೂ ಸಹ ಹೆಣ್ಣುಮಕ್ಕಳ ಮೇಲೆ ಪುಷ್ಪನಿಗೆ ಎಷ್ಟು ಗೌರವ ಇದೆ.. ಹೆಂಡತಿ ಮಾತನ್ನು ಹೇಗೆ ಶಿರಸಾವಹಿಸಿ ಪಾಲಿಸ್ತಾನೆ ಅನ್ನೋದು ಸಿನಿಮಾದ ಮತ್ತೊಂದು ಹೈಲೈಟ್ ಆಗಿದೆ. ಇಡೀ ಸಿನಿಮಾನ ಹೆಗಲ‌ಮೇಲೆ ಹೊತ್ಕಂಡು ಹೋಗಿದ್ದಾರೆ ಅಲ್ಲು ಅರ್ಜುನ್. ‌ಪುಷ್ಪನ‌ ಮ್ಯಾನರಿಸಮ್, ಡೈಲಾಗ್ ಡೆಲಿವರಿ, ಆ ಬಾಡಿ ಲಾಂಗ್ವೆಜ್ ಮೂಲಕ ಅಲ್ಲು ಅರ್ಜುನ್ ಎಲ್ಲರಿಗೂ ಇಷ್ಟವಾಗುತ್ತಾರೆ.

Pushpa 2: ‘ಪುಷ್ಪ 2’ ಚಿತ್ರದ ಪ್ರೀಮಿಯರ್‌ ಶೋ ವೇಳೆ ದುರಂತ; ಕಾಲ್ತುಳಿತಕ್ಕೆ ಮಹಿಳೆ ಬಲಿ, ಬಾಲಕನ ಸ್ಥಿತಿ ಗಂಭೀರ

ಈ ಸಿನಿಮಾದಲ್ಲಿ ಸುಕುಮಾರ್ ಅವರ ಬರಹಕ್ಕೆ ಫುಲ್ ಮಾರ್ಕ್ಸ್ ಕೊಡಬೇಕು. ಲೆಕ್ಕಾಚಾರದ ಮಾಸ್ಟರ್ ಪ್ರತಿ 10-15 ನಿಮಿಷಗಳಿಗೊಮ್ಮೆ ಚಿತ್ರಕಥೆಯಲ್ಲಿ ಏನಾದರು ವಾವ್ ಎಂಬಂತಹ ಸೀನ್ ಇಟ್ಟಿದ್ದಾರೆ. ಪ್ರತಿ ಬಾರಿ ಕಥೆ ನಿಧಾನವಾದಾಗ, ಅಲ್ಲಿ ಅಲ್ಲು ಅರ್ಜುನ್ ಬಂದು ಮೇಲೆತ್ತುತ್ತಾರೆ. ಆಕ್ಷನ್ ಸೀಕ್ವೆನ್ಸ್‌ಗಳು ಮುಂದಿನ ಹಂತದಲ್ಲಿವೆ. ಆದರೆ, ದ್ವಿತೀಯಾರ್ಧದಲ್ಲಿ ಚಿತ್ರಕ್ಕೆ ಸ್ವಲ್ಪ ಹಿನ್ನಡೆಯಾಗುತ್ತದೆ.

ದ್ವಿತೀಯಾರ್ಧದಲ್ಲಿ ಕಥೆ ಎಲ್ಲಿಂದೆಲ್ಲಿಗೋ ಸಾಗುತ್ತದೆ. ಫೇರ್ ಸೀಕ್ವೆನ್ಸ್, ಕ್ಲೈಮ್ಯಾಕ್ಸ್ ಫೈಟ್ ರಿಪೀಟ್ ಆದಂತೆ ಕಾಣುತ್ತದೆ. 3 ಗಂಟೆ 20 ನಿಮಿಷಗಳ ಸಿನಿಮಾ ಕೆಲವರಿಗೆ ಬೋರ್ ಎನಿಸಬಹುದು. ಚಿತ್ರದಲ್ಲಿ ಅಲ್ಲು ಅರ್ಜುನ್‌ನ ಪಾತ್ರ ಬಿಟ್ಟರೆ ಉಳಿದ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗಿಲ್ಲ. ಅಲ್ಲು ಅರ್ಜುನ್ ಎಂಬ ಕಾರಣಕ್ಕೆ ಉಳಿದ ಪಾತ್ರಗಳನ್ನು ಕಡಿಮೆ ಮಾಡಿದಂತಿದೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಫಹಾದ್ ಫಾಜಿಲ್ ಪಾತ್ರ ಕೂಡ ಕೆಲವು ಕಡೆಗಳಲ್ಲಿ ಮಾತ್ರ ಎದ್ದು ಕಾಣಿಸುತ್ತದೆ. ಕ್ಲೈಮ್ಯಾಕ್ಸ್ ಕೂಡ ಅಪೂರ್ಣವಾಗಿಯೇ ಮುಗಿಯಿತು.. ಮೂರನೇ ಭಾಗಕ್ಕೆ ಲೀಡ್ ಕೊಟ್ಟರೂ ಮೊದಲ ಭಾಗದಲ್ಲಿ ಮುಗಿದಷ್ಟು ಕಿಕ್ ಕೊಡಲಿಲ್ಲ. ಆದರೆ ಅಭಿಮಾನಿಗಳು ಸಂತಸದಿಂದ ಹೊರ ಬರುವುದರಲ್ಲಿ ಅನುಮಾನ ಇಲ್ಲ. ಸುಕುಮಾರ್ ಪೈಸಾ ವಸೂಲ್ ಚಿತ್ರವನ್ನು ಸಾಮಾನ್ಯ ಪ್ರೇಕ್ಷಕರಿಗೂ ಕೊಟ್ಟಿದ್ದಾರೆ.

ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾರೆ ಎನ್ನಬಹುದು. ಇವರು ಪುಷ್ಪ ರಾಜ್ ಪಾತ್ರದಲ್ಲಿ ಬದುಕಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಚೆನ್ನಾಗಿ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಇವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ನಾಯಕನ ಗೆಳೆಯನಾಗಿ ಜಗದೀಶ್ ಅಭಿನಯ ಚೆನ್ನಾಗಿದೆ. ರಾವ್ ರಮೇಶ್, ಜಗಪತಿ ಬಾಬು, ತಾರಕ್ ಪೊನ್ನಪ್ಪ, ಅಜಯ್ ಮುಂತಾದವರು ಕೂಡ ಚೆನ್ನಾಗಿ ನಟಿಸಿದ್ದಾರೆ.

ಪುಷ್ಪ 2 ಚಿತ್ರಕ್ಕೆ ಪ್ರಣಾಮ್ ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಅವರ ಹಾಡುಗಳು ಚೆನ್ನಾಗಿವೆ. ಬ್ಯಾಕ್​ಗ್ರೌಂಡ್ ಸ್ಕೋರ್ ಕೂಡ ಕೇಳುಗರಿಗೆ ಇಷ್ಟವಾಗುತ್ತದೆ. ಕ್ಯೂಬಾದ ಸಿನಿಮಾಟೋಗ್ರಫಿ ಕೂಡ ಆಕರ್ಷಕವಾಗಿದೆ. ಎಡಿಟಿಂಗ್ ಮಾತ್ರ ಸ್ವಲ್ಪ ಮೈನಸ್ ಅನ್ನಿಸುತ್ತಿದೆ. ಸುಕುಮಾರ್ ಅವರ ಬರಹದ ಬಗ್ಗೆ ಎರಡು ಮಾಡಿಲ್ಲ. ಅವರ ಕಷ್ಟ ಪ್ರತಿ ದೃಶ್ಯದಲ್ಲೂ ಕಾಣುತ್ತಿತ್ತು.

ಕೊನೆಯದಾಗಿ, ಪುಷ್ಪ 2 ಸಿನಿಮಾ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ. ನಿಮ್ಮನ್ನು ನಕ್ಕು ನಗುಸುವಂತೆ ಮಾಡುತ್ತದೆ. ಕೆಲವೊಂದು ಮೈನಸ್ ಪಾಯಿಂಟ್ ಇದ್ದರೂ, ಈ ಸಿನಿಮಾ ಮಹಿಳಾ ಸುರಕ್ಷತೆಯ ಬಗ್ಗೆ ಉತ್ತಮ ಸಂದೇಶವನ್ನು ಹೊಂದಿದೆ.