ಹೈದರಾಬಾದ್: ಅಲ್ಲು ಅರ್ಜುನ್ (Allu Arjun)-ರಶ್ಮಿಕಾ ಮಂದಣ್ಣ (Rashmika Mandanna)-ಸುಕುಮಾರ್ (Sukumar) ಕಾಂಬಿನೇಷನ್‌ನ ‘ಪುಷ್ಪ 2’ (Pushpa 2) ಟಾಲಿವುಡ್‌ನ ಪ್ಯಾನ್ ಇಂಡಿಯಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಡಿ. 5ರಂದು ರಿಲೀಸ್ ಆಗಿರುವ ಈ ಸಿನಿಮಾ ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿ ಹೊಸ ಭಾಷ್ಯ ಬರೆಯುತ್ತಿದೆ. ಚಿತ್ರಕ್ಕೆ ಹಣದ ಹೊಳೆಯೇ ಹರಿದು ಬರುತ್ತಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ 2 ಸಾವಿರ ಕೋಟಿ ರೂ. ಗಳಿಸುವತ್ತ ಮುನ್ನುಗ್ಗುತ್ತಿದೆ. ಈ ಮಧ್ಯೆ ಚಿತ್ರತಂಡ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದೆ (Pushpa 2 The Rule Reloaded).
ʼಪುಷ್ಪ 2ʼ ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಇದೀಗ ಭಾರೀ ಯಶಸ್ಸು ತನ್ನದಾಗಿಸಿಕೊಂಡಿದ್ದು, ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ನೀಡಿದೆ. ಹೌದು, ಚಿತ್ರಕ್ಕೆ ಇನ್ನೂ ಹೆಚ್ಚುವರಿ 20 ನಿಮಿಷಗಳ ದೃಶ್ಯವನ್ನು ಸೇರ್ಪಡೆಗೊಳಿಸುವುದಾಗಿ ಪ್ರಕಟಿಸಿದೆ.
ಯಾವಾಗಿನಿಂದ ಹೊಸ ವರ್ಷನ್‌ನ ಪ್ರದರ್ಶನ?
20 ನಿಮಿಷಗಳ ಹೆಚ್ಚುವರಿ ದೃಶ್ಯಗಳ ಸೇರ್ಪಡೆಯೊಂದಿಗೆ ʼಪುಷ್ಪ 2ʼ ರಿಲೋಡೆಡ್ ವರ್ಷನ್ ಜ. 11ರಿಂದ ಪ್ರದರ್ಶನಗೊಳ್ಳಲಿದೆ. ಈ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡಿದೆ. ʼʼ20 ನಿಮಿಷಗಳ ಹೆಚ್ಚುವರಿ ದೃಶ್ಯಗಳ ಸೇರ್ಪಡೆಯೊಂದಿಗೆ ʼಪುಷ್ಪ 2 ದಿ ರೂಲ್ ರಿಲೋಡೆಡ್ʼ ವರ್ಷನ್ ಥಿಯೇಟರ್‌ಗಳಲ್ಲಿ ಜ. 11ರಿಂದ ಪ್ರದರ್ಶನಗೊಳ್ಳಲಿದೆʼʼ ಎಂದು ಬರೆದುಕೊಂಡಿದೆ.
34 ದಿನಗಳಲ್ಲಿ ಬಾಚಿಕೊಂಡಿದ್ದೆಷ್ಟು?
ʼಪುಷ್ಪ 2ʼ ತೆರೆಕಂಡು 34 ದಿನ ಕಳೆದಿದೆ. ಇದುವರೆಗೆ ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1,800 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಚಿತ್ರದ ಅಬ್ಬರ ತುಸು ಕಡಿಮೆಯಾಗಿದ್ದು, 34ನೇ ದಿನವಾದ ಡಿ. 7ರಂದು ಭಾರತದಲ್ಲಿ ಕೇವಲ 1.31 ಕೋಟಿ ರೂ. ಗಳಿಸಿದೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರ ಒರಿಜಿನಲ್ ತೆಲುಗಿಗಿಂತ ಹಿಂದಿ ಡಬ್ ವರ್ಷ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿ ಅವತರಣಿಕೆ ಬರೋಬ್ಬರಿ 800 ಕೋಟಿ ರೂ. ಗಳಿಸಿದೆ. ಆ ಮೂಲಕ 800 ಕೋಟಿ ರೂ. ಕ್ಲಬ್ ಸೇರಿದ ಮೊದಲ ಡಬ್ ಚಿತ್ರ ಎನಿಸಿಕೊಂಡಿದೆ.
ಇದು 2021ರಲ್ಲಿ ತೆರೆಕಂಡ ʼಪುಷ್ಪʼ ಚಿತ್ರದ ಸೀಕ್ವೆಲ್ ಆಗಿದ್ದು, ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಮತ್ತು ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮುಂದುವರಿದಿದ್ದಾರೆ. ಇವರ ಜತೆಗೆ ಫಹದ್ ಫಾಸಿಲ್, ಜಗಪತಿ ಬಾಬು, ಸುನಿಲ್, ರಾವ್ ರಮೇಶ್, ತಾರಕ್ ಪೊನ್ನಪ್ಪ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ಸಿನಿಮಾದ ಐಟಂ ಸಾಂಗ್‌ಗೆ ಹೆಚ್ಚೆ ಹಾಕಿ ಪಡ್ಡೆಗಳ ಎದೆ ಬಡಿತ ಹೆಚ್ಚಿಸಿದ್ದಾರೆ.
‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಬಾಲಕನನ್ನು ಭೇಟಿಯಾದ ಅಲ್ಲು ಅರ್ಜುನ್
ಡಿ. 4ರಂದು ʼಪುಷ್ಪ 2ʼ ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಅವರ 9 ವರ್ಷದ ಮಗ ಗಾಯಗೊಂಡಿದ್ದಾನೆ. ಈ ಬಾಲಕ ಸದ್ಯ ಸಿಕಂದರಾಬಾದ್‌ನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜ. 7ರಂದು ಆತನನ್ನು ಭೇಟಿಯಾಗಿ ಅಲ್ಲು ಅರ್ಜುನ್ ಸಾಂತ್ವಾನ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pushpa 2 Collection: ಬಾಕ್ಸ್ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್; 2 ದಿನದ ಗಳಿಕೆ ಎಷ್ಟು?