Sunday, 11th May 2025

Pushpa 2 Runtime: ಅಬ್ಬಬ್ಬ! ‘ಪುಷ್ಪ 2’ ಚಿತ್ರದ ಅವಧಿ ಇಷ್ಟೊಂದಾ? ಅಲ್ಲು ಅರ್ಜುನ್‌-ರಶ್ಮಿಕಾ ಸಿನಿಮಾದ ರನ್‌ಟೈಮ್‌ ರಿವೀಲ್‌

Pushpa 2 Runtime

ಹೈದರಾಬಾದ್‌: ಬಹು ನಿರೀಕ್ಷಿತ ʼಪುಷ್ಪ 2ʼ (Pushpa 2) ತೆರೆಗೆ ಅಪ್ಪಳಿಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಹೀಗಾಗಿ ದೇಶಾದ್ಯಂತ ಪುಷ್ಪ ಹವಾ ಜೋರಾಗಿಯೇ ಬೀಸುತ್ತಿದೆ. 2021ರಲ್ಲಿ ರಿಲೀಸ್‌ ಆಗಿದ್ದ ʼಪುಷ್ಪʼ ಚಿತ್ರದ ಮೂಲಕ ಮೋಡಿದ್ದ ಅಲ್ಲು ಅರ್ಜುನ್‌ (Allu Arjun)-ರಶ್ಮಿಕಾ ಮಂದಣ್ಣ(Rashmika Mandanna)-ಫಹದ್‌ ಫಾಸಿಲ್‌ (Fahadh Faasil)-ನಿರ್ದೇಶಕ ಸುಕುಮಾರ್‌ (Sukumar) ಕಾಂಬಿನೇಷನ್‌ ಈ ಚಿತ್ರದಲ್ಲಿ ಮತ್ತೆ ಒಂದಾಗಿದ್ದು ನಿರೀಕ್ಷೆ ಹೆಚ್ಚಿಸಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು 2 ಭಾಗಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಹಿಂದೆಯೇ ಘೋಷಿಸಿದ್ದರಿಂಸ ಸೆಟ್ಟೇರಿದಾಗಿನಿಂದಲೂ ‘ಪುಷ್ಪ 2’ ಕುತೂಹಲದ ಕೇಂದ್ರ ಬಿಂದುವಾಗಿದೆ. ಅದಕ್ಕೆ ತಕ್ಕಂತೆ ಚಿತ್ರತಂಡ ಪೋಸ್ಟರ್‌, ಹಾಡು, ಟೀಸರ್‌, ಟ್ರೈಲರ್‌ ರಿಲೀಸ್‌ ಮಾಡಿ ಕುತೂಹಲವನ್ನು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಇನ್ನೇನು ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಎನ್ನುವಾಗ ಚಿತ್ರದ ಬಗ್ಗೆ ಕುತೂಹಲಕಾರಿ ವಿಚಾರವೊಂದು ಬಹಿರಂಗಗೊಂಡಿದೆ (Pushpa 2 Runtime).

ಹೌದು, ಚಿತ್ರದ ರನ್‌ಟೈಮ್‌ (ಅವಧಿ) ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅಬ್ಬ! ಸಿನಿಮಾದ ಅವಧಿ ಇಷ್ಟೊಂದಾ? ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ʼಪುಷ್ಪ 2ʼ ಎಷ್ಟು ಗಂಟೆಯಷ್ಟು ದೀರ್ಘವಾಗಿದೆ? ಇಲ್ಲಿದೆ ಉತ್ತರ.

ʼಪುಷ್ಪʼಕ್ಕಿಂತಲೂ ದೀರ್ಘ ಅವಧಿ

ಅಲ್ಲು ಅರ್ಜುನ್‌ ಅವರ ವೃತ್ತಿ ಜೀವನಕ್ಕೆ ಮೈಲೇಜ್‌ ತಂದಿತ್ತ ʼಪುಷ್ಪʼ ಚಿತ್ರದಲ್ಲಿ ನಿರ್ದೇಶಕ ಸುಕುಮಾರ್‌ ಅವರು ರಕ್ತ ಚಂದನದ ಕಳ್ಳ ಸಾಗಣೆ, ಹಳ್ಳಿಯಲ್ಲಿ ನಡೆಯುವ ರಾಜಕೀಯ, ಕುತಂತ್ರಗಳನ್ನು ತೆರೆ ಮೇಲೆ ತಂದಿದ್ದರು. ಇದು ಸುಮಾರು 2 ಗಂಟೆ 59 ನಿಮಿಷಗಳ ಅವಧಿ ಹೊಂದಿತ್ತು. ʼಪುಷ್ಪ 2ʼ ಅದಕ್ಕಿಂತಲೂ ದೀರ್ಘವಾಗಿರಲಿದೆಯಂತೆ. ಮೂಲಗಳ ಪ್ರಕಾರ ಸಿನಿಮಾದ ಕೊನೆಯ ಹಂತದ ಎಡಿಟಿಂಗ್‌, ಕೆಲಸ ಎಲ್ಲವೂ ಮುಗಿದಿದ್ದು ರನ್‌ ಟೈಮ್‌ 3 ಗಂಟೆ 15 ನಿಮಿಷ ಇದೆಯಂತೆ. ಬಹುತೇಕ ಈ ಅವಧಿ ಫಿಕ್ಸ್‌ ಎನ್ನಲಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ. ತೆಲುಗಿನ ಅತೀ ದೀರ್ಘ ಅವಧಿಯ ಚಿತ್ರ ಇದಾಗಲಿದೆ ಎಂದು ವರದಿಯೊಂದು ತಿಳಿಸಿದೆ.

ಹಾಗೆ ನೋಡಿದರೆ ಕಳೆದ ವರ್ಷ ತೆರೆಕಂಡ ಬಾಲಿವುಡ್‌ನ ʼಅನಿಮಲ್‌ʼ ಚಿತ್ರದ ರನ್‌ಟೈಮ್‌ ಇನ್ನಷ್ಟು ಹೆಚ್ಚಿತ್ತು. ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್‌ ಕಪೂರ್‌ ನಟನೆಯ ಈ ಸಿನಿಮಾ 3 ಗಂಟೆ 24 ನಿಮಿಗಳಷ್ಟು ದೀರ್ಘ ಅವಧಿ ಹೊಂದಿತ್ತು. ವಿಶೇಷ ಎಂದರೆ ಇದರಲ್ಲಿಯೂ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.

‘ಪುಷ್ಪ 2’ ಇಷ್ಟು ದೀರ್ಘ ಅವಧಿ ಹೊಂದಿದ್ದರೂ ಎಲ್ಲಿಯೂ ಪ್ರೇಕ್ಷಕರಿಗೆ ಬೋರ್‌ ಆಗುವುದಿಲ್ಲವಂತೆ. ಭರಪೂರ ಆ್ಯಕ್ಷನ್‌, ರೋಚಕ ತಿರುವು, ಪಾತ್ರಧಾರಿಗಳ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಹಿಡಿದು ಕೂರಿಸಲಿದೆ ಎಂದು ಮೂಲಗಳು ವರದಿ ಮಾಡಿವೆ. ಪುಷ್ಪರಾಜ್‌ (ಅಲ್ಲು ಅರ್ಜುನ್‌) ಮತ್ತು ಎಸ್‌ಪಿ ಬನ್ವರ್‌ ಸಿಂಗ್‌ ಶೆಖಾವತ್‌ (ಫಹದ್‌ ಫಾಸಿಲ್‌) ಅವರ ಮುಖಾಮುಖಿಯನ್ನು ಈ ಭಾಗದಲ್ಲಿ ರೋಚಕವಾಗಿ ಕಟ್ಟಿ ಕೊಡಲಾಗಿದೆಯಂತೆ.

ಸುನೀಲ್‌, ಡಾಲಿ ಧನಂಜಯ್‌, ಪ್ರಕಾಶ್‌ ರಾಜ್‌, ಅಜಯ್‌, ಕಲ್ಪಲತಾ, ಜಗಪತಿ ಬಾಬು, ತಾರಕ್‌ ಪೊನ್ನಪ್ಪ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼಪುಷ್ಪ 2ʼ ಡಿ. 5ರಂದು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Pushpa 2: ಗನ್‌ ಹಿಡಿದು ‘ಪುಷ್ಪ 2’ ಲುಕ್‌ನಲ್ಲಿ ಮಿಂಚಿದ ಕ್ರಿಕೆಟಿಗ ವಾರ್ನರ್‌