Sunday, 11th May 2025

Pushpa 2 Movie: ಹಿಂದಿ ಬಾಕ್ಸ್‌ ಆಫೀಸ್‌ನಲ್ಲೂ ವೈಲ್ಡ್‌ ಫೈರ್‌ನಂತೆ ಉರಿದ ‘ಪುಷ್ಪ 2’; ‘ಕೆಜಿಎಫ್‌ 2’ ದಾಖಲೆ ಉಡೀಸ್‌

Pushpa 2 Movie

ಮುಂಬೈ: 2022ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ‘ಕೆಜಿಎಫ್‌ 2’ (KGF 2) ಆಫೀಸ್‌ನಲ್ಲಿ ಬಂಗಾರದಂತೆ ಹೊಳೆದಿತ್ತು. ಪ್ರಶಾಂತ್‌ ನೀಲ್‌-ಯಶ್‌-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ನ ಈ ಸಿನಿಮಾ ಕನ್ನಡದ ಜತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ಚಂದನವನದ ಕಂಪು ದೇಶಾದ್ಯಂತ ಪಸರಿಸಿತ್ತು. ಈ ಮೂಲಕ ರಾಕಿಂಗ್‌ ಸ್ಟಾರ್‌ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬದಲಾಗಿದ್ದರು. ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿಯೂ ಸದ್ದು ಮಾಡಿದ್ದ ಕನ್ನಡದ ಈ ಚಿತ್ರದ ಅಪರೂಪದ ದಾಖಲೆಯನ್ನು ಇದೀಗ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪ 2ʼ ಸಿನಿಮಾ (Pushpa 2 Movie) ಅಳಿಸಿ ಹಾಕಿದೆ. ಸುಮಾರು ಎರಡೂವರೆ ವರ್ಷದ ಭದ್ರವಾಗಿದ್ದ ರೆಕಾರ್ಡ್‌ ಛಿದ್ರ ಛಿದ್ರವಾಗಿದೆ.

ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಸಿದ ಡಬ್‌ ಚಿತ್ರವೆಂಬ ಖ್ಯಾತಿ ಸ್ಯಾಂಡಲ್‌ವುಡ್‌ನ ಹೆಮ್ಮೆಯ ʼಕೆಜಿಫ್‌ 2ʼ ಚಿತ್ರಕ್ಕಿತ್ತು. ಬಿಡುಗಡೆಯಾದ ಮೊದಲ ದಿನವೇ ಯಶ್‌ ಅಭಿನಯದ ಈ ಸಿನಿಮಾದ ಹಿಂದಿ ವರ್ಷನ್‌ ಬರೋಬ್ಬರಿ 53.95 ಕೋಟಿ ರೂ. ಬಾಚಿಕೊಂಡಿತ್ತು. ಆ ಮೂಲಕ ರಾಜಮೌಳಿ-ಪ್ರಭಾಸ್‌-ಅನುಷ್ಕಾ ಶೆಟ್ಟಿ ಕಾಂಬಿನೇಷನ್‌ನ ʼಬಾಹುಬಲಿ 2ʼ ಚಿತ್ರದ ದಾಖಲೆ ಮುರಿದಿತ್ತು. ಆ ಚಿತ್ರ ಮೊದಲ ದಿನ ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿ 41 ಕೋಟಿ ರೂ. ಗಳಿಸಿತ್ತು. ಇದೀಗ ಟಾಲಿವುಡ್‌ನ ‘ಪುಷ್ಪ 2’ ಚಿತ್ರ ʼಕೆಜಿಎಫ್‌ 2ʼ ರೆಕಾರ್ಡ್‌ ಬ್ರೇಕ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ʼಪುಷ್ಪ 2ʼ ಮೊದಲ ದಿನ ಗಳಿಸಿದ್ದೆಷ್ಟು?

ʼಪುಷ್ಪ 2ʼ ಹಿಂದಿ ಅವತರಣಿಕೆ ಮೊದಲ ದಿನ ಅಂದರೆ ಡಿ. 5ರಂದು ಬರೋಬ್ಬರಿ 72 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಹಿಂದಿಯಲ್ಲಿ ಅತೀ ಹೆಚ್ಚು ಗಳಿಸಿದ ಡಬ್‌ ಚಿತ್ರವೆಂಬ ಪಟ್ಟ ಅಲಂಕರಿಸಿದೆ. ಚಿತ್ರದಲ್ಲಿ ”ಪುಷ್ಪ ಎಂದರೆ ಹೂವಲ್ಲ, ಕಾಡಿನ ಬೆಂಕಿ (Wild Fire)” ಎನ್ನುವ ಡೈಲಾಗ್‌ ಇದೆ. ಅದಕ್ಕೆ ತಕ್ಕಂತೆ ಇದೀಗ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.

ಈಗಾಗಲೇ ಮೊದಲ ದಿನ ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಖ್ಯಾತಿ ʼಪುಷ್ಪ 2ʼಗೆ ಸಿಕ್ಕಿದೆ. ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ 175 ಕೋಟಿ ರೂ. ಗಳಿಸಿದ್ದರೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 228 ಕೋಟಿ ರೂ. ಜೇಬಿಗಿಳಿಸಿದೆ. ಇದೀಗ ಹಿಂದಿ ಭಾಷೆಯಲ್ಲಿಯೂ ದಾಖಲೆಯ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ನ ಅವರಿಗೆ ಉತ್ತರ ಭಾರತದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿರುವುದು ಮತ್ತು ಟ್ರೈಲರ್‌ ಮತ್ತು ಹಾಡುಗಳ ಮೂಲಕ ಕುತೂಹಲ ಕೆರಳಿದ್ದೂ ದಾಖಲೆಯ ಕಲೆಕ್ಷನ್‌ಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

‌ಹಿಂದಿಯಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಸಿದ ಡಬ್‌ ಚಿತ್ರಗಳು

  • ʼಪುಷ್ಪ 2ʼ – 72 ಕೋಟಿ ರೂ.
  • ʼಕೆಜಿಎಫ್‌ 2ʼ – 53.95 ಕೋಟಿ ರೂ.
  • ʼಬಾಹುಬಲಿ 2ʼ – 41 ಕೋಟಿ ರೂ.
  • ʼಸಾಹೋʼ – 24.40 ಕೋಟಿ ರೂ.
  • ʼಕಲ್ಕಿ 2898 ಎಡಿʼ – 22.50 ಕೋಟಿ ರೂ.
  • ʼ2.0ʼ – 20.25 ಕೋಟಿ ರೂ.
  • ʼಆರ್‌ಆರ್‌ಆರ್‌ʼ – 20.07 ಕೋಟಿ ರೂ.

ಈ ಸುದ್ದಿಯನ್ನೂ ಓದಿ: Pushpa 2 The Rule review: ಪುಷ್ಪಾ-2 ಹೇಗಿದೆ?, 3 ಗಂಟೆ 20 ನಿಮಿಷದ ಸಿನಿಮಾ ಬೋರ್ ಆಗುತ್ತಾ?