Monday, 12th May 2025

Pushpa 2 Box office collection: ಮೊದಲನೇ ದಿನದ ಗಳಿಕೆಯಲ್ಲಿ ಆರ್‌ಆರ್‌ಆರ್‌ ದಾಖಲೆ ಮುರಿದ ಪುಷ್ಪಾ-2..?

Pushpa 2 box office collection Day 1

ನವದೆಹಲಿ: ಅಲ್ಲು ಅರ್ಜುನ್‌ ನಟನೆಯ ಪುಷ್ಪಾ-2 ಸಿನಿಮಾ ಗುರುವಾರ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ (Pushpa 2 box office collection) ದಾಖಲೆಯ ಮೊತ್ತವನ್ನು ಗಳಿಸಿದೆ. ಆ ಮೂಲಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ದಾಖಲೆಯನ್ನು ಮುರಿಯುವುದರೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಸಿನಿಮಾ ಬಿಡುಗಡೆಯಾದ ಮೊದಲನೇ ದಿನವಾದ ಗುರುವಾರವೇ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿಯೂ ಪುಷ್ಪಾ-2 ಸಿನಿಮಾ 160 ಕೋಟಿ ರೂ. ಗಳನ್ನು ಗಳಿಸಿದೆ ಎಂದು ಸ್ಯಾಕ್ನಿಲ್ಕ್. ಕಾಮ್‌ ವರದಿ ತಿಳಿಸಿದೆ. ವಾರಾಂತ್ಯವಲ್ಲಾದರೂ ಪುಷ್ಪಾ-2 ಸಿನಿಮಾ ಅತ್ಯಂತ ಹೆಚ್ಚು ಗಳಿಕೆಯನ್ನು ಪಡೆದಿದೆ. ಆ ಮೂಲಕ ಆರ್‌ಆರ್‌ಆರ್‌ ಸಿನಿಮಾ ಬಾಸ್‌ ಆಫೀಸ್‌ ದಾಖಲೆಯನ್ನು ಹಿಂದಿಕ್ಕಿದೆ. ರಾಮ್‌ ಚರಣ್‌ ಹಾಗೂ ಜೂನಿಯರ್‌ ಎನ್‌ಟಿಆರ್‌ ನಟನೆಯ ಈ ಸಿನಿಮಾ ಬಿಡುಗಡೆಯಾದ ಮೊದಲನೇ ದಿನ 133 ಕೋಟಿ ರೂ. ಗಳನ್ನು ಗಳಿಸಿತ್ತು. ಮೊದಲನೇ ದಿನ ಗಳಿಸಿದ ಮೊತ್ತದಲ್ಲಿ ತೆಲುಗು ಭಾಷೆಯಿಂದಲೇ 80.14% ರಷ್ಟು ಬಂದಿದೆ.

ಮೊದಲನೇ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳು

ಪುಷ್ಪಾ-2: 160 ಕೋಟಿ ರೂ. ಗಳು
ಆರ್‌ಆರ್‌ಆರ್‌: 133 ಕೋಟಿ ರೂ. ಗಳು
ಬಾಹುಬಲಿ-2: 121 ಕೋಟಿ ರೂ. ಗಳು
ಕೆಜಿಎಪ್‌-2: 116 ಕೋಟಿ ರೂ. ಗಳು

“ಪುಷ್ಪಾ 2 ಸಿನಿಮಾ ಅಧಿಕೃತವಾಗಿ ಇತಿಹಾಸವನ್ನು ಪುನಃ ರಚಿಸುತ್ತಿದೆ. ಸಿನಿಮಾ ವೀಕ್ಷಿಸಲು 30 ಲಕ್ಷ ಮಂದಿ ಮುಂಗಡವಾಗಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಭಾರತದಲ್ಲಿಯೇ ಮುಂಗಡವಾಗಿ ಇಷ್ಟು ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಿರುವುದು ಇದೇ ಮೊದಲು. ಅಭಿಮಾನಿಗಳು ದಾಖಲೆಯ ಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಬಂದ ಸಿನಿಮಾವನ್ನು ವೀಕ್ಷಿಸಿದ್ದಾರೆ ಹಾಗೂ ಹೊಸ ಸಂಚನವನ್ನು ಸೃಷ್ಟಿಸಿದ್ದಾರೆ. ಪುಷ್ಪಾ-2 ಸಿನಿಮಾ ನೂತನ ಮೈಲುಗಲ್ಲು ಸ್ಥಾಪಿಸಿದೆ. ಭಾರತೀಯ ಚಿತ್ರಮಂದಿರಕ್ಕೆ ಇದು ಅತ್ಯಂತ ಸ್ಮರಣೀಯ ದಿನ ಹಾಗೂ ವರ್ಷಾಂತ್ಯವನ್ನು ಸಂಭ್ರಮಿಸಲು ಅತ್ಯಂತ ವೇದಿಕೆಯನ್ನು ಪುಷ್ಪಾ-2 ನಿರ್ಮಿಸಿದೆ. ಹಿಂದೆಂದೂ ಸಾಧ್ಯವಾಗದ ರೀತಿ ಪುಷ್ಪಾ-2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯನ್ನು ಬರೆದಿದೆ,” ಎಂದು ಬುಕ್‌ ಮೈ ಶೋ, ಸಿನಿಮಾಸ್‌ ಸಿಒಒ ಆಶಿಶ್‌ ಸಕ್ಸೇನಾ ತಿಳಿಸಿದ್ದಾರೆ.

ಪುಷ್ಪಾ-2 ಸಿನಿಮಾವನ್ನು ಸುಕುಮಾರ್‌ ನಿರ್ದೇಶನ ಹಾಗೂ ಮೈತ್ರಿ ಸಿನಿಮಾ ನಿರ್ಮಾಣದಿಂದ ಮೂಡಿಬಂದಿರುವ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮೀಕಾ ಮಂದಣ್ಣ ಹಾಗೂ ಫಹಾಧ್‌ ಫಾಸಿಲ್‌ ಅವರು ಕ್ರಮವಾಗಿ ಪುಷ್ಪಾ ರಾಜ್‌, ಶ್ರೀವಲ್ಲಿ ಹಾಗೂ ಭಾನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಭಾಗ ನಟನೆಗಾಗಿ ಅವರು ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ ಪಡೆದಿದ್ದರು.