Saturday, 10th May 2025

Priyanka Chopra: ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಪ್ರಿಯಾಂಕಾ ಚೋಪ್ರಾ; ಶೀಘ್ರದಲ್ಲೇ ಬಾಲಿವುಡ್‌ಗೆ ಕಂಬ್ಯಾಕ್‌

Priyanka Chopra

ಮುಂಬೈ: ಬಾಲಿವುಡ್‌, ಹಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್‌ ನೀಡಿದ್ದಾರೆ. ಶ್ರೀಘ್ರದಲ್ಲೇ ಬಾಲಿವುಡ್‌ಗೆ ಮರಳುವುದಾಗಿ ತಿಳಿಸಿದ್ದಾರೆ. ಹಾಲಿವುಡ್‌ ಚಿತ್ರ, ಅಮೆರಿಕನ್‌ ಟಿವಿ ಸಿರೀಸ್‌ಗಳಲ್ಲಿ ಬ್ಯುಸಿಯಾಗಿರುವ ಅವರನ್ನು ಅಭಿಮಾನಿಗಳು ಬಾಲಿವುಡ್‌ ಚಿತ್ರಗಳಲ್ಲಿ ಮಿಸ್‌ ಮಾಡಿಕೊಳ್ಳುತ್ತಿದ್ದರು. ಇದೀಗ ʼದೇಸಿ ಗರ್ಲ್‌ʼ ಮೌನ ಮುರಿದಿದ್ದು, ಮುಂದಿನ ವರ್ಷ ಬಾಲಿವುಡ್‌ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆ ಮೂಲಕ ಸುಮಾರು 4 ವರ್ಷಗಳ ಬಳಿಕ ಅವರನ್ನು ಹಿಂದಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಸದ್ಯ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಸ್ಟಾರ್‌ ನಟಿಯಿಂದ ಗ್ಲೋಬಲ್‌ ಐಕಾನ್‌ ಆಗಿ ಬದಲಾಗಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಾಲಿವುಡ್‌ ಚಿತ್ರ, ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. 2021ರಲ್ಲಿ ತೆರೆಕಂಡ ʼದಿ ವೈಟ್‌ ಟೈಗರ್‌ʼ (The White Tiger) ಪ್ರಿಯಾಂಕಾ ಅಭಿನಯದ ಕೊನೆಯ ಹಿಂದಿ ಚಿತ್ರ. ಆದರ್ಶ್‌ ಗೌರವ್‌, ರಾಜ್‌ಕುಮಾರ್‌ ರಾವ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಚಿತ್ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣವಾಗಿತ್ತು.

ಪ್ರಿಯಾಂಕಾ ಹೇಳಿದ್ದೇನು?

ಒಂದು ಕಾಲದಲ್ಲಿ ಬಾಲಿವುಡ್‌ ಆಳಿದ್ದ ಪ್ರಿಯಾಂಕಾ ಬಳಿಕ ಹಾಲಿವುಡ್‌ನತ್ತ ಮುಖ ಮಾಡಿದರು. ಇದರಿಂದ ಬಾಲಿವುಡ್‌ ತೆರೆ ಮೇಲೆ ಅವರನ್ನು ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಪ್ರತಿ ಸಲ ಅವರಿಗೆ ಯಾವಾಗ ಬಾಲಿವುಡ್‌ ಚಿತ್ರ ಮಾಡುತ್ತೀರಿ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಅವರು ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಜೆಡ್ಡಾದಲ್ಲಿ ನಡೆದ ರೆಡ್‌ ಸಿ ಫಿಲ್ಮ್‌ ಫೆಸ್ಟಿವಲ್‌ 2024ರಲ್ಲಿ ಮಾತನಾಡಿದ ಅವರು, ʼʼನಾನು ಎಲ್ಲೇ ಹೋದರೂ ಭಾರತವನ್ನು ಎಂದಿಗೂ ಮರೆಯುವುದಿಲ್ಲ. ಭಾರತೀಯ ಚಿತ್ರರಂಗಕ್ಕೆ ಯಾವತ್ತಿದ್ದರೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದ್ದೇ ಇದೆ. ಮುಂದಿನ ವರ್ಷ ನಾನು ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತೇನೆ. ಡ್ಯಾನ್ಸ್‌ ಅನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಪಿಸಿ ತಿಳಿಸಿದ್ದಾರೆ.

ಸದ್ಯದ ಪ್ರಾಜೆಕ್ಟ್‌

ಸದ್ಯ ಪ್ರಿಯಾಂಕಾ ಚೋಪ್ರಾ 2 ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ʼಹೆಡ್ಸ್‌ ಆಫ್‌ ಸ್ಟೇಟ್‌ʼ (Heads of State) ಮತ್ತು ʼದಿ ಬ್ಲಫ್‌ʼ (The Bluff) ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

2000ರಲ್ಲಿ ಮಿಸ್‌ ವರ್ಲ್ಡ್‌ ಆಗಿ ಆಯ್ಕೆಯಾಗಿದ ಪ್ರಿಯಾಂಕಾ 2002ರಲ್ಲಿ ವಿಜಯ್‌ ಅಭಿನಯದ ʼತಮಿಳನ್‌ʼ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ 2003ರಲ್ಲಿ ʼದಿ ಹೀರೋ: ಲವ್‌ ಸ್ಟೋರಿ ಆಫ್‌ ಎ ಸ್ಪೈʼ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟು ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡರು. ಗ್ಲಾಮರ್‌ ಮಾತ್ರವಲ್ಲ ಅಭಿನಯಕ್ಕೆ ಪ್ರಾಶಸ್ತ್ಯವಿರುವ ಚಿತ್ರಗಳಲ್ಲಿ ನಟಿಸುವ ಮೂಲಕ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. 2008ರಲ್ಲಿ ತೆರೆಕಂಡ ʼಫ್ಯಾಷನ್‌ʼ ಹಿಂದಿ ಚಿತ್ರದಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಿಯಾಂಕಾ ನಿರ್ಮಾಪಕಿಯಾಗಿಯೂ, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

2013ರಲ್ಲಿ ʼಗರ್ಲ್‌ ರೈಸಿಂಗ್‌ʼ ಎಂಬ ಇಂಗ್ಲಿಷ್‌ ಸಾಕ್ಷ್ಯ ಚಿತ್ರದಲ್ಲಿ ನಟಿಸಿದ ಪ್ರಿಯಾಂಕಾ ಅದಾದ ಬಳಿಕ 2017ರಲ್ಲಿ ತೆರೆಕಂಡ ʼಬೇವಾಚ್‌ʼ ಹಾಲಿವುಡ್‌ ಚಿತ್ರದ ಮೂಲಕ ಗ್ಲೋಬಲ್‌ ಸ್ಟಾರ್‌ ಪಟ್ಟಕ್ಕೇರಿದರು. 2018ರಲ್ಲಿ ಪ್ರಿಯಾಂಕಾ ಅಮೇರಿಕ ಮೂಲದ ಗಾಯಕ ನಿಕ್‌ ಜೋನಸ್‌ನನ್ನು ವರಿಸಿದರು. ಈ ದಂಪತಿಗೆ ಮಾಲ್ತಿ ಮೇರಿ ಎನ್ನುವ ಮಗಳಿದ್ದಾಳೆ.

ಈ ಸುದ್ದಿಯನ್ನೂ ಓದಿ: Priyanka Chopra: ಬಿಕಿನಿ ತೊಟ್ಟು ಬೀಚ್‌ ಬದಿ ಹಾಟ್‌ ಆಗಿ ಪೋಸ್‌ ನೀಡಿದ ಪ್ರಿಯಾಂಕಾ ಚೋಪ್ರಾ; ಕಿಕ್ಕೇರಿಸುವ ಫೋಟೊ ಇಲ್ಲಿದೆ