Sunday, 11th May 2025

Max Collection: ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ‘ಮ್ಯಾಕ್ಸ್‌’ ಅಬ್ಬರ; ಸುದೀಪ್‌ ಚಿತ್ರ ಬಾಚಿಕೊಂಡಿದ್ದೆಷ್ಟು?

Max Box Collection

ಬೆಂಗಳೂರು: ವರ್ಷಾಂತ್ಯದಲ್ಲಿ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಕನ್ನಡ ಚಿತ್ರಗಳು ಸದ್ದು ಮಾಡುತ್ತಿವೆ. ಡಿ. 20ರಂದು ತೆರೆಕಂಡ ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ʼಯುಐʼ (UI) ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರೆ, ಇತ್ತ 5 ದಿನಗಳ ಅಂತರದಲ್ಲಿ ಅಂದರೆ ಡಿ. 25ರಂದು ರಿಲೀಸ್‌ ಆದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ (Kiccha Sudeepa) ನಟನೆಯ ‘ಮ್ಯಾಕ್ಸ್‌’ (Max) ಅಬ್ಬರಿಸುತ್ತಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸುದೀಪ್‌ ಅಭಿನಯ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ. ಸಾಲು ಸಾಲು ರಜೆ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೊದಲ ದಿನ 8.50 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಮ್ಯಾಕ್ಸ್‌ʼ 2 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವಿವರ (Max Box Collection).

ಪಕ್ಕಾ ಮಾಸ್‌ ಆಗಿ ಮೂಡಿ ಬಂದಿರುವ ಈ ಆ್ಯಕ್ಷನ್‌ ಥ್ರಿಲ್ಲರ್‌ಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಅದರಲ್ಲಿಯೂ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಸುದೀಪ್‌ ಅಭಿನಯಕ್ಕೆ, ಆ್ಯಕ್ಷನ್‌ಗೆ ಫಿದಾ ಆಗಿದ್ದಾರೆ. 2022ರಲ್ಲಿ ರಿಲೀಸ್‌ ಆದ ʼವಿಕ್ರಾಂತ್‌ ರೋಣʼ ಸಿನಿಮಾದ ಬಳಿಕ ತೆರೆಕಂಡ ಸುದೀಪ್‌ ಅಭಿನಯದ ಚಿತ್ರ ಇದಾಗಿದ್ದು, ಈ ಕಾರಣಕ್ಕೆ ಆರಂಭದಲ್ಲೇ ಕುತೂಹಲ ಮೂಡಿಸಿತ್ತು. ಅಲ್ಲದೆ ಸುದೀಪ್‌ ಮತ್ತೊಮ್ಮೆ ಖಾಕಿ ತೊಟ್ಟಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡ ಹೊರ ತಂದಿದ್ದ ಟೀಸರ್‌, ಪೋಸ್ಟರ್‌, ಹಾಡುಗಳು ಗಮನ ಸೆಳೆದಿದ್ದವು.

2 ದಿನಗಳಲ್ಲಿ ಗಳಿಸಿದ್ದೆಷ್ಟು?

ಮೊದಲ ದಿನ ಸುಮಾರು 8.50 ಕೋಟಿ ರೂ. ಕಲೆಕ್ಷನ್‌ ಮಾಡಿದ್ದ ʼಮ್ಯಾಕ್ಸ್‌ʼ ಗಳಿಕೆ ಎರಡನೇ ದಿನವಾದ ಗುರುವಾರ ಕೊಂಚ ತಗ್ಗಿದೆ. ವರದಿಯೊಂದರ ಪ್ರಕಾರ 2ನೆ ದಿನವಾರ ಡಿ. 26ರಂದು ಕಿಚ್ಚನ ಚಿತ್ರ 4 ಕೋಟಿ ರೂ. ಬಾಚಿಕೊಂಡಿದೆ. ಆ ಮೂಲಕ 2 ದಿನಗಳ ಗಳಿಕೆ 12.7 ಕೋಟಿ ರೂ. ಆಗಿದೆ. ಚಿತ್ರಕ್ಕೆ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ವರ್ಷಾಂತ್ಯದ ವೀಕೆಂಡ್‌ನಲ್ಲೂ ಗಳಿಕೆ ಅಧಿಕವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

ಹೇಗಿದೆ ಚಿತ್ರ?

ಕಾಲಿವುಡ್‌ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ (Vijay Karthikeyaa) ಆ್ಯಕ್ಷನ್‌ ಕಟ್‌ ಹೇಳಿರುವ ʼಮ್ಯಾಕ್ಸ್‌ʼ ಒಂದೇ ದಿನದಲ್ಲಿ ನಡೆಯುವ ಕಥೆಯಾಗಿದ್ದು, ಅದನ್ನು ಅವರು ರೋಚಕವಾಗಿ ಕಟ್ಟಿಕೊಡಲಾಗಿದೆ. ಮಾಮೂಲಿ ಕಥೆಯಾದರೂ ಅದನ್ನು ಕುತೂಹಲಭರಿತವಾಗಿ ಪ್ರಸ್ತುತಪಡಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ವೇಗವಾಗಿ ಸಾಗುವ ಚಿತ್ರಕಥೆ, ಸುದೀಪ್‌ ಅಭಿನಯ, ರೋಚಕ ಸಾಹಸ ದೃಶ್ಯ ಸಿನಿಮಾದ ಪ್ಲಸ್‌ ಪಾಯಿಂಟ್‌. ತಮಿಳಿನ ವರಲಕ್ಷ್ಮೀ ಶರತ್‌ ಕುಮಾರ್‌, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ ಮತ್ತಿತರರು ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮೋಡಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Max Movie Collection: ‘ಮ್ಯಾಕ್ಸ್‌’ ಮನೋರಂಜನೆ ನೀಡಿದ ಕಿಚ್ಚ; ಸುದೀಪ್‌ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?