ಚೆನ್ನೈ: ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಅಭಿನಯದ ʼಕಂಗುವʼ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಬಿಗ್ ಬಜೆಟ್ನಲ್ಲಿ ತಯಾರಾಗಿದ್ದ ಸಿನಿಮಾದ ವಿರುದ್ಧ ನೆಗೆಟಿವ್ ವಿಮರ್ಶೆಗಳು ಕೇಳಿ ಬಂದಿದ್ದು ಕೂಡ ಹೀನಾಯ ಸೋಲಿಗೆ ಕಾರಣವಾಗಿತ್ತು. ಹೀಗಾಗಿ ತಮಿಳು ಚಿತ್ರ ನಿರ್ಮಾಪಕರು ಯೂಟ್ಯೂಬ್ ಚಾನಲ್ಗಳಲ್ಲಿ ಅಭಿಮಾನಿಗಳ ಸಂದರ್ಶನವನ್ನು ನಿಷೇಧಿಸುವಂತೆ ಚಿತ್ರಮಂದಿರ ಮಾಲಕರಲ್ಲಿ ವಿನಂತಿಸಿದ್ದರು (Kollywood). ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ (Tamil Film Active Producers Association-TFAPA)ವು ಮದ್ರಾಸ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 3 ದಿನಗಳವರೆಗೆ ಚಲನಚಿತ್ರ ವಿಮರ್ಶೆಗಳನ್ನು ನಿಷೇಧಿಸುವಂತೆ ಕೋರಿದೆ.
ಅರ್ಜಿಯಲ್ಲಿ ಏನಿದೆ?
ವಿಜಯನ್ ಸುಬ್ರಮಣಿಯನ್ ಮೂಲಕ ಟಿಎಫ್ಎಪಿಎ ಅರ್ಜಿ ಸಲ್ಲಿಸಿದೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವಿಮರ್ಶೆ ಮಾಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಂಘವು ಕೋರಿದೆ. ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸೌಂದರ್ ಅವರು ವಿಚಾರಣೆ ನಡೆಸಲಿದ್ದಾರೆ.
Tamil Film Active Producers Association (TFAPA) has filed a writ petition in the Madras High Court seeking a direction to the Centre as well as the State government to ban review of movies for three days, from the date of their theatrical release, on social media platforms such…
— Rajasekar (@sekartweets) December 3, 2024
ಈ ಹಿಂದೆ ತಮಿಳುನಾಡು ನಿರ್ಮಾಪಕರ ಮಂಡಳಿ ತನ್ನ ಸುದೀರ್ಘ ಹೇಳಿಕೆಯಲ್ಲಿ ಚಲನಚಿತ್ರ ವಿಮರ್ಶೆಗಳ ಹೆಸರಿನಲ್ಲಿ ವೈಯಕ್ತಿಕ ದಾಳಿ ಮತ್ತು ದ್ವೇಷವನ್ನು ಪ್ರಚೋದಿಸುವುದನ್ನು ಖಂಡಿಸಿತ್ತು. ಯೂಟ್ಯೂಬ್ ವಿಮರ್ಶೆಗಳು ʼಇಂಡಿಯನ್ 2ʼ, ʼವೆಟ್ಟೈಯನ್ʼ ಮತ್ತು ʼಕಂಗುವʼದಂತಹ ಚಲನಚಿತ್ರಗಳ ಕಲೆಕ್ಷನ್ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿತ್ತು.
ಚಿತ್ರಮಂದಿರಗಳಲ್ಲಿ ಯೂಟ್ಯೂಬರ್ಗಳನ್ನು ನಿಷೇಧಿಸುವಂತೆ ತಮಿಳುನಾಡು ನಿರ್ಮಾಪಕರೂ ಒತ್ತಾಯಿಸಿದ್ದರು. ʼʼವಿಮರ್ಶಕರಿಗೆ ಚಲನಚಿತ್ರಗಳನ್ನು ಪರಿಶೀಲಿಸುವ ಎಲ್ಲ ಹಕ್ಕಿದೆ. ಆದರೆ ವೈಯಕ್ತಿಕ ದುರುದ್ದೇಶದಿಂದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಚಲನಚಿತ್ರದ ಬಗ್ಗೆ ದ್ವೇಷವನ್ನು ಬಿತ್ತಬಾರದು ಎಂಬುದು ಗಮನದಲ್ಲಿರಬೇಕುʼʼ ಎಂದು ಆಗ್ರಹಿಸಿದ್ದರು.
ನಿಷೇಧ ಹೇರಿದ ಮೊದಲ ರಾಜ್ಯ ಕೇರಳ
2023ರಲ್ಲಿ ʼಅರೋಮಲಿಂಟೆ ಅದ್ಯತೆ ಪ್ರಣಯಂʼ ನಿರ್ದೇಶಕ ಮುಬೀನ್ ರವೂಫ್ ಅವರು ಯೂಟ್ಯೂಬ್ ವಿಮರ್ಶಕರನ್ನು ಚಿತ್ರಮಂದಿರಕ್ಕೆ ಪ್ರವೇಶಿಸದಂತೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಚಿತ್ರ ಬಿಡುಗಡೆಯಾದ 7 ದಿನಗಳ ಕಾಲ ಯೂಟ್ಯೂಬ್ ವಿಮರ್ಶೆಗಳನ್ನು ಕೇರಳದಲ್ಲಿ ನಿಷೇಧಿಸಲಾಗಿತ್ತು. ಆ ಮೂಲಕ ಯೂಟ್ಯೂಬ್ ವಿಮರ್ಶೆಯನ್ನು ನಿಷೇಧಿಸಿದ ಮೊದಲ ರಾಜ್ಯ ಕೇರಳ ಎನಿಸಿಕೊಂಡಿದೆ. ಯೂಟ್ಯೂಬ್ ವಿಮರ್ಶಕರ ನೆಗೆಟಿವ್ ಅಭಿಪ್ರಾಯಗಳು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತವೆ ಎಂದು ಕಾರಣ ನೀಡಲಾಗಿತ್ತು.
ಸತತ ಸೋಲಿನಿಂದ ಕಂಗೆಟ್ಟ ಕಾಲಿವುಡ್
ಈ ವರ್ಷದ ತೆರೆಕಂಡ ತಮಿಳಿನ ಬಿಗ್ ಬಜೆಟ್ನ ಬಹು ನಿರೀಕ್ಷಿತ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸೋಲಿಗೆ ತುತ್ತಾಗಿವೆ. ರಜನಿಕಾಂತ್, ಅಮಿತಾಭ್ ಬಚ್ಚನ್ ನಟನೆಯ ʼವೆಟ್ಟೈಯನ್ʼ, ಕಮಲ್ ಹಾಸನ್ ಅವರ ʼಇಂಡಿಯನ್ 2ʼ, ಸೂರ್ಯ ನಟನೆಯ ʼಕಂಗುವʼ ಹೀಗೆ ಹಲವು ಚಿತ್ರಗಳು ಮಕಾಡೆ ಮಲಗಿವೆ. ಚಿತ್ರ ತೆರೆಕಂಡ ಕೂಡಲೇ ನೆಗೆಟಿವ್ ವಿಮರ್ಶೆ ಕೇಳಿ ಬಂದ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದೆ. ಹೀಗಾಗಿ ಚಿತ್ರ ತೆರೆಕಂಡ 3 ದಿನಗಳವರೆಗೆ ಆನ್ಲೈನ್ ರಿವ್ಯೂ ನಿಷೇಧಿಸುವಂತೆ ಮನವಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Kanguva Box Office Collection: ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡದ ʼಕಂಗುವʼ; ಸೂರ್ಯ ಅಭಿನಯದ ಚಿತ್ರ ಡಲ್ ಆಗಿದ್ದೇಕೆ?