Sunday, 11th May 2025

Kiran Raj: Ronny ಚಿತ್ರ ಬಿಡುಗಡೆ ಹೊಸ್ತಿಲಲ್ಲಿ ನಟ ಕಿರಣ್‌ ರಾಜ್‌ ಸಂಚರಿಸುತ್ತಿದ್ದ ಕಾರು ಅಪಘಾತ; ಆಸ್ಪತ್ರೆಗೆ ದಾಖಲು

Kiran Raj

ಬೆಂಗಳೂರು: ʼಕನ್ನಡತಿʼ ಧಾರಾವಾಹಿ ಖ್ಯಾತಿಯ, ʼರಾನಿʼ (Ronny) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲು ಸಜ್ಜಾಗಿರುವ ನಟ ಕಿರಣ್‌ ರಾಜ್‌ (Kiran Raj) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ಕಿರಣ್‌ ರಾಜ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಕಿರಣ್ ರಾಜ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ʼರಾನಿʼ ನಾಳೆ ರಿಲೀಸ್‌

ಕಿರಣ್‌ ರಾಜ್‌ ಅಭಿನಯದ ʼರಾನಿʼ ಚಿತ್ರ ನಾಳೆ (ಸೆಪ್ಟೆಂಬರ್‌ 12) ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಅವರು ಪ್ರಮೋಷನ್ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ನಿರಂತರ ಓಡಾಡುತ್ತಿದ್ದಾರೆ. ಈ ಮಧ್ಯೆ ಈ ಅವಘಡ ಸಂಭವಿಸಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ʼರಾನಿʼ ಚಿತ್ರದ ಟ್ರೈಲರ್, ಹಾಡು ಈಗಾಗಲೇ ರಿಲೀಸ್‌ ಆಗಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಕಿರಣ್‌ ರಾಜ್‌ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಈ ಚಿತ್ರವನ್ನು ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಚಂದ್ರಕಾಂತ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಿಸುತ್ತಿದ್ದಾರೆ. ಇವರು ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ.

ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ರಾಧ್ಯ, ಸಮೀಕ್ಷಾ ಮತ್ತು ಅಪೂರ್ಣ ಈ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಸುರೇಶ್‌, ರವಿ ಶಂಕರ್‌, ಮೈಕೋ ಶಂಕರ್‌, ಧರ್ಮಣ್ಣ ಕಡೂರು, ಸೂರಿ, ಚೇತನ್‌, ಶ್ರೀನಿವಾಸ ಪ್ರಭು, ಉಮೇಶ್‌ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ನಿರ್ದೇಶನವಿದೆ. ಕಿರಣ್‌ ರಾಜ್‌ ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Ronny Movie: ‘ರಾನಿ’ ಚಿತ್ರದ ಟ್ರೈಲರ್ ರಿಲೀಸ್; ಮಾಸ್‌ ಲುಕ್‌ನಲ್ಲಿ ನಟ ಕಿರಣ್ ರಾಜ್ ಎಂಟ್ರಿ

Leave a Reply

Your email address will not be published. Required fields are marked *