Thursday, 15th May 2025

Geetha Pictures: ಗೀತಾ ಪಿಕ್ಚರ್ಸ್‌ನಿಂದ ಮತ್ತೊಂದು ಚಿತ್ರ ಘೋಷಣೆ; ‘ಶಾಖಾಹಾರಿ’ ಖ್ಯಾತಿಯ ಸಂದೀಪ್ ಸುಂಕದ ಆ್ಯಕ್ಷನ್‌ ಕಟ್‌

Geetha Pictures

ಬೆಂಗಳೂರು: ʼಭೈರತಿ ರಣಗಲ್ʼ (Bhairathi Ranagal) ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್‌ ಮತ್ತೊಂದು ಚಿತ್ರ ಘೋಷಿಸಿದೆ. ನ. 14ರಂದು ಡಾ. ಶಿವರಾಜ್‌ಕುಮಾರ್‌ ಅವರ ʼಎ ಫಾರ್‌ ಆನಂದ್‌ (A For Anand) ಚಿತ್ರವನ್ನು ಘೋಷಿಸಿದ ಈ ಬ್ಯಾನರ್ ಇದೀಗ ಡಾ. ಪಾರ್ವತಮ್ಮ ರಾಜಕುಮಾರ್‌ ಅವರ ಜನ್ಮದಿನದ ನಿಮಿತ್ತ 4ನೇ ಸಿನಿಮಾವನ್ನು ಶುಕ್ರವಾರ (ಡಿ. 6) ಪ್ರಕಟಿಸಿದೆ.

ಈ ಹೊಸ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್‌ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ‘ಶಾಖಾಹಾರಿ’ ಚಿತ್ರದ ಡೈರೆಕ್ಟರ್ ಸಂದೀಪ್ ಸುಂಕದ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಈ ಹಿಂದೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ತಿಳಿಸಿತ್ತು. ಅದರ ಭಾಗವಾಗಿ ಇದೀಗ ಶಿವಣ್ಣನ ಹೊರತಾಗಿ ಬೇರೆ ನಾಯಕರಿಗೆ ಚಾನ್ಸ್‌ ಒದಗಿಸುತ್ತಿದೆ.

ನಿರ್ದೇಶಕ ಸಂದೀಪ್ ಸುಂಕದ ಹೇಳಿದ್ದೇನು?

“ಕೊನೆ ಕೆಲ ತಿಂಗಳುಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಅವರಿಗೆ ಹೇಳಿದಾಗ, ಅವರಿಗೆ ತುಂಬಾ ಇಷ್ಟವಾಯಿತು. ಕೇವಲ ಕೆಲ ದಿನಗಳಲ್ಲೇ ಅವರು ಈ ಚಿತ್ರವನ್ನು ನಿರ್ಮಿಸಲು ಮುಂದಾದರು. ಇಂಥಾ ದೊಡ್ಡ ಬ್ಯಾನರ್‌ ಜತೆ ಎಷ್ಟೋ ಡೈರೆಕ್ಟರ್‌ಗಳಿಗೆ ಕೆಲಸ ಮಾಡುವ ಆಸೆಯಿರುತ್ತದೆ. ನನ್ನ ಎರಡನೇ ಸಿನಿಮಾಗೆ ಈ ಅವಕಾಶ ಸಿಕ್ಕಿದೆʼʼ ಎಂದು ನಿರ್ದೇಶಕ ಸಂದೀಪ್ ಸುಂಕದ ಸಂತಸ ವ್ಯಕ್ತಪಡಿಸಿದ್ದಾರೆ.

ಧೀರನ್ ರಾಮ್‌ಕುಮಾರ್‌ ಹೇಳಿದ್ದಿಷ್ಟು

ಸ್ಯಾಂಡಲ್‌ವುಟ್‌ ನಟ ರಾಮ್‌ಕುಮಾರ್‌ ಅವರ ಪುತ್ರ ಧೀರನ್ ರಾಮ್‌ಕುಮಾರ್‌ ಮಾತನಾಡಿ, “ನನ್ನ ಡೆಬ್ಯೂ ನಂತರ ಅಭಿನಯಕ್ಕೆ ಪ್ರಾಸಸ್ತ್ಯವಿರುವ ಚಿತ್ರ ಬೇಕೆಂಬ ಕನಸು ಇತ್ತು. ಹಲವು ಆಫರ್‌ಗಳು ಬಂದರೂ ನಾನು ಧೈರ್ಯವಾಗಿ ನಿರಾಕರಿಸಿ ಸಮಯ ತೆಗೆದುಕೊಂಡೆ. ನನ್ನ ಎರಡನೇ ಸಿನಿಮಾ ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು ಎಂದು ಬಯಸಿದ್ದೆ. ಸಂದೀಪ್ ಕಥೆಯನ್ನು ಹೇಳಿದಾಗ ತುಂಬಾ ಸಂತಸವಾಯ್ತು. ʼಶಾಖಾಹಾರಿʼ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಒಟಿಟಿ ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂತಹ ತಂಡದ ಜತೆಗೆ ಕೆಲಸ ಮಾಡುವುದು ಬಹಳ ಖುಷಿ ಕೊಟ್ಟಿದೆʼʼ ಎಂದು ತಿಳಿಸಿದ್ದಾರೆ.

ಚಿತ್ರದ ಶೈಲಿ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ನಾಯಕಿ ಸೇರಿದಂತೆ ಇನ್ನುಳಿದ ಪಾತ್ರ ವರ್ಗದ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೇಳಬೇಕಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.