Sunday, 11th May 2025

Devara Part 1 trailer: ದೇವರ ಪಾರ್ಟ್-1 ಟ್ರೈಲರ್‌ ರಿಲೀಸ್‌; ಜೂ. ಎನ್‌ಟಿಆರ್‌ ಮಾಸ್ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

Devara Part 1 trailer

ಹೈದರಾಬಾದ್‌: ಟಾಲಿವುಡ್‌ ಯಂಗ್‌ ಟೈಗರ್‌ ಜೂನಿಯರ್ ಎನ್‌ಟಿಆರ್ ಅಭಿನಯದ ಬಹು ನಿರೀಕ್ಷಿತ ದೇವರ ಪಾರ್ಟ್ 1 ಟ್ರೈಲರ್‌ ರಿಲೀಸ್‌ ಆಗಿದೆ. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಮತ್ತಿತರ ಪ್ರಮುಖ ಬಾಲಿವುಡ್ ಕಲಾವಿದರು ನಟಿಸುತ್ತಿದ್ದು, ಸೆಪ್ಟೆಂಬರ್ 27ಕ್ಕೆ ಪಂಚ ಭಾಷೆಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟ್ರೈಲರ್‌ ಲಕ್ಷಗಟ್ಟಲೇ ವೀವ್ಸ್ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದೆ. ಮುಂಬೈನಲ್ಲಿ ಸೋಮವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಟ್ರೈಲರ್‌ನಲ್ಲಿ ಜೂ.ಎನ್‌ಟಿಆರ್‌ ತಮ್ಮ ಮಾಸ್ ಆ್ಯಕ್ಷನ್‌ ಮೂಲಕ ನಟನೆಯ ವಿಶ್ವರೂಪ ತೋರಿಸಿದ್ದಾರೆ. ಹೈ ವೋಲ್ಟೇಜ್‌ ಸೀಕ್ವೆನ್ಸ್‌ಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದು, ಸಮುದ್ರದ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬಂದಿರುವ ವಿಜುವಲ್ಸ್‌ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಧೈರ್ಯವನ್ನು ಕೊಲ್ಲುವ ʼಭಯʼ ಆಗುವೆ

ಭೈರ (ಸೈಫ್‌ ಅಲಿ ಖಾನ್) ಮತ್ತು ಗ್ಯಾಂಗ್‌ ಸಮುದ್ರದಲ್ಲಿ ಹಡಗುಗಳನ್ನು ದೋಚುತ್ತಾ, ಜನರನ್ನು ಭಯಭೀತಗೊಳಿಸುತ್ತಿರುತ್ತದೆ. ಅಂತಹ ಭೈರನಲ್ಲಿ ಯಾರು ಭಯ ಮೂಡಿಸಿದರು ಎಂದು ಹೇಳುವ ಪ್ರಕಾಶ್‌ ರಾಜ್‌ ವಾಯ್ಸ್‌ ಓವರ್‌ ಟ್ರೈಲರ್‌ನಲ್ಲಿ ಇದೆ. ಭೈರ ಎಷ್ಟು ಅಪಾಯಕಾರಿ, ಧೈರ್ಯ ತಪ್ಪಿ ಮತ್ತೇನೂ ತಿಳಿಯದ ಆ ಖಳ ನಾಯಕನ ಕಣ್ಣಲ್ಲಿ ಭಯ, ಆತಂಕ ಹೇಗೆ ಮೂಡುತ್ತದೆ ಎಂಬ ಸೀನ್‌ಗಳು ಇದರಲ್ಲಿವೆ.

ಈ ಸುದ್ದಿಯನ್ನೂ ಓದಿ | Daiji Movie: ರಮೇಶ್ ಅರವಿಂದ್ ನಟನೆಯ ಥ್ರಿಲ್ಲರ್-ಹಾರರ್ ಚಿತ್ರ ‘ದೈಜಿ’ ಪೋಸ್ಟರ್ ರಿಲೀಸ್‌

“ತುಂಬಾ ದೊಡ್ಡ ಕತೆ, ರಕ್ತದಿಂದ ಸಮುದ್ರವೇ ಕೆಂಪಾದ ಕತೆ” ಎಂಬ ಹಿನ್ನೆಲೆ ಧ್ವನಿ ಬಳಿಕ ದೇವರ (ಎನ್‌ಟಿಆರ್‌) ಎಂಟ್ರಿ ಇದೆ. “ಮನುಷ್ಯನಿಗೆ ಬದುಕುವಷ್ಟು ಧೈರ್ಯ ಸಾಕು, ಕೊಲ್ಲುವಷ್ಟು ಬೇಕಿಲ್ಲ. ಅದು ಆಗಲ್ಲ ಎಂದರೆ, ಆ ಧೈರ್ಯವನ್ನು ಕೊಲ್ಲುವ ಭಯ ಆಗುವೆ” ಎಂದು ದೇವರ ಹೇಳುತ್ತಾನೆ. ಆ ನಂತರ ನಾಯಕನ ಜತೆ ಭೈರ ಕೈಜೋಡಿಸಿ, ನಿನ್ನ ಮಾತೆ ನಡೆಯಲಿ ಎಂದು ಹೇಳುತ್ತಾನೆ. ಬಳಿಕ ಭೈರ ಹೇಗೆ ದೇವರನನ್ನು ಕೊಲ್ಲಲು ಕುತಂತ್ರ ಮಾಡಿದ ಎನ್ನುವುದು ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಇನ್ನು ಈ ಚಿತ್ರದಲ್ಲಿ ಜೂ. ಎನ್‌ಟಿಆರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಂದೆ ದೇವರ ಧೈರ್ಯವಂತನಾಗಿದ್ದರೆ, ಮಗ ವರದ ಅಂಜುಬುರಕ ಆಗಿರುತ್ತಾನೆ. ವರದನನ್ನು ತಂಗಂ (ಜಾನ್ವಿ ಕಪೂರ್)‌ ಪ್ರೀತಿಸುತ್ತಿರುತ್ತಾಳೆ. ಒಟ್ಟಾರೆ ಟ್ರೈಲರ್‌ನಲ್ಲಿ ಜೂ. ಎನ್‌ಟಿಆರ್‌ ಮಾಸ್‌ ಆ್ಯಕ್ಷನ್‌, ಡೈಲಾಗ್ಸ್‌ ಪವರ್‌ಫುಲ್‌ ಆಗಿವೆ. ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಸೆ.27ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *