ಬೆಂಗಳೂರು: ಸ್ಯಾಂಡಲ್‌ವುಡ್‌ನ ʼಚೌಕಿದಾರ್ʼ ಸಿನಿಮಾ (Chowkidar Movie) ತನ್ನ ತಾರಾಬಳಗದ ಮೂಲಕ ಮತ್ತೆ ಸುದ್ದಿಯಲ್ಲಿದೆ. ʼದಿಯಾʼ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮ್ ಕುಮಾರ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ʼಲಕ್ಷ್ಮೀ ಮಹಾಲಕ್ಷ್ಮೀʼ ಸಿನಿಮಾ ಖ್ಯಾತಿಯ ಹಿರಿಯ ನಟಿ ಶ್ವೇತಾ, ಧರ್ಮ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ʼಚೌಕಿದಾರ್ʼ ಬಳಗಕ್ಕೆ ಮತ್ತೊಬ್ಬ ಹಿರಿಯ ನಟಿ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದೆ ಸುಧಾರಾಣಿ (Sudharani) ‘ಚೌಕಿದಾರ್’ ಚಿತ್ರತಂಡ ಸೇರಿಕೊಂಡಿದ್ದಾರೆ. ಆದರೆ ಸುಧಾರಾಣಿ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಗಟ್ಟುರಟ್ಟು ಮಾಡದೆ ಕುತೂಹಲ ಹೆಚ್ಚಿಸಿದೆ. ಅದಾಗ್ಯೂ ಅವರು ಖಾಕಿ ತೊಟ್ಟಿದ್ದು, ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಳ್ಳೊಳ್ಳೆ ಕಥೆಗಳನ್ನು ಹೆಕ್ಕಿ ತರುವ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿ-ಪ್ರೇಮಕಥೆಯಲ್ಲಿ ಮಿಂಚುತ್ತಿದ್ದ ಪೃಥ್ವಿ ಅಂಬಾರ್ ‘ಚೌಕಿದಾರ್’ ಸಿನಿಮಾಕ್ಕಾಗಿ ರಗಡ್ ಅವತಾರ ತಾಳಿದಿದ್ದಾರೆ.
ಶ್ರೀಮುರಳಿ ಅಭಿನಯದ ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಬಹಳ ದಿನಗಳ ಗ್ಯಾಪ್ ನಂತರ ಈ ಚಿತ್ರ ಕೈಗೆತ್ತಿಕೊಂಡಿರುವುದು ಕೂಡ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ʼಚೌಕಿದಾರ್ʼ ಸಿನಿಮಾವನ್ನು ಇತ್ತೀಚೆಗೆ 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಶಿವಣ್ಣ ನಟನೆಯ ʼಅಂಡಮಾನ್ʼ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ಆಗಿತ್ತು. ಈ ಚಿತ್ರ ಹೊರತುಪಡಿಸಿ ಮತ್ಯಾವುದೆ ಕನ್ನಡ ಸಿನಿಮಾಗಳ ಶೂಟಿಂಗ್ ನಡೆದಿರಿಲ್ಲ. ಇದೀಗ ʼಚೌಕಿದಾರ್ʼ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಬರೋಬ್ಬರಿ 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿದಿರುವುದು ವಿಶೇಷ. 53 ದಿನಗಳ ಕಾಲ ಚಿತ್ರೀಕರಣ ನಡೆಯಲಿರುವ ʼಚೌಕಿದಾರ್ʼ ಸಿನಿಮಾದ ಮೊದಲ ಹಂತ ಈಗಾಗಲೇ ಪೂರ್ತಿಯಾಗಿದೆ.
ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಧಾರಾಣಿ ಅವರು ವಿವಿಧ ಚಿತ್ರಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಅಳೆದೂ ತೂಗಿ ಪಾತ್ರವನ್ನು ಆಯ್ಕೆ ಮಾಡುವ ಅವರು ಇದೀಗ ʼಚೌಕಿದಾರ್ʼ ಸಿನಿಮಾವನ್ನು ಒಪ್ಪಿಕೊಂಡಿದ್ದು ಕುತೂಹಲ ಮೂಡಿಸಿದೆ.
‘ಚೌಕಿದಾರ್’ ಚಿತ್ರಕ್ಕೆ ಸಚಿನ್ ಬಸ್ರೂರು ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ ಮಾಡುತ್ತಿದ್ದು, ಜ್ಞಾನೇಶ್ವ್ ಬಿ. ಮಠದ್ ಸಂಕಲನ, ರವಿ ವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ಡಾ. ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆಯುತ್ತಿದ್ದಾರೆ. ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಶಿಕ್ಷಣ ತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ಅವರು ವಿಎಸ್ ಎಂಟರ್‌ಟೇನ್‌ಮೆಂಟ್ ಮೂಲಕ ಹಣ ಹಾಕುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Maarnami Movie: ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್-ಚೈತ್ರಾ ಆಚಾರ್; ‘ಮಾರ್ನಮಿ’ ಟೈಟಲ್ ಟೀಸರ್ ಔಟ್