Wednesday, 14th May 2025

‘ಕೂ’ ಗೆ ಕಾಲಿಟ್ಟ ‘ಭಜರಂಗಿ’: ಬಹು ನಿರೀಕ್ಷಿತ ಭಜರಂಗಿ 2 ಸಿನಿಮಾದ ಟ್ರೈಲರ್ ಬಿಡುಗಡೆ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ – ಕೂ ಸೇರಿದ್ದು, @NimmaShivanna ಹ್ಯಾಂಡಲ್ ಬಳಸಿ ಭಜರಂಗಿ ೨ ಟ್ರೈಲರ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಅವರು ‘ಕೂ’ ಸೇರುವ ಮೂಲಕ ಭಾರತದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಅವರವರ ಭಾಷೆಯಲ್ಲೇ ತಲುಪಲಿದ್ದಾರೆ. ಇನ್ನಷ್ಟು ಜನರಿಗೆ ಹತ್ತಿರವಾಗಲಿದ್ದಾರೆ. ಅಭಿಮಾನಿಗಳು ಅವರ ಮುಂದಿನ ಸಿನೆಮಾಗಳ ಕುರಿತು ಕೂ ನಲ್ಲಿ ತಿಳಿಯಬಹುದು. ಈಗಾಗಲೇ ಮುಖ್ಯಮಂತ್ರಿ ಸೇರಿ ವಿವಿಧ ಗಣ್ಯರು ಕೂ ಮೂಲಕ ಜನರನ್ನು ತಲುಪುತ್ತಿದ್ದಾರೆ.

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿಸಿವೆ. ಈಗ ಶಿವರಾಜ್ ಕುಮಾರ್ ಅವರು ಕೂ ವೇದಿಕೆಯಲ್ಲಿ ಟ್ರೈಲರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನ ತಣಿಸಿದ್ದಾರೆ.

ಸೂಪರ್​ ನ್ಯಾಚುರಲ್​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಅನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ನಾಯಕ ನಟ ಶಿವರಾಜ್​ಕುಮಾರ್​, ನಾಯಕಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳ ಪೋಸ್ಟರ್​ಗಳನ್ನು ತುಂಬ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ, ಖಳನಟ ಚೆಲುವರಾಜು ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು.

ಮಂಜು ಪಾವಗಡ, ಶಿವರಾಜ್​ ಕೆ. ಆರ್​ ಪೇಟೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

Leave a Reply

Your email address will not be published. Required fields are marked *