Sunday, 11th May 2025

Aishwarya Rai: ಬಚ್ಚನ್‌ ಕುಟುಂಬದೊಂದಿಗಿನ ವೈಮನಸ್ಸಿನ ವದಂತಿಗೆ ತೆರೆ ಎಳೆದ ಐಶ್ವರ್ಯಾ ರೈ ಪೋಸ್ಟ್‌

Aishwarya Rai

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್‌ ಬಚ್ಚನ್‌ (Abhishek Bachchan) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 17 ವರ್ಷಗಳೇ ಕಳೆದಿವೆ. ಈ ಮಧ್ಯೆ ಕೆಲವು ದಿನಗಳಿಂದ ಬಚ್ಚನ್‌ ಕುಟುಂಬದ ಜತೆ ಐಶ್ವರ್ಯಾ ರೈ ಸಂಬಂಧ ಹಳಸಿದೆ, ಅವರು ಪ್ರತ್ಯೇಕ ವಾಸಿಸುತ್ತಿದ್ದಾರೆ, ಅಭಿಷೇಕ್‌ಗೆ ವಿಚ್ಛೇದನ ಕೊಡಲಿದ್ದಾರೆ ಎಂಬೆಲ್ಲ ವದಂತಿ ಹರಡಿದೆ. ಆದರೆ ಈ ಬಗ್ಗೆ ಐಶ್ವರ್ಯಾ ರೈ ಆಗಲಿ, ಬಚ್ಚನ್‌ ಕುಟುಂಬಸ್ಥರಾಗಲೀ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಇದೀಗ ಐಶ್ವರ್ಯಾ ರೈ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ ವದಂತಿಗೆ ತೆರೆ ಎಳೆದಿದೆ. ಐಶ್ವರ್ಯಾ ಮತ್ತು ಬಚ್ಚನ್‌ ಕುಟುಂಬ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವವರ ಬಾಯಿ ಮುಚ್ಚಿ ಮುಚ್ಚುವಂತೆ ಮಾಡಿದೆ.

ಪೋಸ್ಟ್‌ನಲ್ಲಿ ಏನಿದೆ?

ಅಕ್ಟೋಬರ್‌ 11 ಬಾಲಿವುಡ್‌ ಹಿರಿಯ ನಟ, ಅಭಿಷೇಕ್‌ ಬಚ್ಚನ್‌ ತಂದೆ ಅಮಿತಾಭ್‌ ಬಚ್ಚನ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಐಶ್ವರ್ಯಾ ರೈ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೃದಯಸ್ಪರ್ಶಿಯಾಗಿ ಬಿಗ್‌ಬಿಗೆ ಶುಭಾಶಯ ಕೋರಿದ್ದಾರೆ. ಹಳೆಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಅಮಿತಾಭ್‌ ಬಚ್ಚನ್‌ ಮತ್ತು ತಮ್ಮ ಪುತ್ರಿ ಆರಾಧ್ಯಾ ಬಚ್ಚನ್‌ ಜತೆಯಾಗಿ ನಿಂತಿರುವ ಫೋಟೊ ಇದಾಗಿದ್ದು, ತಾತ ಮತ್ತು ಮೊಮ್ಮಗಳು ಆತ್ಮೀಯವಾಗಿ ನಿಂತಿರುವುದು ಕಂಡುಬಂದಿದೆ. ʼʼಹ್ಯಾಪಿ ಬರ್ತ್‌ ಡೇ ಪಾ-ದಾದಾಜಿ. ಗಾಡ್‌ ಬ್ಲೇಸ್‌ ಆಲ್‌ವೇಸ್‌ʼʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಕುಟುಂಬದ ನಡುವೆ ಯಾವುದೇ ವೈಮನಸ್ಸು ಇಲ್ಲ ಎನ್ನುವುದನ್ನು ಸಾರಿದ್ದಾರೆ.

ಏನಿದು ವದಂತಿ?

ಬಚ್ಚನ್‌ ಕುಟುಂಬದ ಜತೆ ಐಶ್ವರ್ಯಾ ರೈ ಅವರಿಗೆ ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಮಾತು ಇಷ್ಟೆಲ್ಲ ವದಂತಿಗೆ ಕಾರಣವಾಗಿದೆ. ಅದಕ್ಕೆ ತಕ್ಕಂತೆ ಕೆಲವೊಂದು ಸಂದರ್ಭದಲ್ಲಿ ಬಚ್ಚನ್‌ ಕುಟುಂಬದ ಜತೆ ಸಾರ್ವಜನಿಕವಾಗಿ ಐಶ್ವರ್ಯಾ ಕಾಣಿಸಿಕೊಂಡಿರಲಿಲ್ಲ. ಇದೆಲ್ಲ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದವು. ಅದರಲ್ಲಿಯೂ ಈ ವರ್ಷದ ಜುಲೈಯಲ್ಲಿ ನಡೆದ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ವಿವಾಹ ಸಮಾರಂಭದಲ್ಲಿ ಅಮಿತಾಭ್‌, ಅಭಿಷೇಕ್‌, ಜಯಾ ಬಚ್ಚನ್‌ ಮತ್ತು ಶ್ವೇತಾ ಬಚ್ಚನ್‌ ಒಟ್ಟಾಗಿ ಕಾಣಿಸಿಕೊಂಡಿದ್ದರೆ, ಐಶ್ವರ್ಯಾ ರೈ ಮತ್ತು ಆರಾಧ್ಯಾ ಪ್ರತ್ಯೇಕವಾಗಿ ಆಗಮಿಸಿದ್ದರು. ಈ ಕಾರಣಕ್ಕೆ ಡಿವೋರ್ಸ್‌ ವದಂತಿ ಇನ್ನಷ್ಟು ದಟ್ಟವಾಗಿತ್ತು.

ಇದೀಗ ಈ ವದಂತಿಗಳಿಗೆಲ್ಲ ಫುಲ್‌ಸ್ಟಾಪ್‌ ಬಿದ್ದಿದೆ. ಅಭಿಮಾನಿಗಳು ವದಂತಿ ಹಬ್ಬಿಸುವವರಿಗೆ ತಿವಿದಿದ್ದಾರೆ. ʼʼಅನೇಕ ದಿನಗಳ ಬಳಿಕ ನಿಮ್ಮ ಪೋಸ್ಟ್‌ ಬಹುದೊಡ್ಡ ಸಂದೇಶ ನೀಡಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಅಭಿಷೇಕ್‌-ಐಶ್ವರ್ಯಾ ಡಿವೋರ್ಸ್‌ ಪಡೆದುಕೊಳ್ಳುತ್ತಾರೆ ಎನ್ನುವ ವದಂತಿ ಹಬ್ಬಿಸುವವರಿಗೆ ಇದು ಉತ್ತರವಾಗಲಿದೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

50 ವರ್ಷವಾದರೂ ಅದೇ ಚಾರ್ಮ್‌ ಉಳಿಸಿಕೊಂಡಿರುವ ಐಶ್ವರ್ಯಾ ಸದ್ಯ ಅಳೆದೂ ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತ ಅಭಿಷೇಕ್‌ ಸದ್ಯ ʼಬಿ ಹ್ಯಾಪಿʼ, ಶೂಜಿತ್‌ ಸರ್ಕಾರ್‌ ಅವರ ಮುಂದಿನ ಚಿತ್ರ, ʼಹೌಸ್‌ಫುಲ್‌ 5ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Aishwarya Rai: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲೂ ಭಾರತೀಯ ಸಂಸ್ಕೃತಿ ಮೆರೆದ ಐಶ್‌; ವಿಶ್ವ ಸುಂದರಿಯ ನಮಸ್ತೆಗೆ ಮನಸೋತ ನೆಟ್ಟಿಗರು