Monday, 12th May 2025

Actress Sreeleela: ಕಾಲಿವುಡ್‌ಗೆ ಕಾಲಿಟ್ಟ ಶ್ರೀಲೀಲಾ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಚಿತ್ರಕ್ಕೆ ಆಯ್ಕೆ

Actress Sreeleela

ಚೆನ್ನೈ: ಶ್ರೀಲೀಲಾ (Actress Sreeleela)- ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು. ರಶ್ಮಿಕಾ ಮಂದಣ್ಣ (Rashmika Mandanna) ಬಳಿಕ ಟಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಶ್ರೀಲೀಲಾ ಈಗಾಗಲೇ ಟಾಪ್‌ ಹೀರೋಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಹಿಂದಿಯ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ʼಕಿಸಿಕ್‌ʼ ಸ್ಪೆಷಲ್‌ ಸಾಂಗ್‌ನಲ್ಲಿಯೂ ಕಾಣಿಸಿಕೊಂಡು ಶ್ರೀಲೀಲಾ ಮೋಡಿ ಮಾಡಿದ್ದಾರೆ. ಅಲ್ಲು ಅರ್ಜುನ್‌ ಜತೆಗೆ ಭರ್ಜರಿ ಸ್ಟೆಪ್‌ ಹಾಕಿದ ಶ್ರೀಲೀಲಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದೀಗ ಅವರು ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ.

2020ರಲ್ಲಿ ತೆರೆಕಂಡ ಕಾಲಿವುಡ್‌ನ ʼಸೂರರೈ ಪೊಟ್ರುʼ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕಿ ಸುಧಾ ಕೊಂಗರ ಆ್ಯಕ್ಷನ್‌ ಕಟ್‌ ಹೇಳಲಿರುವ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಆ ಮೂಲಕ ಬಂಪರ್‌ ಚಾನ್ಸ್‌ ಗಿಟ್ಟಿಸಿಕೊಂಡಿದ್ದಾರೆ.

ಮೂವರು ನಾಯಕರು

ಸದ್ಯಕ್ಕೆ ಚಿತ್ರದ ಟೈಟಲ್‌ ಫಿಕ್ಸ್‌ ಆಗಿಲ್ಲ. ʼಎಸ್‌ಕೆ 25ʼ ಎಂಬ ತಾತ್ಕಾಲಿಕ ಟೈಟಲ್‌ನೊಂದಿಗೆ ಚಿತ್ರ ಸೆಟ್ಟೇರಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಮೂವರು ನಾಯಕರು. ಜಯಂ ರವಿ, ಶಿವಕಾರ್ತಿಕೇಯನ್‌ ಮತ್ತು ಅಥರ್ವ ಈ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದು, ಆ ಮೂಲಕ ಟಾಲಿವುಡ್‌ನಂತೆ ಕಾಲಿವುಡ್‌ನಲ್ಲಿಯೂ ಇಂಪ್ರೆಸ್‌ ಮಾಡಲು ಮುಂದಾಗಿದ್ದಾರೆ.

2008ರಲ್ಲಿ ರಿಲೀಸ್‌ ಆದ ʼಆಂಧ್ರ ಅಂದಗಾಡುʼ ತೆಲುವು ಚಿತ್ರದ ಮೂಲಕ ನಿರ್ದೇಶಕಿಯಾಗಿ ಸುಧಾ ಕೊಂಗರ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ ತಮಿಳು, ಹಿಂದಿ ಸಿನಿಮಾಗಳಿಗೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 2020ರಲ್ಲಿ ಬಿಡುಗಡೆಯಾದ ತಮಿಳಿನ ʼಸೂರರೈ ಪೊಟ್ರುʼ ಚಿತ್ರದ ಮೂಲಕ ಅವರು ಇಡೀ ದೇಶದ ಗಮನ ಸೆಳೆದಿದ್ದಾರೆ. ಸೂರ್ಯ, ಅಪರ್ಣಾ ಬಾಲಮುರಳಿ, ಊರ್ವಶಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಕನ್ನಡಿಗ ಜಿ.ಆರ್‌.ಗೋಪಿನಾಥ್‌ ಅವರ ಜೀವನವನ್ನು ಆಧರಿಸಿದೆ. ಸುಧಾ ಅವರೊಂದಿಗೆ ಸೂರ್ಯ ಮತ್ತು ಅಪರ್ಣಾ ಬಾಲಮುರಳಿ ಅವರೂ ಈ ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷ ಈ ಚಿತ್ರದ ಹಿಂದಿ ರಿಮೇಕ್‌ ʼಸರ್ಫೀರಾʼ ತೆರೆಕಂಡಿದೆ. ಇದಕ್ಕೂ ಸುಧಾ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಕ್ಷಯ್‌ ಕುಮಾರ್‌ ಮತ್ತು ರಾಧಿಕಾ ಮದನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಡಿಮೆ ಅವಧಿಯಲ್ಲೇ ಶ್ರೀಲೀಲಾ ಅವರು ರವಿ ತೇಜ, ರಾಮ್‌ ಪೋತಿನೇನಿ, ನಂದಮುರಿ ಬಾಲಕೃಷ್ಣ, ಮಹೇಶ್‌ ಬಾಬು, ನಿತಿನ್‌ ಮತ್ತಿತರ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದಾರೆ. ಸದ್ಯ ಸುಧಾ ಕೊಂಗರ ಅವರಂತಹ ಪ್ರತಿಭಾನ್ವಿತ ನಿರ್ದೇಶಕಿ ಚಿತ್ರಕ್ಕೆ ಆಯ್ಕೆಯಾಗಿದ್ದು ಅವರ ಕೆರಿಯರ್‌ಗೆ ಪ್ಲಸ್‌ ಆಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆ.

ಈ ಸುದ್ದಿಯನ್ನೂ ಓದಿ: Pushpa 2 Movie: ರಿಲೀಸ್‌ಗೆ ಮೊದಲೇ ಕೋಟಿ ಕೋಟಿ ರೂ. ಬಾಚಿದ ‘ಪುಷ್ಪ 2’ ಚಿತ್ರ; ಅಡ್ವಾನ್ಸ್‌ ಬುಕಿಂಗ್‌ನಿಂದ ಗಳಿಸಿದ್ದೆಷ್ಟು?