Monday, 19th May 2025

Actress Shobitha: ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ

Actress Shobitha

ಹೈದರಾಬಾದ್‌: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಬ್ರಹ್ಮಗಂಟು’ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಶೋಭಿತಾ ಶಿವಣ್ಣ (Actress Shobitha) ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮದುವೆಯ ನಂತರ ಹೈದರಾಬಾದ್‌ನಲ್ಲಿ ವಾಸವಾದ್ದ ಅವರು ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶೋಭಿತಾ ಅವರು ʼಬ್ರಹ್ಮಗಂಟುʼ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಳೆದ ವರ್ಷ ಇವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಶೋಭಿತಾ ಶಿವಣ್ಣ ಮೂಲತಃ ಸಕಲೇಶಪುರದವರು. ಕಲೇಶಪುರದಲ್ಲಿ ಹುಟ್ಟಿ ಬೆಳೆದ ಅವರು ಅಲ್ಲಿಯೇ ಶಿಕ್ಷಣ ಪಡೆದು ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಚಿತ್ರಗಳಲ್ಲಿಯೂ ನಟನೆ

ಶೋಭಿತಾ ಅವರು ಧಾರಾವಾಹಿ ಜತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ʼಎರಡೊಂದ್ಲಾ ಮೂರುʼ, ʼಎಟಿಎಮ್ʼ, ʼಒಂದ್ ‌ಕಥೆ ಹೇಳ್ಲಾʼ, ʼಜಾಕ್ ಪಾಟ್ʼ, ʼಅಪಾರ್ಟ್‌ಮಂಟ್‌ ಟು ಮರ್ಡರ್ʼ, ʼವಂದನಾʼ ಸಿನಿಮಾದಲ್ಲಿ ಶೋಭಿತಾ ಅಭಿನಯಿಸಿದ್ದಾರೆ. ಸದ್ಯ ʼಫಸ್ಟ್ ಡೇ ಫಸ್ಟ್‌ ಷೋʼ ಸಿನಿಮಾಕ್ಕೆ ಸಹಿ ಹಾಕಿದ್ದರು.

ಜನಪ್ರಿಯ ಧಾರಾವಾಹಿಗಳು

ಶೋಭಿತಾ ಇದುವರೆಗೆ 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ʼಗಾಳಿಪಟʼ, ʼಮಂಗಳಗೌರಿʼ, ʼಕೋಗಿಲೆʼ, ʼಬ್ರಹ್ಮಗಂಟುʼ, ʼಕೃಷ್ಣ ರುಕ್ಮಿಣಿʼ, ʼದೀಪವು ನಿನ್ನದೆ ಗಾಳಿಯು ನಿನ್ನದೆʼ, ʼಅಮ್ಮಾವ್ರುʼ ಮತ್ತು ʼಮನೆ ದೇವರುʼ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಟಿವಿ ನಿರೂಪಕಿಯಾಗಿಯೂ ಜನಪ್ರಿಯರಾಗಿದ್ದಾರೆ.

ನಟಿ ಶೋಭಿತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಆಗಾಗ ತಮ್ಮ ಚಿತ್ರ, ಧಾರಾವಾಹಿಗಳ ಅಪ್‌ಡೇಟ್‌ ನೀಡುತ್ತಿದ್ದರು. ನ. 1ರಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ʼಫಸ್ಟ್ ಡೇ ಫಸ್ಟ್ ಷೋʼ ಚಿತ್ರದ ಪೋಸ್ಟರ್‌ ಪೋಸ್ಟ್‌ ಮಾಡಿದ್ದರು. ʼʼಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು. ಅತೀ ಶೀಘ್ರದಲ್ಲಿ ʼಫಸ್ಟ್ ಡೇ, ಫಸ್ಟ್ ಷೋʼ ನಿಮ್ಮ ಮುಂದೆ. ಕನ್ನಡ ಚಿತ್ರರಂಗದಲ್ಲೇ ಹಿಂದೆಂದೂ ನೋಡಿರದ ಮನರಂಜನೆಯ ಕಥಾ ಹಂದರ, ತಾಯಿ ಭುವನೇಶ್ವರಿ ಆಶೀರ್ವದಿಸಿ ಹಾಗು ಕೋಟ್ಯಂತರ ಕನ್ನಡಿಗರು ಹೆಮ್ಮೆಯಿಂದ ಮೆಚ್ಚಿ “ಹೌದೌದು” ಎನ್ನುವ ಚಿತ್ರರಂಗದ ಬಗೆಗಿನ ಒಂದು ಅಪ್ಪಟ ಕನ್ನಡ ಚಿತ್ರ. ಹರಸಿ ಹಂಚಿ ಆಶೀರ್ವದಿಸಿʼʼ ಎಂದು ಕನಸು ಹಂಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Actor Meghanathan: ಮಲಯಾಳಂನ ಖ್ಯಾತ ಖಳ ನಟ ಮೇಘನಾಥನ್‌ ಇನ್ನಿಲ್ಲ