ಚೆನ್ನೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಯಿಸಿಕೊಳ್ಳುವ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಸದ್ಯ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಅವರು ನಟನೆಯೊಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಚಿತ್ರದೊಂದಿಗೆ ಸದ್ಯದಲ್ಲೇ ಬೆಳ್ಳಿತೆರೆಗೆ ಮರಳಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅವರು ದಕ್ಷಿಣ ಭಾರತದ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಸೂಪರ್ ಸ್ಟಾರ್‌ನೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಾದರೆ ಯಾರು ಆ ಸೂಪರ್ ಸ್ಟಾರ್?
ಕಾಲಿವುಡ್ ಸೂಪರ್ ಸ್ಟಾರ್, ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರೆನಿಸಿಕೊಂಡಿರುವ ರಜನಿಕಾಂತ್ ಅವರ ಮುಂಬರುವ ಚಿತ್ರ ʼಕೂಲಿʼಯಲ್ಲಿ ಆಮೀರ್ ಖಾನ್ ನಟಿಸುತ್ತಿದ್ದಾರೆ ಎನ್ನಲಾಗಿದೆ.
Working with you in #Coolie has been an enthralling experience #SoubinShahir sir ❤️
— Lokesh Kanagaraj (@Dir_Lokesh) October 12, 2024
Wishing you the absolute best and a very happy birthday sir 🤗❤️ pic.twitter.com/aXtMzPTdzZ
ಜೈಪುರದಲ್ಲಿ ಆಮೀರ್ ಖಾನ್
ತಮಿಳಿನ ಜನಪ್ರಿಯ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಕೂಲಿʼ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಸದ್ಯ ಚಿತ್ರತಂಡ ರಾಜಸ್ಥಾನದ ಜೈಪುರದಲ್ಲಿ ಬೀಡು ಬಿಟ್ಟಿದೆ. ಸುಮಾರು 10 ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಯಲಿದೆ. ಇದೀಗ ಆಮೀರ್ ಖಾನ್ ಜೈಪುರದಲ್ಲಿ ಕಾಣಿಸಿಕೊಂಡಿದ್ದು, ʼಕೂಲಿʼ ಚಿತ್ರತಂಡದೊಂದಿಗೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಇದಾದ ಬಳಿಕ ಲೋಕೇಶ್ ಕನಕರಾಜ್ ಅವರು ಆಮೀರ್ ಖಾನ್ ಅವರನ್ನು ನಾಯಕರನ್ನಾಗಿಸಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರಂತೆ. ʼಕೂಲಿʼ ಚಿತ್ರದಲ್ಲಿ ಆಮೀರ್ ಖಾನ್ ನಟಿಸುತ್ತಿರುವ ಬಗ್ಗೆ ಸದ್ಯ ಚಿತ್ರತಂಡ ಅಧಿಕೃತ ಘೋಷಣೆ ಹೊರಡಿಸಿಲ್ಲ.
30 ವರ್ಷಗಳ ಬಳಿಕ ಒಂದಾದ ಸೂಪರ್ ಸ್ಟಾರ್‌ಗಳು
ವಿಶೇಷ ಎಂದರೆ ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು ಜತೆಯಾಗಿ ನಟಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಇಬ್ಬರು ಬರೋಬ್ಬರಿ 30 ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿದ್ದಾರೆ. 1995ರಲ್ಲಿ ರಿಲೀಸ್ ಆದ ʼಆತಂಕ್ ಹಿ ಆತಂಕ್ʼ ಸಿನಿಮಾದಲ್ಲಿ ಈ ಇಬ್ಬರು ಜತೆಯಾಗಿ ಅಭಿನಯಿಸಿದ್ದರು. ಇದೀಗ ಇವರು ಬರೋಬ್ಬರಿ 3 ದಶಕಗಳ ಬಳಿಕ ಒಂದಾಗುತ್ತಿರುವುದು ಕುತೂಹಲ ಮೂಡಿಸಿದೆ. ಕೆಲವು ದಿನಗಳ ಹಿಂದೆ ತೆರೆಕಂಡ ರಜನಿಕಾಂತ್ ಅಭಿನಯದ ʼವೆಟ್ಟೈಯನ್ʼ ಚಿತ್ರದಲ್ಲಿ ಬಾಲಿವುಡ್‌ನ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಬರೋಬ್ಬರಿ 33 ವರ್ಷಗಳ ಬಳಿಕ ಇವರು ಒಂದಾಗಿದ್ದರು. ಇದೀಗ ಮತ್ತೊಂದು ಮಹಾಸಂಗಮಕ್ಕೆ ಕಾಲಿವುಡ್ ಸಾಕ್ಷಿಯಾಗುತ್ತಿದೆ.
ಉಪೇಂದ್ರ ನಟನೆ
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ʼಕೂಲಿʼ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೂ ನಟಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದ್ದು, ಇನ್ನೂ ಖಚಿತವಾಗಿಲ್ಲ. ಇವರ ಜತೆಗೆ ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಸೌಬಿನ್ ಶಬಿರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ.
ಈ ಸುದ್ದಿಯನ್ನೂ ಓದಿ: Actor Kishore: ಬಾಲಿವುಡ್‌ನಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿದ ‘ಕಾಂತಾರ’ ನಟ ಕಿಶೋರ್; ಸಲ್ಮಾನ್ ಚಿತ್ರಕ್ಕೆ ಆಯ್ಕೆ