ಸಂದರ್ಶನ: ರಂಜಿತ್ ಎಚ್. ಅಶ್ವತ್ಥ
ವಿಶ್ವ ಪ್ರವಾಸೋದ್ಯ ದಿನ ವಿಶೇಷ
30 ಎಕರೆಯಲ್ಲಿ ಇಲ್ಲಿ ಪ್ರವಾಸಿ ಗ್ರಾಮ ಆರಂಭಕ್ಕೆ ಯೋಜನೆ: ಎಂ.ಶ್ರೀನಿವಾಸ್
ಬೆಂಗಳೂರು: ಕರ್ನಾಟಕವು ಪ್ರವಾಸೋದ್ಯಮದ ತವರೂರು. ಮರಳುಗಾಡು ಬಿಟ್ಟರೆ, ಕರ್ನಾಟದಲ್ಲಿ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ವಿದೇಶದಲ್ಲಿ ಏಕಶಿಲೆ ಯಲ್ಲಿ ಒಂದು ಸಿಂಹವನ್ನು ಕೆತ್ತಿದ್ದಾರೆ ಎನ್ನುವ ಮಾತ್ರಕ್ಕೆ, ನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ.
ಆದರೆ ರಾಜ್ಯದಲ್ಲಿ ಏಕಶಿಲೆಯಲ್ಲಿ ಇಡೀ ಮಂಟಪವನ್ನೇ ಕಟ್ಟಿರುವ ಉದಾಹರಣೆ ಗಳಿವೆ. ಪ್ರವಾಸೋದ್ಯಮದಲ್ಲಿ
ಅದ್ಭುತ ಪರಂಪರೆಯನ್ನು ಹೊಂದಿರುವ ಕರ್ನಾಟಕದ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು
ಪ್ರಚುರಪಡಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
‘ವಿಶ್ವ ಪ್ರವಾಸೋದ್ಯಮ’ ದಿನದ ಅಂಗವಾಗಿ ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಕೆಎಸ್ಟಿಡಿಸಿ ಅಧ್ಯಕ್ಷ ಎಂ.
ಶ್ರೀನಿವಾಸ್ ಅವರು, ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ, ಕೆಎಸ್ಟಿಡಿಸಿ ಮುಂದಿರುವ ಯೋಜನೆಗಳು, ಮಯೂರ ಹೋಟೆಲ್ಗಳ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಹಂಚಿಕೊಂಡರು. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
? ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ಯಾವ ರೀತಿ ಮಾಡಬಹುದು?
? ಕರ್ನಾಟಕದಲ್ಲಿ ಎಲ್ಲ ಮಾದರಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ಪಾರಂಪರಿಕ ಸ್ಥಳ, ಸಮುದ್ರ ಕಿನಾರೆ
ಗಳು, ಅರಣ್ಯ, ಶಿಲ್ಪಕಲೆ, ದೇವಾಲಯ ಸೇರಿದಂತೆ ಎಲ್ಲ ರೀತಿ ಯ ಪ್ರವಾಸೋದ್ಯಮ ನಮ್ಮಲ್ಲಿದೆ. ವಿದೇಶಗಳಿಗೆ
ಹೋದರೂ ಸಿಗದ ಅದೆಷ್ಟೋ ಅದ್ಭುತ ಪ್ರೇಕ್ಷಣೀಯ ಸ್ಥಳಗಳು ಕರ್ನಾಟಕದಲ್ಲಿವೆ. ಇವುಗಳನ್ನು ಹುಡುಕಿ ಕೊಂಡು ವಿದೇಶಿಗರು ನಮ್ಮ ರಾಜ್ಯಕ್ಕೆ ಬರುತ್ತಾರೆ. ಆದರೆ ನಮ್ಮಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ರಾಜ್ಯದ ಜನರಿಗೆ ಗೊತ್ತಿಲ್ಲ. ಆದ್ದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಮೊದಲು ನಮ್ಮಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಜಾಗೃತಿ
ಮೂಡಿಸುವ ಕೆಲಸವಾಗಬೇಕಿದೆ.
ಇನ್ನು ರಾಜ್ಯದಲ್ಲಿರುವ ಪ್ರವಾಸೋದ್ಯಮದ ಅಭಿವೃದ್ಧಿಗೆ ಮೊದಲು ಸ್ಥಳಗಳಿಗೆ ಸೂಕ್ತ ರಸ್ತೆ ಸಂಪರ್ಕ, ವಾಸ್ತವ್ಯಕ್ಕೆ ಹೋಟೆಲ್ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಇನ್ನಷ್ಟು ಅನುದಾನವನ್ನು ನೀಡಬೇಕು.
? ಮಯೂರ ಹೋಟೆಲ್ಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಚಿಸಿಲ್ಲವೇ?
? ಕೆಎಸ್ಟಿಡಿಸಿ ವತಿಯಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ೨೭ ಮಯೂರ ಹೋಟೆಲ್ ಗಳಿವೆ. ಈ ಎಲ್ಲವೂ ‘ಬಜೆಟ್ ಫ್ರೆಂಡ್ಲಿ’ ಆಗಿರುವುದರಿಂದ ಜನರನ್ನು ಆಕರ್ಷಿಸುತ್ತಿವೆ. ಆದರೆ ಹಾಲಿ ಇರುವ ಹೋಟೆಲ್ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದರೊಂದಿಗೆ ವಿವಿಧ ಪ್ರವಾಸಿ ತಾಣದಲ್ಲಿ ಹೊಸ ಹೋಟೆಲ್ಗಳನ್ನು ಆರಂಭಿಸ ಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಚಿಂತನೆ ನಡೆಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಮಾಡಬೇಕೋ ಅಥವಾ ಸರಕಾರದ ಲಭ್ಯ ಅನುದಾನವನ್ನು ಬಳಸಿಕೊಂಡು ಕೆಎಸ್ ಟಿಡಿಸಿಯಿಂದಲೇ ಆರಂಭಿಸಬೇಕೋ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
? ವಿದೇಶಿಗರಿಗೆ ಗೈಡ್ಗಳನ್ನು ಹೆಚ್ಚಿಸುವುದು ಸೂಕ್ತವಲ್ಲವೇ?
ಕೆಎಸ್ಟಿಡಿಸಿಯಲ್ಲಿರುವ ಗೈಡ್ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ಮಟ್ಟದ ಗೈಡ್ಗಳ ಸಮಾವೇಶದಲ್ಲಿಯೂ ಕರ್ನಾಟಕದ ಗೈಡ್ಗಳು ಅತ್ಯುತ್ತಮ ಎನ್ನುವ ಮಾತು ಗಳನ್ನು ಆಡಿದ್ದಾರೆ. ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಬಂದರೆ, ಅವರೂ ಕೆಎಸ್ಟಿಡಿಸಿ ಗೈಡ್ಗಳನ್ನು ಪಡೆಯುತ್ತಾರೆ. ಮುಂದಿನ ದಿನದಲ್ಲಿ ಅಗತ್ಯವೆನಿಸಿದರೆ ಗೈಡ್ಗಳ ಸಂಖ್ಯೆ ಹೆಚ್ಚಿಸುವ ಅಥವಾ ಇನ್ನಷ್ಟು ತರಬೇತಿ ನೀಡುವುದನ್ನು ಮಾಡಲು ಚಿಂತನೆ ನಡೆಸುತ್ತೇವೆ.
? ನೂತನ ಯೋಜನೆಗಳೇನು?
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂದಿನ ದಿನದಲ್ಲಿ ನೂತನ ಬಸ್ ಸೇವೆಗಳು, ಪ್ಯಾಕೇಜ್ ಟೂರ್ಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರೊಂದಿಗೆ ನಂದಿಬೆಟ್ಟದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶೌಚಾಲಯ, ಕಿಯಾಕ್ಸ್ಗಳ ಆರಂಭ, ಬೇಲೂರು-ಹಳೇಬೀಡು ಭಾಗದಲ್ಲಿ ಇನ್ನಷ್ಟು ಹೋಟೆಲ್ಗಳನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಎಲ್ಲದರೊಂದಿಗೆ ಬೆಂಗಳೂರು ಹೊರವಲಯ ದಲ್ಲಿರುವ ರೋರಿಕ್ ಎಸ್ಟೇಟ್ನಲ್ಲಿ ೩೦ ಎಕರೆ ವಿಸ್ತೀರ್ಣದಲ್ಲಿ ಟೂರಿಸಂ ಹಬ್ ಮಾಡುವ ಆಲೋಚನೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಪಿಪಿಪಿ ಮಾದರಿಯಲ್ಲಿ ಅಥವಾ ಸರಕಾರದ ಅನುದಾನದಲ್ಲಿ ಈ ಹಬ್ ನಿರ್ಮಿಸಲಾಗುವುದು.
? ರೋರಿಕ್ ಎಸ್ಟೇಟ್ನಲ್ಲಿ ಏನೆಲ್ಲ ಸೌಲಭ್ಯಗಳಿರಲಿವೆ?
ರೋರಿಕ್ ಎಸ್ಟೇಟ್ ಸುಮಾರು ೪೦೦ ಎಕರೆ ವಿಸ್ತೀರ್ಣದಲ್ಲಿದೆ. ಇದರಲ್ಲಿ ಅರಣ್ಯಭೂಮಿ ಹೊರತುಪಡಿಸಿ ಕೆಎಸ್ಟಿಡಿಸಿಗೆ ೩೦ ಎಕರೆ ಸಿಗಲಿದೆ. ಇಲ್ಲಿ ಮನರಂಜನಾ ಪಾರ್ಕ್, ವಾಟರ್ ಗೇಮ್ಸ್ ಹಾಗೂ ಪ್ರವಾಸಿ ಗ್ರಾಮವನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಅಮ್ಯೂಸ್ಮೆಂಟ್ ಪಾರ್ಕ್, ವಾಟರ್ ಪಾರ್ಕ್ನೊಂದಿಗೆ ಈ ಗ್ರಾಮದಲ್ಲಿ ಎಲ್ಲ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಕೌಂಟರ್ ಒಂದನ್ನು ಆರಂಭಿಸಲು ಆಹ್ವಾನ ನೀಡಲಾಗುವುದು.
ಈ ಕೌಂಟರ್ನಲ್ಲಿ ಅವರವರ ರಾಜ್ಯದ ಕರಕುಶಲ ವಸ್ತುಗಳ ಮಾರಾಟ, ಪ್ರವಾಸಿ ಸ್ಥಳಗಳ ಮಾಹಿತಿ, ಬುಕ್ಕಿಂಗ್ಗಳಿಗೆ ಅವಕಾಶ ನೀಡಲಾಗುವುದು. ಈ ರೀತಿ ಮಾಡುವುದರಿಂದ ಬೆಂಗಳೂರಿನ ಸುತ್ತಮುತ್ತಲಿರುವ ಜನರಿಗೆ ವಾರಾಂತ್ಯದ ಪಿಕ್ನಿಕ್ ಸ್ಪಾಟ್ ಸಿಗುತ್ತದೆ. ಇದರೊಂದಿಗೆ ಒಂದೇ ಸೂರಿನಲ್ಲಿ ಇಡೀ ದೇಶದ ಪ್ರವಾಸಿ ಸ್ಥಳಗಳ ಮಾಹಿತಿಯೂ
ಸಿಗುತ್ತದೆ.
ಹೆದ್ದಾರಿಗಳಲ್ಲಿ ವಿಶ್ರಾಂತಿ ತಾಣ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಆರಂಭಕ್ಕೂ ಮೊದಲು ಈ ಹೆದ್ದಾರಿಯಲ್ಲಿ ಹಲವು ಹೋಟೆಲ್ಗಳಿದ್ದವು. ಆದರೀಗ ಒಂದೇ ಒಂದು ಹೋಟೆಲ್ಗಳಿಲ್ಲ. ಆದ್ದರಿಂದ ಬೆಂಗಳೂರು-ಮೈಸೂರು ಮಧ್ಯದಲ್ಲಿ ಒಂದು ವಿಶ್ರಾಂತಿ ತಾಣವನ್ನು ಆರಂಭಿಸುವ ಆಲೋಚನೆ ಯಿದೆ. ವಿದೇಶದಲ್ಲಿರುವ ರೀತಿಯಲ್ಲಿಯೇ ಇಲ್ಲಿಯೂ ವಿಶ್ರಾಂತಿ ತಾಣದಲ್ಲಿ ಹೋಟೆಲ್, ಪೆಟ್ರೋಲ್ ಬಂಕ್, ಶೌಚಾಲಯ, ವಿಶ್ರಾಂತಿ ಕೊಠಡಿಯನ್ನು ಆರಂಭಿಸುವ ಚಿಂತನೆಯಿದೆ. ಪ್ರಮುಖ
ಹೆದ್ದಾರಿಗಳಲ್ಲಿ ಈ ರೀತಿಯ ವಿಶ್ರಾಂತಿತಾಣಗಳನ್ನು ನಿರ್ಮಿಸುವ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಅಂತಿಮ ಗೊಳಿಸುತ್ತೇವೆ.
*
? ಪ್ರಮುಖ ಪ್ರವಾಸಿ ತಾಣದಲ್ಲಿ ಮಯೂರ ಹೋಟೆಲ್ಗಳ ಅಭಿವೃದ್ಧಿಗೆ ಒತ್ತು
? ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕೆ ಹೆಚ್ಚುವರಿ ಕಿಯಾಕ್ಸ್ ಹಾಗೂ ಶೌಚಾಲಯಗಳ ನಿರ್ಮಾಣ
? ಹೆದ್ದಾರಿ ಬದಿಯಲ್ಲಿ ವಿಶ್ರಾಂತಿ ತಾಣಗಳ ನಿರ್ಮಾಣಕ್ಕೆ ಸರಕಾರದ ಬಳಿ ಮನವಿ
? ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ಸರಕಾರದಿಂದ ಇನ್ನಷ್ಟು ಸಹಾಯದ ಅಗತ್ಯವಿದೆ
? ಬಜೆಟ್ ಪ್ರವಾಸ ಬಯಸುವವರಿಗೆ ಕೆಎಸ್ಟಿಡಿಸಿಯ ಹೋಟೆಲ್ಗಳು ಸಹಕಾರಿ
*
ಕರ್ನಾಟಕದ ಪ್ರವಾಸೋದ್ಯಮದ ತವರೂರು. ಜನರು ಮೊದಲು ರಾಜ್ಯದಲ್ಲಿರುವ ಪ್ರವಾಸಿತಾಣಗಳಿಗೆ ಭೇಟಿ ನೀಡಿದಂತೆ ಹಲವು ಆಕರ್ಷಕ ಸ್ಥಳಗಳನ್ನು ಆಸ್ವಾದಿಸಬೇಕು. ರಾಜ್ಯದ ಬಹುತೇಕ ಪ್ರವಾಸಿ ತಾಣಗಳ ಸುತ್ತಮುತ್ತ ಕೆಎಸ್ಟಿಡಿಸಿಯ ಉತ್ತಮ ಗುಣಮಟ್ಟದ ವಾಸ್ತವ್ಯ ಪಡೆಯಬಹುದು.
– ಎಂ. ಶ್ರೀನಿವಾಸ್, ಅಧ್ಯಕ್ಷರು, ಕೆಎಸ್ಟಿಡಿಸಿ
ಇದನ್ನೂ ಓದಿ: Ranjith H Ashwath Special Column: ಪ್ರಶ್ನೆ ಅದಲ್ಲ, ಎನ್ನುತ್ತಲೇ ಉತ್ತರಿಸುತ್ತಿದ್ದ ನಾಡಿಗೇರರು