ಅಪರ್ಣಾ ಎ.ಎಸ್ ಬೆಂಗಳೂರು
ಬಿಬಿಎಂಪಿ ಘನ ತ್ಯಾಜ್ಯದಿಂದಲೇ ೧೧.೫ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ
ನವರಾತ್ರಿ ಬಳಿಕ ಘಟಕ ಉದ್ಘಾಟನೆ
ಕಸವನ್ನು ರಸವಾಗಿಸುವ ಬಿಬಿಎಂಪಿ ಹಾಗೂ ಕೆಪಿಸಿಎಲ್ನ ಮಹತ್ವಾಕಾಂಕ್ಷಿ ಯೋಜನೆ ಬಹುತೇಕ ಯಶಸ್ವಿ ಯಾಗಿದ್ದು, ನಾಡಹಬ್ಬ ದಸರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಚಾಲನೆ ಸಿಗಲಿದೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವುದರೊಂದಿಗೆ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಉದ್ದೇಶದೊಂದಿಗೆ
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಸಾಹಸಕ್ಕೆ ಸರಕಾರ ಕೈಹಾಕಿತ್ತು. ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿರುವ ಕೆಪಿಸಿಎಲ್, ನವರಾತ್ರಿ ಬಳಿಕ ಈ ಘಟಕವನ್ನು ಉದ್ಘಾಟಿಸಲು ಮುಂದಾಗಿದೆ.
ಸದ್ಯ ಈ ಘಟಕದಲ್ಲಿ ನಿತ್ಯ 11.6 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, ಇದಕ್ಕಾಗಿ ೬೦೦ಟನ್ ಘನ ತ್ಯಾಜ್ಯವನ್ನು ಬಳಲಾಗುತ್ತದೆ. ಇದರಿಂದಾಗಿ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆ ಈಡೇರುವುದರೊಂದಿಗೆ ಹೆಚ್ಚುವರಿ ವಿದ್ಯುತ್ ಸರಕಾರಕ್ಕೆ ಲಭಿಸಲಿದೆ. ಈ ಹಿಂದೆ ಗೌರವ್ ಗುಪ್ತಾ ಬಿಬಿಎಂಪಿಯ ವಿಶೇಷ ಆಯುಕ್ತರಾಗಿದ್ದಾಗ ಚಿಂತನೆ ನಡೆಸಲಾಗಿತ್ತು. ಆದರೆ ಹಲವು ಖಾಸಗಿ ಕಂಪನಿಗಳು ಹಿಂದೇಟು ಹಾಕಿದ್ದರಿಂದ ಕೆಪಿಸಿಎಲ್ ಸಹಯೋಗದಲ್ಲಿ ಈಗ ಯೋಜನೆ ಪೂರ್ಣಗೊಂಡಿದೆ. ಈ ಹಿಂದೆ ಟೆಂಡರ್ ಕರೆದಾಗ ಎಂಟು ಕಂಪನಿಗಳು ಆಸಕ್ತಿ ತೋರಿದರೂ ಯಾರೂ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಲಿಲ್ಲ. ಈ ಹಿನ್ನೆಲೆ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ತ್ಯಾಜ್ಯ ನಿರ್ವಹಣೆ ತಲೆಬಿಸಿ ಇಲ್ಲ: ಈ ಸ್ಥಾವರವು ಸಂಪೂರ್ಣವಾಗಿ ತ್ಯಾಜ್ಯವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸ ಲಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಲೇವಾರಿಯೇ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಪರಿಣ ಮಿಸಿದ್ದು, ನಗರಾದ್ಯಂತ ದೊರೆಯುವ ಘನತ್ಯಾಜ್ಯಗಳನ್ನು ಎಲ್ಲಿ ಸುರಿಯುವುದು, ಸಾರ್ವಜನಿಕರಿಗೆ ಸಮಸ್ಯೆ ಯಾಗದಂತೆ ನಿರ್ವಹಿಸುವುದೇ ದೊಡ್ಡ ತಲೆನೋವಾಗಿತ್ತು. ಸದ್ಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ತ್ಯಾಜ್ಯ ನಿರ್ವಹಣೆಯ ಭಾರವು ಕಡಿಮೆಯಾಗಲಿದೆ.
ಬಿಬಿಎಂಪಿ-ಕೆಪಿಸಿಎಲ್ ಜಂಟಿ ನಿರ್ವಹಣೆ: ಸುಮಾರು 300 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ವಿದ್ಯುತ್ ಸ್ಥಾವರವನ್ನು ಕೆಪಿಸಿಎಲ್ ನಿರ್ಮಿಸಿದ್ದರೆ, ಸಂಸ್ಕರಿಸಿದ ಘನತ್ಯಾಜ್ಯವನ್ನು ನೀಡುವ ಜವಾಬ್ದಾರಿಯನ್ನು ಬಿಬಿಎಂಪಿ ಹೊತ್ತಿದೆ. ಈ ಸ್ಥಾವರಕ್ಕೆ ನಿತ್ಯ 600 ಟನ್ ಸಂಸ್ಕರಿಸಿದ ತ್ಯಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿರುವುದರಿಂದ, ಘಟಕಕ್ಕೆ ಬೇಕಿರುವ 600 ಟನ್ ತ್ಯಾಜ್ಯವನ್ನು ಬಿಬಿಎಂಪಿ ಒದಗಿಸಲಿದೆ ಎಂದು ತಿಳಿದು ಬಂದಿದೆ.
ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಈ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗಿದ್ದು,
ಹಲವು ಖಾಸಗಿ ಕಂಪನಿಗಳು ಈ ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿತ್ತು. ಆದರೆ ಅಂತಿಮವಾಗಿ, ಕೆಪಿಸಿಎಲ್ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿತ್ತು. ಇದೀಗ ಬಿಬಿಎಂಪಿ ಹಾಗೂ ಕೆಪಿಸಿಎಲ್ ಜಂಟಿಯಾಗಿ ಆರಂಭಿಸಿರುವ ಈ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಶೇ.೧೦೦ರಷ್ಟು ವಿದ್ಯುತ್ ಉತ್ಪಾದನೆ ಯಾಗುತ್ತಿದೆ.
*
ಲಭ್ಯವಿರುವ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ, ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸರಕಾರ
ಕಾರ್ಯನಿರ್ವಹಿಸುತ್ತಿದೆ. ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರವನ್ನು ಮುಖ್ಯಮಂತ್ರಿ ಯವರು ಶೀಘ್ರವೇ ಚಾಲನೆ ನೀಡಲಿದ್ದಾರೆ. ಇದರಿಂದ ವಿದ್ಯುತ್ ಸಮಸ್ಯೆ ಮಾತ್ರವಲ್ಲ, ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಕಡಿಮೆಯಾಗುತ್ತದೆ.
- ಕೆ.ಜೆ.ಜಾರ್ಜ್ ಇಂಧನ ಸಚಿವರು
ಘಟಕದ ಪ್ರಮುಖಾಂಶ ನಿತ್ಯ 11.6 ಮೆಗಾ ವ್ಯಾಟ್ ಉದ್ಘಾಟನೆಯ ಸಾಮರ್ಥ್ಯ ಇದಕ್ಕಾಗಿ 600 ಟನ್ ಸಂಸ್ಕರಿಸಿದ ತ್ಯಾಜ್ಯ ಬಳಕೆ ಘಟಕದ ನಿರ್ಮಾಣಕ್ಕೆ ಸುಮಾರು 300 ಕೋಟಿ ರು. ವೆಚ್ಚ ಸೆ.23ರಂದು ನಡೆದ ಪ್ರಾಯೋಗಿಕ ಉತ್ಪಾದನೆಯಲ್ಲಿ ಶೇ.100ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಇದನ್ನೂ ಓದಿ: BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಬಾಕಿದಾರರಿಗೆ ‘OTS’ ಯೋಜನೆ ಮತ್ತೆ ವಿಸ್ತರಣೆ