ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
4 ಎಂಎಲ್ಸಿ ಸ್ಥಾನ ತೆರವು: ರೇಸ್ನಲ್ಲಿ ಹನುಮಂತಯ್ಯ, ಕರಡಿ ಸಂಗಣ್ಣ, ತೇಜಸ್ವಿನಿ
ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿರೀಕ್ಷಿಸಿ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅನೇಕ ಶಾಸಕರು ಮೌನ ವಹಿಸುತ್ತಿದ್ದಂತೆ ಇತ್ತ ವಿಧಾನಪರಿಷತ್ ಸದಸ್ಯತ್ವದ ಆಕಾಂಕ್ಷಿಗಳು ಎದ್ದು ಕುಳಿತಿದ್ದಾರೆ. ಬಹುತೇಕ ತೆರವಾಗಿರುವ ವಿಧಾನಪರಿಷತ್ತಿನ ನಾಲ್ಕು ನಾಮಕರಣ ಸದಸ್ಯರ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನ ಅನೇಕ ಮುಖಂಡರು ಈಗಾಗಲೇ ಪಕ್ಷದ ವರಿಷ್ಠರ ಬೆನ್ನು ಹತ್ತಲಾರಂಭಿಸಿದ್ದಾರೆ.
ಇದರೊಂದಿಗೆ ಬೆಳಗಾವಿ ಅಧಿವೇಶನ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ನೀರವ ಮೌನ ಆವರಿಸಿದ್ದ ರಾಜ್ಯ ಕಾಂಗ್ರೆಸ್ನಲ್ಲಿ ಇದೀಗ ಪರಿಷತ್ ನಾಮಕರಣ ಫೈಟ್ ಶುರುವಾದಂತಾಗಿದೆ. ಈ
ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಜನವರಿ ಎರಡನೇ ವಾರದಲ್ಲಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಪರಿಷತ್ ಸದಸ್ಯತ್ವದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ತೆರವಾಗುತ್ತಿರುವ ಪರಿಷತ್ ನ ನಾಲ್ಕು ಸ್ಥಾನಗಳ ಪೈಕಿ ಒಬ್ಬ ಸದಸ್ಯರು ಜೆಡಿಎಸ್ನವರಾದರೆ, ಮತ್ತೊಬ್ಬರು ಬಿಜೆಪಿ ಯವರಗಾಗಿದ್ದರು. ಉಳಿದಿಬ್ಬರು ಸದಸ್ಯರು ಕಾಂಗ್ರೆಸ್ ನವರಾಗಿದ್ದಾರೆ. ಆದರೆ ಆಡಳಿತ ಪಕ್ಷ ಕಾಂಗ್ರೆಸ್ ಆಗಿರುವ ಕಾರಣ ಎಲ್ಲಾ ನಾಲ್ಕೂ ನಾಮಕರಣಗಳು ಕಾಂಗ್ರೆಸ್ ಪಾಲಾಗಲಿವೆ. ಈ ನಾಲ್ಕು ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮದೇ ಮಾರ್ಗಗಳ ಮೂಲಕ ಅವಕಾಶ ಗಿಟ್ಟಿಸಲು ಲಾಬಿ ನಡೆಸುತ್ತಿದ್ದು, ಈಗಾಗಲೇ ಮುಖ್ಯಮಂತ್ರಿ ಅವರು ಭರವಸೆ ನೀಡಿರುವವರಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಂದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷಕ್ಕಾಗಿ ಅವಕಾಶ ತ್ಯಾಗ ಮಾಡಿದವರು, ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ತ್ಯಜಿಸಿದ ಪಕ್ಷದ ಹಿರಿಯ ಮುಖಂಡರಿಗೆ ಆದ್ಯತೆ ಸಿಗಬಹುದೆನ್ನಲಾಗಿದೆ. ಅದರಲ್ಲೂ ಜಾತಿ
ಲೆಕ್ಕಾಚಾರದಂತೆ ಬ್ರಾಹ್ಮಣ, ಒಕ್ಕಲಿಗ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸುವ ಸಂಭವ ಹೆಚ್ಚಾಗಿದೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.
ಯಾರೆಲ್ಲಾ ರೇಸ್ ನಲ್ಲಿದ್ದಾರೆ ?
ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿದ್ದು, ಅವರಲ್ಲಿ ಮಾಜಿ ಶಾಸಕರು, ಹಿರಿಯರು,
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರ ಆಪ್ತರೂ ಇದ್ದಾರೆನ್ನಲಾಗಿದೆ. ಅದರಲ್ಲೂ ಈಗಷ್ಟೇ ಅವಧಿ ಪೂರೈಸಿರುವ ಯು.ಬಿ.ವೆಂಕಟೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೃಪೆಯನ್ನು ಮತ್ತೆ ಪಡೆದು ಮರು ನಾಮಕರಣವಾಗಲು ಯತ್ನಿಸುವ ಸಾಧ್ಯತೆ ಇದೆ. ಬ್ರಾಹ್ಮಣರ ಕೋಟಾದಲ್ಲಿ ಇವರೇ ಮತ್ತೆ ಅವಕಾಶ
ಪಡೆದರೂ ಆಶ್ಚರ್ಯವಿಲ್ಲ. ಆದರೆ ಇವರೊಂದಿಗೆ ನಿವೃತ್ತಿಯಾಗಿದ್ದ (ಪರಿಶಿಷ್ಟಜಾತಿಯ ಕೋಟಾದಡಿ ) ಪ್ರಕಾಶ್
ರಾಥೋಡ್ ಅವರನ್ನು ಮತ್ತೆ ನಾಮಕರಣ ಮಾಡುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಹಿರಿಯರೇ ಹೇಳುತ್ತಿದ್ದಾರೆ. ಇವರ ಬದಲಿಗೆ ದಲಿತ ಸಾಹಿತಿಯೂ, ಕಾಂಗ್ರೆಸ್ ಹಿರಿಯರೂ ಆದ ಎಲ, ಹನುಮಂತಯ್ಯ ಅವರನ್ನು ನಾಮಕರಣ ಮಾಡಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಎಂ.ಶಿವಣ್ಣ (ಕೋಟೆ ಶಿವಣ್ಣ) ಅವರನ್ನು ಪರಿಗಣಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಕಾರಣ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತ್ಯಜಿಸುವಾಗ ಶಿವಣ್ಣ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಇದೇ ರೀತಿ ಚುನಾವಣೆ ಸಂದರ್ಭದ
ನೀಡಿದ್ದ ಭರವಸೆಯ ಕೋಟಾದಲ್ಲಿ ಕರಡಿ ಸಂಗಣ್ಣ ಅವರಿಗೂ ಆದ್ಯತೆ ನೀಡುವ ಸಾಧ್ಯತೆ ಇದೆ. ಉಳಿದಂತೆ
ಸಿ.ಪಿ.ಯೋಗೇಶ್ವರ ರಾಜೀನಾಮೆಯಿಂದ ತೆರೆವಾಗಿದ್ದ ಸ್ಥಾನವನ್ನು ಒಕ್ಕಲಿಗರ ಕೋಟಾದಲ್ಲಿ ತೇಜಸ್ವಿನಿ ಗೌಡ ಅವರಿಗೆ ನೀಡುವ ಬಗ್ಗೆ ಉಪ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಇದರ ಮಧ್ಯೆ, ಒಂದು ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡುವ ಆಲೋಚನೆಯಿದ್ದು, ಅದರಲ್ಲೂ ಹಿಂದುಳಿದ
ವರ್ಗಗಳ ಅವಕಾಶ ವಂಚಿತ ಸಮುದಾಯದ ಯಾವುದಾದರೂ ಅಚ್ಚರಿ ಅಭ್ಯರ್ಥಿಯನ್ನು ಸಿದ್ದರಾಮಯ್ಯ ಅವರು
ಸೂಚಿಸಬಹುದು ಎಂದು ಹೇಳಲಾಗುತ್ತಿದೆ. ಇಷ್ಟೆ ಸಾಧ್ಯತೆಗಳ ನಡುವೆಯೂ ಮಾಜಿ ಸಚಿವ ಎಚ್.ಎಂ. ರೇವಣ್ಣ, ಪಕ್ಷದ ವಕ್ತಾರ ರಮೇಶ್ ಬಾಬು, ಮನ್ಸೂನ್ ಅಲಿ ಖಾನ್ ಹಾಗೂ ಅನಿಲ್ ಕುಮಾರ್ ಸೇರಿದಂತೆ ಅನೇಕ ಮಂದಿ ರೇಸ್ ನಲ್ಲಿzರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪರಿಷತ್ ಸದಸ್ಯ ಬಲ ಹೇಗಿದೆ?
ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಯು.ಬಿ. ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್ ಅವರು ಕಳೆದ
ಅಕ್ಟೋಬರ್ ನಲ್ಲಿ ನಿವೃತ್ತಿಯಾಗಿದ್ದಾರೆ. ಅದೇ ರೀತಿ ಜೆಡಿಎಸ್ ನಿಂದ ನಾಮಕರಣಗೊಂಡಿದ್ದ ತಿಪ್ಪೇಸ್ವಾಮಿ
ಜನವರಿ 27ಕ್ಕೆ ನಿವೃತ್ತರಾಗಲಿದ್ದಾರೆ. ಉಳಿದಂತೆ ಬಿಜೆಪಿಯಿಂದ ನಾಮಕರಣಗೊಂಡಿದ್ದ ಸಿ.ಪಿ.ಯೋಗೇಶ್ವರ್
ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಪರಿಷತ್ನ ನಾಲ್ಕೂ ಸ್ಥಾನಗಳು
ಸಂಪೂರ್ಣ ತೆರವಾಗಲಿದ್ದು, ಈ ಸ್ಥಾನಗಳಿಗೂ ಕಾಂಗ್ರೆಸ್ ಸದಸ್ಯರು ನಾಮಕರಣಗೊಂಡರೆ, ಪರಿಷತ್ ನಲ್ಲಿ
ಕಾಂಗ್ರೆಸ್ ಸದಸ್ಯಬಲ 37ಕ್ಕೆ ಏರಿಕೆಯಾಗಲಿದೆ. ಬಿಜೆಪಿಯ ಬಲ 29ಕ್ಕೆ ಇಳಿಯಲಿದ್ದು, ಜೆಡಿಎಸ್ ಸದಸ್ಯರ ಸಂಖ್ಯೆ
9ರಲ್ಲಿ ಮುಂದುವರಿಯಲಿದೆ. ಬಿಜೆಪಿ-ಜೆಡಿಎಸ್ ಸೇರಿದಂತೆ ಪರಿಷತ್ನಲ್ಲಿ ಪ್ರತಿಪಕ್ಷಗಳ ಸದಸ್ಯ ಬಲ ಕೂಡ 37
ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*
ಪರಿಷತ್ ನಲ್ಲಿ ಜನವರಿ ವೇಳೆಗೆ ಒಟ್ಟಾರೆ ನಾಲ್ಕು ಸದಸ್ಯರ ಸ್ಥಾನಗಳು ತೆರವಾಗಲಿವೆ. ಆನಂತರ ಚುನಾವಣೆ ನಡೆಯಲಿದೆ. ಇದಕ್ಕೆ ಆಡಳಿತ ಪಕ್ಷ ಕಾಂಗ್ರೆಸ್ ನಾಲ್ವರು ಅಭ್ಯರ್ಥಿಗಳನ್ನು ಪರಿಷತ್ ಗೆ ನಾಮಕರಣ ಮಾಡಬಹುದು. ಅದನ್ನು ಪಕ್ಷ ನಿರ್ಧರಿಸುತ್ತದೆ.
-ಮಹಾಲಕ್ಷ್ಮೀ, ವಿಧಾನಪರಿಷತ್ ಕಾರ್ಯದರ್ಶಿ
ಇದನ್ನೂ ಓದಿ:Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?