– 5 ತಿಂಗಳಲ್ಲಿ 4089 ಮಕ್ಕಳು ಚೇತರಿಕೆ
– ಅಪೌಷ್ಟಿಕತೆಯಿಂದ ಹೊರಬರುತ್ತಿರುವ ಕೊಪ್ಪಳ ಜಿಲ್ಲೆ
ವಿಶೇಷ ವರದಿ: ಬಸವರಾಜ ಕರ್ಕಿಹಳ್ಳಿ, ಕೊಪ್ಪಳ
ಕಳೆದ 5 ತಿಂಗಳಿನಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಬರೋಬ್ಬರಿ 160 ತೀವ್ರ ಅಪೌಷ್ಟಿಕ ಹಾಗೂ 3,925 ಸಾಧಾರಣ ಅಪೌಷ್ಟಿಕ ಮಕ್ಕಳು ಚೇತರಿಸಿಕೊಂಡಿದ್ದಾರೆ.
ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರಾಯಚೂರಿನ ನಂತರದ ಸ್ಥಾನ ದಲ್ಲಿ ಕೊಪ್ಪಳ ಜಿಲ್ಲೆಯಿದೆ. ಕರೊನಾ ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂಬ ತಜ್ಞರ ವರದಿ ಜನರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಜಿಲ್ಲೆಯಲ್ಲಿ 31,346 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪಾಲಕರು ಸೇರಿ ಅಧಿಕಾರಿ ವರ್ಗದಲ್ಲಿ ಎದೆಬಡಿತ ಹೆಚ್ಚಿಸಿರುವುದು ಸುಳ್ಳಲ್ಲ. ಜಿಲ್ಲೆಯಲ್ಲಿ 0-18 ವರ್ಷದೊಳಗಿನ 5,24,513 ಮಕ್ಕಳಿದ್ದಾರೆ. ಇವರಲ್ಲಿ 4 ಲಕ್ಷ ಮಕ್ಕಳಿಗೆ ಈಗಾಗಲೆ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಆರೋಗ್ಯ ಸಮಸ್ಯೆ ಇರುವವರ ಮೇಲೆ ನಿಗಾವಹಿಸಲಾಗಿದೆ. 784 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುವುದು ಪತ್ತೆಯಾಗಿದೆ. ಅಂಥವರನ್ನು ಹಂತ ಹಂತವಾಗಿ ಆರೈಕೆ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗಿದೆ.
ಅಲ್ಲದೇ ಪಾಲಕರಿಗೂ ತರಬೇತಿ ನೀಡಿದ್ದು, ಮನೆಯಲ್ಲಿಯೇ ಪೌಷ್ಟಿಕ ಆಹಾರ ತಯಾರಿಕೆ ಮಾಹಿತಿ ನೀಡಲಾಗಿದೆ. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಕಳೆದೆರಡು ತಿಂಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಮಕ್ಕಳು ಅಪೌಷ್ಟಿಕತೆ ಯಿಂದ ವಿಮುಖರಾಗುತ್ತಿದ್ದಾರೆ. ಮಾರ್ಚ್ನಲ್ಲಿ 31 ಸಾವಿರದಷ್ಟಿದ್ದ ಅಪೌಷ್ಟಿಕ ಮಕ್ಕಳ ಸಂಖ್ಯೆ ಆಗಸ್ಟ್ ತಿಂಗಳ ಅಂತ್ಯಕ್ಕೆ 27,421ಕ್ಕೆ ಕುಸಿದಿದೆ. ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಹೊರ ಬಂದಿದ್ದಾರೆ. ಕುಷ್ಟಗಿ, ಕನಕಗಿರಿ ಹಾಗೂ ಯಲಬುರ್ಗಾದಲ್ಲಿ ಇನ್ನಷ್ಟು ಮಕ್ಕಳಲ್ಲಿ ಪೌಷ್ಟಿಕಾಂಶ ಸುಧಾರಿಸಬೇಕಿದೆ.
ಇಲಾಖೆಯಿಂದ ಇದೇ ರೀತಿ ಅಪೌಷ್ಟಿಕತೆ ವಿರುದ್ಧ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಜಿಲ್ಲೆಯು ಅಪೌಷ್ಟಿಕತೆಯಿಂದ ಹೊರಬರಲಿದೆ. ಜಿಲ್ಲೆಯವರೇ ಆದ ಹಾಲಪ್ಪ ಆಚಾರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಆಗಿರುವ ಕಾರಣ ಈ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟೂ ಕಾರ್ಯೋನ್ಮುಖ ವಾಗಲಿದೆ. ಇದು ಜಿಲ್ಲೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಸಹ ಎನ್ನಬಹುದು.
***
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೊಟ್ಟೆ, ಪೌಷ್ಟಿಕ ಆಹಾರ ಹಾಗೂ ಮೋರಿಂಗಾ ಪೌಡರ್ ವಿತರಣೆ ಮಾಡುತ್ತಿದ್ದೇವೆ. ಕಳೆದೆರೆಡು ತಿಂಗಳಲ್ಲಿ ಗಣನೀಯವಾಗಿ ಅಪೌಷ್ಟಿಕ ಮಕ್ಕಳು ಚೇತರಿಸಿಕೊಂಡಿದ್ದಾರೆ.
– ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ, ಕೊಪ್ಪಳ
160 ತೀವ್ರ ಅಪೌಷ್ಟಿಕ ಮಕ್ಕಳು ಚೇತರಿಕೆ..
ಕೊಪ್ಪಳ 28
ಗಂಗಾವತಿ 56
ಕನಕಗಿರಿ 22
ಯಲಬುರ್ಗಾ 42
ಕುಷ್ಟಗಿ 12
ಒಟ್ಟು 160