ಹರೀಶ್ ಕೇರ
ಮುಗಿದ ಸಮ್ಮೇಳನ, ಮುಗಿಯದ ನೆನಪು
ಕಬ್ಬಿನ ನಾಡಿನಿಂದ ಕಬ್ಬಿಣದ ನಾಡಿಗೆ ತೇರು ಹೊರಡುವ ಹೊತ್ತು
ಮಂಡ್ಯ: ಮಧುರ ಮಂಡ್ಯ ಇಡೀ ಕನ್ನಡನಾಡಿಗೆ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಎಷ್ಟೇ ಅವ್ಯವಸ್ಥೆ
ಗಳಿದ್ದರೂ ಕನ್ನಡವನ್ನು ಮಂಡ್ಯದ ಜನ, ನಾಡಿನಜನ ಎತ್ತಿ ಮುದ್ದಾಡಿದ್ದಾರೆ.
ಕನ್ನಡದ ಜನತೆ ಮಹರ್ಷಿ ಕಣ್ವರ ಹಾಗೆ. ಅಪ್ಪ ಅಮ್ಮ ತೊರೆದು ಹೋದರೂ ಶಕುಂತಲೆಯನ್ನು ಎತ್ತಿಕೊಂಡು ಸಾಕಿದ ಕಣ್ವರಂತೆ, ರಾಜಕಾರಣಿಗಳು ತೊರೆದು ಹೋದ ಕನ್ನಡವನ್ನು ಸಮ್ಮೇಳನದ ಅಂಗಣದಲ್ಲಿ ಎತ್ತಿಕೊಂಡು ಎದೆಗೊತ್ತಿಕೊಂಡರು. ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ ಎಂದು ಕನ್ನಡದ ರತ್ನರಾದರು.
ಅವ್ಯವಸ್ಥೆಗಳಿದ್ದವು ನಿಜ: ಕಳೆದ ಸಮ್ಮೇಳನಗಳಿಗಿಂತ ಕೊಂಚ ಹೆಚ್ಚೇ ಇದ್ದವು. ಆದರೆ ಬಂದ ಕನ್ನಡಿಗ
ಬೇಸರಿಸಿಕೊಳ್ಳಲಿಲ್ಲ. ಉರಿವ ಬಿಸಿಲಿನಲ್ಲಿ ಬೆವರು ಸುರಿಸಿಕೊಂಡೇ ಓಡಾಡಿದರು. ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಸಮ್ಮೇಳನದ ಕಪ್ಪುನೆಲ ತೊಯ್ದು ತೊಪ್ಪೆಯಾಗಿ ಕೆಸರಾಗಿ ಕಾಲಿಗೆ ಅಂಟಿ ಕೊಂಡರೂ ನಗುತ್ತ ಜಾರಿ ಬೀಳುತ್ತ ಓಡಾಡಿದರು. ಶೌಚಾಲಯ ಕೆಟ್ಟಿದ್ದರೂ ಪಕ್ಕದ ಕಬ್ಬಿನ ಗದ್ದೆಗಳತ್ತ ಹೋದರು.
ಬಾಡೂಟ ನಿರೀಕ್ಷಿಸಿ ಬಂದವರು ಸಿಹಿಯೂಟಕ್ಕೆ ತೃಪ್ತರಾದರು. ರಾಜಕಾರಣಿಗಳ ಭಾಷಣಗಳಿಗೆ ಬೇಸತ್ತರು. ಸಾಹಿತಿಗಳ ಮಾತಿಗೆ ಬೆರಗಾದರು. ಗೋಷ್ಠಿಗಳಲ್ಲಿ ಕುಳಿತರು. ಆಕಳಿಸಿ ತೂಕಡಿಸಿ ಚಪ್ಪಾಳೆ ಹೊಡೆದರು. ವೇದಿಕೆ ಖಾಲಿ ಇದ್ದಾಗ ಅಲ್ಲಿಗೇ ಬಂದು ಕುರ್ಚಿಗಳ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡರು. ಜಾತ್ರೆ ಸುತ್ತಾಡಿ ಮಕ್ಕಳಿಗೆ ಬೆಂಡು-ಬತ್ತಾಸು ಕೊಡಿಸಿದರು.
ಸಮ್ಮೇಳನಾಧ್ಯಕ್ಷರ ಮಾತುಗಳು ನಿಖರ: ಸಮ್ಮೇಳನಾಧ್ಯಕ್ಷ ಗೊರು ಚನ್ನಬಸಪ್ಪ ಮಾತುಗಳು ನಿಖರವಾಗಿದ್ದವು. ಸಾಹಿತ್ಯದ ಜೊತೆಗೆ ಆಡಳಿತದ ಅನುಭವವೂ ಇದ್ದ ಅವರ ಮಾತುಗಳಲ್ಲಿ ರಾಜ್ಯದ ಪರ ಮತ್ತು ಕೇಂದ್ರದ ತಾರ ತಮ್ಯದ ವಿರುದ್ಧ ಕೆಚ್ಚಿನ ಕಿಡಿಗಳಿದ್ದವು. ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲು, ಹಿಂದಿ ಹೇರಿಕೆಯ ಕುರಿತು ಅಸಮಾ ಧಾನ, ಬೆಂಗಳೂರಿಗೆ ಬಂದು ದುರಹಂಕಾರ ತೋರಿಸುತ್ತಿರುವ ಅನ್ಯಭಾಷಿಕರ ಮೇಲೆ ಸಿಟ್ಟು, ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದ ಬದ್ಧತೆ- ಎಲ್ಲವೂ ಇದ್ದವು. ಸಮ್ಮೇಳನಾಧ್ಯಕ್ಷರ ಭಾಷಣ ಇರಬೇಕಾದ್ದೇ ಹಾಗೆ. ಮನೆಯ ಹಿರಿಯರ ಮಾತಿನ ಹಾಗೆ. ಕೆಲವೊಮ್ಮೆ ಅವುಗಳನ್ನು ಪಾಲಿಸಲಾಗುತ್ತದೆ. ಇನ್ನು ಕೆಲವೊಮ್ಮೆ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡಲಾಗುತ್ತದೆ.
ಜಾತ್ರೆ ಸಂಪನ್ನ: ಕನ್ನಡಿಗರಿಗೆ ಸಾಹಿತ್ಯ ಸಮ್ಮೇಳನ ಎಂಬುದು ಒಂದು ಪದವಲ್ಲ, ಅದೊಂದು ಎಮೋಷನ್. ೮೭ ವರ್ಷಗಳಿಂದ ಇದು ನಡೆದುಕೊಂಡು ಬಂದಿರುವ ಪರಿಣಾಮ, ಸಾಹಿತ್ಯ ಸಮ್ಮೇಳನದ ರೂಢಿಯ ಚಿತ್ರವೊಂದು ಅವರ ಎದೆಯಲ್ಲಿ ಗುಡಿ ಕಟ್ಟಿಕೊಂಡಿದೆ. ಸಾಕಷ್ಟು ಅವ್ಯವಸ್ಥೆಗಳಿರುವ, ಆದರೆ ಕನ್ನಡದ ಭಾವುಕತೆಯೇ ಮುಖ್ಯ
ವಾಗಿರುವ, ಇಷ್ಟವೋ ಕಷ್ಟವೋ ಕನ್ನಡವರೆಲ್ಲ ಒಂದೆಡೆ ಸೇರಿ ಹೃದಯದ ಮಾತುಗಳನ್ನು ಹಂಚಿಕೊಳ್ಳುವ ಜಾತ್ರೆ ಇದು. ಈ ಜಾತ್ರೆ ಸಂಪನ್ನವಾಗಿದೆ ಎಂಬುದೇ ನಿಜ. ಬಂದ ಕನ್ನಡಿಗರಿಗೆ ಕಬ್ಬಿನ, ಸಕ್ಕರೆ ಬೆಲ್ಲದ ಸಿಹಿ ಉಣಿಸಿ, ತಲ್ಲಣಿಸಿ ದರು ಕಂಡ್ಯ ಎಂದು ಕಳಿಸಿಕೊಟ್ಟಿದೆ ಮಂಡ್ಯ. ಈ ನೆನಪುಗಳು ಮಧುರವಾಗಿ ಮನದಲ್ಲಿ ಉಳಿಯಲಿವೆ.
ನುಡಿತೇರು ಕಬ್ಬಿಣದ ನಾಡಿನತ್ತ: ಇನ್ನೀಗ ಮುಂದಿನ ವರ್ಷದ ತೇರಿನ ತಾಣ ನಿರ್ಧರಿಸುವ ಸಮಯ. ಬಳ್ಳಾರಿಯ ಜಿಧ್ಯಕ್ಷರು ರಣವೀಳ್ಯ ಪಡೆದಿದ್ದಾರೆ. ಅಲ್ಲಿಗೆ, ನುಡಿತೇರು ಕಬ್ಬಿನ ನಾಡಿನಿಂದ ಕಬ್ಬಿಣದ ನಾಡಿನತ್ತ ಸಾಗಲಿದೆ ಎಂದಂತಾಯಿತು. ಬಳ್ಳಾರಿಯ ಉತ್ಸವ ಕನ್ನಡದ ಮೇಲೆ ಇನ್ನಷ್ಟು ಪ್ರೀತಿ ಹುಟ್ಟಿಸುವಂತಾಗಲಿ.
ಪ್ರತಿಸಲ ಇದೇ ಪಾಡು ಸರ್…
ಪ್ರತಿಸಲ ಇದೇ ಪಾಡು ಸರ್, ಆದರೆ ಮುಂದಿನ ಸಲ ಪುಸ್ತಕದ ಗಂಟು ಹೊತ್ತುಕೊಂಡು ಮತ್ತೆ ಬಂದೇ ಬರುತ್ತೇವೆ ಎಂದು ಪುಸ್ತಕ ವ್ಯಾಪಾರಿಯೊಬ್ಬರು ನುಡಿದರು. ಭಾನುವಾರ ವ್ಯಾಪಾರ ತುಸು ಚೇತರಿಸಿಕೊಂಡು ಅವರ ಮುಖ ಬೆಳಗಿತ್ತು. ಎಲ್ಲ ಪುಸ್ತಕ ವ್ಯಾಪಾರಿಗಳಿಗೂ ಈ ಭಾಗ್ಯ ಒದಗಲಿಲ್ಲ ಎಂಬುದು ನಿಜ. ಆದರೆ ಮಂಡ್ಯದ ಮತ್ತು ನಾಡಿನ ಜನ ಪೂರ್ತಿಯಾಗೇನೂ ಅವರ ಕೈ ಬಿಡಲಿಲ್ಲ. ಹಾವೇರಿಯಷ್ಟು ವ್ಯಾಪಾರ ಆಗದೆ ಇದ್ದರೂ ನಿರೀಕ್ಷೆ ಪೂರ್ಣ ವಿಫಲ ವಾಗಲಿಲ್ಲ. ಜನ ಮತ್ತದೇ ಹಳಬರ ಕೃತಿಗಳನ್ನು ಕೇಳಿಕೊಂಡು ಬರುತ್ತಿದ್ದರು. ಆದರೆ ಹೊಸ ತಲೆಮಾರಿನ ಅನೇಕ ಲೇಖಕ-ಪ್ರಕಾಶಕರು ತಮ್ಮ ಸ್ಟಾಲ್ಗಳನ್ನು ಇಟ್ಟುಕೊಂಡು, ಅದನ್ನು ಒಂದು ಚಳವಳಿಯ ಮಾದರಿಯಲ್ಲಿ ನಡೆಸಿ ದರು. ಇದು ಕನ್ನಡದ ಹೊಸ ಪುಸ್ತಕೋದ್ಯಮದ ದಿಕ್ಸೂಚಿಯಂತಿತ್ತು
ಹವಾ ಎಬ್ಬಿಸಿದ ಬಾಡೂಟ
ಸಮ್ಮೇಳನಕ್ಕೆ ಮೊದಲು ಸಾಕಷ್ಟು ಹವಾ ಎಬ್ಬಿಸಿದ್ದ ಬಾಡೂಟದ ವಿಷಯ, ಸಮ್ಮೇಳನದ ಮೂರೂ ದಿನಗಳಲ್ಲಿ
ಅಲ್ಲಲ್ಲಿ ಅಸ್ತಿತ್ವ ತೋರಿಸಿತಾದರೂ, ಸಮ್ಮೇಳನಕ್ಕೇ ಕಂಪನ ಉಂಟುಮಾಡುವ ಮಟ್ಟಕ್ಕೆ ಬೆಳೆಯಲಿಲ್ಲ. ಕೆಲವರು
ಅಲ್ಲಲ್ಲಿ ಬಾಡೂಟ ಮಾಡಿ ಉಂಡರು. ಇದು ಮಂಡ್ಯದ ನೆಲದ ಆತಿಥ್ಯಗುಣ, ಸಹಿಷ್ಣುತೆ, ಪ್ರೀತಿಯನ್ನೆಲ್ಲ ತೋರಿ
ಸಿತು. ‘ಒಂದು ಕಡೆ ಬಾಡೂಟ ಇಡಬಹುದಾಗಿತ್ತು’ ಎಂದು ಸಸ್ಯಾಹಾರಿಗಳೇ ಮನತುಂಬಿ ಹೇಳುವಂತಾಯಿತು ಎಂದರೆ ಅತಿಶಯೋಕ್ತಿಯೇನಲ್ಲ.
ಇದನ್ನೂ ಓದಿ: Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!