ರಾಜ್ಯದಲ್ಲಿ 30370 ಶ್ರವಣದೋಷಿಗಳು
ಎಲ್ಲ ವಯೋಮಾನದರವನ್ನು ಬಾಧಿಸುತ್ತಿರುವ ಕಿವುಡುತನ
ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ
ಶ್ರವಣದೋಷ ನಿಯಂತ್ರಣ ಮತ್ತು ನಿವಾರಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸಾಕಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆಯಾದರೂ, ಎಲ್ಲ ವಯೋಮಾನದವರನ್ನು ಕಾಡುವ ಶ್ರವಣದೋಷ ನಿವಾರಣೆ ಕಷ್ಟ ಸಾಧ್ಯವಾಗದಿರುವುದು ಖೇದಕರ.
ಮಕ್ಕಳು, ಮಹಿಳೆಯರು, ವಯಸ್ಕರರು, ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರನ್ನು ಸೌಮ್ಯ, ಮಧ್ಯಮ, ಗಂಭೀರ, ತೀವ್ರ ಶ್ರವಣದೋಷ ಬಾಧಿಸುತ್ತಿದ್ದು, 2020-21ನೇ ಸಾಲಿನ ಶ್ರವಣ ದೋಷ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 30370 ಶ್ರವಣದೋಷ ತಪಾಸನಾ ಫಲಾನುಭವಿಗಳಿದ್ದು, 8694 ಸೌಮ್ಯ ಶ್ರವಣ ದೋಷ, 8570 ಮಧ್ಯಮ ಶ್ರವಣದೋಷ, 7462 ತೀವ್ರ ಶ್ರವಣದೋಷ, 5644 ಗಂಭೀರ ಶ್ರವಣ ದೋಷಗಳಿವೆ.
2018ರ ಜನಗಣತಿಗೆ 0-6 ವರ್ಷದ ಮಕ್ಕಳಲ್ಲಿ 20839 ಮಕ್ಕಳು ಶ್ರವಣದೋಷದಿಂದ ಬಳುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಕಿವುಡು ತನವು ಹುಟ್ಟಿನಿಂದ ಬಂದಂತಹುಗಳಾಗಿವೆ. ಶ್ರವಣದೋಷ ಅಥವಾ ಕಿವುಡುತನದ ಪ್ರಮುಖ ಕಾರ್ಯಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಿ, ಅಸ್ತಿತ್ವ ದಲ್ಲಿರುವ ಕಿವುಡ ತನದ ಪ್ರಮಾಣದ ಹೊರೆಯನ್ನು ಶೇ.೨೫ಕ್ಕೆ ಇಳಿಸುವ ಉದ್ದೇಶವು ಈಡೇರಿಲ್ಲ.
ಎನ್ಎಸ್ ಎಸ್ಒನ 2001ರ ಸಮೀಕ್ಷೆ ಪ್ರಕಾರ, ಪ್ರಸ್ತುತ ತೀವ್ರವಾದ ಕಿವುಡುತನದ ನಷ್ಟದಿಂದ ಬಳಲುತ್ತಿರುವ ಸಂಖ್ಯೆ 1 ಲಕ್ಷ ಜನ ಸಂಖ್ಯೆಗೆ 291. ಇದರಲ್ಲಿ 0 ರಿಂದ 14 ವರ್ಷದ ನಡುವಿನ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದಿದೆ ಎಂಬುದೇ ಗಮನಾರ್ಹ ಸಂಗತಿ.
ಆರ್ಥಿಕ ಪರಿಣಾಮ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಶ್ರವಣ ದೋಷವು ವಾರ್ಷಿಕ ಯು.ಎಸ್. ಡಾಲರ್ 750 ಬಿಲಿಯನ್ ಜಾಗತಿಕ ವೆಚ್ಚವನ್ನುಂಟು
ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಆರೋಗ್ಯ ವಲಯದ ವೆಚ್ಚಗಳು (ಶ್ರವಣ ಸಾಧನಗಳ ವೆಚ್ಚವನ್ನು ಹೊರತುಪಡಿಸಿ), ಶೈಕ್ಷಣಿಕ ಬೆಂಬಲದ ವೆಚ್ಚಗಳು, ಉತ್ಪಾದಕತೆಯ ನಷ್ಟ ಮತ್ತು ಸಾಮಾಜಿಕ ವೆಚ್ಚಗಳು ಸೇರಿವೆ. ಶ್ರವಣ ದೋಷ ಹೊಂದಿರುವ ವಯಸ್ಕರು ನಿರುದ್ಯೋಗ ಪ್ರಮಾಣವನ್ನು ಹೆಚ್ಚು
ಹೊಂದಿರುತ್ತಾರೆ. ಉದ್ಯೋಗದಲ್ಲಿರುವವವರಲ್ಲಿ ಸಾಮಾನ್ಯ ಉದ್ಯೋಗಿಗಳಿಗೆ ಹೋಲಿಸಿದರೆ ಹೆಚ್ಚಿನ ಶೇಕಡಾವಾರು ಶ್ರವಣದೋಷ ಉದ್ಯೋಗಿಗಳು ಕಡಿಮೆ ಶ್ರೇಣಿಯಲ್ಲಿದ್ದಾರೆ.
ವಿಶೇಷವಾಗಿ ಅಗತ್ಯವಿರುವ ಶ್ರವಣದೋಷವುಳ್ಳ ಜನರಿಗೆ ಉದ್ಯೋಗದಲ್ಲಿ ಜಾಗೃತಿ ಮೂಡಿಸುವುದರಿಂದ ಶಿಕ್ಷಣ ಮತ್ತು ವೃತ್ತಿಪರ ಪುನರ್ವಸತಿ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವುದು. ಶ್ರವಣ ದೋಷವಿರುವ ಜನರಿಗೆ ನಿರುದ್ಯೋಗ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಹೀಗಿರಲಿ ಕಿವಿಗಳ ಕಾಳಜಿ
ನೀವು ಎಂದಿಗೂ ಯಾವುದೇ ವಸ್ತು (ಹತ್ತಿ ಸ್ಟ್ಯಾಂಬ್ ಇತರೆ)ಗಳನ್ನು ನಿಮ್ಮ ಕಿವಿಗೆ ಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಶಬ್ದದ ಪ್ರಮಾಣ ಕಡಿಮೆ ಇಡುವುದು ಮತ್ತು ಕೇಳುವ ಸಮಯವನ್ನು ಸೀಮಿತಗೊಳಿಸಬೇಕು. ಗದ್ದಲದ ಸ್ಥಳಗಳಲ್ಲಿ ಅಥವಾ ಗದ್ದಲದ ಚಟುವಟಿಕೆಗಳನ್ನು ಮಾಡುವಾಗ ಇಯರ್ ಪ್ಲಗ್ ಗಳನ್ನು ಬಳಸುವುದು. ಕಿವಿಯಿಂದ ಯಾವುದೇ ನೋವು ಅಥವಾ ಕಿವಿ ಸೋರುವಿಕೆ ಉಂಟಾದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸುವುದು. ನಿಮ್ಮ ಕಿವಿಗಳು ಸರಿಯಾಗಿ ಕೇಳುತ್ತಿಲ್ಲವಾದಲ್ಲಿ ಅಥವಾ ಟಿನ್ನಿಟಸ್ (ರಿಂಗಿಂಗ್) ಹೊಂದಿದ್ದಲ್ಲಿ ಆರೋಗ್ಯ ತಜ್ಞವೈದ್ಯರನ್ನು ಸಂಪಕಿಸಬೇಕು.