ಸಮಗ್ರ ಸುಧಾಕರಣೆಗೆ ಆಯುಕ್ತರ ಪಣ
ಹೆಚ್ಚುತ್ತಿರುವ ನಕಲಿ ತಜ್ಞರ ಹಾವಳಿ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ನಕಲಿ ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳ ಪತ್ತೆ ಮಾಡಬೇಕಾದ ಆಹಾರ ಸುರಕ್ಷರತಾ ಪ್ರಾಧಿಕಾರದಲ್ಲೇ
ನಕಲಿ ಅಧಿಕಾರಿಗಳ ಹಾವಳಿ ಇರುವುದು ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆಯ ಪ್ರಮುಖ ಆಂಗವಾಗಿರುವ ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ತಜ್ಞ ವೈದ್ಯರಿಗಿಂತ ಕಿರಿಯ ಶ್ರೇಣಿಯ ಸಾಮಾನ್ಯ ಅಧಿಕಾರಿಗಳದ್ದೇ ಕಾರುಬಾರಾಗಿದೆ.ಅಲ್ಲದೆ, ನಿಮಯಕ್ಕೆ ವಿರುದ್ಧವಾಗಿ ನಿಯೋಜನೆ ಗೊಂಡಿರುವ ಕಿರಿಯ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಾದ ವೈದ್ಯರ ನಡುವೆ ಕುರ್ಚಿ ಕಾಳಗ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಆಹಾರದಲ್ಲಿ ವಿಷಕಾರಿ ಆಂಶಗಳನ್ನು ಪತ್ತೆ ಮಾಡಿ ಸಾರ್ವಜನಿಕರನ್ನು ರಕ್ಷಿಸಬೇಕಾದ
ಅಽಕಾರಿಗಳಲ್ಲೇ ನಕಲಿಗಳಿರುವ ಶಂಕೆ ಬಲವಾಗಿದೆ. ನಕಲಿ ಅಂಕಪಟ್ಟಿ ಆರೋಪದವರೂ ಸೇರಿದಂತೆ ಅನೇಕ ಕಿರಿಯ ಅಧಿಕಾರಿಗಳು, ಉನ್ನತ ಹುದ್ದೆಗಳಾದ ಆರೋಗ್ಯ ಸುರಕ್ಷತಾ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇವರಲ್ಲಿ ಕೆಲವರು ಅಸ್ತಿತ್ವದಲ್ಲೇ ಇಲ್ಲದ ರಾಜಸ್ತಾನ್ ವಿದ್ಯಾಪೀಠ, ಗುಜರಾತ್ ಐಎಎಸ್ ಸಿ ಗಾಂಧಿ ಮಂದಿರ ಹೆಸರಿನ ಖಾಸಗಿ ವಿಶ್ವವಿದ್ಯಾಲಯಗಳಿಂದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಪಡೆದು ಸಲ್ಲಿಸಿದ್ದಾರೆ ಎನ್ನುವ ಆರೋಪಗಳು ಇವೆ. ಸದ್ಯ ಮೂರ್ತಿ, ಉದಯ್ ಸೇರಿದಂತೆ ಐದು ಮಂದಿ ಅಧಿಕಾರಿಗಳ ಮೇಲೆ ಈ ಆರೋಪ ಕೇಳಿ ಬಂದಿದ್ದು, ಇದರ ವಿರುದ್ಧ ಆನಂದ್ ಎನ್ನುವ ಸಾಮಾಜಿಕ ಹೋರಾಟಗಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂಥ ಅಧಿಕಾರಿಗಳು ಈಗಲೂ ಆಹಾರ ಸುರಕ್ಷತಾ ಅಧಿಕಾರಿಗಳಾಗಿದ್ದು ಇವರಿಂದ ಎಷ್ಟರ ಮಟ್ಟಿಗೆ ಆಹಾರ ಸುರಕ್ಷತಾ ಪ್ರಮಾಣ ನಡೆಯುತ್ತಿದೆ ಎನ್ನುವ ಬಗ್ಗೆ ಶಂಕೆ ಇದೆ.
ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ 13 ವರ್ಷಗಳಿಂದ ಝಾಂಡಾ ಹೂಡಿರುವ ಕಿರಿಯ ಅಧಿಕಾರಿಗಳ ಪ್ರಭಾವವೇ
ಹೆಚ್ಚಾಗಿದ್ದು, ಇವರ ಮುಂದೆ ನೈಜ ವೈದ್ಯರು ಹಾಗೂ ಆಹಾರ ತಜ್ಞರು ಅಶಕ್ತರಾಗಿದ್ದಾರೆ. ಇವರಲ್ಲಿ ಕಿರಿಯ
ಸಿಬ್ಬಂದಿಗಳು ತಜ್ಞರು ಮತ್ತು ವೈದ್ಯರನ್ನೇ ವಾಪಸ್ ಇಲಾಖೆಗೆ ಕಳುಹಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ, ಇಲಾಖೆಯಲ್ಲಿ ಹೆಚ್ಚಾಗಿದ್ದ ಅಕ್ರಮಗಳನ್ನು ತಡೆಯಲು ಶತ ಪ್ರಯತ್ನ ನಡೆಸುತ್ತಿರುವ ಪ್ರಾಧಿಕಾರದ
ಆಯುಕ್ತರಾದ ಶ್ರೀನಿವಾಸ್ ಅವರು, ಆಹಾರ ಪದಾರ್ಥಗಳಲ್ಲಿ ವಿಷಕಾರಿ ಬಣ್ಣ ಬಳಸುತ್ತಿದ್ದ ಅಂಶ ಪತ್ತೆ ಹಚ್ಚಿ ಅದನ್ನು ಸರಕಾರ ನಿಷೇಧ ಮಾಡಿಸುವ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲು ಶ್ರಮಿಸುತ್ತಾ, ಈಗ ಸಂಸ್ಥೆಯ ಸಮಗ್ರ ಸುಧಾಕರಣೆಗೆ ಕೈ ಹಾಕಿದ್ದಾರೆ. ಆದರೆ ಇದಕ್ಕೆ ಸರಕಾರದಿಂದ ನಿರೀಕ್ಷಿತ ಬೆಂಬಲ ಸಿಕ್ಕಿದಂತೆ ಕಾಣುತ್ತಿಲ್ಲ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯಲ್ಲೇ ಸುರಕ್ಷತೆ ಕಾಣುತ್ತಿಲ್ಲ ಏಕೆ?
ಸಾರ್ವಜನಿಕರ ಆರೋಗ್ಯಕ್ಕಾಗಿ ಆಸ್ಪತ್ರೆಗಳ ಮೂಲಕ ಕಾಯಿಲೆಗಳನ್ನು ಗುಣಪಡಿಸುವ ಆರೋಗ್ಯ ಇಲಾಖೆ, ಕಾಯಿಲೆಗಳ ಬರದಂತೆ ಜಾಗ್ರತೆ ವಹಿಸಿ ತಡೆಯಲು 17 ವರ್ಷಗಳ ಹಿಂದೆಯೇ ಆಹಾರ ಸುರಕ್ಷತಾ ಪ್ರಾಧಿಕಾರ
ರಚಿಸಿತ್ತು, ವಿಚಿತ್ರವೆಂದರೆ ಪ್ರಾಧಿಕಾರ ಆರಂಭವಾದಾಗಿನಿಂದ ಈತನ ಒಬ್ಬ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಹೀಗಾಗಿ ಪ್ರಾಧಿಕಾರದಲ್ಲಿ ಇರುವ ಒಟ್ಟಾರೆ 250 ಸಿಬ್ಬಂದಿಯೂ ಆರೋಗ್ಯ ಇಲಾಖೆಯಿಂದ ಎರವಲು ಸೇವೆಯ ಮೇಲೆ ಬಂದವರಾಗಿದ್ದಾರೆ.
ಕೆಸಿಎಸ್ ಆರ್ ನಿಯಮದ ಪ್ರಕಾರ ಎರವಲು ಸೇವೆ ಅವಧಿ 5 ವರ್ಷಗಳು ಮಾತ್ರ, ಆದರೆ ಈ ಅಧಿಕಾರಿಗಳು 14 ವರ್ಷಗಳಿಂದಲೂ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ಇವರ ಪೈಕಿ ಸುಮಾರು 30ಕ್ಕೂ ಹೆಚ್ಚು ಆಹಾರ ಸುರಕ್ಷತಾ
ಅಧಿಕಾರಿಗಳು ಆರಂಭದಿಂದಲೂ ಬೆಂಗಳೂರಿನಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲೇ
ತಳವೂರಿರುವ ಅಧಿಕಾರಿಗಳನ್ನು ತಮ್ಮ ಕಟ್ಟುನಿಟ್ಟಿನ ನೀತಿ, ನಿಯಮಗಳ ಮೂಲಕ ಎಬ್ಬಿಸುತ್ತಿರುವ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರಿಗೆ ಆಹಾರ ಸುರಕ್ಷತೆ ಪ್ರಾಧಿಕಾರದ ಕೆಲವು ಪ್ರಭಾವಿ ಕಿರಿಯ ಅಧಿಕಾರಿ ಗಳು ದೊಡ್ಡ ಸವಾಲಾಗಿದ್ದಾರೆ. ಹೀಗಾಗಿ ಇವರನ್ನು ಸರಕಾರ ಕೂಡ ಸುಲಭವಾಗಿ ಬೆಂಗಳೂರಿನಲ್ಲಿ ಹೊರಗೆ
ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳೇ ಹೆಳುತ್ತಿದ್ದಾರೆ.
ಇಲ್ಲಿ ಗಣಿತ ಕಲಿತರೂ ವೈದ್ಯರೇ
ನಿಯಮದ ಪ್ರಕಾರ, ಜಿಲ್ಲಾ ಮಟ್ಟದಲ್ಲಿರುವ ಆಹಾರ ಸುರಕ್ಷತಾ ಅಧಿಕಾರಿಗಳಾಗಿ ಆಹಾರ ತಂತ್ರಜ್ಞಾನ, ಕೃಷಿ, ರಸಾಯನ ಶಾಸ್ತ್ರ, ಔಷಧ ಶಾಸ್ತ್ರ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದ ಬಿ ಶ್ರೇಣಿಯ ಹುದ್ದೆಯವರು ಇರಬೇಕು. ಆದರೆ ಇಲ್ಲಿ ಗಣಿತಶಾಸ್ತ್ರ ಹಾಗೂ ಇತರ ಪದವಿಗಳನ್ನು ಪಡೆದ ಸಿ ಕಿರಿಯ ಶ್ರೇಣಿಯ ಸಿಬ್ಬಂದಿಗಳೇ ಜಿಲ್ಲಾ ಹುದ್ದೆಗಳಲ್ಲಿ ಕಾರುಬಾರು ನಡೆಸುತ್ತಿದ್ದಾರೆ, ಜತೆಗೆ ಪ್ರಾಧಿಕಾರದಲ್ಲೇ ತಮ್ಮ ಸೇವೆ ಯನ್ನು ವೀಲೀನ ಮಾಡಿ ಎಂದು ಯತ್ನಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಗಳಲ್ಲಿ ಆಹಾರ ಸುರಕ್ಷತೆಗಾಗಿ ಹೊಸದಾಗಿ ಬಂದಿರುವ ೨೫ಕ್ಕೂ ಹೆಚ್ಚು ತಜ್ಞರು ಹಾಗೂ ವೈದ್ಯರನ್ನು ವಾಪಸ್ ಕಳುಹಿಸಬೇಕು. ಅವರು ಬಂದರೆ ತಮ್ಮ ಹುದ್ದೆಗಳಿಗೆ ಕುತ್ತು ಬರುತ್ತದೆ ಎಂದು ಅಸಹಕಾರ ಹೋರಾಟ ನಡೆಸುತ್ತಿದೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?