ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರಿಗೆ ಅಗ್ನಿ ಪರೀಕ್ಷೆ
ರಾಜ್ಯದಲ್ಲಿ ಬಹು ನಿರೀಕ್ಷಿತ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ಉಪಸಮರ ಅಭ್ಯರ್ಥಿಗಳಿಗೆ ಮಾತ್ರವಲ್ಲ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಾಯಕರಿಗೂ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖ್ಯಸ್ಥರಿಗೆ ಈ ಚುನಾವಣೆಯು ಪ್ರತಿಷ್ಠೆಯ ಜತೆಗೆ ಬಲಪ್ರದರ್ಶನ ಕ್ಕೂ ವೇದಿಕೆಯಾಗಲಿದೆ.
ನವೆಂಬರ್ ೧೩ರಂದು ನಡೆಯುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪ ಚುನಾವಣೆಯಲ್ಲಿ ಗೆಲ್ಲುವ ಪಕ್ಷಕ್ಕೆ ಹೆಚ್ಚುವರಿ ಶಾಸಕ ಸ್ಥಾನ ಲಭಿಸಿದಂತಾಗುತ್ತದೆ.
ಆದರೆ ಸೋತರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರು ಪಕ್ಷಗಳ ಪ್ರಮುಖ ನಾಯಕರ ರಾಜಕೀಯ ದಿಕ್ಕು ದೆಶೆ ಬದಲಾಗುವ ನಿರೀಕ್ಷೆ ಇದೆ. ಅಂದರೆ ಕಳೆದ ಮೂರು ತಿಂಗಳಿನಿಂದ ಮುಡಾ ಅಕ್ರಮಗಳ ಆರೋಪದಿಂದ ಬೇಸತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಉಪ ಚುನಾವಣೆ ಒಂದು ರಾಜಕೀಯ ಟಾನಿಕ್ ಆಗುವ
ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ರೀತಿ ಇದು ಬಿಜೆಪಿ ರಾಜ್ಯಾಧ್ಕ್ಷಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ಇದು ಅಳಿವು, ಉಳಿವಿನ ಪರೀಕ್ಷೆಯಾಗಲಿದೆ.
ಇನ್ನು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಉಪ ಸಮರ ಬರೀ ಪ್ರತಿಷ್ಠೆ ಮಾತ್ರ ವಲ್ಲ. ಪಕ್ಷದ ಅಳಿವು, ಉಳಿವಿನ ಅಗ್ನಿಪರೀಕ್ಷೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಈ ಚುನಾವಣೆ ಮುಂದಿನ ಮುಖ್ಯಮಂತ್ರಿ ಆಗುವ ಅವಕಾಶವನ್ನು ನಿರ್ಧರಿಸುವ ಚುನಾವಣೆಯಾಗಲಿದೆ. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಆಗಲಿ, ಸಹೋದರ ಸುರೇಶ್ ಆಗಲಿ ನಿಂತರೆ ಸಿಗುವುದು ಒಂದು ಶಾಸಕ ಸ್ಥಾನ ಮಾತ್ರ. ಆದರೆ ಸೋತರೆ, ಡಿ. ಕೆ.ಶಿವಕುಮಾರ್ ಅವರ ಭವಿ ಷ್ಯದ ಮುಖ್ಯಮಂತ್ರಿ ಬೇಡಿಕೆ, ಹಿರಿತನಕ್ಕೆ ಅವಕಾಶ ಕೊಡಬೇಕೆನ್ನುವ ಪಟ್ಟು ಹಾಗೂ ಸಹಜ ಅವಕಾಶಗಳು ದೂರು ಸರಿಯುವ ಭೀತಿ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನ ನಾಯಕರೊಬ್ಬರು ಹೇಳಿದ್ದಾರೆ.
ಹೀಗಾಗಿ ಮೂರು ಪಕ್ಷಗಳಿಗೂ ಈ ಸಮರ ಬರೀ ರಾಜಕೀಯ ಪ್ರತಿಷ್ಠೆಯಾಗಿ ಉಳಿಯದೆ ಅವರ ನಾಯಕತ್ವ ಮತ್ತು ಅವರ ಪಕ್ಷಗಳ ಮುಂದಿನ ಭವಿಷ್ಯಗಳನ್ನು ನಿರ್ಧರಿಸುವ ಮಟ್ಟಕ್ಕೂ ಹೋಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ
ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ.
*
ಈ ಚುನಾವಣೆಯಲ್ಲಿ ಜೆಡಿಎಸ್ ಸಂಡೂರು ಮತ್ತು ಶಿಗ್ಗಾವಿಯಲ್ಲಿ ಬಿಜೆಪಿಗೆ ಬೆಂಬಲ ನೀಡಿದರೂ ಚನ್ನಪಟ್ಟಣ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. ಅದರಲ್ಲೂ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ನಿಚ್ಚಳ. ಇಲ್ಲಿ ನಿಖಿಲ್ ಅವರು ಈ ಚುನಾವಣೆಯಲ್ಲಿ ಗೆಲ್ಲಲೇಬೇಕಿದೆ. ಇಲ್ಲವಾದರೆ, ಸತತ ಮೂರು ಬಾರಿ ಸೋತಂತಾಗಿ, ಮುಂದಿನ ರಾಜಕೀಯ ಭವಿಷ್ಯ ಮಂಕಾಗುವ ಆತಂಕವಿದೆ. ಇದು ಪಕ್ಷದ ಉಳಿವಿನ ಪ್ರಶ್ನೆಯೂ ಆಗಿದೆ. ಚನ್ನಪಟ್ಟಣದಲ್ಲಿ ಬಿಜೆಪಿ ಬೆಂಬಲ ಇದ್ದರೂ ಜೆಡಿಎಸ್ ಸೋಲನು ಭವಿಸಿದರೆ, ಕುಮಾರಸ್ವಾಮಿ ಅವರಿಗೆ ಸದ್ಯ ಬಿಜೆಪಿ ಒಳಗೆ ಇರುವ ನಿಯಂತ್ರಣ ಮತ್ತು ಮೌಲ್ಯ ಕುಸಿಯಬಹುದು. ಇದರಿಂದ ಒಕ್ಕಲಿಗರ ಪ್ರಾಬಲ್ಯದ ತನ್ನಕ್ಷೇತ್ರಗಳು ಕಾಂಗ್ರೆಸ್ ಅಥವಾ ಪರೋಕ್ಷವಾಗಿ ಬಿಜೆಪಿ ನಿಯಂತ್ರಣಕ್ಕೆ ಸಿಲುಕಿ ರಾಜಕೀಯ ನಷ್ಟಕ್ಕೆ ಜೆಡಿಎಸ್ ತುತ್ತಾಗಬಹುದು ಎನ್ನುವುದು ಜೆಡಿಎಸ್ ನಾಯಕರ ಆತಂಕದ ಮಾತು.
*
ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದರೆ ಸದ್ಯ ಎದ್ದಿರುವ ವಿವಾದಗಳು, ಸಮಸ್ಯೆಗಳು ಕೊಂಚ ನಿಯಂತ್ರಣಕ್ಕೆ ಬರುವ ಸಾಧ್ಯತೆ ನಿರೀಕ್ಷಿಸಬಹುದು. ಆಗ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಇನ್ನಷ್ಟು ಬಲಶಾಲಿಯಾಗಲಿದ್ದು, ಮುಖ್ಯಮಂತ್ರಿ ಆಕಾಂಕ್ಷಿಗಳ ಆಲಾಪ ಸದ್ದಡಗಲಿದೆ. ಪರ್ಯಾಯ ನಾಯಕತ್ವದ ಕೂಗು ಮೂಲೆ ಸೇರುವ ಸಾಧ್ಯತೆ ಇದೆ. ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಈಗಿನ ಎಲ್ಲಾ ಸಮಸ್ಯೆಗಳು ಒಟ್ಟಿಗೇ ಮೈಮೇಲೆ(ಕೈಯಲ್ಲಿರುವ
ಹಗ್ಗವೇ ಹಾವಿನಂತಾಗಿ) ಬಂದರೂ ಅಚ್ಚರಿ ಇಲ್ಲ ಎಂದು ಪಕ್ಷದೊಳಗೆ ಚರ್ಚೆಯಾಗುತ್ತಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಆಕಾಂಕ್ಷಿಗಳು ಹಾಗೂ ಅವರ ಬೀದಿ ಹೇಳಿಕೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಅದೇರೀತಿ ಬಿಜೆಪಿ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಕಳೆದ ಲೋಕಸಭೆಯಲ್ಲಿ ನಿರೀಕ್ಷಿತ ಫಲಿತಾಂಶ ನೀಡಲಾಗದೆ ಹೈಕಮಾಂಡ್ ಮುಂದೆ ತಲೆ ತಗ್ಗಿಸಿದ್ದ ರಾಜ್ಯ ನಾಯಕರು, ಅದರಲ್ಲೂ ರಾಜ್ಯಾಧ್ಯಕ್ಷ ವಿಜಯೇಂದ್ರ, ಈ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯದಲ್ಲಿದ್ದಾರೆ.
ಪಕ್ಷದೊಳಗೆ ಎದ್ದಿರುವ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಸದ್ದಡಗಬೇಕಾದರೆ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲೇಬೇಕಿದೆ. ಇಲ್ಲವಾದರೆ ಬಿಜೆಪಿ ನಾಯಕರಾದ ಬಸನ ಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿ
ಹೊಳಿ ಬಣ ಹೊಸ ನಾಯಕತ್ವದ ಭಜನೆ ಯನ್ನು ಇನ್ನಷ್ಟು ತೀವ್ರಗೊಳಿಸಿ ಇದಕ್ಕೆ ಹೈಕಮಾಂಡ್ ಕೂಡ ತಲೆದೂಗಬಹುದು ಎನ್ನಲಾಗಿದೆ. ಹೀಗಾಗಿ ಅವರಿಗೆ ಈ ಉಪ ಸಮರ ಅಗ್ನಿಪರೀಕ್ಷೆಯಂತೆ ಎದುರಾಗಿದೆ.
ಇದನ್ನೂ ಓದಿ: Election Commission: ವಯನಾಡ್ ಬೈ ಎಲೆಕ್ಷನ್ ಡೇಟ್ ಅನೌನ್ಸ್; ನ.13ಕ್ಕೆ ಮತದಾನ, ನ.23ಕ್ಕೆ ರಿಸಲ್ಟ್