ಸುವರ್ಣಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ
ಪಂಚಮಸಾಲಿ ಸೇರಿದಂತೆ ೫೫ ಸಂಘಟನೆಗಳಿಂದ ಪ್ರತಿಭಟನೆಗೆ ನೋಂದಣಿ
ವಿನಾಯಕ ಮಠಪತಿ, ಬೆಳಗಾವಿ
ಡಿಸೆಂಬರ್ 9 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವಾರು ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಈಗಾಗಲೇ 5 ಕ್ಕೂ5 ಅಧಿಕ ಸಂಘಟನೆಗಳು ಪ್ರತಿಭಟನೆಗೆ ನೋಂದಾಯಿಸಿಕೊಂಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಸಹಸ್ರಾರು ಹೋರಾಟಗಾರರು: ಬೆಳಗಾವಿ ಅಧಿವೇಶನ ಎಂದರೆ ಸದಾಕಾಲವೂ ಪ್ರತಿಭಟನೆಗಳಿಂದ ತುಂಬಿ ತುಳುಕುತ್ತದೆ ಎಂಬ ಮಾತಿದೆ. ರಾಜ್ಯದ ನಾನಾ ಭಾಗಗಳಿಂದ ಜನ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಸರಕಾರದ
ಗಮನಸೆಳೆಯಲು ಬೆಳಗಾವಿಗೆ ಆಗಮಿಸುತ್ತಾರೆ. ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಸರಕಾರಕ್ಕೆ ಎಚ್ಚರಿಕೆ ನೀಡಲು ಬೆಳಗಾವಿಗೆ ಬರಲಿದ್ದಾರೆ.
ಪ್ರತಿಭಟನೆ ಕಾವು ತಗ್ಗಿಸಲು ಸರಕಾರದ ಕ್ರಮ: ಕಳೆದ ಒಂದು ವರ್ಷದಿಂದ ಪ್ರತಿಭಟನೆಗಳ ಕಾವು ಕಡಿಮೆ
ಮಾಡಲು ಸರಕಾರ ಮುಂದಾಗಿದೆ. ಅಧಿವೇಶನಕ್ಕೆ ಮೊದಲೇ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಲಾಗುತ್ತಿದೆ. ಇದರಿಂದ ಪ್ರತಿಭಟನಾಕಾರರ ಸಮಯದ ಜೊತೆಗೆ ಭದ್ರತೆ ದೃಷ್ಟಿಯಿಂದಲೂ ಬಹು ಉಪಯೋಗವಾಗಿದೆ.
ದಿನಕ್ಕೆ ೧೫ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಹಾಗೂ ಶಾಸಕರು ಕಲಾಪಗಳಿಗೆ ಗೈರು ಹಾಜರಾಗಿ ಪ್ರತಿಭಟನಾನಿರತರ ಭೇಟಿಗೆ ಬರಬೇಕಾದ ಅನಿವಾರ್ಯತೆ ಇತ್ತು. ಆದರೆ ಕಳೆದ ವರ್ಷದಿಂದ ಸರಕಾರ ಪ್ರತಿಭಟನೆಗಳ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆ ತಂದಿದೆ.
ಬೆಳಗಾವಿ ಸೇರಿದಂತೆ ದಾವಣಗೆರೆ, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆ ಗಳಿಂದ ಟ್ರ್ಯಾಕ್ಟರ್ ಮೂಲಕ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲು ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳು ಕರೆ ನೀಡಿದ್ದಾರೆ. ಆದರೆ ಅಧಿವೇಶನ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಳವಳಿ ನಡೆದರೆ
ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಪಂಚಮಸಾಲಿ ಹೋರಾಟಕ್ಕೆ ಮುಂಚಿತವಾಗಿ
ಸರಕಾರ ಮೀಸಲಾತಿ ವಿಚಾರವಾಗಿ ಕ್ರಮ ಕೈಗೊಳ್ಳುತ್ತದೆಯಾ ಎಂಬುದನ್ನು ಕಾದು ನೋಡಬೇಕು.
ಗಡಿಯಲ್ಲಿ ಎಂಇಎಸ್ ಪುಂಡಾಟ: ಚಳಿಗಾಲ ಅಧಿವೇಶನ ಸಂದರ್ಭದಲ್ಲಿ “ಮಹಾಮೇಳಾವ್” ಹೆಸರಿನಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡಾಟ ಮೆರೆಯಲು ಮತ್ತೊಮ್ಮೆ ಸಿದ್ಧತೆ ನಡೆಸಿದೆ. ಕಳೆದ ವರ್ಷದಿಂದ ಮಹಾಮೇಳಾವ್ ಗೆ ಬೆಳಗಾವಿ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಈ ಬಾರಿಯೂ ಮೇಳಾವ್ಗೆ ಅನುಮತಿ ನಿರಾಕರಿಸಲಾಗಿದೆ. ನಾವು ಮಹಾಮೇಳಾವ್ ಮಾಡುತ್ತೇವೆ ಎಂದು ಎಂಇಎಸ್ ಸವಾಲು ಎಸೆದಿದೆ.
ಒಂದು ವೇಳೆ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಅವಕಾಶ ನೀಡದಿದ್ದರೆ ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕರ್ನಾಟಕದಿಂದ ಬರುವ ವಾಹನಗಳನ್ನು ಮಹಾರಾಷ್ಟ್ರ ಪ್ರವೇಶಿಸದಂತೆ ತಡೆಯುತ್ತೇವೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧಿಕಾರಿ ಸಂಜಯ್ ಶಿಂಧೆ ಅವರಿಗೆ ಮನವಿ
ಸಲ್ಲಿಸಿದೆ. ಇನ್ನು ರಾಜ್ಯದ ಪೊಲೀಸರ ಮಹಾರಾಷ್ಟ್ರ ಗಡಿಯಿಂದ ರಾಜ್ಯಕ್ಕೆ ಪ್ರತಿಭಟನಾಕಾರರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಕರ್ನಾಟಕ ಮದ್ಯಪಾನಪ್ರಿಯರ ಹೋರಾಟ ಸಂಘದ ವತಿಯಿಂದ ಈ ಬಾರಿಯೂ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತಯಾರಿ ನಡೆದಿದೆ. ತಮ್ಮ ವಿಶಿಷ್ಟ ಬೇಡಿಕೆಗಳ ಮೂಲಕ ಗಮನ ಸೆಳೆಯುವ ಹೋರಾಟಗಾರರು ಈ ಬಾರಿಯೂ ಸರ್ಕಾರಕ್ಕೆ ತಮ್ಮ ಸಮಸ್ಯೆ ಹೇಳಿಕೊಳ್ಳಲಿದ್ದಾರೆ. ಈಗಾಗಲೇ ಸಂಘಟನೆ ಪ್ರಮುಖರು ಪ್ರತಿಭಟನೆಗೆ ಅವಕಾಶ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ರಾಜ್ಯದ ವಿವಿಧ
ಭಾಗಗಳಿಂದ ಮದ್ಯಪಾನ ಪ್ರಿಯರು ಭಾಗವಹಿಸಲಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿಗೆ ಮುಂದಾದ ಪಂಚಮಸಾಲಿಗಳು
ಕಳೆದ ಮೂರು ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ ೨ ಎ ಮೀಸಲಾತಿ ಬೇಡಿಕೆ ವಿಚಾರವಾಗಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಬಾರಿಯೂ ಟ್ರ್ಯಾಕ್ಟರ್ ಚಳಿವಳಿ ಮೂಲಕ ಉಗ್ರ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಕರೆ ನೀಡಿದ್ದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ೫೫ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ಕೇಳಿ ಮನವಿ ಸಲ್ಲಿಸಿದ್ದು ಜಿಲ್ಲಾಧಿಕಾರಿ ಸೇರಿದಂತೆ
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ. ಈಗಾಗಲೇ
ಪ್ರತಿಭಟನೆಗೆ ಸ್ಥಳ ನಿಯೋಜನೆ ಮಾಡಲಾಗಿದ್ದು ಸೂಕ್ತ ಭದ್ರತೆ ಒದಗಿಸಲಾಗುತ್ತದೆ.
ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಬೆಳಗಾವಿ ನಗರ ಪೊಲೀಸ್ ಆಯುಕ್ತ
ಇದನ್ನೂ ಓದಿ: Belgaum Palike