ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಅನಿರುದ್ಧನಿಗೆ ಅಪ್ಪನ ಆಶೀರ್ವಾದಗಳು. ಕ್ಷೇಮವಾಗಿರುವೆಯಾ? 6 ತಿಂಗಳ ಹಿಂದೆ ನೀನು ಹಳ್ಳಿಗೆ ಬಂದಿದ್ದಾಗ ಎರಡು ದಿನ ಇದ್ದಂತೆ ಮಾಡಿ ‘ಪುಸಕ್ಕನೆ’ ಹೊರಟುಬಿಟ್ಟೆ. “ನಿನ್ನ ಹಾಗೂ ನಿನ್ನ ಕುಟುಂಬದ ಕ್ಷೇಮ ಸಮಾಚಾರದ ಕುರಿತಾಗಿ ಬಿಡುವು ಮಾಡಿಕೊಂಡು ಪತ್ರ ಬರೆಯಪ್ಪಾ” ಎಂದು ನಾನು ತಿಳಿಸಿದ್ದೆ. ಅದಕ್ಕೆ ನೀನು, “ಅಮೆರಿಕ ಅಂದ್ರೆ ಏನಂದುಕೊಂಡ್ಯಪ್ಪಾ? ಒಂದ್ಸಲ ದುಡಿಮೆಗೆ ಇಳಿದರೆ ಮುಗೀತ್, ಕೆರ್ಕೊಳ್ಳೊಕ್ಕೂ ಪುರುಸೊತ್ತು ಇರಲ್ಲ. ಅಷ್ಟಕ್ಕೂ, ಪ್ರತಿ ವಾರವೂ ಕ್ಷೇಮ ಸಮಾಚಾರದ ಪತ್ರ ಬರ್ಕೊಂಡು ಕೂರಕ್ಕಾಗುತ್ತಾ? ‘ನಾನಿಲ್ಲಿ ಚೆನ್ನಾಗಿದ್ದೀನಿ’ ಅಂತ ವಾಟ್ಸಾಪ್ ಮಾಡ್ತೀನಲ್ಲಾ?” ಅಂತ ಹೇಳಿ ನನ್ನ ಬಾಯಿ ಮುಚ್ಚಿಸಿಬಿಟ್ಟೆ. ನೀನು ಕಳಿಸೋ ವಾಟ್ಸಾಪು ನನ್ನ ಕಣ್ಣಿಗೇ ಗಿಟ್ಟಲ್ಲ, ಇನ್ನು ಬಾಯಿ-ಕಿವಿ-ಹೃದಯಕ್ಕೆ ಸಿಗುತ್ಯೇ? ನಾವು ಮುದುಕರು ಕಣಪ್ಪಾ, ಕಣ್ಣ ಮುಂದೆ ಬೆಳೆದ ಮಕ್ಕಳನ್ನ ಕಣ್ಣ ಮುಂದೆ ಕೂರಿಸ್ಕೊಂಡು ಕ್ಷೇಮ ಸಮಾಚಾರ ವಿಚಾರಿಸಿದ್ರೇನೇ ನಮ್ಮ ಜೀವ ತಂಪಾಗೋದು. ಇಲ್ಲಾಂದ್ರೆ, ಮಕ್ಕಳು ಬರೆಯೋ ಕಡಲೇಬೇಳೆ ಗಾತ್ರದ ಅಕ್ಷರನಾದ್ರೂ ನೋಡಿ ಕಣ್ಣು ತಂಪು ಮಾಡ್ಕೋಬೇಕು ಅನ್ನಿಸುತ್ತೆ. ಅಮೆರಿಕಕ್ಕೆ ಮರಳಿ 6 ತಿಂಗಳ ನಂತರವೂ ನಿನ್ನಿಂದ ಪತ್ರವಿಲ್ಲ. ಹಾಗಂತ ನಾನೂ, ‘ಮಗಾ, ಹೇಗಿದ್ದೀಯ?’ ಅಂತ ನಿನ್ನನ್ನ ವಾಟ್ಸಾಪ್ನಲ್ಲಿ ಕೇಳಿ ಕೈತೊಳಕೊಳ್ಳೋಕೆ ಮನಸ್ಸು ಬರಲಿಲ್ಲ. ಹೀಗಾಗಿ ಈ ಪತ್ರ ಬರೆದೆ. ಇದನ್ನ ಓದಲು ನಿನ್ನ ಟೈಮ್ ವೇಸ್ಟ್ ಮಾಡಿಸಿದ್ದಕ್ಕೆ ಬೇಸರ ಮಾಡ್ಕೋಬೇಡ ಕಂದಾ…

ನೀನು ಚಿಕ್ಕವನಾಗಿದ್ದಾಗ್ಲೂ ಪೆನ್ನು-ಪೆನ್ಸಿಲ್ಲು, ಅಂಗಿ- ಚಡ್ಡಿ ತಗೋಬೇಕು ಅಂದ್ರೂ ಮತ್ತೊಬ್ಬರು ತಂದಿದ್ದನ್ನ
ನೀನು ಒಪ್ತಾನೇ ಇರಲಿಲ್ಲ, ನನ್ನ ಜತೆ ಅಂಗಡಿಗೆ ಬಂದು ನಿನಗೆ ಬೇಕಾದ್ದನ್ನ ಆರಿಸಿ ತಗೋತಿದ್ದೆ. ‘ಮಕ್ಕಳು ಅಲ್ವೇ… ಏನೋ ಆಸೆಪಡ್ತವೆ’ ಅಂದ್ಕೊಂಡು ನಾನೂ ಸುಮ್ಮನಿರ್ತಿದ್ದೆ. ಆದರೆ, ಹಳ್ಳಿಯಲ್ಲಿ ಉಪನಯನ ಮಾಡ್ಕೊಂಡು ‘ಮೂರು ಎಳೆ’ ಜನಿವಾರ ಹಾಕ್ಕೊಂಡು ಅಮೆರಿಕಕ್ಕೆ ಹೋದೋನು, ಅಲ್ಲೇ ಯಾವುದೋ ಹುಡುಗೀನ ಇಷ್ಟಪಟ್ಟು ನಿನ್ನ ಜನಿವಾರವನ್ನ ‘ಆರು ಎಳೆ’ ಮಾಡ್ಕೊಳ್ಳೋಕ್ಕೆ ಮುಂದಾದೆ. ನಂಗೂ, ನಿಮ್ಮಮ್ಮಂಗೂ ಬೇಜಾ ರಾದ್ರೂ, ‘ಬೇಕಾದ್ದನ್ನು ಆರಿಸಿಕೊಳ್ಳೋದು ಅವನ ಸ್ವಭಾವ ಅಲ್ವಾ’ ಅಂದ್ಕೊಂಡು ಸಮಾಧಾನ ಮಾಡ್ಕೊಂಡ್ವಿ. ಅವಳ್ಯಾರೇ ಆಗಿದ್ರೂ ನಮ್ ಮನೆ ಸೇರೋ ಹುಡುಗಿ ತಾನೇ ಅಂದ್ಕೊಂಡು ಮನೆಯ ಬಾಗಿಲಲ್ಲೇ ಮದುವೆ ಚಪ್ಪರ ಹಾಕೋಕ್ಕೆ ಸಜ್ಜು ಮಾಡ್ಕೊಂಡಿದ್ವಿ. ನಿಮ್ಮಮ್ಮನ ಸಂಭ್ರಮವಂತೂ ಹೇಳತೀರದು. ಕಾರಣ, ನೀನು ಹುಟ್ಟಿದ ನಂತರ ಅವಳ ಗರ್ಭ ಕೋಶದಲ್ಲಿ ಸಮಸ್ಯೆಯಾಗಿದ್ರಿಂದ ಅದನ್ನ ತೆಗೆಸಬೇಕಾಗಿ ಬಂತು. ಹೀಗಾಗಿ ಇರೋ ಒಬ್ಬ ಮಗನ ಮೇಲೆ ಅವಳಿಗೆ ಎಲ್ಲಿಲ್ಲದ ಅಕ್ಕರೆ. ವಠಾರದ ಕಾಂತಮ್ಮ-ಸೀತಮ್ಮ-ವೆಂಕಮ್ಮನೋರ ಹತ್ರ, “ನೋಡ್ರೀ ನಮ್ ಅನಿರುದ್ಧ ಎಂಥ ಕಿಲಾಡಿ?! ಅಮೆರಿಕದಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದೂ ಅಲ್ಲದೆ, ಅಲ್ಲೇ ಒಬ್ಬ ಹುಡುಗೀನೂ ದಕ್ಕಿಸಿಕೊಂಡು ಬಿಟ್ನಂತೆ…” ಅಂತ ಹೇಳ್ಕೊಂಡು ಮಗನ ಮದುವೆ ಮಾಡೋಕ್ಕೆ ಸಡಗರ ಪಟ್ಟಿದ್ದೇ ಪಟ್ಟಿದ್ದು! ಆದರೆ ಮರುದಿನ ನೀನು ಫೋನಲ್ಲಿ, “ನಾನು ಅಮೆರಿಕದಲ್ಲೇ ಮದುವೆ ಮಾಡ್ಕೋತಾ ಇದ್ದೀನಪ್ಪಾ” ಎಂದು ಬಿಟ್ಟೆ. ಕೊಂಚ ಬೇಸರ ವಾದ್ರೂ ನಾನು, “ನಿನ್ನಿಷ್ಟ ಕಣಪ್ಪಾ. ಮದುವೆ ಯಾವತ್ತು ಅಂತ ತಿಳಿಸಿ ಟಿಕೆಟ್ ಕಳಿಸು, ನಾನೂ ನಿಮ್ಮಮ್ಮನೂ ಅಲ್ಲಿಗೇ ಬಂದು ಅಕ್ಷತೆ ಹಾಕಿ ವಾಪಸ್ ಬರ್ತೀವಿ” ಅಂದೆ. ಅದಕ್ಕೆ ನೀನು, “ಅಯ್ಯೋ ಅಪ್ಪಾ, ಅದೇನು ಸಿದ್ದಾಪುರ ದಿಂದ ಶಿರಸಿಗೆ ಬಸ್ಸಲ್ಲಿ ಬಂದಹಾಗೆ ಅಂದ್ಕೊಂಡು ಬಿಟ್ರಾ? ನಮ್ ಅಮೆರಿಕ ಇರೋದು ಸಾವಿರಾರು ಮೈಲು ದೂರದಲ್ಲಿ. ನೀವಿಬ್ರೂ ವಯಸ್ಸಾದೋರು, ಇಲ್ಲಿಗೆ ಸುಸ್ತು ಮಾಡ್ಕೊಂಡು ಬರೋದು ಬೇಡ. ಅಲ್ಲಿಂದಲೇ ಆಶೀರ್ವಾದ ಮಾಡಿ ದ್ರಾಯ್ತು. ಮದುವೆ ವಿಡಿಯೋವನ್ನ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡ್ತೀನಿ, ನೀವು ಅಲ್ಲಿದ್ದುಕೊಂಡೇ ಮದುವೆ ನೋಡಬಹುದು. ಮದುವೆಗೆ ನಮ್ ಆಫೀಸ್ ನೋರು, ಅಮೆರಿಕದ ಕನ್ನಡಿಗರು ಸೇರಿ 600 ಜನ ಬರ್ತಿದ್ದಾರೆ. ಸರಿ, ನಂಗೆ ತಡವಾಗ್ತಿದೆ ಅಪ್ಪಾ.
ಮದುವೆ ಅರೇಂಜ್ಮೆಂಟ್ ಮಾಡ್ಕೋಬೇಕು” ಅಂತ ಹೇಳಿ ಫೋನ್ ಇಟ್ಟುಬಿಟ್ಟೆ. ಹಿಂದಿನಿಂದ ಬಿಕ್ಕಳಿಸಿ ಅಳೋ ಸದ್ದು ಕೇಳಿಸ್ತು, ತಿರುಗಿ ನೋಡಿದ್ರೆ ನಿಮ್ಮಮ್ಮ…. ಬಾಯಿಗೆ ಸೆರಗನ್ನು ಅಡ್ಡವಿಟ್ಕೊಂಡು ಅಳ್ತಾ ಇದ್ಲು. ಈ ನಿನ್ನ ಮುದಿ ಅಪ್ಪನಿಗೆ ಕಿವಿ ಕೇಳಿಸೋಲ್ಲ ಅಂತ ನಿನ್ನ ಕರೆಯನ್ನು ಸ್ಪೀಕರ್ ಫೋನ್ಗೆ ಹಾಕಿದ್ರಿಂದ, ನಿಮ್ಮಮ್ಮ ಅಷ್ಟೂ ಮಾತನ್ನ ಕೇಳಿಸಿ ಕೊಂಡುಬಿಟ್ಟಳು ಕಂದಾ….
ಅಲ್ಲೀವರೆಗೆ ವಠಾರದ ತುಂಬೆಲ್ಲಾ ಓಡಾಡ್ಕೊಂಡು ಹಾಸ್ಯ ಚಟಾಕಿ ಹಾರಿಸ್ಕೊಂಡು ನಿನ್ನ ಬಗ್ಗೆ ಸಂಭ್ರಮಿಸಿದ್ದ ನಿಮ್ಮಮ್ಮ, ಫೋನ್ನಲ್ಲಿ ನೀನು ಹಾಗೆ ಹೇಳಿದ್ದೇ ಹೇಳಿದ್ದು, ಮನೆ ಯಿಂದ ಹೊರಗೇ ಕಾಲಿಟ್ಟಿಲ್ಲ. ಅವಳಾಯ್ತು, ಕಾಲಕಾಲಕ್ಕೆ ಪತಿಸೇವೆಯಾಯ್ತು, ಇಷ್ಟೇ! ವಠಾರದ ಹೆಂಗೆಳೆಯರ ಹತ್ರ ದಿನವೂ ಅದೂ ಇದೂ ‘ಮಾತು ಹೊಸೆಯುತ್ತಿದ್ದ’ ಅವಳಿಗೀಗ ದೇವರ ಗೂಡಿನ ಮುಂದೆ ‘ಹೂಬತ್ತಿ ಹೊಸೆಯೋದು’ ಬಿಟ್ರೆ ಬೇರೆ ಕೆಲಸವಿಲ್ಲ. ನಾನು ಎದುರಲ್ಲಿದ್ದಾಗ ಬಲವಂತಕ್ಕೆ ನಗ್ತಾಳೆ. ಮಿಕ್ಕಂತೆ ಅವಳು, ತಂತಿ ಕಡಿದು ಮೂಲೆ ಸೇರಿದ ಧೂಳುಹಿಡಿದ ತಂಬೂರಿ…
ಇಷ್ಟಾಗಿಯೂ, ‘ಊರಿಗೆ ಬರ್ತಾ ಇದ್ದೀನಿ’ ಅಂತ 6 ತಿಂಗಳ ಹಿಂದೆ ನೀನು ವಾಟ್ಸಾಪು ಮಾಡಿದಾಗ, “ಮಗ-ಸೊಸೆ ಬರ್ತಿದ್ದಾರೆ ಅಂದ್ರೆ ಏನೋ ಸಿಹಿಸುದ್ದೀನೇ ಇರಬೇಕು, ಮನೇಲಿ ಮತ್ತೊಮ್ಮೆ ಜೋಗುಳ ಹಾಡೋ ಕಾಲ ಬಂತು, ಸೊಸೆಯ ಬಾಣಂತನಕ್ಕೆ ಇನ್ನು ಸಜ್ಜಾಗಬೇಕು” ಅಂತ ನಿಮ್ಮಮ್ಮ ತನಗೆ ತಾನೇ ಹೇಳ್ಕೊಂಡು, ಮೊಗ್ಗಿನಜಡೆ ಹಾಕ್ಕೊಂಡಿರೋ 16ರ ಹುಡುಗಿಯಾಗಿ ಬಿಟ್ಟಳು. ಸಾಲದು ಅಂತ ಹಠಮಾಡಿ, ಧಾರವಾಡದ ಕಲಘಟಗಿಯ ಬಣ್ಣದ ತೊಟ್ಟಿಲನ್ನೂ ತರಿಸ್ಕೊಂಡ್ಳು! ಆದರೆ ನೀನೊಬ್ಬನೇ ಹಳ್ಳಿಗೆ ಬಂದಿದ್ದು ನೋಡಿ ಮತ್ತೊಮ್ಮೆ ಕುಸಿದುಹೋದಳು. “ಹಳ್ಳೀಲಿ ಅಷ್ಟೊಂದು Hygiene ಇರಲ್ಲ, ಮೇಂಟೇನ್ ಮಾಡೋದು ಕಷ್ಟ ಅಂತ ನಿಮ್ ಸೊಸೇನ ಕರ್ಕೊಂಡು ಬರಲಿಲ್ಲ. ಹೆರಿಗೆಗೂ ಅಲ್ಲೇ ಆಸ್ಪತ್ರೇಲಿ ಸೇರಿಸ್ತೀನಿ. ನಂತರ ದುಡ್ಡು ಬಿಸಾಕಿದ್ರೆ ಯಾರು ಬೇಕಾದ್ರೂ ಬಾಣಂತನ ಮಾಡಿ ಮಗುವಿನ ನಿಗಾ ನೋಡ್ತಾರೆ” ಅಂತ ಹೇಳಿ ನೀನು ಹಳ್ಳಿಯಿಂದ ಹೊರಟು ಬಿಟ್ಟೆ. ನಂತರ ನಿಮ್ಮಮ್ಮ ನನ್ನ ಮಡಿಲಲ್ಲಿ ಮಗು ಥರ ಮಲಕ್ಕೊಂಡು, “ಏನೂಂದ್ರೇ, ಹೀಗೆ ಹೇಳಿದ್ದು ನಮ್ಮ ಅನಿರುದ್ಧನೇನಾ? ತನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ-ತಾಯಿ ಇರೋ ಈ ಮನೆ, ತಾನು ಚಿಣ್ಣಿಕೋಲು- ಬುಗುರಿ ಆಡಿಕೊಂಡು ನಲಿದ ಈ ತೋಟದಮನೆ, ತನ್ನನ್ನು ಅಮೆರಿಕಕ್ಕೆ ಕಳಿಸಲು ಜೀವತೇಯ್ದ ಈ ಮನೆ ಅಷ್ಟೊಂದು ‘ಹೈಜೀನ್’ ಇಲ್ಲ ಅಂತಾನಲ್ರೀ” ಅಂತ ಬಿಕ್ಕಿದಳು….
ನಾನು ಈ ಪತ್ರ ಬರೆಯುವಾಗಲೂ ಅವಳು ಮನೇಲಿಲ್ಲ, ಇದ್ದಿದ್ರೆ ಇದನ್ನ ಬರೆಯೋಕ್ಕೂ ಅವಳು ಬಿಡ್ತಾ ಇದ್ಲೋ ಇಲ್ವೋ ಗೊತ್ತಿಲ್ಲ. “ನೀವು ಸುಮ್ನೇ ಮಗ ಮಗ ಅಂತ ಹೇಳ್ಕೊಂಡು ಒದ್ಗೋತೀರಿ, ಅಷ್ಟೇ” ಅಂತ ಹೇಳಿ ಪೆನ್ನು-ಪೇಪರ್ರು ಎರಡನ್ನೂ ಕಿತ್ತೆಸೆದುಬಿಡೋಳು ನಿಮ್ಮಮ್ಮ. ‘ಅಮ್ಮ ಮನೇಲಿಲ್ಲ ಅಂದ್ರೆ, ಎಲ್ಲಿಗೆ ಹೋದ್ರು?’ ಅಂತ ಕೇಳ್ತಾ ಇದ್ದೀಯಾ ಕಂದಾ… ನಮ್ಮ ಮನೆಯ ಕಸ-ಮುಸುರೆಗೆ ಬರೋ ಮುನಿಯಮ್ಮನ ಮನೇಲಿ ಇವತ್ತು ಫಂಕ್ಷನ್ನು. ನಿನ್ ಜತೆ ಓದ್ತಾ ಇದ್ದ ಅವಳ ಮಗ ಯಂಕ್ಟನಿಗೆ ಪಾಪು ಹುಟ್ಟಿದೆ. ನಿನ್ನ ಮಗೂಗೆ ಅಂತ ತರಿಸಿದ್ದ ಕಲಘಟಗಿಯ ಆ ಬಣ್ಣದ ತೊಟ್ಟಿಲನ್ನ ಮುನಿಯಮ್ಮನ ಮೊಮ್ಮಗುವಿನ ‘ತೊಟ್ಟಿಲು ಶಾಸ’ಕ್ಕೆ ಉಡುಗೊರೆಯಾಗಿ ಕೊಡೋಕ್ಕೆ ಹೋಗಿದ್ದಾಳೆ ನಿಮ್ಮಮ್ಮ. ಅವಳದ್ದು ಒಂಥರಾ ಮುದಿ ಸಂಭ್ರಮ…. ಸುಡುಗಾಡು ಸಂಭ್ರಮ!
ಮಗೂ ಅನಿರುದ್ಧಾ, ನಿನ್ನ ಮಹತ್ವಾಕಾಂಕ್ಷೆಗೆ ನಾನು ಅಡ್ಡಗಾಲು ಹಾಕ್ತಿದ್ದೀನಿ ಅಂದ್ಕೋಬೇಡ. ನನಗೆ ತಿಳಿದ ಮಟ್ಟಿಗೆ ಈಗಾಗಲೇ ಕೋಟಿಗಟ್ಟಲೆ ಸಂಪಾದಿಸಿದ್ದೀಯ. ನಮ್ಮಲ್ಲಿಗೇ ಬಂದುಬಿಡು ಕಂದಾ. ನಮ್ ಸಿದ್ದಾಪುರ ನಿಮ್ ಅಮೆರಿಕದಂತೆ ‘ಸ್ವರ್ಗಸದೃಶ’ ಆಗಿಲ್ಲದಿರಬಹುದು. ಆದರೆ ಇಲ್ಲಿ ಶಾಂತಿ-ನೆಮ್ಮದಿಗೆ ಕೊರತೆಯಿಲ್ಲ ಪುಟ್ಟಾ….
ದಿನಗಳೆದಂತೆ ನಂಗೆ, ನಿಮ್ಮಮ್ಮಂಗೆ ಹರೆಯ ಉಕ್ಕೋದಿಲ್ಲ. ನಿನ್ನ ತಾರುಣ್ಯದಲ್ಲಂತೂ ನೀನು ನಮ್ಮ ಜತೆಗಿರಲಿಲ್ಲ, ನಮ್ಮ ವೃದ್ಧಾಪ್ಯದಲ್ಲಾದ್ರೂ ನಿನ್ನ ಸಾಂಗತ್ಯ ಬೇಕು ಅನ್ನಿಸ್ತಿದೆ ಪುಟ್ಟೋನೇ… ‘ವೃದ್ಧಾಪ್ಯಕ್ಕೆ ಬಂದವರು ಮತ್ತೆ ಮಕ್ಕಳಾಗಿ ಬಿಡ್ತಾರೆ’ ಅನ್ನೋ ಮಾತಿನಂತೆ ‘ನಂಗೆ ಅನಿರುದ್ಧ ಬೇಕೂ’ ಅಂತ ಮಕ್ಕಳಂತೆ ಹಠ ಮಾಡೋ ಹಾಗೆ ಆಗ್ತಿದೆ ಮಗನೇ… ನಿನ್ ಜತೆ ವರದಹಳ್ಳಿ ಶ್ರೀಧರಾಶ್ರಮಕ್ಕೆ ಹೋಗ್ಬೇಕು, ಶಿರಸಿ ಮಾರಿಕಾಂಬಾ ಜಾತ್ರೇಲಿ ಬೆಂಡು-ಬತ್ತಾಸು ತಿನ್ನಬೇಕು ಅನ್ನಿಸ್ತಿದೆ. ನಿಮ್ಮಪ್ಪನ ಕಿವಿ-ಕಣ್ಣು ಮಂದವಾಗಿರಬಹುದು, ಆದರೆ ಕಾಲಲ್ಲಿ ಇನ್ನೂ ಶಕ್ತಿಯಿದೆ… ನಿನ್ನನ್ನ ಸೈಕಲ್ ಮೇಲೆ ‘ಡಬಲ್ ರೈಡಿಂಗ್’ನಲ್ಲಿ ಅಲ್ಲಿಗೆಲ್ಲಾ ಕರ್ಕೊಂಡು ಹೋಗೋಣ ಅನ್ನಿಸ್ತಿದೆ ಪುಟ್ಟಾ… ನಂಗೂ ನಿಮ್ಮಮ್ಮಂಗೂ ಯಾವ ಅಷ್ಟೈಶ್ವರ್ಯಗಳೂ ಬೇಡ, ನಮಗೆ ನೀನು ಬೇಕು. ಬೇಗ ಬಂದುಬಿಡು ಮಗನೇ. ನೀನು ದುಡಿದು ಕೂಡಿಟ್ಟಿರೋ ಹಣ, ಇಲ್ಲಿ ಸಿದ್ದಾಪುರದಲ್ಲಿರೋ ತೋಟ-ತುಡಿಕೆ ಯಿಂದ ಬರೋ ವರಮಾನ ಸೇರಿದ್ರೆ ಈ ಮುದಿ ಅಪ್ಪ-ಅಮ್ಮನ ಹಾಗೂ ನಿಮ್ಮ ಮೂವರ ಬದುಕಿನ ಬಂಡಿ ಎಳೆಯೋಕ್ಕೆ ಬೇಕಾದಷ್ಟಾಯ್ತು….
ಮಗನೇ ಅನಿರುದ್ಧಾ, ಇನ್ನೂ ಸಾಕಷ್ಟು ಬರೆಯೋದಿತ್ತು. ಅದ್ಯಾಕೋ ಏನೋ ಗೊತ್ತಿಲ್ಲ, ಪತ್ರಾನ ಇನ್ನೂ ಮುಂದು ವರಿಸೋಕ್ಕೆ ಆಗ್ತಾನೇ ಇಲ್ಲ. ನಾ ಬರೆದ ಅಕ್ಷರಗಳೇ ನನಗೆ ಕಾಣ್ತಾ ಇಲ್ಲ, ಕಲಸಿ ಕೊಂಡು ಹೋಗ್ತಾ ಇವೆ…
ಪ್ರಾಯಶಃ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿರಬೇಕು ಅನ್ಸುತ್ತೆ….
***
ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್ ಅವರ “ಚಿಟ್ಠೀ ಆಯೀ ಹೈ ಆಯೀ ಹೈ, ಚಿಟ್ಠೀ ಆಯೀ ಹೈ” ಗೀತೆ ನನ್ನ ‘ಆಲ್ಟೈಮ್ ಫೇವರಿಟ್’. ಸಂಜಯ್ದತ್ ಅಭಿನಯದ ‘ನಾಮ್’ ಎಂಬ ಚಲನಚಿತ್ರದಲ್ಲಿ ಪಂಕಜ್ ಅವರು ಇದನ್ನು ಹಾಡಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಹಾಡನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವಾಗ ನಿಜಾರ್ಥದಲ್ಲಿ ‘ಕಣ್ತುಂಬಿ’ ಹರಿಯಿತು, ಜತೆಗೆ ಮೇಲಿನ ಸಾಲುಗಳೂ….
ಒಪ್ಪಿಸಿಕೊಳ್ಳಿ…
ಇದನ್ನೂ ಓದಿ: Yagati Raghu Nadig Column: ಅಕ್ಷರಗಳು ಆಚೀಚೆ ಆದಾಗಿನ ಎಡವಟ್ಟುಗಳು