Saturday, 10th May 2025

ಭೂಮಿಯ ಸನ್‌ಸ್ಕ್ರೀನ್ – ಓಝೋನ್ ಪದರಕ್ಕೆ ರಂಧ್ರ !

ತನ್ನಿಮಿತ್ತ
ಗುರುರಾಜ್ ಎಸ್ ದಾವಣಗೆರೆ

ಮು0ಬೈ ಮೂಲದ ಎಸ್ಸೆೆಲ್ ಗ್ರೂಪ್ ಒಡೆತನದ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ಮಾಧ್ಯಮ ಸಂಸ್ಥೆೆ ವರ್ಲ್ಡ್‌ ಈಸ್ ಒನ್ ನ್ಯೂಸ್ (MLK) ಕಳೆದ ಮಾರ್ಚ್ 28ರಂದು ಸುದ್ದಿಯೊಂದನ್ನು ಬಿತ್ತರಿಸಿ ಕರೋನಾ ಲಾಕ್‌ಡೌನ್‌ನಿಂದ ವಿಶ್ವದ ವಿವಿಧ ಭಾಗಗಳ ವಾತಾವರಣದಲ್ಲಿ ಗಾಳಿ ತಿಳಿಯಾಗಿದೆ, ನದಿಗಳ ನೀರು ಶುದ್ಧವಾಗಿದೆ ಮಾಲಿನ್ಯ ಕಡಿಮೆಯಾಗಿದೆ ಎಂದು ಹೇಳುತ್ತ ಆರ್ಕ್‌ಟಿಕ್ ಭಾಗದ ಮೇಲಿನ ಓಝೋನ್ ಪದರದ ರಂಧ್ರ ಮುಚ್ಚಿ ಹೋಗಿದೆ ಎಂದು ಘೋಷಿಸಿ ಬಿಟ್ಟಿತು. ಹಾಗಂದದ್ದೇ ತಡ.

ಶುರುವಾಯಿತು ನೋಡಿ ನೆಟ್ಟಿಗರ ಸಂಭ್ರಮ ಮತ್ತು ತಳಮಳ! ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಯನ್ನೇ ಆಹಾರ ಮಾಡಿಕೊಂಡ ಲಕ್ಷಾಂತರ ನೆಟ್ ಬಳಕೆದಾರರು ಶಹಬ್ಬಾಸ್, ವೆರಿಗುಡ್ ಎಂದು ಕಮೆಂಟು, ಲೈಕು ಹಾಕಿ ಜಗತ್ತಿನ ಮೂಲೆ ಮೂಲೆಗೆಲ್ಲಾ ಸುದ್ದಿಯನ್ನು ಶೇರ್ ಮಾಡಿ ನಿರುಮ್ಮಳರಾದರು. ಸುದ್ದಿ ಕೇಳಿ ಸಿಟ್ಟಾದವರು ಇದೆಂಥ ಅತಿರೇಕ? ಲಾಕ್‌ಡೌನ್‌ನಿಂದ ನಾವೆಲ್ಲ ಕಾರು, ಬಸ್ಸು, ಬೈಕು, ರೈಲು ಓಡಿಸದೆ, ಫ್ಯಾಕ್ಟರಿ ನಡೆಸದೆ, ಡೀಸೆಲ್ ಉರಿಸದೆ ಇದ್ದುದರಿಂದ ನೀರು – ಗಾಳಿ – ಹವೆ ಶುದ್ಧವಾಗಿದೆ ಎಂದು ಹೇಳಿ – ನಮ್ಮನ್ನು ‘ಭೂಮಿಯ ಕಳೆ’ ಎಂದು ಚಿತ್ರಿಸಿದ್ದು ಎಷ್ಟು ಸರಿ ಎಂದು ರೇಗಿ ಯುಟ್ಯೂಬ್‌ನಲ್ಲಿದ್ದ ಆ ವಿಡಿಯೋ ತುಣುಕಿಗೆ ಉಲ್ಟಾ ಹೆಬ್ಬೆೆರೆಳಿನ ಚಿತ್ರ ಹಾಕಿ, ಮಲ್ಟಿಪಲ್ ಡಿಸ್ ಲೈಕ್ ಮಾಡಿ, ಶೂನ್ಯ ರೇಟಿಂಗ್ ನೀಡಿ ಈ ಅನಿಷ್ಠವನ್ನು
ಬೆನ್ನುಹತ್ತಿದ ಇಂಡಿಯಾ ಟುಡೇ ಪತ್ರಿಕೆಯ ‘ಸುಳ್ಳು ಸುದ್ದಿ ಪತ್ತೆ ವಿಭಾಗ’ದವರು ವಿಜ್ಞಾನಿಗಳನ್ನು ಮಾತನಾಡಿಸಿ ನೀವೇನಂತೀರಿ? ಎಂದು ಕೇಳಿದರು.

ಆರ್ಕ್‌ಟಿಕ್ ಪ್ರದೇಶದ ಓಝೋನ್ ರಂಧ್ರ ಕ್ಲೋಸ್ ಆಗಿರುವುದು ನಿಜ, ಆದರೆ ಅದು ಲಾಕ್‌ಡೌನ್ ಎಫೆಕ್ಟ್  ನಿಂದ ಆದದ್ದಲ್ಲ ಬಹಳ ದಿನಗಳಿಂದ ಧೃವಪ್ರದೇಶದಲ್ಲಿ ಶೇಖರಣೆಗೊಂಡಿದ್ದ ಬಲಶಾಲಿ ಮತ್ತು ಬೃಹತ್ ಶೀತಗಾಳಿಯ ಹಿಂಡು ಮೇಲೆ ಚಲಿಸಿದ್ದಕ್ಕೆ ಆ ಭಾಗದಲ್ಲಿದ್ದ ರಂಧ್ರ ಮುಚ್ಚಿಕೊಂಡಿದೆ ಎಂದಿರುವ ಯುರೋಪಿನ ಕಣ್ಣು ಎಂದೇ ಪ್ರಸಿದ್ಧಿ ಪಡೆದಿರುವ ಕೋಪರ್ನಿಕಸ್ ಅಟ್ಮಾಸ್ಫಿಯರ್ ಮಾನಿಟರಿಂಗ್ ಸರ್ವಿಸ್‌ನ ವಿಜ್ಞಾನಿಗಳು ಏಪ್ರಿಲ್ 20ರಂದು ಅಧಿಕೃತ ಹೇಳಿಕೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

‘ಯುರೋ ನ್ಯೂಸ್’ಗೆ ಸಂದರ್ಶನ ನೀಡಿರುವ ಕ್ಯಾಮ್ಸನ ವಿಜ್ಞಾನಿ ಆಂಜೆ ಇನ್ನೆೆಸ್ ಈ ಛಳಿಗಾಲದಲ್ಲಿ ಧೃವ ಪ್ರದೇಶದಿಂದ ಬೀಸಿದ ಶೀತಗಾಳಿ ಹಿಂದೆಂದಿಗಿಂತ ಬಲಶಾಲಿಯಾಗಿತ್ತು ಮತ್ತು ಸೊನ್ನೆಗಿಂತ ಕಡಿಮೆ ಉಷ್ಣಾಂಶ ಹೊಂದಿದ್ದರಿಂದ ಈ ಪವಾಡ ಸಂಭಸಿದೆಯೇ ಹೊರತು ಲಾಕ್‌ಡೌನ್ ನಿಂದ ಇದು ಆಗಿಲ್ಲ ಎಂದು ಪ್ರತಿಪಾದಿಸಿದ್ದಾಾರೆ. ಆರ್ಕ್‌ಟಿಕ್ ಪ್ರದೇಶದಲ್ಲಿ ಬಹಳ ದಿನಗಳಿಂದ ಶೇಖರಣೆಗೊಂಡಿದ್ದ ಸೊನ್ನೆಗಿಂತ ಕಡಿಮೆ ಉಷ್ಣಾಂಶದ ಬೃಹತ್ ಹಾಗೂ ಬಲಶಾಲಿ ಶೀತ ಮಾರುತ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಧೃವ ಭಾಗಕ್ಕೆ ಚಲಿಸಿ, ಅಲ್ಲಿಯೇ ಸ್ಥಗಿತಗೊಂಡು ನಾವು ಬಳಸಿದ ಕ್ಲೋರೋ ಫ್ಲೋರೋ ಕಾರ್ಬನ್ (ADA) ಮತ್ತು ಬ್ರೋಮೋ ಫ್ಲೋರೋಕಾರ್ಬನ್‌ಗಳಿಂದ ಹೊಮ್ಮಿದ ಕ್ಲೋರಿನ್ ಮತ್ತು ಬ್ರೋಮಿನ್‌ಗಳೊಂದಿಗೆ ವರ್ತಿಸಿ ಅಲ್ಲಿನ ಓಝೋನ್‌ನ ಅಣುಗಳನ್ನೆಲ್ಲಾ ಕಬಳಿಸಿದಾಗ ರಂಧ್ರ ಉಂಟಾಯಿತು ಮತ್ತು ಸ್ಥಿತಿ ಒಂದು ತಿಂಗಳಿಗೂ ಹೆಚ್ಚುಕಾಲ ಹಾಗೇ ಮುಂದುವರಿಯಿತು. ಏಪ್ರಿಲ್ ಕೊನೆಯ ಹೊತ್ತಿಗೆ ಶೀತಗಾಳಿಯ ಹಿಂಡು ಒಡೆದು ಹೋಗಿ ಓಝೋನ್‌ಯುಕ್ತ ಗಾಳಿ ಅಲ್ಲಿಗೆ
ನುಗ್ಗಿದ್ದರಿಂದ ಬೃಹತ್ ರಂಧ್ರ ಮುಚ್ಚಿಕೊಂಡಿತು ಎಂದು ವಿವರಿಸಿರುವ ಇನ್ನೆಸ್ ಸದ್ಯಕ್ಕೆ ದೊಡ್ಡ ಗಂಡಾಂತರದಿಂದ ಪಾರಾಗಿ ದ್ದೇವೆ ಎಂದಿದ್ದಾರೆ. ಅಲ್ಲದೆ ಏಕೆ ಹೀಗಾಯಿತು ಎಂಬುದಕ್ಕೆೆ ವಸ್ತುನಿಷ್ಠ ಪ್ರಯೋಗಾತ್ಮಕ ಅಧ್ಯಯನ ಶುರುವಾಗಿದೆ ಎಂದಿದ್ದಾರೆ.

ಹತ್ತು ಲಕ್ಷ ಚದರ ಕಿ.ಮೀ.ನಷ್ಟು ದೊಡ್ಡ ರಂಧ್ರ ಮುಚ್ಚಿರುವುದು ಸಹಜವಾಗಿಯೇ ವಿಜ್ಞಾನಿಗಳಿಗೆ, ಹವಾಮಾನ ತಜ್ಞರಿಗೆ, ದೇಶ ಆಳುವ ನಾಯಕರಿಗೆ ಖುಷಿ ತಂದಿದೆ. ಮೂರು ದಶಕಗಳ ಅವಿರತ ಪ್ರಯತ್ನ ಫಲ ನೀಡಿದೆ ಎಂದಿರುವ ತಜ್ಞರು ‘ಸಮಸ್ಯೆ ಪರಿಹಾರ ಗೊಂಡಿದೆ ಎಂದು ಮೈ ಮರೆಯುವಂತಿಲ್ಲ’ ಮುಚ್ಚುವಿಕೆ ಶಾಶ್ವತವೇನೂ ಅಲ್ಲ, ಅದು ಮತ್ತೆ ತೆರೆದುಕೊಳ್ಳದಂತೆ ಭೂಮಿಯ ಮೇಲೆ ನಮ್ಮ ಕೆಲಸಗಳನ್ನು ನಾಜೂಕಾಗಿ ನಡೆಸಬೇಕು ಎಂದು ಎಚ್ಚರಿಸಿದ್ದಾರೆ.

ಭೂಮಿಯನ್ನು ಆವರಿಸಿರುವ ಓಝೋನ್ ಪದರಕ್ಕೆ ತೂತು ಬೀಳುವುದು ನಾವು ಪ್ರತಿ ನಿತ್ಯ ಬಳಸುವ ಬಸ್ಸು – ಕಾರು – ರೈಲುಗಳ ಡೀಸೆಲ್ ಹೊಗೆ, ರಸಗೊಬ್ಬರ, ಪೇಂಟ್ ಗಳು ಹೊಮ್ಮಿಸುವ ಮಾಲಿನ್ಯ ಮತ್ತು ಏಸಿ, ನೋವು ನಿವಾರಕ ಸ್ಪ್ರೇ, ಸುಗಂಧ ಸೂಸುವ ತುಂತುರು ಡಬ್ಬಿ, ಫ್ರಿಡ್ಜ್‌‌ಗಳಲ್ಲಿ ಬಳಸುವ ಕ್ಲೋರಫ್ಲೋರೋ ಕಾರ್ಬನ್ ಮತ್ತು ಬ್ರೋಮೋಫ್ಲೋರೋ ಕಾರ್ಬನ್‌ಗಳಿಂದ. ಮೊದಲ ಸಲ, 1980 ರಲ್ಲಿ ಅಂಟಾರ್ಟಿಕಾದ ಮೇಲಿನ ವಾಯುಮಂಡಲದ ಓಝೋನ್ ಪದರಕ್ಕೆ ತೂತಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ
ಫೀಲ್ಡಿಗಿಳಿದ ನ್ಯಾಾಶನಲ್ ಓಶಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಶನ್‌ನ ವಿಜ್ಞಾನಿಗಳು ವಾತಾವರಣದಲ್ಲಿನ ಸ್ವತಂತ್ರ ಕ್ಲೋರಿನ್ ಅಣು ಮತ್ತು ಕ್ಲೋರಿನ್ ಮಾನಾಕ್ಸೆ ಡ್‌ನಿಂದ ತೂತಾಗಿದೆ ಎಂದು ಕಂಡು ಹಿಡಿದು ಪರಿಹಾರವನ್ನೂ ಸೂಚಿಸಿ ದರು.

ಸರಿ ಸುಮಾರು ನೂರು ರಸಾಯನಿಕಗಳಿಂದ ಓಝೋನ್ ಪದರಕ್ಕೆ ಅಪಾಯವಿದೆ ಎಂದು ಸಂಶೋಧನೆಯಾದ ಮೇಲೆ 1987ರಲ್ಲಿ ಸಭೆಸೇರಿ ಮಾಂಟ್ರಿಯಲ್ ಒಪ್ಪಂದಕ್ಕೆ ಸಹಿ ಹಾಕಿದ 197 ದೇಶಗಳ ನಾಯಕರು ಆಯಿತು ಸಿಎಫ್‌ಸಿ ಮತ್ತು ಸಿಎಫ್‌ಸಿಗಳ ಬಳಕೆ ನಿಲ್ಲಿಸಿ ವಿಜ್ಞಾನಿಗಳು ರೆಕಮೆಂಡ್ ಮಾಡಿರುವ ಹೈಡ್ರೋ ಕ್ಲೋರೋ ಫ್ಲೋರೋ ಕಾರ್ಬನ್ ಬಳಸುತ್ತೇವೆ ಎಂದರು. ಮುಂದುವರಿದ ರಾಷ್ಟ್ರಗಳು 2004ರಲ್ಲಿ ಸಿಎಫ್‌ಸಿ ಮತ್ತು ಬಿಎಫ್‌ಸಿಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಿದವು. ನಾವು ಅದನ್ನು ಮಾಡಿದ್ದು 2010ರಲ್ಲಿ. ಆ ವೇಳೆಗೆ ಎಚ್‌ಸಿಎಫ್‌ಸಿ ಅಂದರೆ ಹೈಡ್ರೋಕ್ಲೋರೋ ಫ್ಲೋರೋ ಕಾರ್ಬನ್‌ಗಳೂ ಸೇಫ್ ಅಲ್ಲ ಮತ್ತು
ಅವುಗಳಿಂದ ಓಝೋನ್ ಪದರಕ್ಕೆ ತಕ್ಕಮಟ್ಟಿಗೆ ಅಪಾಯವಿದೆ ಎಂದು ತಿಳಿದದ್ದಲ್ಲದೆ ಅವು ಭೂಮಿಯ ಬಿಸಿಯನ್ನು ಹೆಚ್ಚಿಸುವ ಕಾರ್ಬನ್ ಡೈ ಆಕ್ಸೆೆಡ್‌ಗಿಂತ ಸಾವಿರಾರು ಪಟ್ಟು ಹೆಚ್ಚು ಭೂಮಿ ಬಿಸಿ ಮಾಡುವ ಶಾಖ ವರ್ಧಕಗಳು ಎಂದು ತಿಳಿದುಬಂತು. ಒಂದು ರೀತಿಯಲ್ಲಿ ‘ಊದುವುದನ್ನು ಕೊಟ್ಟು ಒದರುವುದನ್ನು ತೆಗೆದು ಕೊಂಡಂತಾಯಿತು’ ಎಂದು ಸಂಕಟಕ್ಕೆ ಬಿದ್ದ ಮೊಂಟ್ರಿಯಲ್ ಒಪ್ಪಂದದ ರೂವಾರಿಗಳು 2016ರಲ್ಲಿ ರುವಾಂಡದ ಕಿಗಳಿಯಲ್ಲಿ ಸಭೆ ಸೇರಿ 2030ರ ವೇಳೆಗೆ ಎಚ್‌ಸಿಎಫ್‌ಸಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ನಿರ್ಧರಿಸಿದರು. ಅದಕ್ಕೆ ವಿಶ್ವದ 81 ದೇಶಗಳು ಮಾತ್ರ ಸಹಿ ಮಾಡಿದ್ದು ಭಾರತ, ಚೀನಾ ಮತ್ತು ಅಮೆರಿಕ ಸದ್ಯಕ್ಕೆೆ ಸಾಧ್ಯವಿಲ್ಲ ಎಂದಿವೆ.

ಆದರೂ ಕ್ರಮೇಣ ಮಾಡುತ್ತೇವೆ ಎಂದು ಭರವಸೆ ನೀಡಿ ತಮ್ಮ ತಮ್ಮ ದೇಶಗಳಲ್ಲಿ ಆ ನಿಟ್ಟಿನಲ್ಲಿ ಏನೇನು ಸಾಧ್ಯ ಎಂದು
ಯೋಜನೆ ರೂಪಿಸಿವೆ. ಕಿಗಳಿ ಒಪ್ಪಂದ ಕಳೆದ ಜನವರಿಯಿಂದ ಜಾರಿಗೆ ಬಂದಿದೆ. ಶೀತಲೀಕರಣ ಉದ್ಯಮಗಳಲ್ಲಿ ಎಚ್‌ಸಿಎಫ್‌ ಸಿಗಳ ಬಳಕೆ ಅತ್ಯಧಿಕವಾಗಿದ್ದು ರೈತರು ಬೆಳೆದ ಬೆಳೆಯನ್ನು ಕಾಪಾಡುವ ಕೋಲ್ಡ್‌ ಸ್ಟೋರೇಜ್ ಮತ್ತು ಗ್ರಾಹಕರು ಬಳಸುವ ಎಸಿ, ರೆಫ್ರಿಜರೇಟರ್‌ಗಳಿಗೆ ಅದು ಬೇಕೇ ಬೇಕು. ಅದಕ್ಕಾಗಿ ಇಂಡಿಯ ಕೂಲಿಂಗ್ ಆಕ್ಷನ್ ಪ್ಲಾನ್ ಪ್ರಾರಂಭಿಸಿರುವ ಕೇಂದ್ರ ಸರಕಾರ ಇನ್ನೂ ಇಪ್ಪತ್ತು ವರ್ಷಗಳಲ್ಲಿ ಶೀತಲೀಕರಣ ಉದ್ಯಮದ ಬೇಡಿಕೆ 8 ಪಟ್ಟು ಹೆಚ್ಚಲಿದೆ. 2038ರ ವೇಳೆಗೆ ಎಚ್‌ಸಿಎಫ್‌ಸಿ ಮೇಲಿನ ನಮ್ಮ ಅವಲಂಬನೆ ಶೇ.30ರಷ್ಟು ಕಡಿಮೆಯಾಗಬಹುದು ಎಂದಿದೆ. ಸಂಪೂರ್ಣ ನಿಷೇಧಕ್ಕೆ 2050ರವರೆಗೂ ಸಮಯ ಹಿಡಿಯಬಹುದು ಎಂಬ ಅಂದಾಜಿದೆ. ವಿಶ್ವದ ಹವಾನಿಯಂತ್ರಕ ವ್ಯವಸ್ಥೆಯ ಬೇಡಿಕೆಯ ಶೇ.80ರಷ್ಟನ್ನು ಪೂರೈಸುತ್ತಿರುವ ಚೀನಾ ನಮಗೂ ಸಮಯ ಬೇಕು ಎಂದಿದ್ದು ನಮ್ಮ ತಂತ್ರಜ್ಞಾನ ಬಳಸಿ ಸಾಧ್ಯವಾದಷ್ಟು ಸಹಕರಿಸುತ್ತೇವೆ ಎಂಬ ಭರವಸೆ
ನೀಡಿದೆ. ನಾವು ನಮ್ಮ ಫ್ರಿಜ್ ಮತ್ತು ಎಸಿಗಳಲ್ಲಿ ಎಚ್ಸಿಎಫ್‌ಸಿ -22 ಕ್ಲೋರೋ ಡೈಫ್ಲೋರೋ ಮೇಥೇನ್ ಸಂಯುಕ್ತವನ್ನು ಬಳಸುತ್ತಿದ್ದೇವೆ. ಇದರ ಉತ್ಪಾದನೆಯ ಜೊತೆಗೆ ಬೈಪ್ರಾಡಕ್ಟಾಗಿ ಹೊಮ್ಮುವ ಎಚ್‌ಸಿಎಫ್‌ಸಿ – 23 ಕ್ಲೋರೋ ಟ್ರೈಫ್ಲೋರೋ ಮಿಥೇನ್ ಸಂಯುಕ್ತ ಭೂಮಿಯ ಶಾಕ ವರ್ಧಿಸುವುದರಿಂದ ನಾವೂ ಸಹ ಬೇರೆ ಮಾರ್ಗ ಹುಡುಕಬೇಕಿದೆ.

ಸಿಎಫ್‌ಸಿ, ಎಚ್‌ಸಿಎಫ್‌ಸಿಗಳ ಬದಲಿಗೆ ಅತ್ಯುತ್ತಮ ಶೀತಕಾರಕಗಳು ಮತ್ತು ಕಡಿಮೆ ಶಾಕವರ್ಧಕಗಳಾದ ಬುಟೇನ್ ಮತ್ತು ಪ್ರೊಪೇನ್‌ಗಳನ್ನು ಬಳಸುವ ಅವಕಾಶವಿದೆ. ಆದರೆ ಬಳಸಲು ಪರವಾನಗಿ ಇಲ್ಲ. ಅಲ್ಲದೆ ಇವು ತೀವ್ರವಾಗಿ ದಹಿಸುವ ಗುಣ ಹೊಂದಿರುವುದರಿಂದ ಬಳಸುವಾಗ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದೆಡೆ ಓಝೋನ್ ಪದರದ ರಂಧ್ರ ಮುಚ್ಚಿದೆ ಎಂದು
ಸಂತಸ ಪಡುತ್ತಿದ್ದೇವೆ. ಅದಕ್ಕಾಗಿ ಸಿಎಫ್‌ಸಿ ಬಳಕೆ ನಿಲ್ಲಿಸಿದ್ದೇವೆ. ಈಗ ಬಳಸುತ್ತಿರುವ ಎಚ್‌ಎಫ್‌ಸಿಗಳಿಂದ ಭೂಮಿಯ ಬಿಸಿ ಏರುತ್ತಿದೆ. ಒಟ್ಟಿನಲ್ಲಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಬಿಡಬೇಕು ಎಂಬಂತಾಗಿದೆ. ಆದರೂ ಓಝೋನ್ ಪದರಕ್ಕೆ ತೂತು ಬೀಳದಂತೆ ತಡೆಯಲೇಬೇಕಿದೆ.

Leave a Reply

Your email address will not be published. Required fields are marked *