Saturday, 10th May 2025

Vishweshwar Bhat Column: ಜಪಾನಿನಲ್ಲಿ ಬೀದಿ ಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಜಪಾನಿನ ರಾಜಧಾನಿ ಟೋಕಿಯೋ ನಗರದಲ್ಲಿ ನಾನು ಓಡಾಡುವಾಗ, ಮುಖಕ್ಕೆ ಹೊಡೆಯುವಂತಿರುವ ಅಲ್ಲಿನ ಸ್ವಚ್ಛತೆ, ಅಚ್ಚುಕಟ್ಟುತನ, ಶಿಸ್ತು ನನ್ನೊಳಗೆ ಸಣ್ಣ ಸಾಂಸ್ಕೃತಿಕ ಆಘಾತ (Cultural Shock) ವನ್ನು ಮೂಡಿಸಿದ್ದು ಸುಳ್ಳಲ್ಲ. ಪಿಸ್ತಾ ತಿಂದರೂ ಸಿಪ್ಪೆಯನ್ನು ಹೊರಗೆ ಎಸೆಯುವಂತಿಲ್ಲ. ಕಳ್ಳೇಕಾಯಿ ತಿನ್ನುವಾಗ ಮೇಲಿನ‌ ತೆಳು ಪದರವನ್ನು ಸಹ ಚೆಲ್ಲುವಂತಿಲ್ಲ (ಚೆಲ್ಲಲು ಮನಸ್ಸೂ ಬರುವುದಿಲ್ಲ, ಅದು ಬೇರೆ ಮಾತು). ಕೋನ್ ಐಸ್‌ಕ್ರೀಮ್ ತಿಂದ ನಂತರ, ಅದರ ಹೊರಭಾಗವನ್ನು ಎಸೆಯಲೆಂದು ಸುತ್ತಲೂ ಕಸದಬುಟ್ಟಿಗೆ ಹುಡುಕಾಡಿದರೆ, ಅದು ಎಲ್ಲೂ ಕಾಣಿಸುವುದಿಲ್ಲ.

ಕುಡಿದು ಖಾಲಿ ಮಾಡಿದ ನೀರಿನ ಬಾಟಲಿಯನ್ನು ಎಸೆಯುವಾಗಲೂ ಇದೇ ಸಮಸ್ಯೆ. ಕಸದ ತೊಟ್ಟಿಗೆ ಎಸೆಯೋಣ ಅಂದುಕೊಂಡರೆ ಅದು ಸುತ್ತಮುತ್ತ ಎಲ್ಲೂ ಕಾಣಿಸುವುದಿಲ್ಲ. ಹಾಗಂತ ಅಲ್ಲಿಯೇ ಎಸೆಯಲು ಮನಸ್ಸು ಬರುವು ದಿಲ್ಲ. ಕಾರಣ ಅಲ್ಲಿನ ರಸ್ತೆ, ಬೀದಿ ಮತ್ತು ಸಾರ್ವಜನಿಕ ಸ್ಥಳಗಳು ಸ್ವಚ್ಛ ಹಾಗೂ ಶುಭ್ರ. ನಮ್ಮ ಮನೆಯ ಜಗುಲಿ ಯದರೂ ಕಸ-ಕಡ್ಡಿ ಸಿಕ್ಕೀತು. ಆದರೆ ಜನನಿಬಿಡ ಟೋಕಿಯೋ ಬೀದಿಗಳಲ್ಲಿ ಒಂದೇ ಒಂದು ಕಾಗದದ ಚೂರು, ಕಸ, ಸೇದಿಬಿಟ್ಟ ಸಿಗರೇಟಿನ ತುಂಡು, ಅರ್ಧ ಸುಟ್ಟ ಬೆಂಕಿ ಕಡ್ಡಿ, ಚಿಪ್ಸ್ ಪ್ಯಾಕೆಟ್, ಗುಟಖಾ ಚೀಟಿ ಕಾಣುವುದಿಲ್ಲ.

ಕಾಗದ‌ ಅಥವಾ ದಪ್ಪ ರಟ್ಟಿನ ಹಾಳೆಯಲ್ಲಿ ಕಟ್ಟಿಕೊಡುವ ಯಾವುದೇ ಆಹಾರವನ್ನು ಸೇವಿಸಿದ ಬಳಿಕ, ಅವನ್ನು ಎಲ್ಲಿ ಎಸೆಯುವುದು ಎಂಬುದು ಅಲ್ಲಿಗೆ ಮೊದಲ ಬಾರಿಗೆ ಹೋದ ಎಲ್ಲರ ಪ್ರಶ್ನೆ. ಯುರೋಪ್ ಮತ್ತು ಅಮೆರಿಕ ದಂಥ ಸ್ವಚ್ಛ ದೇಶಗಳಲ್ಲಿ ಸಹ ತಿಂದು ಬಿಟ್ಟ ಆಹಾರ ಅಥವಾ ಅವನ್ನು ಸುತ್ತಿದ ಕಾಗದವನ್ನು ಎಸೆಯಲು ಎಡೆ ಕಸದತೊಟ್ಟಿಗಳಾದರೂ ಇರುತ್ತವೆ. ಆದರೆ ಟೋಕಿಯೋ ಸೇರಿದಂತೆ ಜಪಾನಿನ ನಗರಗಳಲ್ಲಿ ಕಸದ ತೊಟ್ಟಿಗಳು ಹುಡುಕಿದರೂ ಸಿಗುವುದಿಲ್ಲ. ಮ್ಯಾಕ್ ಡೊನಾಲ್ಡ್ ಗೆ ಹೋಗಿ ಬರ್ಗರ್ ತಂದು ಮುಕ್ಕಾಲು ಭಾಗ ಸೇವಿಸಿ ಉಳಿದು ದನ್ನು ಬಿಸಾಕೋಣ ಅಂತ ಅಂದುಕೊಂಡರೆ‌ ಅಲ್ಲೂ ಕಸದಬುಟ್ಟಿಗಳು ಕಾಣುವುದಿಲ್ಲ.

ಅನಿವಾರ್ಯವಾಗಿ ಅದನ್ನು ನಮ್ಮ ಕಿಸೆಯೊಳಗೋ, ಬ್ಯಾಗಿನೊಳಗೋ ಇಟ್ಟುಕೊಳ್ಳಬೇಕು. ಮನೆಗೋ, ಹೋಟೆಲಿ ಗೋ ಹೋದ ನಂತರ ಅಲ್ಲಿರುವ ಕಸದ ಬುಟ್ಟಿಗೆ ಹಾಕಿ ಧನ್ಯರಾಗಬೇಕು! ಅಸಲಿಗೆ ಜಪಾನಿನ ಹಾದಿ-ಬೀದಿಗಳಲ್ಲಿ ಕಸದತೊಟ್ಟಿಗಳೇ ಇಲ್ಲ! ಆದರೂ ಅವೆಲ್ಲ ತೊಳೆದ ಕೆನ್ನೆಯಂತೆ ನುಣುಪು ಮತ್ತು ಶುದ್ಧ ಸ್ವಚ್ಛ. ನಾನು ಕೋನ್ ಐಸ್‌ಕ್ರೀಮ್ ತಿಂದು, ನೀರು ಕುಡಿದು ಹೊರಗಿನ ಕವರ್ ಮತ್ತು ಖಾಲಿ ಬಾಟಲಿಯನ್ನು ಎಸೆಯಲಾಗದೇ ಅವನ್ನೆಲ್ಲ (ಒಲ್ಲದ ಮನಸ್ಸಿನಿಂದ) ನನ್ನ ಬ್ಯಾಕ್ ಪ್ಯಾಕ್‌ನಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಯಿತು. ನಂತರ ಹೋಟೆಲಿಗೆ ಬಂದವನೇ ಅಲ್ಲಿದ್ದ ಕಸದಬುಟ್ಟಿಗೆ ಅವನ್ನು ಎಸೆದು ‘ಭಾರ’ ಇಳಿಸಿಕೊಂಡಾಗಲೇ ಸಮಾಧಾನ ವಾಗಿದ್ದು. ಜಪಾನಿ ನಲ್ಲಿ ನಿರ್ದಿಷ್ಟ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಲು ಯಾರ ಅಭ್ಯಂತರವೂ ಇಲ್ಲ.

ಆದರೆ ಬೂದಿಯನ್ನು ಬೇಕಾಬಿಟ್ಟಿ ಕೊಡವುವಂತಿಲ್ಲ. ಹಾಗಂತ ಎಲ್ಲೂ ಸೂಚನಾ ಫಲಕಗಳನ್ನು ನೆಟ್ಟಿಲ್ಲ. ‘ಗಲೀಜು ಮಾಡಿದರೆ ದಂಡ ವಿಧಿಸಲಾಗುವುದು’ ಎಂದು ಬೋರ್ಡು ಹಾಕಿಲ್ಲ. ಆದರೆ ಯಾರೂ ಹಾಗೆ ಮಾಡುವು ದಿಲ್ಲ. ಆ ದೇಶಕ್ಕೆ ಮೊದಲ ಬಾರಿಗೆ ಹೋದವರೂ ಹಾಗೆ ಮಾಡುವುದಿಲ್ಲ. ಮಾಡಲು ಮನಸ್ಸೂ ಬರುವುದಿಲ್ಲವೆನ್ನಿ.

ರಸ್ತೆ ಅಥವಾ ಬೀದಿಗಳಲ್ಲಿ ಯಾರೂ ಕಸವನ್ನು ಎಸೆಯಬಾರದು ಅಂದರೆ ಕನಿಷ್ಠ ನೂರು ಮೀಟರುಗಳಿಗೆ ಒಂದಾ
ದರೂ ಕಸದಬುಟ್ಟಿಗಳನ್ನು ಇಡಬೇಕು ಎಂಬ ಭಾವನೆಯಿದೆ. 2014ರಲ್ಲಿ ಭಾರತದಲ್ಲಿ ಪ್ರಧಾನಿ ಮೋದಿ ಆರಂಭಿಸಿದ ‘ಸ್ವಚ್ಛ ಭಾರತ ಅಭಿಯಾನ’ ಸಂಪೂರ್ಣ ಯಶಸ್ಸು ಕಾಣದಿರಲು ಕಸದಬುಟ್ಟಿಗಳ ಕೊರತೆ ಮತ್ತು ಅಲಭ್ಯತೆಯೂ ಪ್ರಮುಖ ಕಾರಣ. ಆದರೆ ಈ ವಿಷಯದಲ್ಲಿ ಜಪಾನಿಯರ ಧೋರಣೆಯೇ ಬೇರೆ. ಕಸಕ್ಕಿಂತ ಕಸದ ತೊಟ್ಟಿಗಳೇ ಅಸಹ್ಯ ಎಂಬುದು ಅವರ ವಾದ. ಅವು ನಗರ ಸೌಂದರ್ಯಕ್ಕೆ ಮಾರಕ. ಒಂದು ದಿನ ಕಸದ ತೊಟ್ಟಿಗಳನ್ನು ಬರಿದು ಮಾಡದಿ ದ್ದರೆ ಅವೇ ಗಬ್ಬುನಾತ ಸೂಸಲಾರಂಭಿಸುತ್ತವೆ. ಕೆಲವು ಕಡೆಗಳಲ್ಲಿ ಕಸದ ಬುಟ್ಟಿಗಳು ಭರ್ತಿಯಾಗಿ ತೊಟ್ಟಿಕ್ಕಲು (Overflow) ಆರಂಭಿಸುತ್ತವೆ. ಕಸದಬುಟ್ಟಿಗಳ ಅಂದ-ಚೆಂದವನ್ನು ಕಾಪಾಡುವುದು ಕಷ್ಟ. ಕಸದ ಬುಟ್ಟಿಗಳು ಕಸವಿರುವುದನ್ನು ಸಾರಿ ಹೇಳುತ್ತವೆ. ಅವೇ ಗಲೀಜಿನ ತಾಣಗಳಾಗುತ್ತವೆ. ಕಸದಬುಟ್ಟಿಗಳನ್ನು ಸಹಿಸಿಕೊಂಡರೆ ಕಸವನ್ನು ಸಹಿಸಿಕೊಂಡಂತೆ. ಹೀಗಾಗಿ ಕಸ ಮತ್ತು ಕಸದ ಬುಟ್ಟಿಗಳಿಗೆ ಆಸ್ಪದವನ್ನೇ ನೀಡಬಾರದು ಎಂಬುದು ಜಪಾನಿಯರ ವಾದ ಮತ್ತು ಚಿಂತನೆ.

ಕಸದತೊಟ್ಟಿಗಳಿಂದ ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸಲು ಇನ್ನೂ ಒಂದು ಕಾರಣವಿದೆ. 1995ರ ಮಾರ್ಚ್
20ರಂದು ಟೋಕಿಯೋ ಸಬ್ ವೇಯಲ್ಲಿ ಸಂಭವಿಸಿದ ಭಯೋತ್ಪಾದಕ ಸಾರಿನ್ ಗ್ಯಾಸ್ ದಾಳಿ. ಆ ದಾಳಿಗೆ ಬೇಕಾದ
ಸೋಟಕ ಸಾಮಗ್ರಿಗಳನ್ನು ಭಯೋತ್ಪಾದಕರು ಕಸದ ಬುಟ್ಟಿಗಳಲ್ಲಿ ಇಟ್ಟಿದ್ದರು. ಆ ದಾಳಿಯಲ್ಲಿ ಸುಮಾರು 13 ಜನ
ಸಾವಿಗೀಡಾಗಿ, 50 ಮಂದಿ ಗಂಭೀರ ಗಾಯಗೊಂಡರು. ಆ ದಾಳಿಯ ಬಳಿಕ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಯನ್ನು ಹೆಚ್ಚಿಸಲು ಹಲವೆಡೆ ಕಸದ ಬುಟ್ಟಿಗಳನ್ನು ತೆಗೆದುಹಾಕಲಾಯಿತು. ಶಂಕಾಸ್ಪದ ವಸ್ತುಗಳನ್ನು ಸಂಗ್ರಹಿಸಲು ಅವುಗಳನ್ನು ಬಳಸಬಹುದು ಮತ್ತು ಕಸದ ಬುಟ್ಟಿಗಳು ಭದ್ರತೆಗೆ ಅಪಾಯವಾಗಬಹುದೆಂಬ ಆತಂಕದಿಂದ ಆ ಕ್ರಮ ತೆಗೆದುಕೊಳ್ಳಲಾಯಿತು. ಇದು ‘ಪೊಲೀಸ್ ಸುಧಾರಣೆ’ಯ ಭಾಗವೂ ಆಗಿತ್ತು.

ಕ್ರಮೇಣ ಸಾರ್ವಜನಿಕ ಸ್ಥಳಗಳಲ್ಲಿ ಕಸದತೊಟ್ಟಿಗಳು ಕಣ್ಮರೆಯಾದವು. ಆಗ ಸಾರ್ವಜನಿಕರು ಕಸವನ್ನು ಬೇಕಾ ಬಿಟ್ಟಿ ಎಸೆಯುವ ಅಪಾಯವೂ ಇತ್ತು. ಆದರೆ ಜಪಾನಿಯರಲ್ಲಿರುವ ವ್ಯಕ್ತಿಗತ ಶಿಸ್ತು, ಅಚ್ಚುಕಟ್ಟುತನ ಮತ್ತು ಜಾಗೃತಿ ನೆರವಿಗೆ ಬಂದಿತು. ಅಲ್ಲಿನ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿಯೇ ‘ನಿಮ್ಮ ಕಸ, ನಿಮ್ಮ ಹೊಣೆ’ (Your trash is your responsibility) ಎಂಬ ಪಾಠವನ್ನು ಬೋಧಿಸಲಾಗುತ್ತದೆ.

ಮೊದಲ ಕ್ಲಾಸಿನಿಂದಲೇ ಶಾಲೆಯ ಆವರಣ ವನ್ನು ಸ್ವಚ್ಛಗೊಳಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳದ್ದೇ. ಮಕ್ಕಳು ಶಾಲೆಯ ಪ್ರಾಂಗಣವನ್ನು ಸ್ವಚ್ಛಗೊಳಿಸಬೇಕು ಮತ್ತು ಶೌಚಾಲಯಗಳನ್ನೂ ತೊಳೆಯಬೇಕು. ಸಾರ್ವಜನಿಕ
ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದನ್ನು ಅವರಿಗೆ ಆದೇಶದಿಂದ ಕಲಿಸಬೇಕಿಲ್ಲ. ಅದು ಬಾಲ್ಯದಿಂದಲೇ
ರೂಢಿಯಿಂದ ಬಂದಿರುತ್ತದೆ. ಅಪ್ಪಿ-ತಪ್ಪಿ ಕಸ ಬಿದ್ದರೆ, ಅದನ್ನು ತೆಗೆಯುವಂತೆ ಬೇರೆಯವರು ಹೇಳಬೇಕಿಲ್ಲ,
ಹೇಳುವುದೂ ಇಲ್ಲ. ಅದನ್ನು ಯಾರೇ ಗಮನಿಸಲಿ, ತಕ್ಷಣ ಅದನ್ನು ಆಯ್ದು ತಮ್ಮ ಪ್ಯಾಂಟಿನ ಜೇಬಿನಲ್ಲಿಟ್ಟು ಕೊಳ್ಳುತ್ತಾರೆ. ಅವರಲ್ಲಿ ಬಲವಾಗಿ ಬೇರೂರಿರುವ ಸಮುದಾಯ ಸ್ವಚ್ಛತಾ ಗುಣ ಹಾಗೆ ಮಾಡುವಂತೆ ಪ್ರೇರೇಪಿ ಸುತ್ತದೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲಿದರೆ, ಅದು ತಕ್ಷಣವೇ ಅವನಿಗೆ/ಅವಳಿಗೆ ನೈತಿಕ ಬಾಧ್ಯತೆಯಂತೆ ಕಾಣುತ್ತದೆ. ‘ಬೇಕಾದರೆ ಬೇರೆಯವರು ಬಂದು ಎತ್ತಲಿ’ ಎಂದು ಅಂದುಕೊಳ್ಳುವುದಿಲ್ಲ.

ಈ ಭಾವ, ಪ್ರe ಎಚ್ಚರವಾಗಿರುವುದು ಜನರ ಸಾರ್ವಜನಿಕ ವರ್ತನೆಗಳ ಮೇಲೂ ಪರಿಣಾಮ ಬೀರಿದೆ. ಉದಾಹರಣೆಗೆ, ಸಾರ್ವಜನಿಕ ಸ್ಥಳಗಳಲ್ಲಿ, ಹಾದಿ- ಬೀದಿಗಳಲ್ಲಿ ಜಪಾನಿಯರು ಆಹಾರ ಸೇವಿಸುವುದಿಲ್ಲ. ಬೀದಿಯಲ್ಲಿ ನಡೆದಾಡು ತ್ತಾ ಆಹಾರ ಸೇವಿಸುವವರು ವಿರಳ. ಆಹಾರ ಪದಾರ್ಥಗಳು ಬಿದ್ದು ಗಲೀಜಾಗಬಹುದು ಮತ್ತು ಆಹಾರ ಸೇವಿಸಿದ ಬಳಿಕ, ಕಾಗದಗಳನ್ನು ಬಿಸಾಡುವುದು ಸಮಸ್ಯೆಯಾಗಬಹುದೆಂದು ಯಾರೂ ಹಾಗೆ ಮಾಡುವುದಿಲ್ಲ. ಇದಕ್ಕೆ ಅಪವಾದವೇ ಇಲ್ಲ ಅನ್ನುವಂತಿಲ್ಲ. ಆದರೆ ಬೇರೆಯವರು ಕಸ ಎಸೆದರೂ ಅದನ್ನು ಮೊದಲು ನೋಡಿದವರೇ ಎತ್ತಿ ಎಲ್ಲಿಡಬೇಕೋ ಅಲ್ಲಿ ಇಡುತ್ತಾರೆ. ಇದರಿಂದ ಕಸ ಹುಟ್ಟುವ ಪ್ರಮಾಣವೇ ಕಡಿಮೆಯಾಗುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಬುಟ್ಟಿಗಳ ಅಗತ್ಯ ಉದ್ಭವಿಸುವುದಿಲ್ಲ. ವಿಪರೀತವಾಗಿ ಕುಡಿದು ಕೆಲವರು ರಸ್ತೆಯಲ್ಲಿ ಬೀಳಬಹುದು, ಆದರೆ ರಸ್ತೆಯಲ್ಲಿ ಕಸ ಮಾತ್ರ ಬೀಳುವುದಿಲ್ಲ. ಜಪಾನಿನ ಸಂಸ್ಕೃತಿಯಲ್ಲಿ ಒಟ್ಟಾಗಿ ಬಾಳುವುದಕ್ಕೆ ಮತ್ತು ಸಮುದಾಯದ ಕಲ್ಯಾಣಕ್ಕೆ ಒತ್ತುನೀಡುತ್ತಾರೆ.

ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ತಮ್ಮದೇ ಯೋಗದಾನ
ನೀಡಲು ಮುಂದಾಗುತ್ತಾರೆ. ‘ತಮ್ಮ ಕಸವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು’ ಎಂಬ ಸಂಸ್ಕೃತಿಯನ್ನು
ಜಪಾನಿಯರು ನಿತ್ಯಜೀವನದಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಈ
ದೃಷ್ಟಿಕೋನವು ಕೇವಲ ಶಿಸ್ತು ಮತ್ತು ಸ್ವಚ್ಛತೆಯಲ್ಲ, ಅವರ ಸಾಮಾಜಿಕ ಜವಾಬ್ದಾರಿಯ ಅರಿವಿನ ಪ್ರತೀಕವಾಗಿದೆ.

ಜಪಾನಿಯರ ರಕ್ತದಲ್ಲಿ ಕಸದ ಬಗ್ಗೆ ಅದೆಂಥ ಕಟು ನಿರಾಕರಣೆ ಅಥವಾ ಉಗ್ರ ತಿರಸ್ಕಾರವಿದೆಯೆಂದರೆ, ಅವರು
ಕಸ ನಿರ್ವಹಣೆಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಸ್ಮಾರ್ಟ್ ಬಿನ್ (Smart Bins)ಗಳುಜಪಾನಿನ ಸ್ವಚ್ಛತೆಯ ಅನುಕೂಲತೆ, ತಂತ್ರಜ್ಞಾನದಲ್ಲಿ ಪ್ರಗತಿ ಮತ್ತು ಪರಿಸರ ಸಂರಕ್ಷಣೆಯ ಔನ್ನತ್ಯವನ್ನು ಪ್ರತಿಬಿಂಬಿಸುತ್ತವೆ. ತೀರಾ ಅಗತ್ಯ ಎಂದು ಅನಿಸುವ ಕಡೆಗಳಲ್ಲಿ, ಕೋಲ್ಡ್ ಡ್ರಿಂಕ್ಸ್ ಇರುವ ವೆಂಡಿಂಗ್ ಮಶೀನ್ ಇರುವ ಸ್ಥಳಗಳಲ್ಲಿ, ರೈಲು ನಿಲ್ದಾಣದಲ್ಲಿ ಸ್ಮಾರ್ಟ್ ಬಿನ್ ಗಳನ್ನಿಡಲಾಗಿದೆ. ಆ ಬಿನ್‌ಗಳಿಗೆ ಸೆನ್ಸರ್ ಅಳವಡಿಸಲಾಗಿದೆ. ಬಿನ್ ತುಂಬಿದಾಗ ಅಥವಾ ಕಸದ ಒತ್ತಡ ಹೆಚ್ಚಾದಾಗ ತಕ್ಷಣವೇ ಅದು ಸೂಚನೆಯನ್ನು ನೀಡುತ್ತದೆ. ಬೀಪ್ ಸಂದೇಶವನ್ನು ಕಳಿಸುತ್ತದೆ. ಈ ಸೆನ್ಸರ್‌ಗಳು ತೊಟ್ಟಿಯೊಳಗಿರುವ ಕಸದ ಗುಣವನ್ನು ಸಹ ಗುರುತಿಸುತ್ತವೆ. ಉದಾಹರಣೆಗೆ ಪ್ಲಾಸ್ಟಿಕ್, ಲೋಹ, ಗಾಜು…ಇತ್ಯಾದಿ.

ಕಸ ವಿಂಗಡಣೆಗೆ ಸಂಪೂರ್ಣ ಸಮರ್ಪಕ ತಂತ್ರಜ್ಞಾನವನ್ನು ಜಪಾನ್ ಬಳಸುತ್ತಿದೆ. ಕೆಲ ಸ್ಮಾರ್ಟ್ ಬಿನ್‌ಗಳು ಕಸದ
ವಸ್ತುಗಳನ್ನು ಸ್ವಯಂಚಾಲಿತ (Automatic Sorting) ವಾಗಿ ವಿಂಗಡಿಸುತ್ತವೆ. ಬಿನ್ ಮೇಲಿರುವ ಬಟನ್ ಅಮುಕಿದರೆ ಪ್ಲಾಸ್ಟಿಕ್, ಗಾಜು, ಲೋಹ, ಮತ್ತು ಬಯೋಡಿಗ್ರೇಡಬಲ್ ವಸ್ತುಗಳು ಪ್ರತ್ಯೇಕವಾಗಿ ವಿಂಗಡಣೆಯಾಗುತ್ತವೆ.

ಇಂಧನ ಉಳಿಸಲು ಸ್ಮಾರ್ಟ್ ಬಿನ್‌ಗಳ ಮೇಲೆ ಸೋಲಾರ್ ಪ್ಯಾನಲ್ ಜೋಡಿಸಿ, ಸೌರಶಕ್ತಿಯಿಂದ ಕಾರ್ಯ ನಿರ್ವ ಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸೌರಶಕ್ತಿ ಬಳಸಿ ಕಸದತೊಟ್ಟಿಯೊಳಗಿನ ತಾಪಮಾನವನ್ನು ಸಹ ನಿಯಂತ್ರಿಸಲಾಗುತ್ತದೆ. ಇದು ಕಸ ಕೆಡದಂತೆ, ವಾಸನೆ ಬರದಂತೆ ತಡೆಗಟ್ಟಲು ಸಹಾಯಕ. ಕೆಲವು ಬಿನ್‌ಗಳು ಆಧುನಿಕ ಸ್ವಚ್ಛತಾ ವ್ಯವಸ್ಥೆ ಹೊಂದಿವೆ, ಇವು ಅವುಗಳ ಒಳಗೆ ಹರಿಯುವ ಕಸದ ದ್ರವವನ್ನು ಶುದ್ಧೀಕರಿಸುತ್ತವೆ. ಇನ್ನು ಕೆಲವು ಬಿನ್‌ಗಳಲ್ಲಿ ಕಸದಿಂದ ಉತ್ಪನ್ನವಾಗುವ ದ್ರವಗಳನ್ನು ಹೀರಿಕೊಳ್ಳುವ ವ್ಯವಸ್ಥೆಯೂ ಇದೆ. ಅಕ್ಷರಶಃ ಈ ತೊಟ್ಟಿಗಳು ಸಂದೇಶ, ಬೀಪ್, ಸೂಚನೆಗಳ ಮೂಲಕ ಮಾತಾಡುತ್ತವೆ!

ವಿಶೇಷವೆಂದರೆ, ಈ ಸ್ಮಾರ್ಟ್ ಬಿನ್‌ಗಳನ್ನು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮೂಲಕ ಸಾರ್ವಜನಿಕ ಸ್ವಚ್ಛತಾ
ತಂತ್ರeನ ಜಾಲಕ್ಕೆ ಬೆಸೆಯಲಾಗಿದೆ. ಬಿನ್ ತುಂಬಿದಾಗ,‌ ಒಳಗೆ ಇರುವ ಕಾಂಪಾಕ್ಟರ್ ಸ್ವಯಂಚಾಲಿತವಾಗಿ ತ್ಯಾಜ್ಯದ
ಮೇಲೆ ಒತ್ತಡ ಹಾಕಿ (compress) ಸಂಕುಚಿತಗೊಳಿಸುತ್ತದೆ. ಇದರಿಂದ ಬಿನ್ ಅದೇ ಗಾತ್ರದ ಸಾಮಾನ್ಯ ಬಿನ್
ಗಿಂತ ಆರು ಪಟ್ಟು ಹೆಚ್ಚು ಕಸವನ್ನು ಹಿಡಿದಿಡಲು ಸಾಧ್ಯವಾಗುತ್ತದೆ. ತೊಟ್ಟಿಗಳ ಮುಚ್ಚಳವನ್ನು ತೆರೆಯಲು
touch-free ವ್ಯವಸ್ಥೆಯೂ ಇದೆ. ಕಾಲಿನಿಂದ ಪೆಡಲ್ ಒತ್ತಿದರೆ ಮುಚ್ಚಳ ತೆರೆಯುತ್ತದೆ. ‌

ತ್ಯಾಜ್ಯ ವಸ್ತುಗಳ ಪ್ರಮಾಣದ ನೋಟಿಫಿಕೇಶನ್‌ಗಳನ್ನು ಆ ಸ್ಮಾರ್ಟ್ ಬಿನ್‌ಗಳು ನಗರ ನಿರ್ವಹಣಾ ಕೇಂದ್ರಗಳಿಗೆ ತಕ್ಷಣವೇ ಕಳುಹಿಸುತ್ತವೆ. ಸಾರ್ವಜನಿಕರು ಕಸವನ್ನು ವಿಂಗಡಿಸಿ ಹಾಕುವಂತಾಗಲು ಮತ್ತು ರಿಸೈಕ್ಲಿಂಗ್ ಅನ್ನು ಪ್ರೋತ್ಸಾಹಿಸಲು, ಹಣದ ಆಮಿಷವನ್ನು ಕೂಡ ಒಡ್ಡಲಾಗಿದೆ. ಸ್ಮಾರ್ಟ್ ಬಿನ್‌ಗೆ ಬಿಯರ್ ಬಾಟಲಿ ಅಥವಾ ಸಾಫ್ಟ್ ಡ್ರಿಂಕ್ಸ್ ಕ್ಯಾನ್ ಹಾಕಿದ ಬಳಿಕ‌ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಕ್ಯಾಶ್ ಬ್ಯಾಕ್ ಪಡೆಯಬಹುದು. ಕಸದ ತೊಟ್ಟಿಗಳೇ ಹಣ ಪಾವತಿ ಮಾಡುತ್ತವೆ. ಸಮಯ ಮತ್ತು ಶ್ರಮದ ಉಳಿತಾಯ ಸ್ಮಾರ್ಟ್ ಬಿನ್‌ಗಳ ಪ್ರಯೋಜನ ಗಳಂದು. ಕಸ ವಿಂಗಡಣೆಗೆ ಹೆಚ್ಚು ಶ್ರಮಪಡಬೇಕಾಗಿಲ್ಲ.

ಬಿನ್‌ಗಳು ಇದನ್ನು ಸ್ವಯಂಚಾಲಿತವಾಗಿ ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ. ಭದ್ರತೆ ದೃಷ್ಟಿಯಿಂದಲೂ ಈ ಬಿನ್‌ಗಳು ಸುರಕ್ಷಿತ. ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ಕಸದ ಗುಣವನ್ನು ತಕ್ಷಣ ಗುರುತಿಸುವುದರಿಂದ, ಸೋಟಕ ಅಥವಾ ಧ್ವಂಸಕ ವಸ್ತು/ ಕಸವನ್ನು ಪತ್ತೆ ಹಚ್ಚಲು ಅನುಕೂಲ. ಅಷ್ಟೇ ಅಲ್ಲ, ಇದರಿಂದ ಪೂರ್ಣ ಪ್ರಮಾಣದಲ್ಲಿ ವಿಂಗಡಣೆ ಹಾಗೂ ರಿಸೈಕ್ಲಿಂಗ್ ಪ್ರಕ್ರಿಯೆ ಜಾರಿಗೊಂಡು, ವಾಯುಮಾಲಿನ್ಯ ಮತ್ತು ಭೂಮಾಲಿನ್ಯ ಗಣನೀಯ ಕಡಿಮೆಯಾಗುತ್ತದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ತಕ್ಷಣವೇ ಕಸ ವಿಂಗಡಣೆ ಮತ್ತು ಸುರಕ್ಷತೆ ಕಾಪಾಡಲು ಸ್ಮಾರ್ಟ್ ಬಿನ್‌ಗಳು ಉಪಯುಕ್ತ.

ಸ್ಮಾರ್ಟ್ ಬಿನ್‌ಗಳಿಂದ ಈಗ ಜಪಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ Smart Garbage Box‌ (SmaGO)‌ ಗಳನ್ನೂ ಅಳವಡಿಸಲಾರಂಭಿಸಿದೆ. ಇದು ಸಹ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಕೃತಕ ಬುದ್ಧಿಮತ್ತೆ (A) ತಂತ್ರಜ್ಞಾನವನ್ನು ಹೊಂದಿದೆ. ಬಿನ್ ಒಳಗಿರುವ ಯಾವ ಯಾವ ವಸ್ತು ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ ಮತ್ತು ರಿಸೈಕ್ಲಿಂಗ್ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುತ್ತದೆ. ಜಪಾನಿನ ಸ್ಮಾರ್ಟ್ ಬಿನ್‌ಗಳು ತಂತ್ರಜ್ಞಾನ ಮತ್ತು ಪರಿಸರದ ನಡುವಿನ ಸಮತೋಲನದ ಆದರ್ಶ ಮಾದರಿ ಎಂಬುದಂತೂ ಸತ್ಯ. ಅದಕ್ಕಿಂತ ಮುಖ್ಯವಾಗಿ ಇವು ಕೇವಲ ಕಸ ನಿರ್ವಹಣಾ ಸಾಧನಗಳಲ್ಲ. ಬದಲಾಗಿ ಸಾರ್ವಜನಿಕರಿಗೆ ಶಿಸ್ತು, ಸ್ವಚ್ಛತೆ, ಅಚ್ಚುಕಟ್ಟುತನ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಸ್ಥಾವರಗಳಾಗಿವೆ.

ನಾಗರಿಕತೆ ಬೆಳೆದು ಶತಶತಮಾನಗಳೇ ಕಳೆದರೂ ನಮಗಿನ್ನೂ ಕನಿಷ್ಠ ಕಸ ನಿರ್ವಹಿಸುವುದು ಗೊತ್ತಿಲ್ಲ. ಎಲ್ಲ
ಹಾದಿ-ಬೀದಿಗಳು ಗಬ್ಬುನಾರುತ್ತಿವೆ. ನಗರಗಳೆಲ್ಲ ಕೊಳೆಗೇರಿ ಗಳಾಗಿವೆ. ಇಷ್ಟು ಸಣ್ಣ ಸಂಗತಿಯೇ ಬೃಹದಾಕಾರದ
ಸಮಸ್ಯೆಯಾಗಿ ಕಾಡುತ್ತಿದೆ. ಜಪಾನಿಯರಿಗೆ ಚಿಂದಿಯೇ ಚಿತ್ರಾನ್ನ! ಅವರು ಕಸದಿಂದ ರಸ ತೆಗೆದು ವಿಕಾಸಗೊಂಡಿ ದ್ದರೆ, ನಮಗೆ ಕಸವೇ ವಿಷವಾಗಿದೆ.

ರಬ್ಬಿಶ್!‌

ಇದನ್ನೂ ಓದಿ: @vishweshwarbhat