ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಜಪಾನಿಯರ ಸಾರ್ವಜನಿಕ ವರ್ತನೆ ವಿಶಿಷ್ಟವಾದುದು. ಎಂಥ ತುರ್ತು ಪರಿಸ್ಥಿತಿಯಲ್ಲೂ ಶಿಸ್ತನ್ನು ಉಲ್ಲಂಘಿಸದೇ ಇರುವುದು ಅವರ ರಕ್ತದಲ್ಲಿ ಅಂತರ್ಗತವಾಗಿದೆ. ಒಂದು ನಿರ್ದಿಷ್ಟ ನಿಯಮ, ಸೂಚನೆಯನ್ನು ಪಾಲಿಸುವುದು ಅದೆಷ್ಟು ಮುಖ್ಯ ಎಂಬುದನ್ನು ಜಪಾನಿಯರನ್ನು ನೋಡಿ ಕಲಿಯಬೇಕು. ತುರ್ತು ಸನ್ನಿವೇಶದಲ್ಲೂ ಸಂಯಮದಿಂದ ವರ್ತಿಸುವುದು ಜಪಾನಿಯರ ಸಮೂಹ ಶಿಸ್ತಿನ ನಡತೆಗೆ ಹಿಡಿದ ಕೈಗನ್ನಡಿ.
ನಾನು ಈ ಲೇಖನವನ್ನು ಸುಮಾರು ಹನ್ನೊಂದು ತಿಂಗಳ ಹಿಂದೆ ಅಂದರೆ ಈ ವರ್ಷದ ಜನವರಿಯಲ್ಲಿ ಬರೆದಿದ್ದು. ಇದು ಹಳೆಯದಾದರೂ, ನಾನು ಮೊನ್ನೆ ಜಪಾನ್ಗೆ ಹೋದಾಗ, ನನಗೆ ಇದು ಪದೇ ಪದೆ ನೆನಪಾಯಿತು. ಈ ಲೇಖನವನ್ನು ನೀವೂ ಓದಿರಬಹುದು. ಓದದವರಿಗೆ ಇದು ಹೊಸ ತಾಗಿ ಕಾಣಬಹುದು. ಓದಿದವರು ಇದನ್ನು ‘ಮರು ಓದು’ ಎಂದು ಪರಿಗಣಿಸಬಹುದು. ಜಪಾನಿನಿಂದ ಬಂದ ಬಳಿಕ, ನನಗೆ ಈ ಅಂಕಣ ವಿಭಿನ್ನ ವಾಗಿ ಕಂಡಿತು. ಜಪಾನ್ ಮತ್ತು ಜಪಾನಿಯರನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಈ ಅಂಕಣ ಮತ್ತು ಅದರಲ್ಲಿ ಪ್ರಸ್ತಾಪಿಸಿದ ಸಂಗತಿಗಳು ಸಹಾಯಕವಾದವು. ಈ ಕಾರಣದಿಂದ ಅದನ್ನು ಇಲ್ಲಿ ನೀಡುತ್ತಿದ್ದೇನೆ.
ಹೊಸ ವರ್ಷದ ಮಾರನೇ ದಿನ (ಜನವರಿ 2 ರಂದು) ಇಡೀ ವಿಶ್ವವೇ ಒಂದು ಕ್ಷಣ ಸ್ತಂಭೀಭೂತವಾಗುವ, ಪವಾಡ ಸದೃಶ ಘಟನೆಯೊಂದು ನಡೆದುಹೋಯಿತು. ಅದು ನಡೆದಿದ್ದು ಜಪಾನಿನದರೂ, ಘಟನೆಯ ಸ್ವರೂಪ ಮತ್ತು ಅದು ಬಿಚ್ಚಿಕೊಂಡ ರೀತಿ ಎಂಥವರನ್ನಾದರೂ ಕಂಗಾಲು
ಮಾಡುವಂತಿತ್ತು. ಜಪಾನ್ ಏರ್ಲೈನ್ಸ್ನ ಏರ್ಬಸ್ ಎ-350 ವಿಮಾನ ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹಠಾತ್ ರನ್ ವೇಗೆ ಬಂದ ಜಪಾನ್ ಕೋ ಗಾರ್ಡ್ನ ಬೊಂಬಾರ್ಡಿಯರ್ ಡ್ಯಾಶ್ 8 ವಿಮಾನಕ್ಕೆ ಡಿಕ್ಕಿ ಹೊಡೆಯಿತು. ಯಾವತ್ತೂ ಲ್ಯಾಂಡ್ ಆಗುವ ವಿಮಾನಕ್ಕೆ ಮೊದಲ ಆದ್ಯತೆ. ಹೀಗಾಗಿ ಕೋ ಗಾರ್ಡ್ನ ವಿಮಾನಕ್ಕೆ ರನ್ ವೇಗೆ ಬರದಂತೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನಿಂದ ಸ್ಪಷ್ಟ ಸೂಚನೆ ಇತ್ತು. ಈ ಸೂಚನೆಯನ್ನು ಖಾತ್ರಿಪಡಿಸಿಕೊಂಡ ನಂತರವೇ ಏರ್ ಬಸ್ ಎ-350 ವಿಮಾನದ ಪೈಲಟ್ ಲ್ಯಾಂಡ್ ಮಾಡಲು
ನಿರ್ಧರಿಸಿದ್ದ.
ಆದರೆ ಕೋ ಗಾರ್ಡ್ನ ವಿಮಾನದ ಪೈಲಟ್ ಏನೆಂದು ಗ್ರಹಿಸಿಕೊಂಡನೋ, ಏರ್ ಟ್ರಾಫಿಕ್ ಕಂಟ್ರೋಲ್ ಎರಡೂ ವಿಮಾನಗಳ ಪೈಲಟ್ಗಳಿಗೆ ತಪ್ಪು ಸೂಚನೆ ನೀಡಿತೋ, ಗೊತ್ತಿಲ್ಲ… ಜಪಾನ್ ಏರ್ಲೈನ್ಸ್ನ ಏರ್ಬಸ್ ಎ-350 ವಿಮಾನ, ರನ್ ವೇಗೆ ಬಂದ ಕೋ ಗಾರ್ಡ್ನ ವಿಮಾನಕ್ಕೆ
ಅಪ್ಪಳಿಸಿತು. ಆ ರಭಸಕ್ಕೆ ರನ್ ವೇಗೆ ಬಂದ ಕೋ ಗಾರ್ಡ್ ವಿಮಾನದಲ್ಲಿದ್ದ ಐವರು ಕರ್ಮಚಾರಿಗಳು ಸತ್ತು ಹೋದರು. ಡಿಕ್ಕಿ ಹೊಡೆದ ತಕ್ಷಣ ಲ್ಯಾಂಡ್ ಆದ ಏರ್ಬಸ್ ಎ-350 ವಿಮಾನಕ್ಕೆ ಬೆಂಕಿ ತಗುಲಿಕೊಂಡಿತು.
ನೋಡನೋಡುತ್ತಿದ್ದಂತೆ, ಇಡೀ ವಿಮಾನ ಬೆಂಕಿಯ ಬೋಗಿಯಂತಾಗಿ ಹೋಯಿತು. ಇಳಿ ಸಾಯಂಕಾಲದ ಸಮಯವಾಗಿದ್ದರಿಂದ ಆ ಬೆಂಕಿ ಐದಾರು ಕಿ.ಮೀ. ದೂರದವರೆಗೆ ಕಾಣಿಸುತ್ತಿತ್ತು. ಇಡೀ ವಿಮಾನ ನಿಲ್ದಾಣದಲ್ಲಿ ಅಯೋಮಯ ವಾತಾವರಣ!
ಜಪಾನ್ ಏರ್ಲೈನ ಏರ್ಬಸ್ ಎ-350 ವಿಮಾನದಲ್ಲಿ 379 ಪ್ರಯಾಣಿಕರಿದ್ದರು. ದುರಂತದ ಪರಿಣಾಮ ಅದೆಷ್ಟು ಘೋರವಾಗಿತ್ತೆಂದರೆ, ಧಗಧಗವೆಂದು ಹೊತ್ತಿ ಉರಿಯುತ್ತಿದ್ದ ಇಡೀ ವಿಮಾನದಲ್ಲಿದ್ದ ಒಬ್ಬನೇ ಒಬ್ಬ ಪ್ರಯಾಣಿಕ ಜೀವ ಸಹಿತ ಬಚಾವ್ ಆಗುವುದು ಸಾಧ್ಯವೇ ಇರಲಿಲ್ಲ. ಹಾಗೆಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿಮಾನ ಲ್ಯಾಂಡ್ ಆದ ಕೇವಲ ಹದಿನೆಂಟು ನಿಮಿಷಗಳಲ್ಲಿ ಎಲ್ಲ 379 ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ, ನಂಬಲೂ ಸಾಧ್ಯವಾಗದ ಬಗೆಯಲ್ಲಿ ಪಾರಾಗಿದ್ದರು. ಇದು ವೈಮಾನಿಕ ಇತಿಹಾಸದಲ್ಲಿಯೇ ಒಂದು ಅದ್ಭುತ ಪವಾಡ ಎಂದು ಭಾವಿಸಲಾಗಿದೆ.
ಏರ್ಬಸ್ ಎ-350 ವಿಮಾನ ಬೆಂಕಿಯ ಉಂಡೆಯಂತಾಗಿ ಹೋದಾಗ, ವಿಮಾನದಲ್ಲಿದ್ದ ಪ್ರಯಾಣಿಕರು ಕಂಗಾಲಾಗಿ ಹೋದರು. ನೆಲದ ಮೇಲಿದ್ದ ಕೋ ಗಾರ್ಡ್ ವಿಮಾನದಲ್ಲಿದ್ದ ಐವರು ಸ್ಥಳದ ಅಸು ನೀಗಿದರೆಂದರೆ ಆ ರಭಸ ಅದೆಷ್ಟು ಭೀಕರವಾಗಿದ್ದಿರಬಹುದು ಎಂಬುದನ್ನು ಊಹಿಸ ಬಹುದು. ಡಿಕ್ಕಿ ಹೊಡೆದ ಕ್ಷಣವೇ ಬೆಂಕಿ ಹೊತ್ತಿಕೊಂಡಿತಲ್ಲ, ಆ ಹೊಡೆತಕ್ಕೆ ವಿಮಾನದೊಳಗಿದ್ದ ಪ್ರಯಾಣಿಕರೆಲ್ಲ ಹೌಹಾರಿಹೋದರು. ವಿಮಾನ ಒಂದು ಕಿ.ಮೀ. ಕ್ರಮಿಸಿ ನಿಲ್ಲುವ ಹೊತ್ತಿಗೆ ಬೆಂಕಿ ಸಂಪೂರ್ಣ ಆವರಿಸಿತ್ತು. ಬೆಂಕಿಯ ಝಳ ವಿಮಾನದೊಳಗೆ ಅನುಭವಕ್ಕೆ ಬರಲಾರಂಭಿಸಿತ್ತು. ವಿಮಾನದ ಬಾಗಿಲನ್ನು ತೆರೆಯುತ್ತಿದ್ದಂತೆ, ಹೊಗೆ ವಿಮಾನದೊಳಕ್ಕೆ ನುಗ್ಗಿ ಪ್ರಯಾಣಿಕರು ಮತ್ತಷ್ಟು ಗಾಬರಿಪಡು ವಂತಾಯಿತು. ಇಂಥ ಸ್ಥಿತಿಯಲ್ಲಿ ಯೋಚಿಸುತ್ತಾ ಕುಳಿತುಕೊಳ್ಳಲು ಸಮಯವೇ ಇರಲಿಲ್ಲ. ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಅಣಿಯಾಗಬೇಕಿತ್ತು.
ಮುಂದಿನ ಹತ್ತು ನಿಮಿಷಗಳಲ್ಲಿ ನಡೆದಿದ್ದು ಪವಾಡವಾದರೂ, ಜಪಾನ್ ಏರ್ಲೈ ಪೈಲಟ್ ಮತ್ತು ಕ್ಯಾಬಿನ್ ಸಹಚರರ ಸಮಯಪ್ರಜ್ಞೆ, ಕಾರ್ಯ ದಕ್ಷತೆ ಮತ್ತು ತುರ್ತುಸ್ಥಿತಿಯಲ್ಲಿ ಅತ್ಯಂತ ಸಮರ್ಪಕ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷತೆ, ಇಡೀ ವಿಶ್ವಕ್ಕೇ ಬಹುದೊಡ್ಡ ಪಾಠವಾಯಿತು. ವಿಮಾನ ಡಿಕ್ಕಿ ಹೊಡೆಯುತ್ತಿದ್ದಂತೆ, ಪೈಲಟ್ ತಕ್ಷಣ ಕಾರ್ಯಪ್ರವೃತ್ತನಾದ. ಧ್ವನಿವರ್ಧಕದಲ್ಲಿ ಪ್ರಯಾಣಿಕರನ್ನುದ್ದೇಶಿಸಿ ಸ್ವಲ್ಪವೂ ಉದ್ವೇಗ ಕ್ಕೊಳಗಾಗದೇ, “ನಿಂತ ವಿಮಾನಕ್ಕೆ ನಮ್ಮ ವಿಮಾನ ಡಿಕ್ಕಿ ಹೊಡೆದಿದೆ. ನಮ್ಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಯಾರೂ ಗಾಬರಿ ಯಾಗಬೇಕಿಲ್ಲ. ನೀವು ಕಂಗಾಲಾದರೆ ನಿಮಗೇ ನಷ್ಟ. ಯಾರೂ ಭಯಭೀತರಾಗಬೇಡಿ. ನಾನು ಮುಂದೆ ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನನ್ನ ಸೂಚನೆಯನ್ನು ಪಾಲಿಸಿದರೆ, ನೀವೂ ಬಚಾವ್ ಆಗುತ್ತೀರಿ, ಉಳಿದವರನ್ನೂ ಬಚಾವ್ ಮಾಡುತ್ತೀರಿ” ಎಂದು
ಘೋಷಿಸಿದ. ಪ್ರಯಾಣಿಕರಿಗೆ ಅಪಘಾತ ಸ್ವರೂಪ ಮತ್ತು ಪರಿಣಾಮ ಅರಿವಿಗೆ ಬಂದಿತ್ತು.
ಅಷ್ಟರೊಳಗೆ ಬೆಂಕಿ ನಿಧಾನವಾಗಿ ಆವರಿಸಿಕೊಳ್ಳಲಾರಂಭಿಸಿತ್ತು. ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಷಿಸಲಾಗಿತ್ತು. ಅಗ್ನಿಶಾಮಕ ದಳಕ್ಕೆ
ಸೂಚನೆ ಹೋಗಿತ್ತು. ಆದರೆ ರನ್ ವೇಯಲ್ಲಿ ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಬೆಂಕಿಯ ಕೆನ್ನಾಲಿಗೆ ಬಹುಬೇಗ ವಿಮಾನವನ್ನು ಆವರಿಸಿ ಕೊಳ್ಳುವ ಸೂಚನೆ ಪೈಲಟ್ಗೆ ಸಿಕ್ಕಿತು. ಆತ ವಿಮಾನದೊಳಗಿದ್ದ ಸಹಚರರನ್ನು ಮುಂದಿನ ಕಾರ್ಯಾಚರಣೆಗೆ ಅಣಿಗೊಳ್ಳುವಂತೆ ಹೇಳಿದ. ವಿಮಾನದಲ್ಲಿ ಎಂಟು ತುರ್ತು ನಿರ್ಗಮನ ದ್ವಾರಗಳಿದ್ದರೂ, ಐದು ದ್ವಾರಗಳಲ್ಲಿ ಬೆಂಕಿ ಪಸರಿಸಿದ್ದರಿಂದ, ಎಲ್ಲವನ್ನೂ ಬಳಸುವಂತಿರಲಿಲ್ಲ. ಪ್ರಯಾಣಿಕರನ್ನು ಹೊರಗೆ ಕಳಿಸಲು ಕೇವಲ ಮೂರು ದ್ವಾರಗಳನ್ನು ಬಳಸಬಹುದಿತ್ತು. ಎಂಟು ದ್ವಾರಗಳ ಪೈಕಿ ಮೂರು ಮಾತ್ರ ಬಳಕೆಗೆ ಸುರಕ್ಷಿತವಾಗಿದ್ದರಿಂದ, ಅಲ್ಲಿ ನೂಕುನುಗ್ಗಲಾಗುವ ಸಾಧ್ಯತೆ ಇತ್ತು.
ಆಗ ಪೈಲಟ್ ಧ್ವನಿವರ್ಧಕದ ಮೂಲಕ, “ಯಾರೂ ಕ್ಯಾಬಿನ್ನಲ್ಲಿರುವ ನಿಮ್ಮ ಬ್ಯಾಗ್ ಮತ್ತು ಸೂಟ್ಕೇಸ್ ಗಳನ್ನು ತೆಗೆಯಕೂಡದು. ನಿಮ್ಮ ಜೀವಕ್ಕಿಂತ ನಿಮ್ಮ ಬ್ಯಾಗ್, ಸೂಟ್ಕೇಸ್ ಮುಖ್ಯವಲ್ಲ. ಅವುಗಳನ್ನು ಹೊತ್ತೊಯ್ಯುವ ಭರದಲ್ಲಿ ನಿಮ್ಮ ಜೀವವನ್ನು ಬಲಿಕೊಡಬೇಡಿ. ಇದರಿಂದ
ಇತರರಿಗೂ ಅನಾನುಕೂಲವಾಗುವುದು. ಬ್ಯಾಗಿನೊಳಗೆ ಎಷ್ಟೇ ಅಮೂಲ್ಯ ವಸ್ತುಗಳಿದ್ದರೂ ನಿಮ್ಮ ಪ್ರಾಣಕ್ಕಿಂತ ಅಮೂಲ್ಯವೇನಲ್ಲ. ಈಗ ನೀವೆಲ್ಲ ತುರ್ತು ನಿರ್ಗಮನ ದ್ವಾರದತ್ತ ಹೊರಡಲು ಸಜ್ಜಾಗಿ. ಜಾರು ಬಂಡೆಯಂಥ ಇಳುಕಲು ತೆರೆದುಕೊಂಡಿದೆ. ಅದು ಸುರಕ್ಷಿತ. ಅದರಲ್ಲಿ ಜಾರುವ ಮೂಲಕ ಇಳಿಯಿರಿ. ಬ್ಯಾಗ್ ಹೊತ್ತು ಜಾರುವುದು ಅಸಾಧ್ಯ. ಹೀಗಾಗಿ ನೀವೊಬ್ಬರೇ ಇಳಿಯಿರಿ.
ಮೊದಲು ನೀವು ಬಚಾವ್ ಆಗಿ” ಎಂದು ಕಟ್ಟುನಿಟ್ಟಾಗಿ ಹೇಳಿದ. ಅಂದಿನ ಚಿತ್ರಣವನ್ನು ಮನದಮ್ಮೆ ಕಲ್ಪಿಸಿಕೊಳ್ಳಿ.. ಒಂದೆಡೆ ಡಿಕ್ಕಿ ಹೊಡೆದ ರಭಸಕ್ಕೆ ಕಲ್ಲವಿಲವಾದ ಪ್ರಯಾಣಿಕರು, ಇನ್ನೊಂದೆಡೆ ಬೆಂಕಿ ಹೊತ್ತಿಕೊಂಡ ವಿಮಾನ. ಹೊಗೆ ನುಗ್ಗಿ ಉಸಿರುಗಟ್ಟುವ ಪರಿಸ್ಥಿತಿ. ಆದರೆ
ವಿಮಾನದೊಳಗೆ ಪ್ರಯಾಣಿಕರು ಕಂಗಾಲುಪೆಟ್ಟಿಗೆಯಾಗಿರಲಿಲ್ಲ. ತಳ್ಳಾಟ, ನೂಕಾಟ, ಕಿರುಚಾಟಗಳಿಗೆ ಆಸ್ಪದವಿರಲಿಲ್ಲ. ಒಬ್ಬರನ್ನು ಹಿಂದಿಕ್ಕಿ
ಮುಂದಕ್ಕೆ ನುಗ್ಗುವ ಹಾಕ್ಯಾಟಗಳೂ ಇರಲಿಲ್ಲ. ಆದರೆ ಸಮಯ ಯಾರಿಗೂ ಕಾಯುವುದಿಲ್ಲ. ಪ್ರತಿ ಕ್ಷಣವನ್ನೂ ಫಾರ್ವರ್ಡ್ ಮಾಡಿದಂಥ ಸ್ಥಿತಿ. ಅಷ್ಟೊತ್ತಿಗೆ ವಿಮಾನದೊಳಗಿನ ಸಂಪರ್ಕ ವ್ಯವಸ್ಥೆ ಸ್ಥಗಿತವಾಗಿಬಿಟ್ಟಿತು.
ಪೈಲಟ್ ಮತ್ತು ಸಹಚರರು ಜೋರಾಗಿ ಕಿರುಚಿಕೊಳ್ಳುವುದರ ಹೊರತಾಗಿ ಬೇರೆ ಸಂಪರ್ಕ ವ್ಯವಸ್ಥೆಯಿರಲಿಲ್ಲ. ಆ ಸಂದರ್ಭದಲ್ಲೂ ವಿಮಾನದ ಸಹಚರರು ತಮ್ಮ ತಮ್ಮ ಜೀವಗಳನ್ನು ಬಚಾವ್ ಮಾಡಿಕೊಳ್ಳಲು ಪ್ರಯಾಣಿಕರಿಗಿಂತ ಮೊದಲೇ ಜಾರಿ ಹೋಗಲಿಲ್ಲ. ಮೂರು ದ್ವಾರಗಳ ಸನಿಹ
ನಿಂತು ಪ್ರತಿಯೊಬ್ಬ ಪ್ರಯಾಣಿಕರನ್ನೂ ರಕ್ಷಿಸಲು ಹೆಣಗುತ್ತಿದ್ದರು. ಈ ಮಧ್ಯೆ, ವಿಮಾನದಲ್ಲಿ ಸ್ಪೋಟವಾದ ಸದ್ದುಗಳು ಕೇಳಿಬರುತ್ತಿದ್ದವು. ಬೆಂಕಿಯ ತೀವ್ರತೆ ಹೆಚ್ಚುತ್ತಿತ್ತು. ಸಮಯ ಕ್ಷಿಪ್ರಗತಿಯಲ್ಲಿ ಜಾರುತ್ತಿತ್ತು. ಪೈಲಟ್ ಮತ್ತು ಸಹಚರರ ಉದ್ವೇಗ ಜಾಸ್ತಿಯಾಗಲಾರಂಭಿಸಿತು. ಸಾಮಾನ್ಯ
ಸಂದರ್ಭದಗಿದ್ದರೆ, 379 ಮಂದಿ ಪ್ರಯಾಣಿಕರನ್ನು ವಿಮಾನದಿಂದ ಖಾಲಿ ಮಾಡಿಸಲು ಕನಿಷ್ಠ ಇಪ್ಪತ್ತು-ಮೂವತ್ತು ನಿಮಿಷಗಳು ಬೇಕು. ಆದರೆ ಅಂದು ಇದ್ದ ಸಮಯ ಕೇವಲ ಒಂದು-ಒಂದೂವರೆ ನಿಮಿಷ! ಕ್ಯಾಪ್ಟನ್ ದ್ವಾರದ ಬಳಿ ನಿಂತು ತನ್ನ ಸಹಚರರಿಗೆ ಮತ್ತು ಪ್ರಯಾಣಿಕರಿಗೆ ಸ್ಪಷ್ಟ ಮತ್ತು ನಿರ್ದಿಷ್ಟ ಸೂಚನೆಗಳನ್ನು ನೀಡುತ್ತಿದ್ದ. 440 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಎ-350-900 ವಿಮಾನ, ಎಂಟು ನಿರ್ಗಮನ ದ್ವಾರಗಳ ಮೂಲಕ ತೊಂಬತ್ತು ಸೆಕೆಂಡುಗಳಲ್ಲಿ ಎಲ್ಲರನ್ನೂ ಖಾಲಿ ಮಾಡುವ ವ್ಯವಸ್ಥೆಯನ್ನು ಹೊಂದಿದೆ.
ಆದರೆ ಅಂದು ಐದು ನಿರ್ಗಮನ ದ್ವಾರಗಳಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಆ ಮಾರ್ಗವನ್ನು ಬಳಸುವಂತಿರಲಿಲ್ಲ. ಮೂರು ದ್ವಾರಗಳ ಮೂಲಕ 379 ಮಂದಿ ಪ್ರಯಾಣಿಕರನ್ನು ಬಚಾವ್ ಮಾಡುವುದು ನಿಜಕ್ಕೂ ಅಸಾಧ್ಯ ಎಂದೇ ಪರಿಗಣಿತವಾದ ಸನ್ನಿವೇಶದಲ್ಲಿ ಅವರೆಲ್ಲರನ್ನೂ
ಸುರಕ್ಷಿತವಾಗಿ ಹೊರಕ್ಕೆ ಕಳಿಸಿದ್ದು, ಯಾರೂ ಪ್ರಾಣಾಪಾಯಕ್ಕೆ ತುತ್ತಾಗದಂತೆ ಎಚ್ಚರವಹಿಸಿದ್ದು ಕಲ್ಪನೆಗೂ ನಿಲುಕದ್ದು. ಅಂದು ವಿಮಾನದ ಪೈಲಟ್ ಮತ್ತು ಸಿಬ್ಬಂದಿ ಮಾತ್ರ ಅಲ್ಲ, ಪ್ರಯಾಣಿಕರು ವರ್ತಿಸಿದ ರೀತಿಯೂ ಸಿಂಪ್ಲಿ ಗ್ರೇಟ್. ಯಾರೂ ಕಕ್ಕಾಬಿಕ್ಕಿಯಾಗಿ, ತಲ್ಲಣಗೊಂಡು ಅನಗತ್ಯ ನೂಕು ನುಗ್ಗಲು, ತಳ್ಳಾಟಕ್ಕೆ ಆಸ್ಪದ ನೀಡದೇ, ಆ ತುರ್ತು ಸನ್ನಿವೇಶದಲ್ಲಿ ಸಂಯಮದಿಂದ ವರ್ತಿಸಿದ್ದು ಸಮೂಹ ಶಿಸ್ತಿನ ನಡತೆಗೆ ಹಿಡಿದ ಕೈಗನ್ನಡಿ. ಆ ಪೈಕಿ ಒಂದಿಬ್ಬರ ದುರ್ವರ್ತನೆ ಅಲ್ಲಿದ್ದ ಎಲ್ಲರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು. ಆದರೆ ಯಾರೂ ಅಂಥದಕ್ಕೆ ಅವಕಾಶವನ್ನೇ ನೀಡಲಿಲ್ಲ. ಬೇರೆಯವರು ಹಾಳಾಗಿ ಹೋಗಲಿ, ನಾನು ಮೊದಲು ಬಚಾವ್ ಆಗಬೇಕು, ಪೈಲಟ್ಗೇನು ಗೊತ್ತು ನನ್ನ
ಬ್ಯಾಗಿನಲ್ಲಿ ಅವೆಷ್ಟು ಅಮೂಲ್ಯ ಸಾಮಾನುಗಳಿವೆ, ಕಾಗದ ಪತ್ರಗಳಿವೆ, ಹಣವಿದೆ, ಹೀಗಾಗಿ ಹ್ಯಾಂಡ್ಬ್ಯಾಗ್ ಎತ್ತಿಕೊಳ್ಳೋಣ ಎಂದು ಯಾರೂ ಕ್ಯಾಬಿನ್ಗೆ ಕೈ ಹಾಕಲಿಲ್ಲ. ಯಾರಾದರೂ ಒಬ್ಬ ಹಾಗೆ ಮಾಡಿದ್ದರೆ, ಉಳಿದವರೂ ಹಾಗೆ ಡುತ್ತಿದ್ದರು. ಆಗ ವಿಮಾನದ ಇಕ್ಕಟ್ಟಾದ ಜಾಗದಲ್ಲಿ
ಬೇಗ ಬೇಗ ನಡೆಯಲು ಸಾಧ್ಯವಾಗದೇ, ಪ್ರಯಾಣಿಕರನ್ನು ಖಾಲಿ ಮಾಡುವ ಕಾರ್ಯಾಚರಣೆ ವಿಳಂಬವಾಗುತ್ತಿತ್ತು. ಆದರೆ ಯಾರೂ ಕ್ಯಾಬಿನ್ಗೆ ಕೈಹಾಕಲು ಹೋಗಲಿಲ್ಲ.
ಅದಕ್ಕಿಂತ ಹೆಚ್ಚಾಗಿ ಪೈಲಟ್ ಮತ್ತು ಸಿಬ್ಬಂದಿ ನೀಡುತ್ತಿದ್ದ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಇದಕ್ಕೆ ಜಪಾನ್ ದೇಶದ ಜನರ ಸಾರ್ವಜನಿಕ ವರ್ತನೆ ಕಾರಣ. ಎಂಥ ತುರ್ತು ಪರಿಸ್ಥಿತಿಯಲ್ಲೂ ಶಿಸ್ತನ್ನು ಉಲ್ಲಂಘಿಸದೇ ಇರುವುದು ಅವರ ರಕ್ತದಲ್ಲಿ ಅಂತರ್ಗತವಾಗಿದೆ. ಒಂದು ನಿರ್ದಿಷ್ಟ ನಿಯಮ, ಸೂಚನೆಯನ್ನು ಪಾಲಿಸುವುದು ಅದೆಷ್ಟು ಮುಖ್ಯ ಎಂಬುದನ್ನು ಜಪಾನಿಯರನ್ನು ನೋಡಿ ಕಲಿಯಬೇಕು ಎಂಬುದು ಇನ್ನೊಮ್ಮೆ ಸಾಬೀತಾದಂತಾಗಿದೆ.
2016ರ ಆಗ 3 ರಂದು ತಿರುವನಂತಪುರದಿಂದ ದುಬೈಗೆ ಹೋಗುವ ಎಮಿರೇಟ್ಸ್ ವಿಮಾನ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 282 ಪ್ರಯಾಣಿಕರು ಸೇರಿದಂತೆ ಮುನ್ನೂರು (18 ವಿಮಾನ ಸಿಬ್ಬಂದಿ)
ಜನರಿದ್ದರು. ಅದೃಷ್ಟವಶಾತ್ ಎಲ್ಲರೂ ಬಚಾವ್ ಆದರು. ಆದರೆ ಅಂದು ವಿಮಾನದೊಳಗೆ ಪ್ರಯಾಣಿಕರು ವರ್ತಿಸಿದ ರೀತಿ ಅತ್ಯಂತ ಕೆಟ್ಟಾದಾಗಿತ್ತು. ಅವರದು ನಾಗರಿಕ ಸಮಾಜದ ವರ್ತನೆಯಾಗಿರಲಿಲ್ಲ. ಒಬ್ಬರನ್ನು ಇನ್ನೊಬ್ಬರು ನೂಕಿದರು, ಕೆಳಕ್ಕೆ ಕೆಡವಿದರು, ಕಾಲಿನಲ್ಲಿ ತುಳಿದರು, ಜೀವ ರಕ್ಷಿಸಿಕೊಳ್ಳುವ ಭರದಲ್ಲಿ ಹೆಂಗಸರು-ಮಕ್ಕಳು-ವೃದ್ಧರು ಎಂಬುದನ್ನು ನೋಡದೇ ತಳ್ಳಾಡಿದರು.. ಅದಕ್ಕಿಂತ ಹೆಚ್ಚಾಗಿ, ಯಾರೂ ಹ್ಯಾಂಡ್ಬ್ಯಾಗ್ ತೆಗೆದುಕೊಂಡು ಹೋಗಬಾರದು ಎಂದು ಪೈಲಟ್ ಮತ್ತು ಸಿಬ್ಬಂದಿ ಪದೇ ಪದೆ ಹೇಳಿದರೂ ಅವರ ಮಾತನ್ನು ಯಾರೂ ಲಕ್ಷಿಸಲಿಲ್ಲ. ವಿಮಾನದಿಂದ ಹೊರಗೆ ದೌಡಾಯಿಸುವಾಗ ಬಹುತೇಕ ಎಲ್ಲರ ಕೈಗಳಲ್ಲೂ ಬ್ಯಾಗುಗಳಿದ್ದವು. 1990ರ ಫೆಬ್ರವರಿ 14ರಂದು ಬೆಂಗಳೂರಿನಲ್ಲಿ ಇಂಡಿಯನ್ ಏರ್ಲೈನ ಏರ್ಬಸ್ ಅಪಘಾತಕ್ಕೀಡಾದಾಗ ೯೨ ಜನ ಸತ್ತರು. ಬದುಕುಳಿದವರ ಕೈಯಲ್ಲಿ ಹ್ಯಾಂಡ್ಬ್ಯಾಗು ಗಳಿದ್ದವು!
ವಿಮಾನ ಹಾರುವ ಮುನ್ನ ಪ್ರಯಾಣಿಕರುಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಗಗನಸಖಿಯರು ಖುದ್ದಾಗಿ ಆಂಗಿಕ ಸೂಚನೆ ನೀಡುತ್ತಾರೆ. ಆದರೆ ಬಹುತೇಕ ಪ್ರಯಾಣಿಕರು ಗಮನಿಸುವುದಿಲ್ಲ. ಒಮ್ಮೆ ಗಮನಿಸಿದರೂ ಪಾಲಿಸುವುದಿಲ್ಲ. ವಿಮಾನ ಹಾರುವಾಗ ಮತ್ತು ಇಳಿಯುವಾಗ ಸೀಟ್ ಬೆಲ್ಟ ಕಟ್ಟಿಕೊಳ್ಳಬೇಕು ಎಂಬುದು ಸಾಮಾನ್ಯ ನಿಯಮವಾದರೂ ಎಲ್ಲರೂ ಅದನ್ನು ಪಾಲಿಸುವುದಿಲ್ಲ. ವಿಮಾನ ಇಳಿಯುವಾಗ 32 ಸುರಕ್ಷತಾ ಕ್ರಮಗಳನ್ನು ಪೈಲಟ್ ಪಾಲಿಸಬೇಕಾಗುತ್ತದೆ. ಆ ಪೈಕಿ ಪ್ರಯಾಣಿಕರು ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದೂ ಒಂದು. ಇವುಗಳ ಪೈಕಿ ಒಂದೆರಡು ಕ್ರಮಗಳನ್ನು ಪಾಲಿಸದಿದ್ದರೂ ಸಣ್ಣ ಜರ್ಕ್ ಉಂಟಾಗುತ್ತದೆ ಎಂಬ ಎಚ್ಚರ ಪ್ರಯಾಣಿಕರಿಗೆ ಇರುವುದಿಲ್ಲ. ವಿಮಾನದೊಳಗಿನ ಒಬ್ಬನ ವರ್ತನೆ ಇಡೀ ವಿಮಾನದ ಸುರಕ್ಷತೆಯನ್ನು ಆಧರಿಸಿರುತ್ತದೆ. ಟಾಯ್ಲೆಟ್ಗೆ ಹೋಗಿ ಒಬ್ಬ ಸಿಗರೇಟು ಹಚ್ಚಿದರೆ ಏನಾಗಬಹುದು, ಯೋಚಿಸಿ.
ಅಂದು ಜಪಾನ್ ಏರ್ಲೈನಲ್ಲಿ ಪ್ರಾಣ ಬದುಕಿಸಿಕೊಂಡ ಎಲ್ಲ 379 ಮಂದಿಯ ವರ್ತನೆಯನ್ನು ಆ ದೇಶವೊಂದೇ ಅಲ್ಲ, ಇಡೀ ಜಗತ್ತು ಪ್ರಶಂಸಿ ಸುತ್ತಿದೆ. ವಿಮಾನ ಪ್ರಯಾಣಿಕರಿಗೆ ಇವರು ಯಾವಜ್ಜೀವ ಆದರ್ಶ ಎಂದು ಎಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರಾಗಿ ವಿಮಾನದಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬುದಕ್ಕೆ ಇವರು ರೋಲ್ ಮಾಡೆಲ್ಗಳಾಗಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ ನಡೆದ ಈ ಪ್ರಸಂಗ ಎಲ್ಲರಿಗೂ ಪಾಠವಾಗಬೇಕು.
ಇದನ್ನೂ ಓದಿ: @vishweshwarbhat