Sunday, 18th May 2025

Vidwan Hrishikeshacharya Mathada Column: ಮಣಿಮಂಜರಿ ಎಂಬುದು ಪ್ರಾಮಾಣಿಕ ಕೃತಿ, ಅದರ ಬಗ್ಗೆ ಅಪಲಾಪ ಸಲ್ಲ…

ಪ್ರತಿಸ್ಪಂದನ

ವಿದ್ವಾನ್‌ ಹೃಷಿಕೇಶಾಚಾರ್ಯ ಮಠದ

ಯಾವುದೇ ಗ್ರಂಥವನ್ನು ಸೂಕ್ಷ್ಮವಾಗಿ ವಿಮರ್ಶೆ ಮಾಡದೇ, ಅದರ ಬಗ್ಗೆ ಟೀಕೆ ಮಾಡುವುದು ಪ್ರಜ್ಞಾವಂತರ
ಲಕ್ಷಣವಲ್ಲ. ಸತ್ಯ ಯಾವತ್ತೂ ಶುದ್ಧವಾಗಿರುತ್ತದೆ, ಆದರೆ ಅದು ಅಂದವಾಗಿಯೇ ಇರಬೇಕೆಂದಿಲ್ಲ. ಅಂದವಾಗಿಲ್ಲ ಎಂಬ ಕಾರಣಕ್ಕೆ ಸತ್ಯವನ್ನು ‘ಸತ್ಯವಲ್ಲ’ ಎಂದು ಜರೆಯುವುದು ಸರಿಯಲ್ಲ. ಅದೇ ರೀತಿ, ಅಂದವಾಗಿ ಇರುವು ದೆಲ್ಲವೂ ಸತ್ಯವೇ ಆಗಬೇಕೆಂದಿಲ್ಲ. ಅಂದವಾದ ಎಷ್ಟೋ ಮಾತುಗಳು ಸತ್ಯಕ್ಕೆ ದೂರವಾಗಿರುವುದು ಕಂಡಿದೆ.

ಸಾಕಷ್ಟು ಬುದ್ಧಿಜೀವಿಗಳು ಮನುಸ್ಮೃತಿ, ಭಗವದ್ಗೀತೆಯ ಅನೇಕ ವಿಚಾರಗಳನ್ನು ಸರಿಯಾಗಿ ತಿಳಿಯದೇ ಅಪಲಾಪ
ಮಾಡುತ್ತಾರೆ. ಆದರೆ, ಒಬ್ಬರಿಗೆ ಇಷ್ಟವಾಗದ ಮಾತ್ರಕ್ಕೆ ಸತ್ಯ ಬದಲಾಗುವುದಿಲ್ಲ. ಶಂಕರರು ತಮ್ಮ ಭಾಷ್ಯದಲ್ಲಿ ವೇದಾಧಿಕಾರದ ಬಗ್ಗೆ ಹೇಳಿದ್ದನ್ನು ಎಷ್ಟೋ ಜನರು ಸಹಿಸದೇ, ಶಂಕರರನ್ನು ಟೀಕಿಸಿದ್ದಿದೆ.

ಹಾಗಾಗಿ ಸತ್ಯನಿಷ್ಠರಾದವರು ಸತ್ಯ ಹೇಳುವುದಕ್ಕೆ ಮಹತ್ವ ಕೊಡುತ್ತಾರೆಯೇ ವಿನಾ, ಜನರ ಇಷ್ಟಾನಿಷ್ಟಗಳನ್ನು ಅನುಸರಿಸಿ ಸತ್ಯವನ್ನು ಮುಚ್ಚಿಡುವುದಿಲ್ಲ. ಭಾರತದ ಪ್ರಾಚೀನ ಗ್ರಂಥಕಾರರು ತಾವು ಕಂಡ ಸತ್ಯವನ್ನು ಅತ್ಯಂತ ಸ್ಪಷ್ಟವಾಗಿ ತಮ್ಮ ಗ್ರಂಥಗಳಲ್ಲಿ ದಾಖಲೆ ಮಾಡಿದ್ದಾರೆ. ಆ ಗ್ರಂಥಕಾರರ ಸಾಲಿನಲ್ಲಿ ಬರುವವರು ಶ್ರೀ ನಾರಾಯಣ ಪಂಡಿತಾಚಾರ್ಯರು. 13ನೇ ಶತಮಾನದಲ್ಲಿ ಬಂದ ನಾರಾಯಣ ಪಂಡಿತರು, ಶ್ರೀ ಮಧ್ವಾಚಾರ್ಯರ ಶಿಷ್ಯರಾದ ತ್ರಿವಿಕ್ರಮ ಪಂಡಿತಾಚಾರ್ಯರ ಮಕ್ಕಳು. ನಾನಾ ಶಾಸ್ತ್ರಗಳ ಪಾಂಡಿತ್ಯದ ಜತೆಗೆ ಅದ್ಭುತವಾದ ಕವಿತ್ವವನ್ನು ಹೊಂದಿದವರು. ಅನೇಕ ಶಾಸಗ್ರಂಥಗಳನ್ನೂ, ಐತಿಹಾಸಿಕ ವಿಷಯವನ್ನೊಳಗೊಂಡ ಕೃತಿಗಳನ್ನೂ ಬರೆದಿದ್ದಾರೆ.

ಅವುಗಳಲ್ಲಿ ‘ಮಣಿಮಂಜರಿ’ ಎಂಬ ಗ್ರಂಥವೂ ಒಂದು. ಇದರಲ್ಲಿ ರಾಮಾಯಣ, ಮಹಾಭಾರತದ ಕಥೆಗಳ ಸಂಗ್ರಹದ ಜತೆಗೆ, ಮಹಾಭಾರತದ ನಂತರ ನಡೆದ ಕಥೆಗಳನ್ನು ಪ್ರಾಮಾಣಿಕವಾಗಿ ಸಂಗ್ರಹ ಮಾಡಿದ್ದಾರೆ. ಇಂಥ ‘ಮಣಿಮಂಜರಿ’ ಗ್ರಂಥದ ಬಗ್ಗೆ ‘ವಿಶ್ವವಾಣಿ’ ಅಂಕಣಕಾರ ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ ಅವರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಅಂಕಣಕಾರರು ಶತಾವಧಾನಿ ಆರ್.ಗಣೇಶ್ ಅವರ ಮಾತಿನ ಮೇಲೆ ವಿಶ್ವಾಸವಿಟ್ಟು, ಈ ಗ್ರಂಥದ ಕೆಲ ಪುಟಗಳನ್ನು ತಿರುವಿಹಾಕಿ, ನವೆಂಬರ್ 16ರ ತಮ್ಮ ಅಂಕಣದಲ್ಲಿ ‘ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ’ ಎಂಬ ಶೀರ್ಷಿಕೆಯಡಿ ಒಂದು ಲೇಖನವನ್ನು ಬರೆದಿದ್ದಾರೆ.

ಇದರ ಕುರಿತು ಪ್ರತಿಕ್ರಿಯಿಸಲು ಬಯಸುವೆ. ಅಂಕಣಕಾರರು ಈ ಲೇಖನದಲ್ಲಿ ‘ಮಣಿಮಂಜರಿ’ ಕೃತಿಯ ಬಗ್ಗೆ ಪರಿಚಯ ಮಾಡಿ, ನಂತರ ಅದರ ಕಟುವಾದ ಟೀಕೆಯನ್ನು ಮಾಡಿದ್ದಾರೆ. ಅನೇಕ ಆಕ್ಷೇಪಗಳನ್ನು ಎತ್ತಿದ್ದಾರೆ. ಕೊನೆಗೆ ಶಂಕರರ ಬಗ್ಗೆ ಬರೆದುಕೊಂಡಿದ್ದಾರೆ. ಇಲ್ಲಿ ಅವರು ಮಣಿಮಂಜರಿ ಗ್ರಂಥದ ಬಗ್ಗೆ ಬರೆಯುವ ಮುನ್ನ ಸ್ವಲ್ಪ ವಿಮರ್ಶೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಶತಾವಧಾನಿ ಗಣೇಶರು ಪ್ರಸಿದ್ಧ ವಿದ್ವಾಂಸರು, ಉತ್ತಮ ವಾಗ್ಮಿಗಳು, ಕವಿಗಳು. ಹಾಗಂತ ಅವರಾಡಿದ ಮಾತೆಲ್ಲವೂ ಸತ್ಯವೇ ಆಗಿರಬೇಕೆಂದಿಲ್ಲ.

ಯಾಕೆಂದರೆ, ಗಣೇಶರು ಮಾತನಾಡುತ್ತಾ, “ವಾಯುಸ್ತುತಿಯಲ್ಲಿ ಸ್ಮಾರ್ತ ಸಂಪ್ರದಾಯದ ನಿಂದನೆಗೇ ಶ್ರಮ ವಹಿಸ ಲಾಗಿದೆ” ಎಂದು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ವಾಯುಸ್ತುತಿ ಯಲ್ಲಿ ಸ್ಮಾರ್ತರ ನಿಂದನೆ ಇಲ್ಲ. ಸಮಗ್ರ ಸ್ತೋತ್ರದಲ್ಲಿ, ವೇದಾದಿಗಳಲ್ಲಿ ವರ್ಣಿತವಾದ ವಾಯುದೇವರ ಸ್ತುತಿಯೇ ಇರುವುದು. ಹೀಗೆ ಗ್ರಂಥದಲ್ಲಿ ಏನಿದೆ ಎಂಬುದನ್ನು ಸರಿಯಾಗಿ ತಿಳಿಯದೆಯೇ ಗಣೇಶರು ಮಾತನಾಡಿದ್ದಾರೆ. ‘ಮಣಿಮಂಜರಿ’ ಎಂಬುದು ಪ್ರಾಮಾ ಣಿಕ ಕೃತಿ. “ಶಂಕರರು ಹುಟ್ಟಿ 400 ವರ್ಷಗಳ ನಂತರ ಬಂದವರು ನಾರಾಯ ಪಂಡಿತರು. ಹಾಗಾಗಿ ಅವರು ಶಂಕರರ ಚರಿತ್ರೆಯ ಬಗ್ಗೆ ಸುಳ್ಳನ್ನೇ ಬರೆದಿದ್ದಾರೆ” ಎಂಬ ಅಂಕಣಕಾರರ ವಾದವು ಸರಿಯಲ್ಲ. ಸತ್ಯವಾದ ಚರಿತ್ರೆ ಯನ್ನು ಹೇಳಲು ಸಮಕಾಲದಲ್ಲಿಯೇ ಇರಬೇಕೆಂದಿಲ್ಲ; ಭಿನ್ನಕಾಲದಲ್ಲಿ ಇರುವವರೂ ಸತ್ಯವಾದ ಇತಿಹಾಸ ವನ್ನು ಜಗತ್ತಿಗೆ ಕೊಟ್ಟಿರುವುದಿದೆ.

ಇನ್ನು, ‘ಮಾಧವೀಯ ಶಂಕರವಿಜಯ’ವೂ ಶಂಕರರು ಹುಟ್ಟಿ 400 ವರ್ಷಗಳ ನಂತರ ರಚನೆಯಾದದ್ದು. ‘ಗುರುವಂಶ ಕಾವ್ಯ’ವಂತೂ ಶಂಕರರು ಹುಟ್ಟಿ ಸುಮಾರು 800 ವರ್ಷಗಳ ನಂತರ ರಚನೆಯಾದ ಕೃತಿ. ಈ ಗ್ರಂಥಗಳು ಶಂಕರರ ಚರಿತ್ರೆ ಯನ್ನು ತಿಳಿಸುತ್ತವೆ ಎಂದು ಒಪ್ಪುವಾಗ, ನೂರಾರು ವರ್ಷಗಳ ಅಂತರವು ಸಮಸ್ಯೆಯಾಗುವುದಿಲ್ಲ. ಅದೇ ‘ಮಣಿಮಂಜರಿ’ ಬಗ್ಗೆ ಮಾತನಾಡುವಾಗ 400 ವರ್ಷಗಳ ಅಂತರ ಎಂಬುದು ಸಮಸ್ಯೆಯಾಗುತ್ತದೆ! ಇದೆಂಥ ದೃಷ್ಟಿಕೋನ? ‘ಮಣಿಮಂಜರಿ’ಯ 6 ಮತ್ತು 7ನೇ ಸರ್ಗದಲ್ಲಿ ಶಂಕರರ ಜನನದ ಬಗ್ಗೆ ಬಂದಿದೆ. ಶಂಕರರು ಹುಟ್ಟು ವಾಗ ಅವರ ತಂದೆ ಇರಲಿಲ್ಲ, ತಾಯಿ ವಿಧವೆ ಆಗಿದ್ದರು ಎಂದು ಹೇಳುವುದರ ಜತೆಗೆ, ಶಂಕರರು ಮಣಿ ಮಂತನ ಅವತಾರ ಎಂದು ಅದು ಹೇಳಿದೆ.

ಇದೆಲ್ಲವೂ ಪ್ರಾಮಾಣಿಕವಾದ ವಿಚಾರ. ಮಣಿಮಂತನೇ ಶಂಕರರಾಗಿ ಹುಟ್ಟಿದ್ದು ಎಂಬುದನ್ನು ‘ಗರುಡ ಪುರಾಣ’ ದಲ್ಲಿ ಹೀಗೆ ಹೇಳಿದೆ- “ಮಣಿಮಾನ್ನಾಮ ದೈತ್ಯಸ್ತು ಸಂಕರಾಖ್ಯೋ ಭವಿಷ್ಯತಿ” (3-16-70). ಹಾಗಾಗಿ ಪಂಡಿತಾಚಾ ರ್ಯರು ಸುಳ್ಳು ಹೇಳಿದ್ದಲ್ಲ, ಪ್ರಾಮಾಣಿಕವಾದ ವಿಚಾರವನ್ನೇ ಹೇಳಿದ್ದಾರೆ ಎಂಬುದು ತಿಳಿಯುತ್ತದೆ. ಇನ್ನು ಶಂಕರರ ಜನನದ ಬಗ್ಗೆ ಪಂಡಿತಾಚಾರ್ಯರು ಸರಿಯಾಗಿ ಹೇಳಿದ್ದಾರೆ. ವಸ್ತುತಃ ಈ ವಿಷಯವಾಗಿ ಶಂಕರರ ಚರಿತ್ರೆ ಹೇಳುವ ಗ್ರಂಥಗಳಲ್ಲಿಯೇ ಮತಭೇದವಿದೆ. ಶಂಕರರ ಚರಿತ್ರೆ ಹೇಳುವ 15ಕ್ಕೂ ಹೆಚ್ಚು ಗ್ರಂಥಗಳು ಇವೆ. ‘ಆನಂದಗಿರಿ ಶಂಕರವಿಜಯ’ದಲ್ಲಿ, “ಶಂಕರರ ತಾಯಿಯು ಗರ್ಭವತಿಯಾಗುವ ಮುನ್ನವೇ ಅವರ ಪತಿಯು ಅವರನ್ನು ತ್ಯಾಗ ಮಾಡಿದರು” ಎಂದು ಹೇಳಲಾಗಿದೆ.

ಅದೇ ಗ್ರಂಥದಲ್ಲಿ ಬರುವ, ‘ವಿಶಿಷ್ಟಾಗರ್ಭಗೋಲಕಃ’ ಎಂಬ ಪಾಠವನ್ನು ವಿಶಿಷ್ಟಾದ್ವೈತ ಮತದ ಪಂಡಿತರು ಉಲ್ಲೇಖ ಮಾಡಿ, “ಪರಪುರುಷನಿಂದ ವಿಧವೆಯಲ್ಲಿ ಹುಟ್ಟಿದವರು” ಎಂದು ಅರ್ಥವನ್ನು ಮಾಡಿದ್ದಾರೆ. ಪುರುಷೋ ತ್ತಮ ಭಾರತಿ ಎಂಬುವವರು ಬರೆದ ‘ಶಂಕರ ವಿಜಯ’ದಲ್ಲಿ, “ವಿಧವೆಯಾದ ಶಂಕರರ ತಾಯಿಯು, ಒಂದು ಕುಂಬಳ ಕಾಯಿ ಗಿಡದ ಮೂಲಕ ಪುತ್ರನನ್ನು ಪಡೆದಳು, ಊರಿನ ಜನರು ತಾಯಿ-ಮಗುವನ್ನು ದೂರ ಇಟ್ಟಿದ್ದರು” ಎಂದು ಹೇಳಲಾಗಿದೆ. ಇದೆಲ್ಲಾ ಶಂಕರರ ಪರಂಪರೆ ಯವರೇ ಬರೆದ ಗ್ರಂಥಗಳು. ಅವರಲ್ಲಿ ಈ ಮತಭೇದವೇಕೆ? ಜಗತ್ತಿನಲ್ಲಿ ಶ್ರೀರಾಮಚಂದ್ರ ದೇವರ ಚರಿತ್ರೆಗೆ ಸಂಬಂಧಪಟ್ಟಂತೆ ನೂರಾರು ಗ್ರಂಥಗಳು ಬಂದಿವೆ.

ಅದರಲ್ಲಿ ಅನೇಕ ಕಥೆಗಳು ಭಿನ್ನವಾಗಿ ಬಂದಿವೆ. ಆದರೆ ಎಲ್ಲಿಯಾದರೂ ರಾಮದೇವರ ಜನನದ ಬಗ್ಗೆ, ಅವರ ತಂದೆ-ತಾಯಿಯ ಬಗ್ಗೆ ಭಿನ್ನಾಭಿಪ್ರಾಯ ಬಂದಿದೆಯೇ? ಇಲ್ಲ. ಅದೇ ರೀತಿ, ಶಂಕರರ ವಿಷಯದಲ್ಲಿಯೂ ಅವರು ಇಂಥ ತಂದೆ-ತಾಯಿಯರ ಮಗ ಎಂದು ಏಕರೂಪವಾಗಿ ಎಲ್ಲ ಚರಿತ್ರೆಗಳೂ ಹೇಳಬೇಕು. ಆದರೆ ಶಂಕರರ ಅನುಯಾಯಿ ಗಳೇ ಬರೆದ ಶಂಕರರ ಚರಿತ್ರೆಗಳಲ್ಲಿ, ಅವರ ಜನನದ ಬಗ್ಗೆ, ಅವರ ತಂದೆ-ತಾಯಿಯರ ಬಗ್ಗೆ ಭಿನ್ನಾಭಿಪ್ರಾಯ ಇದೆ. ಏಕರೂಪತೆ ಇಲ್ಲ. ಹೀಗೆ ಈ ಗ್ರಂಥಗಳ ತೌಲನಿಕ ಅಧ್ಯಯನ ನಡೆಸಿದರೆ, ‘ಮಣಿಮಂಜರಿ’ ಕೃತಿಯು ಹೇಳುವ ವಿಷಯವು ಪ್ರಾಮಾಣಿಕ ಎಂಬುದು ಸ್ಪಷ್ಟವಾಗುತ್ತದೆ.

ಇನ್ನು, ‘ಮಾಧವೀಯ ಶಂಕರವಿಜಯ’ ಕೃತಿಯಲ್ಲಿ, “ಮಂಡನಮಿಶ್ರರು ವಿಶ್ವರೂಪಾಚಾರ್ಯರು ಇಬ್ಬರೂ ಒಬ್ಬರೇ” ಎಂದು ಸುಳ್ಳು ಹೇಳಲಾಗಿದೆ. “ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು” ಎಂದು ಶಾಂಕರಮತದ ಆನಂದಾನುಭವರು
ತಮ್ಮ ‘ನ್ಯಾಯಮುಕ್ತಾವಲೀ’ ಗ್ರಂಥದಲ್ಲಿ ಹೇಳಿದ್ದಾರೆ. “ವಿಶ್ವರೂಪ ಪ್ರಭಾಕರ ಗುರು ಮಂಡನ ವಾಚಸ್ಪತಿ
ಸುಚರಿತಮಿಶ್ರೈಃ” ಎಂದು ಇಬ್ಬರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಿ ದ್ದಾರೆ. ಹಾಗಾಗಿ, ಉಭಯಭಾರತಿ ಎಂಬುವರು ವಿಶ್ವರೂಪಾಚಾರ್ಯರ ಹೆಂಡತಿ. ಆದರೆ ಈ ಸತ್ಯವನ್ನು ಮುಚ್ಚಿಹಾಕಿ, ಅವರು ‘ಮಂಡನಮಿಶ್ರರ ಹೆಂಡತಿ’ ಎಂದು, ಯಾರದೋ ಹೆಂಡತಿಯನ್ನು ಇನ್ನಾರದೋ ಹೆಂಡತಿಯನ್ನಾಗಿ ಸುಳ್ಳು ಹೇಳಿದ್ದಾರೆ.

ಈ ಪ್ರಸಂಗವನ್ನು ‘ಮಣಿಮಂಜರಿ’ಯಲ್ಲಿ ಯಥಾವತ್ತಾಗಿ ತಿಳಿಸಲಾಗಿದೆ. ವಿಶ್ವರೂಪಾಚಾರ್ಯರ ಹೆಂಡತಿಯ ಜತೆಗೆ ಶಂಕರರು ಭೋಗ ಮಾಡಿದ ಬಗ್ಗೆ ಆಕ್ಷೇಪ ಮಾಡುವುದು ಸರಿಯಲ್ಲ. ಮಾಧವೀಯ ಶಂಕರ ವಿಜಯಾದಿಗಳಲ್ಲಿ “ಪರಕಾಯ ಪ್ರವೇಶ ಮಾಡಿ ಶಂಕರರು ಕಾಮಶಾಸ್ತ್ರ ಅಧ್ಯಯನ ಮಾಡಿದರು” ಎಂದು ಹೇಳುವಾಗ, ಅನೇಕ ಸೀಯರ ಭೋಗದ ಬಗ್ಗೆ ಬರೆದಿದ್ದಾರೆ.

ಹೀಗೆ, ಒಂದಲ್ಲಾ ಒಂದು ರೀತಿಯಲ್ಲಿ ಶಂಕರರ ಸೀಭೋಗ ವಿಚಾರವನ್ನು ಅವರ ಚರಿತ್ರೆ ಗ್ರಂಥಗಳು ಹೇಳುತ್ತಿವೆ. ಉಭಯಭಾರ ತಿಯವರಿಗೆ 15 ವರ್ಷಕ್ಕಿಂತ ಚಿಕ್ಕ ವಯಸ್ಸಿನಲ್ಲೇ ಪ್ರೀತಿ-ಪ್ರೇಮ ಇದ್ದ ಬಗ್ಗೆ ‘ಮಾಧವೀಯ ಶಂಕರ ವಿಜಯ’ ತಿಳಿಸುತ್ತದೆ. ಹಾಗಾಗಿ, ತಮಗೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ಪ್ರಾಮಾಣಿಕ ವಾದ ‘ಮಣಿಮಂಜರಿ’ ಗ್ರಂಥವನ್ನು ದೂರುವುದು ಸರಿಯಲ್ಲ. ಶಂಕರರು ಅದ್ವೈತ ಮತ ಪ್ರಚಾರ ಮಾಡಿದವರು, ಅನೇಕ ಗ್ರಂಥಗಳನ್ನು ರಚನೆ ಮಾಡಿದವರು. ಆದರೆ, “ಇವತ್ತು ‘ಶಂಕರರ ರಚನೆ’ ಎಂದು ಹೇಳಲಾಗುವ ಎಲ್ಲಾ ಸ್ತೋತ್ರಗಳೂ ಶಂಕರರೇ
ರಚನೆ ಮಾಡಿದ್ದಲ್ಲ; ಬೇರೆ ಯಾರೋ ರಚಿಸಿ ಶಂಕರರ ಹೆಸರಿನಿಂದ ಪ್ರಸಿದ್ಧ ಮಾಡಿದ್ದಾರೆ” ಎಂದು ಸಂಶೋಧಕರು
ಅಭಿಪ್ರಾಯಪಡುತ್ತಾರೆ.

ಶಂಕರರು ಬದರಿಯಲ್ಲಿ ನಾರಾಯಣನನ್ನು ಪ್ರತಿಷ್ಠೆ ಮಾಡಿದರು ಎಂಬುದು ಸತ್ಯಕ್ಕೆ ದೂರವಾದ ಮಾತು. ದ್ವಾಪರದಲ್ಲಿ ಪ್ರತಿಮೆ ಕಾಣದಂತೆ ಆದಾಗ, ಶಿವನು ಪುನಃ ಪ್ರತಿಷ್ಠೆ ಮಾಡುವುದಾಗಿ ಪುರಾಣದಲ್ಲಿ ಹೇಳಿದೆ. ಇನ್ನು ‘ಶಂಕರವಿಜಯ’ದಲ್ಲಿ ಶಂಕರರು ಬದರಿಗೆ ಹೋದಾಗ ಅಲ್ಲಿ ನಾರಾಯಣನಿಗೆ ನಮಸ್ಕಾರ ಮಾಡಿದ್ದನ್ನು ವರ್ಣನೆ ಮಾಡಿದ್ದಾರೆ. ಜತೆಗೆ, “ನಾರಾಯಣ ಪ್ರತೀಕವನ್ನು ನಾರದಕುಂಡದಿಂದ ಶಂಕರರು ತಂದರು” ಎಂಬುದನ್ನು ‘ಮಾಧ ವೀಯ ಶಂಕರವಿಜಯ’ದಲ್ಲಿ ಹೇಳಿಲ್ಲ. ಮುಖ್ಯವಾಗಿ ಶಂಕರರು ಆ ಬದರಿಯಲ್ಲಿ, “ಹೇ ನಾರಾಯಣ, ತಂಪಾದ ನೀರಿನಲ್ಲಿ ಸ್ನಾನ ಅಶಕ್ಯ, ಬಿಸಿನೀರನ್ನು ನಮಗೆ ಸ್ನಾನಕ್ಕೆ ಕೊಡು” ಎಂದು ಪ್ರಾರ್ಥನೆ ಮಾಡಿದ್ದಕ್ಕೆ ನಾರಾಯಣ ದೇವರು ಬಿಸಿನೀರಿನ ವ್ಯವಸ್ಥೆ ಮಾಡಿದರು ಎಂದು ‘ಆನಂದಗಿರಿ ಶಂಕರವಿಜಯ’ದಲ್ಲಿ ಹೇಳಲಾಗಿದೆ. “ಭೋ ನಾರಾಯಣ ಸ್ನಾನಾಯ ಉಷ್ಣೋದಕಂ ನೋ ದೇಹಿ ಇತಿ…” ಎಂದು ಬರೆಯಲಾಗಿದೆ. ಸ್ನಾನವೇ ಅಶಕ್ಯವಾದಾಗ, ಮುಳುಗಿ ಪ್ರತಿಮೆ ತರುವುದು ಅಸಂಭವ.

ಹಾಗಾಗಿ ಇದು ಪ್ರಸಿದ್ಧಿಗಾಗಿ ಕಟ್ಟಿದ ಕಥೆ. ಶಂಕರರ ಕೊನೆಯ ಅವಧಿಯಲ್ಲಿ ಭಗಂಧರ ರೋಗಪೀಡಿತರಾದ ಬಗ್ಗೆ
‘ಮಾಧವೀಯ ಶಂಕರವಿಜಯ’ದಲ್ಲಿ ವಿಸ್ತಾರವಾಗಿ ಬಂದಿದೆ. ಹಾಗಾಗಿ ಅದೆಲ್ಲಾ ‘ಮಣಿಮಂಜರಿ’ಯ ಕಲ್ಪನೆಯಲ್ಲ.
ಹೀಗೆ ಶಂಕರರು ಬಂದದ್ದೇ ಅದ್ವೈತವನ್ನು ಹೇಳುವುದಕ್ಕೆ. ಅದನ್ನು ತಮ್ಮ ಜೀವಿತಾವಧಿಯಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ.

ಅದ್ವೈತವನ್ನು ಒಪ್ಪದವರನ್ನು ಬೇರೆ ಬೇರೆ ಉಪಾಯಗಳಿಂದ ವಶಪಡಿಸಿಕೊಂಡು, ಎಲ್ಲರೂ ಅದ್ವೈತವನ್ನೇ ಒಪ್ಪುವಂತೆ ಮಾಡಿದ್ದಾರೆ. ಆ ಅದ್ವೈತವನ್ನು ಸಾಧಿಸುವುದಕ್ಕಾಗಿ, ಭಾರತೀಯರ ಅತ್ಯಂತ ಪವಿತ್ರ ವಾದ, ನಿತ್ಯವಾದ, ಅಪೌರುಷೇ ಯವಾದ ವೇದಗಳನ್ನು ಅನಿತ್ಯ ಎಂದು ಜರೆದಿದ್ದಾರೆ. ವೇದಗಳಿಗೆ ಅಭಾವವನ್ನು (ನಾಶವನ್ನು) ಹೇಳಿದ್ದಾರೆ. ಶಂಕರರು ಶಿವ-ಕೇಶವರ ಅಭೇದವನ್ನು ಸಾರಿದ್ದಲ್ಲ. ಶಿವ-ಕೇಶವ ಇದೆಲ್ಲಾ ಸತ್ಯವಲ್ಲ.

ಶಿವ, ಗಣಪತಿ, ಸ್ಕಂದ, ವಿಷ್ಣು ಇದೆಲ್ಲವೂ ಕಲ್ಪಿತ. ಇದ್ಯಾವುದೂ ಸತ್ಯವಲ್ಲ. ‘ಪರಬ್ರಹ್ಮ ಒಂದೇ ಸತ್ಯ’ ಎಂದು ತಮ್ಮ ಅದ್ವೈತಕ್ಕೆ ಅನುಗುಣವಾಗಿ ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನು ಅವರ ಪರಂಪರೆಯವರು ‘ಸಾಮರಸ್ಯ ಮಾಡಿದ್ದು’ ಎಂದು ಸುಳ್ಳು ಹೇಳುತ್ತಾರೆ. ಹೀಗೆ, ನಾರಾಯಣ ಪಂಡಿತಾಚಾರ್ಯರು ‘ಮಣಿಮಂಜರಿ’ ಗ್ರಂಥದಲ್ಲಿ ನೈಜ ಘಟನೆಯನ್ನು ತೆರೆದಿಟ್ಟಿದ್ದಾರೆ. ಅವರ ಪ್ರತಿಯೊಂದು ಮಾತುಗಳೂ ಪ್ರಾಮಾಣಿಕ. ಕೆಲವು ವಿಚಾರಗಳಿಗೆ
ಇವತ್ತು ಪ್ರಮಾಣಗಳು ಅನುಪಲಬ್ಧವಾಗಿರಬಹುದು. ಹಾಗಂತ ಅವು ಅಪ್ರಾಮಾಣಿಕವಲ್ಲ. ಸತ್ಯವನ್ನು ಎಲ್ಲರಿಗೂ ಅರಗಿಸಿಕೊಳ್ಳಲು ಆಗದಿರುವುದು ಸತ್ಯನಿಷ್ಠರ ಸಮಸ್ಯೆಯಲ್ಲ. ಯಾರೂ ಯಾವುದೇ ರೀತಿಯ ವ್ಯಂಗ್ಯ ಮಾಡಿ ದರೂ, ಆಡಿಕೊಂಡರೂ ಸತ್ಯ ಬದಲಾಗದು.

ನಾರಾಯಣ ಪಂಡಿತಾಚಾರ್ಯರು ಹಾಗೂ ಅವರ ತಂದೆ ತ್ರಿವಿಕ್ರಮ ಪಂಡಿತಾಚಾರ್ಯರು ತಮ್ಮ ಗ್ರಂಥಗಳಲ್ಲಿ ಸತ್ಯವನ್ನು ಹೇಳಿದ್ದಾರೆ. ಪ್ರಾಮಾಣಿಕ ವಿಚಾರಗಳನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪವನ್ನು ಎತ್ತಿದಾಗ, ಅನೇಕ ಲೇಖನಗಳ ಮೂಲಕ ಉತ್ತರ ಕೊಟ್ಟಿದೆ. ಈಗಲೂ ಉತ್ತರ ಕೊಡಲಾಗುತ್ತಿದೆ. ಅವರ ಗ್ರಂಥಗಳು ಪ್ರಾಮಾಣಿಕವಾದದ್ದು ಎಂಬುದು ನಮ್ಮ ನಿಲುವು. ಅದಕ್ಕೆ ಸಂಬಂಧಪಟ್ಟ ಅನೇಕ ದಾಖಲೆಗಳು ನಮ್ಮ ಬಳಿ ಇವೆ. ಹಾಗಾಗಿ, “ಯಾವುದೇ ಮಾಧ್ಯಮದಲ್ಲಿ, ಯಾವುದೇ ರೀತಿಯಲ್ಲಿ ಈ ಗ್ರಂಥಗಳ ಬಗ್ಗೆ ಆಕ್ಷೇಪ ಬಂದರೂ, ಅವುಗಳಿಗೆ ಉತ್ತರ ಕೊಡುವುದಕ್ಕೆ ಸಿದ್ಧ” ಎಂದು ಈ ಮೂಲಕ ತಿಳಿಸುತ್ತಿದ್ದೇವೆ. ಭಾರತದ ಪ್ರಾಚೀನವಾದ ಪ್ರಾಮಾಣಿಕ ಗ್ರಂಥಗಳ ಬಗ್ಗೆ ಅಪಲಾಪ ಮಾಡುವುದು ಸರಿಯಲ್ಲ…

(ಲೇಖಕರು ಅಧ್ಯಾತ್ಮ ಚಿಂತಕರು)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ