Monday, 12th May 2025

ನಿಮ್ಮ ನಂಬಿಕೆಗಳ ಮೇಲೆ ಅಚಲವಾದ ವಿಶ್ವಾಸವಿರಲಿ !

ಯಶೋ ಬೆಳಗು

yashomathy@gmail.com

ಬದುಕು ಪಾಠ ಕಲಿಸತೊಡಗಿತು. ನಂಬಿಕೆಗಳೆಲ್ಲ ಬುಡಮೇಲಾದವು. ಬಡತನವಿದ್ದರೂ ಅವಮಾನಗಳ ಭೀಕರತೆಯ ಅನುಭವ ವಿರದಿದ್ದವಳಿಗೆ ಅವಮಾನಗಳ ಸರಮಾಲೆಯನ್ನೇ ತೊಡಿಸುತ್ತಾ ನಿರ್ಮಮವಾಯ್ತು ಬದುಕು. ಸಾವಿರ ಸಲ ಹಿನ್ನಡೆಯುವ ಪ್ರಯತ್ನ ಮಾಡಿದರೂ ಕಟ್ಟಿಹಾಕಿದ್ದು ಅವರೆಡೆಗಿದ್ದ ಕಾಳಜಿಯಾ? ಪ್ರೀತಿಯಾ?

ಜೊ ಬಾತ್ ತುಜ್ ಮೆ ಹೈ
ತೆರೆ ತಸ್ವೀರ್ ಮೆ ನಹೀ…
ಮಾತಾಡದ, ಸ್ಪಂದಿಸದ, ಸಿಟ್ಟು-ಸೆಡವು, ನೋವು- ನಲಿವುಗಳಿರದ ಸದಾ ನಗುಮೊಗದ ನೋಟವಿರುವ ನಿನ್ನ ಚಿತ್ರಕ್ಕಿಂತ ನೀನೇ ಚೆಂದ. ತುಮ್ ರೂಠೀ ರಹೋ ಮೈ ಮನಾತಾ ರಹೂ ಇನ್ ಅದಾ ವೊ ಸೆ ಔರ್ ಪ್ಯಾರ್ ಆತಾ ಹೈ… ಅನ್ನುತ್ತಾ ಪ್ರತಿಯೊಂದು ಮಾತಿಗೂ ಹಾಡ ಸಂತೈಸುತ್ತಿದ್ದ ಆ ತುಂಟ ನಗುವಿನ ಕಣ್ಣೋಟವೇ ಚೆಂದ.

ಈಗೆಲ್ಲವೂ ಸ್ತಬ್ಧ! ಕುಣಿವ ಸಮುದ್ರದಲೆಗಳಲ್ಲೂ, ಕಾಡಿನ ನಿಶ್ಶಬ್ದ ಮೌನದಲ್ಲೂ, ನಿನ್ನ ಮಾತುಗಳ ರಿಂಗಣವಿಲ್ಲದೆ ಎಲ್ಲವೂ ಬಹಳ ನೀರಸವೆನಿಸುತ್ತದೆ. ಕೆಲಸಗಳಲ್ಲಿ ಎಷ್ಟೆಲ್ಲ ಶ್ರದ್ಧೆ ತಂದುಕೊಂಡರೂ ಏಕತಾನತೆ ಕಾಡತೊಡಗುತ್ತದೆ. ಎಲ್ಲರ ಪ್ರೀತಿಯ ಮಾತುಗಳು, ಆರೈಕೆಗಳೂ, ಸಲಹೆ- ಸೂಚನೆಗಳೂ ಅರ್ಥ ಕಳೆದುಕೊಂಡ ಶಬ್ದಗಳಂತೆ ಭಾಸವಾ ಗುತ್ತದೆ.

ನನ್ನ ಪ್ರೀತಿ, ಶ್ರದ್ಧೆ, ಪರಿಶ್ರಮ ಎಲ್ಲವುಗಳನ್ನೂ ಆ ಸಾವೆಂಬ ನಿರ್ದಯಿ ಆಪೋಶನ ತೆಗೆದುಕೊಂಡು ಭಾವನೆಗಳನ್ನೆಲ್ಲ ಬರಿದಾಗಿಸಿ ಜವಾಬ್ದಾರಿಗಳನ್ನು ಮಾತ್ರ ಹೊರಿಸಿ ಬಿಟ್ಟಿತಲ್ಲಾ? ಅನ್ನುವ ವೇದನೆ ಕಾಡತೊಡ ಗುತ್ತದೆ. ಆರು ವರ್ಷಗಳಲ್ಲಿ ಮೂರು ಸಾವುಗಳು! ಅಪ್ಪ-ತಮ್ಮ- ಗಂಡ! ನೋವು ನುಂಗುತ್ತಾ ಬದುಕುಳಿದವರಿಗಿಂತ ಎಲ್ಲವನ್ನೂ ಕಳಚಿಕೊಂಡು ಸಾವಿನ ಜತೆಗೆ ನಡೆದು ಹೋದ ವರೇ ಪುಣ್ಯವಂತರು. ಯಾಕೆಂದರೆ ಅವರ ನೆನಪಿನಲ್ಲಿ ನಾವು ಪ್ರತಿಕ್ಷಣವೂ ಸಾಯುತ್ತಿರುತ್ತೇವೆ.

ನೆನಪಿನ ಆಳಕ್ಕಿಳಿದಂತೆಲ್ಲ ರಕ್ತನಾಳಗಳಲ್ಲಿ ಬೆಂಕಿಯ ಜ್ವಾಲೆಗಳು ಉರುಳುತ್ತಿವೆಯೇನೋ ಅನ್ನುವಂಥ ಅಸಾಧ್ಯ ಉರಿ.  ಕಪ್ಪು-ಬಿಳುಪಿನ ಚಿತ್ರಗಳಾಗಿ ಕದಲತೊಡಗಿ ನಿದ್ರೆ ಮಾರುದೂರ! ನೋಡು, ಎರಡನೇ ಹೆಂಡತಿಯಾಗುವುದರಿಂದ ಯಾವ ಸುಖವೂ ಇಲ್ಲ. ಕತ್ತೆ ಥರಾ ದುಡಿಯೋಕೆ ಮಾತ್ರ ಬಳಸಿಕೊಳ್ತಾರೆ. ಎಷ್ಟೆಲ್ಲ ಮಾಡಿದ್ರೂ ಮೊದಲನೆ ಹೆಂಡತಿಗಿರುವ ಗೌರವ ಎರಡನೆಯ ಹೆಂಡತಿಗಿರುವುದಿಲ್ಲ. ಅದೂ ಅಲ್ಲದೆ ಅವರು ಬದುಕಿರುವಾಗಲೇ, ಅವರಿಂದ ವಿಚ್ಛೇದನವಾಗದೆ ಇನ್ನೊಂದು ಮದುವೆಯಾಗುವು ದರಿಂದ ನಿನಗೆ ಕಾನೂನು ರೀತಿಯಲ್ಲೂ ಯಾವ ಸಹಾಯವೂ ಸಿಗೋದಿಲ್ಲ.

ತುಂಬ ಕಷ್ಟ ಅನುಭವಿಸಬೇಕಾಗತ್ತೆ. ನಾನು ಅನುಭವಿಸಿದ್ದೇ ಸಾಕು. ಅದಕ್ಕೇ ಹೇಳ್ತಿದ್ದೀನಿ. ಇನ್ನೊಂದ್ಸಲ ಯೋಚನೆ ಮಾಡು. ಮನಸ್ಸನ್ನ ಬದಲಿಸಿಕೊಳ್ಳುವ ಪ್ರಯತ್ನ ಮಾಡು… ಅಮ್ಮ ಹೇಳ್ತಲೇ ಇದ್ರು. ತನ್ನ ಮಾತುಗಳು ಪರಿಣಾಮ ಬೀರುವುದಿಲ್ಲ ಎನ್ನಿಸಿ ದಾಗ ನನಗೆ ಪ್ರಿಯವಾದವರಿಂದ ಹೇಳಿಸುವ ಪ್ರಯತ್ನ ಮಾಡಿದರು. ರೂಪವಂತೆ, ಗುಣವಂತೆ, ವಿದ್ಯಾವಂತೆ ಜತೆಗೆ ಒಳ್ಳೆಯ ಕಡೆ ಉದ್ಯೋಗದಲ್ಲಿರುವಾಕೆ, ನೀನು ಅಲ್ಲಿರುವುದರಿಂದಲೇ ಮದುವೆಯೆಡೆಗೆ ನಿನಗೆ ಉತ್ಸಾಹವಿಲ್ಲ.

ಸರಕಾರಿ ಉದ್ಯೋಗಕ್ಕೆ ಅರ್ಜಿ ಹಾಕು. ಲೈಫ್ ಸೆಟಲ್ ಆಗತ್ತೆ. ಎಷ್ಟು ದಿನಾ ಅಂತ ಹೀಗೇ ಇರ್ತೀಯ? ಅನ್ನುವ ಅದ್ಯಾವ ಮಾತು ಗಳೂ ಮನಸಿಗಿಳಿಯಲೇ ಇಲ್ಲ. ನೆಂಟರಿಷ್ಟರ ನಡುವೆ ಸಹಜವಾಗಿಯೇ ವಿವಾಹದ ಒತ್ತಡಗಳು! ಸಹೋದ್ಯೋಗಿಗಳ ನಡುವೆಯೂ ಆಸೆಯ ಕಣ್ಣುಗಳು! ಆದರೆ ನನ್ನ ಮನಸ್ಸಾಗಲೇ ದೃಢವಾಗಿ ನಿರ್ಧರಿಸಿಯಾಗಿತ್ತು. ಮದುವೆ ಅಂತಾಗುವುದಾದರೆ ಅವರನ್ನೇ. ಇಲ್ಲದಿದ್ದರೆ ಒಂಟಿಯಾಗೇ ಈ ಜೀವನವನ್ನು ಕಳೆದುಬಿಡ್ತೀನಿ.

ಯಾಕೆ ಯಾರ ಮೇಲಾದರೂ ಅವಲಂಬಿತವಾಗಬೇಕು? ನಾನು ದುಡಿಯುವ ಹಣದಲ್ಲಿ ನನ್ನ ಬದುಕು ಕಟ್ಟಿಕೊಳ್ಳುವು ದಾಗುವುದಿಲ್ಲವಾ? ಮನಸ್ಸಿದ್ದರೆ ಮಾರ್ಗ. ದಿನಾ ಬೆಳಗಾದರೆ ಸಂಬಳವೆಷ್ಟು ಬಂತು? ಚಿನ್ನ ಎಷ್ಟು ಮಾಡಿಸಿದೆ? ಎಲ್ಲಿ ಸೈಟು ತಗೊಂಡೆ? ಎನ್ನುತ್ತಾ ಕತ್ತೆ ಥರಾ ದುಡಿಯುತ್ತಾ ದಿನ ಬೆಳಗಾದರೆ ಹಣದ ಹಿಂದೆ ಓಡುವ ಬದಲು ಒಂದು ಹಿಡಿ ಪ್ರೀತಿಗಾಗಿ ಜೀವನ ವಿಡೀ ಬದುಕುವುದರ ಸಾರ್ಥಕತೆ ಇದೆ. ನಾವೇನು ನೂರಾರು ವರುಷಗಳು ಬದುಕಿರುವುದಿಲ್ಲ. ಎರಡೇ ದಿನವಿದ್ದರೂ ಅದರಲ್ಲಿ ಸಂತೋಷವಿರಬೇಕು ಎನ್ನುವ ಭ್ರಮೆಯಲ್ಲಿ ಸಮುದ್ರದ ಭೋರ್ಗರೆತದ ವಿರುದ್ಧ ದಿಕ್ಕಿಗೆ ಈಜತೊಡಗಿದೆ.

ಎಲ್ಲ ಕಡೆಯಿಂದ ಆಸರೆಗಳು ತುಂಡಾದವು. ನಿನ್ನ ಕರ್ಮ! ನಿನ್ನ ಹಣೆಬರಹ! ನಾವೇನು ಮಾಡೋಕಾಗತ್ತೆ. ಬಂದದ್ದನ್ನು ಅನು ಭವಿಸು! ನಿನಗ್ಯಾವತ್ತೂ ಒಳ್ಳೇದಾಗೊಲ್ಲ ಅನ್ನುವ ಶಾಪಗಳೇ! ದೇವರೂ ಕೂಡ ಕೈಚೆಲ್ಲಿ ದೂರ ನಡೆದುಹೋಗಿದ್ದ. ಅವನಿದ್ದ ನಂಬಿಕೆಯೇ ಇರಲಿಲ್ಲವಲ್ಲ? ಹೀಗಾಗಿ ಏನನ್ನೂ ಕಳೆದುಕೊಂಡ ದುಃಖವಾಗಲಿಲ್ಲ. ಮೆಲ್ಲಗೆ ಬದುಕು ಪಾಠ ಕಲಿಸ ತೊಡಗಿತು.

ನಂಬಿಕೆಗಳೆಲ್ಲ ಬುಡಮೇಲಾದವು. ಬಡತನವಿದ್ದರೂ ಅವಮಾನಗಳ ಭೀಕರತೆಯ ಅನುಭವವಿರದಿದ್ದವಳಿಗೆ ಅವಮಾನಗಳ
ಸರಮಾಲೆಯನ್ನೇ ತೊಡಿಸುತ್ತಾ ನಿರ್ಮಮವಾಯ್ತು ಬದುಕು. ಆಸರೆಯಾಗಿರಲು ಹೋಗಿ ಹೊರೆಯಾಗಿ ಹೋದೆನಾ? ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ… ಕಹಿ ಎಲ್ಲ ನನಗಿರಲಿ… ಎಂದುಕೊಳ್ಳುತ್ತಾ ಅವರ ನಲಿವಿನ ನನ್ನ ನೋವನ್ನು ಮರೆಯುತ್ತಿದ್ದವಳಿಗೆ ಅವರ ಹೂವಿನಂಥ ಬದುಕಿಗೇಕೆ ಮುಳ್ಳಾಗಬೇಕು? ಎಂದೆನಿಸಿ ಸಾವಿರ ಸಲ ಹಿನ್ನಡೆಯುವ ಪ್ರಯತ್ನ ಮಾಡಿದರೂ ಬಿಡಿಸಿಕೊಳ್ಳಲಾಗದಂತೆ ಕಟ್ಟಿಹಾಕಿದ್ದು ಅವರೆಡೆಗಿದ್ದ ಕಾಳಜಿಯಾ? ಪ್ರೀತಿಯಾ? ಮೋಹವಾ? ಸೆಳೆತವಾ? ಆರಾಧನೆಯಾ? ಅಥವಾ ಇದೆಲ್ಲವನ್ನೂ ಮೀರಿದ್ದಾ? ಗೊತ್ತಿಲ್ಲ.

ಹೊರಜಗತ್ತಿನ ಸದ್ದುಗದ್ದಲಗಳಿಗೆಲ್ಲ ಪ್ರತಿಕ್ರಿಯಿಸುವುದನ್ನು ಬಿಟ್ಟು, ತನ್ನ ಸುತ್ತಲೂ ಕೋಶವನ್ನು ಕಟ್ಟಿಕೊಳ್ಳುವ ರೇಷ್ಮೆ ಹುಳು ವಿನಂತೆ ನನ್ನದೇ ಕೋಶ ಕಟ್ಟಿಕೊಂಡೆ. ಇಷ್ಟೆಲ್ಲ ದೂರ ನಡೆದು ಬಂದ ಮೇಲೆ ಮತ್ತೆ ಹಿಂತಿರುಗಿ ಹೋಗಿ ಹೊಸ ಬದುಕು ಕಟ್ಟಿ ಕೊಂಡರೂ ಈ ಜಗತ್ತು ನನ್ನನ್ನೇನೂ ಹೊತ್ತು ಮೆರೆಸುವುದಿಲ್ಲ. ಬದಲಿಗೆ ಅದೇನೇನು ಕಷ್ಟಗಳು ಬರುತ್ತವೆಯೋ ಬಂದು ಬಿಡಲಿ.

ಅವಮಾನಗಳಾಗುತ್ತವೆಯೋ ಆಗಿಬಿಡಲಿ. ಇರುವುದೊಂದೇ ಬದುಕಲ್ಲವಾ? ಇದನ್ನು ಬಂದ ಹಾಗೆ ಸ್ವೀಕರಿಸುತ್ತಾ ಚಿಂತೆ ಮರೆತು ಬದುಕಿಬಿಡೋಣ ಅನ್ನುವ ಅಚಲವಾದ ನಿರ್ಧಾರದೊಂದಿಗೆ ಗಟ್ಟಿಯಾಗಿ ಹೆಜ್ಜೆಯೂರಿ ನಿಂತುಬಿಟ್ಟೆ. ಕಚೇರಿಯಲ್ಲಿ ನನ್ನ ಮೇಲೆ ಹೊರಿಸುತ್ತಿದ್ದ ಆಪಾದನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಅದರ ಬಗ್ಗೆ ಮತ್ತೊಮ್ಮೆ ಅವರಿಗೆ ಮಾತಾಡಲು ಅವಕಾಶ ನೀಡದಂತೆ ಜಾಗ್ರತೆ ವಹಿಸಿದೆ.

ನನ್ನ ಹಾಗೂ ಅವರ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದ ಜನರೆಲ್ಲ ಯಾರೆಂದು ಗುರುತಿಸಿದೆ. ಅವರೆದುರಿಗೆ ನಾವು ಇನ್ನಷ್ಟು ಆಪ್ತವಾಗಿರುವುದನ್ನು ರೂಢಿಸಿಕೊಂಡೆ. ನನ್ನನ್ನು ನಿರ್ಲಕ್ಷಿಸಿ ಗುಂಪುಕಟ್ಟಿಕೊಂಡವರ ಪಕ್ಕದ ಕುಳಿತು ನನ್ನ ಕೆಲಸ ದಲ್ಲಿ ಇನ್ಯಾವ ಹೊಸ ಸಾಧ್ಯತೆಗಳಿವೆ ಅನ್ನುವುದರ ಹುಡುಕಾಟದಲ್ಲಿ ತೊಡಗಿಕೊಂಡೆ. ಹರುಕು-ಹುಳುಕು ಮಾತುಗಳಿಗೆ ಅವಕಾಶ ಕೊಡದಂತೆ ನನ್ನ ಮಾತು-ನಡತೆಗೊಂದು ಗಾಂಭೀರ್ಯ ತೊಡಿಸಿಕೊಂಡೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಇನ್ನಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳತೊಡಗಿದೆ.

ಇದರಿಂದಾಗಿ ನನ್ನ ಆಪ್ತವಲಯ ಬಹಳ ಚಿಕ್ಕದಾಗಿ selective ಆಯ್ತು. ಆಗಲೇ ಪರಿಚಯವಾಗಿದ್ದು ಸಂಗೀತ, ಪುಸ್ತಕಗಳು,
ಹಾಡುಗಳು, ಗಝಲ್‌ಗಳು! ಮೊದಮೊದಲಿಗೆ ಕೇಳುವಾಗ ಅರ್ಥವೇ ಆಗುತ್ತಿರಲಿಲ್ಲ. ಅರ್ಥಗಳನ್ನು ತಿಳಿಯುವುದಕ್ಕಾಗಿ ಡಿಕ್ಷನರಿ ಯನ್ನು ತಂದಿಟ್ಟುಕೊಂಡೆ. ರಾಗ ಆಲಾ ಪಗಳು ತಿಳಿಯುತ್ತಿರಲಿಲ್ಲವಾದ್ದರಿಂದ ಅದರ ಬಗ್ಗೆ ಜ್ಞಾನವಿದ್ದವರಲ್ಲಿ ಹೆಚ್ಚಿನ ಮಾಹಿತಿ ಪಡೆಯುತ್ತಾ ಹೆಚ್ಚಿನ ಅರಿವು ಮೂಡಿಸಿಕೊಳ್ಳತೊಡಗಿದೆ. ಸಿಕ್ಕ ಬಿಡುವಿನ ಸಮಯದ ಸಿತಾರ್ ಕಲಿಯಲು ಪ್ರಯತ್ನಿಸಿದೆ.

ಆದರೆ ಅದಕ್ಕಾಗಿ ಸಮಯ ಮೀಸಲಿಡಲಾಗದೆ ಅದನ್ನು ಅರ್ಧಕ್ಕೇ ನಿಲ್ಲಿಸಿದೆ. ನನ್ನಲ್ಲಾಗುತ್ತಿದ್ದ ಈ ಎಲ್ಲ ಪರಿವರ್ತನೆಯನ್ನೂ
ಸೂಕ್ಷ್ಮವಾಗಿ ಗಮನಿಸುತ್ತಾ ಅದರ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದರು ರವಿ. ಇದೆಲ್ಲದರ ನಡುವೆಯೇ ಒಮ್ಮೆ ಚೌಡಯ್ಯಾ ಮೆಮೊರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ಪಾಕಿಸ್ತಾನಿ ಮೂಲದ ಖ್ಯಾತ ಗಝಲ್ ಗಾಯಕ ಗುಲಾಮ್ ಅಲಿಯವರ ಲೈವ್ ಶೋಗೆ ಕರೆದುಕೊಂಡು ಹೋಗಿದ್ದರು.

ಇಂದಿಗೂ ಅದೊಂದು ಸುಂದರ ಸಂಜೆಯ ಘಳಿಗೆಯಾಗಿ ಮನಃಪಟಲದಲ್ಲಿ ಸ್ಥಾಪಿತವಾಗಿ ಹೋಗಿದೆ. ಹೊರ ಬರುವಾಗ ನಿನ್ನ ಪಕ್ಕದಲ್ಲಿ ಕುಳಿತಿದ್ದವರು ಯಾರು ಗೊತ್ತಾಯ್ತಾ? ಎಂದರು. ಇಲ್ಲ. ಹಿಂದಿನ ಸಾಲಿನಲ್ಲಿದ್ದವರು ಅರುಂಧತಿ ನಾಗ್ ಅಂತ ಗೊತ್ತಾಯ್ತು ಎಂದೆ. ಪೆದ್ದಿ! The great cricketer kirmani  ಅಂದು ನಕ್ಕರು. ಹೌದಾ? ಅನ್ನುತ್ತಾ ಮನೆಗೆ ಬಂದು ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಡಿದೆ. ಯಾಕಂದ್ರೆ ಕ್ರಿಕೆಟ್ ಆಟವೆಂದರೆ ನನಗೆ ಅಷ್ಟಕ್ಕಷ್ಟೆ! ಮಾರನೆಯ ದಿನ ಕಚೇರಿಯಲ್ಲಿ ಸಹೋದ್ಯೋಗಿ ಹುಡುಗಿಯೊಬ್ಬಳು ಬಾಸ್ ಜತೆಗೆ ಇದ್ಯಾಕೆ ಹೋಯ್ತು? ಅಂತ ಕುಚೋದ್ಯ ವಾಡಿದ್ದು ಗೊತ್ತಾಯ್ತು.

ಆದರೆ ಸಿಟ್ಟು ಬರಲಿಲ್ಲ. ಯಾಕಂದ್ರೆ ಅವಳ ಆಲೋಚನೆಯ ಮಟ್ಟವೆಂಥದ್ದು ಅನ್ನುವುದನ್ನು ಅವಳೇ ತೋರಿಸಿ ಕೊಂಡಂತಾ ಗಿತ್ತು. ಅವಳ ಮಟ್ಟಕ್ಕಿಳಿಯುವಂಥಾ ಅವಶ್ಯಕತೆ ನನಗೆ ಕಾಣಲಿಲ್ಲ! ದೈಹಿಕ ಬೆಳವಣಿಗೆ ಒಂದು ಹಂತದರೆಗೆ ಮಾತ್ರ! ಆದರೆ ಬೌದ್ಧಿಕ ಬೆಳವಣಿಗೆ ನಿರಂತರವಾಗಿದ್ದರೆ ಅದು ನಮ್ಮನ್ನು ಇನ್ನಷ್ಟು ಎತ್ತರಗಳಿಗೆ ಕೊಂಡೊಯ್ಯುತ್ತದೆ. ಕೊಟ್ಟ ಅವಕಾಶ ಗಳನ್ನು ದುರುಪಯೋಗಗೊಳಿಸಿಕೊಳ್ಳದೇ ಪ್ರಾಮಾಣಿಕವಾಗಿದ್ದರೆ ಮುಂದೊಂದು ದಿನ ಅದು ನಿಸ್ಸಂದೇಹ ವಾಗಿ ನಮ್ಮ ಕೈ ಹಿಡಿಯುತ್ತದೆ ಅನ್ನುವ ಅಗಾಧ ನಂಬಿ ಕೆಯುಳ್ಳವಳು ನಾನು.

ಒಂದು ವೇಳೆ ಸಾಧ್ಯವಾಗದಿದ್ದರೆ ಆ ನಂಬಿಕೆಯೂ ನನ್ನೊಂದಿಗೇ ಸಾಯುತ್ತದೆ ಅಷ್ಟೆ. ಅದರಿಂದ ಯಾರಿಗೂ ತೊಂದರೆ ಯಾಗುವುದಿಲ್ಲ. ಹೀಗಾಗಿ ಯಾರೇನೇ ಹೇಳಿದರೂ ವಿಚಲಿತರಾಗದಂತೆ ನಿಮ್ಮ ನಂಬಿಕೆಗಳಲ್ಲಿ ಅಚಲವಾದ ವಿಶ್ವಾಸವಿಡುವು ದನ್ನು ರೂಢಿಸಿಕೊಳ್ಳಿ. ಈಗ ಕಾಲ ಬದಲಾಗಿದೆ. ನಮ್ಮ ಹಿಂದಿನ ತಲೆಮಾರಿನವರಿಗಿದ್ದ ಸಂಕಟಗಳಿಂದ ನಮಗೆ ಸಾಕಷ್ಟು ಮುಕ್ತಿ
ದೊರಕಿದೆ.

Facebook, whats app, instagram, twitter, youtube ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಜನರ ನಡುವೆ ನಾವೂ ಮಾತಾಗಬಹುದಾಗಿದೆ. ನಮ್ಮ ಆಸಕ್ತಿಗಳಿಗೆ ಅನುಗುಣವಾಗಿ ನಮ್ಮ ಸ್ನೇಹವಲಯವನ್ನು ಸೃಷ್ಟಿಸಿಕೊಳ್ಳ ಬಹುದಾಗಿದೆ. ಭೇಟಿಯೇ ಆಗದೆ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲವೂ ಇದೆ ಅವರೊಬ್ಬರ ಹೊರತಾಗಿ…. ನೋವಿನೆಡೆಗೇ ನಾಲಗೆ ಹೊರಳುವಂತೆ ಮನಸ್ಸು ಮತ್ತೆ ಅಲ್ಲಿಗೇ ಹೋಗಿ ನಿಲ್ಲುತ್ತದೆ.

You have started living with past. Try to live yourself in present. Because life is a beautiful present to all of us. Let’s live it ಅನ್ನುವ ಮಾತುಗಳು ಕೊಂಚ ಸಮಾಧಾನದ ತಂಪೆರೆದವಾದರೂ ಕಾಡುವ ನೆನಪುಗಳಿಂದ ಹೊರಬರಲು ಬಹುಶಃ ಮತ್ತೆ ಮನಃಶಾಸಜ್ಞರ ಸಲಹೆ ಅಗತ್ಯವೇನೋ? ಅಲ್ಲಿಯವರೆಗೆ ಯಾರೊಂದಿಗೂ ಮಾತು ಬೇಡ. Let me live in my world ಅನ್ನುತ್ತಾ ಮನಸಿನ ಬಾಗಿಲಿಗೆ ಭದ್ರವಾದ ಬೀಗ ಜಡಿದು ಸಂತಸದ ಮುತ್ತುಗಳನ್ನು ಆರಿಸಿಕೊಳ್ಳುತ್ತಿದ್ದೇನೆ. ನಾನೀಗ ಪರಮ ಸುಖಿ!