Thursday, 15th May 2025

Surendra Pai Column: ಜಗತ್ತನ್ನೇ ಸೂರೆಗೊಳಿಸುವ ಸೋರಾ !

ತಂತ್ರ-ಜ್ಞಾನ

ಸುರೇಂದ್ರ ಪೈ

ಜಗತ್ತನ್ನೇ ಆವರಿಸಿರುವ ಓಪನ್ ಎಐ ಸೋರಾ ದಿಂದ ನಿರ್ಮಿಸಲಾದ ಪ್ರತಿಯೊಂದು ವಿಡಿಯೋ ನೈಜ್ಯವೆಂಬಂತೆ ಭ್ರಮೆಯನ್ನು ಮೂಡಿಸಿದರೂ ಸಹ, ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲೂ ಹಲವು ದೋಷಗಳು ಇರುವುದು ಕಂಡುಬರುತ್ತದೆ. ಉದಾಹರಣೆಗೆ ತಪ್ಪಾದ ಭೌತಿಕ ಸಿಮ್ಯುಲೇಶನ್‌ಗಳು ಇತ್ಯಾದಿ. ಇವುಗಳ ಬಗ್ಗೆ ಓಪನ್ ಎಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಜಗತ್ತಿನ ಎಲ್ಲ ಕ್ಷೇತ್ರದಲ್ಲೂ ತನ್ನ‌ ಛಾಪನ್ನು ಮೂಡಿಸುತ್ತಿರುವುದು ಎಲ್ಲರಿಗೂ
ತಿಳಿದ ಸಂಗತಿ. ಚುನಾವಣೆಗಳಲ್ಲಿ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಸತ್ತವರನ್ನು ಸೃಷ್ಟಿಸಿದ್ದು ಒಂದು ಕಡೆಯಾದರೆ, ಇತ್ತೀಚೆಗಷ್ಟೇ ಕ್ಯಾಲಿಪೋರ್ನಿಯಾದಲ್ಲಿ ನಡೆದ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ‘ವಿ ರೋಬೋಟ್’ ಕಾರ್ಯಕ್ರಮದಲ್ಲಿ ಸೆಲ್ಫ್ ಡ್ರೈವಿಂಗ್ ಸೈಬರ್‌ಕ್ಯಾಬ್,‌ ರೋಬೋವಾನ್ ಮತ್ತು ‘ಅಪ್ಟಿಮಸ್’ ಹೆಸರಿನ ಹುಮ ನಾಯ್ಡ ರೋಬೋಟ್ ಎಂಬ ಮೂರು ಉತ್ಪನ್ನಗಳನ್ನು
ಪ್ರದರ್ಶಿಸುವ ಮೂಲಕ ಎಐ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿಗೆ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇವುಗಳ ನಡುವೆಯೇ ಜಗತ್ತೇ ನಿಬ್ಬೆರಗಾಗುವ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ನೀವು ಸಾಮಾಜಿಕ ಜಾಲತಾಣದಲ್ಲಿ ಒಂದು ಸಣ್ಣ ದ್ವೀಪದ ದೃಶ್ಯವನ್ನು ಡ್ರೋನ್ ಮೂಲಕ ಚಿತ್ರೀಕರಿಸಲ್ಪಟ್ಟಂತೆ, ಮೋಡಗಳ ಮೇಲೆ ಕುಳಿತು ಒಬ್ಬ ವ್ಯಕ್ತಿ ಪುಸ್ತಕ ಓದುತ್ತಿರುವಂತೆ, ಭಾರತದ ಯಾವುದೋ ನಗರದಲ್ಲಿ ಯುವಕರು ಉತ್ಸಾಹದಿಂದ ಬಣ್ಣಗಳ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಿರುವಂತೆ, ಹೀಗೆ ಹರಿದಾಡುತ್ತಿರುವ ಹತ್ತಾರು ವಿಡಿಯೋಗಳನ್ನು ವೀಕ್ಷಣೆ ಮಾಡಿರಬಹುದು.

ಅವುಗಳನ್ನು ನೋಡಿದರೆ ಒಮ್ಮೆ ವಾಸ್ತವದಲ್ಲಿ ಎಲ್ಲಾ ಒಂದು ಕಡೆ ಅಸ್ತಿತ್ವದಲ್ಲಿರುವ ಸ್ಥಳದಂತೆ ಗೋಚರಿಸುತ್ತದೆ. ಆದರೆ ವಾಸ್ತವದಲ್ಲಿ ಅಂತಹ ಯಾವ ಸ್ಥಳವು ಅಸ್ತಿತ್ವದ ಇಲ್ಲ. ಇವೆಲ್ಲವೂ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (ಎಜಿಐ) ಎಂಬ ತಂತ್ರಜ್ಞಾದ ಹೊಸ ಆವಿಷ್ಕಾರವಾದ OpenAI Sora (ಓಪನ್ ಎಐ ಸೋರಾ)ನ ಕೈ‌ ಚಳಕ ಎಂದರೆ ನಂಬಲು ಸಾಧ್ಯವಿಲ್ಲ ಅಲ್ಲವೇ? ನಿಜ, ಇವೆಲ್ಲವೂ ಓಪನ್ ಎಐ ಸೋರಾ ನಿರ್ಮಿತವಾದ ವಿಡಿಯೋ ತುಣುಕುಗಳಾಗಿವೆ. ಈ ತಂತ್ರಜ್ಞಾವನ್ನು ಜಗತ್ತಿಗೆ ಪರಿಚಯಿಸಿದ ವ್ಯಕ್ತಿ ಅದರ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್.

ಇಂದಿನಿಂದ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ನವೆಂಬರ್ 2022 ರಲ್ಲಿ ಚಾಟ್ ಜಿಪಿಟಿ (ChatGPT) ಎಂಬ ಹೊಸ ತಂತ್ರeನವನ್ನು ಮಾರುಕಟ್ಟೆಗೆ ಪರಿಚಯಿಸಿ ಜಗತ್ತನ್ನೇ ಬೆರಗುಗೊಳಿಸುವಂತೆ ಮಾಡಿದ ಓಪನ್ ಎಐ ಕಂಪನಿಯವರ ಇನ್ನೊಂದು ಹೊಸ ಕೊಡುಗೆಯೇ ಈ ಸೋರಾ ಎಐ. ಇದೊಂದು ಆರ್ಟಿಫಿಶಿಯಲ್ ಇಂಟೆಲಿಜೆ ಸಾಫ್ಟ್‌ ವೇರ್ ಆಗಿದೆ. ಈ ಮೊದಲು ಚಾಟ್ ಜಿಪಿಟಿ ತಂತ್ರಜ್ಞಾನ ಟೆಕ್ಸ್ಟ್ ಟು-ಟೆಕ್ಸ್ಟ್ ಆಗಿತ್ತು. ಇಲ್ಲಿ ಟೆಕ್ಸ್ಟ್ (ಬರಹ) ಮೂಲಕ ಮಾತ್ರ ಸಂಭಾಷಣೆಯ ನಡೆಸಲು ಸಾಧ್ಯವಿತ್ತು. ನಾವು ಏನಾದರೂ ಬರಹದ ರೂಪದಲ್ಲಿ ಮಾಹಿತಿಯನ್ನು ಕೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬರಹದ ರೂಪದ ಗ್ರಾಹಕರಿಗೆ ಲಭಿಸುತ್ತಿತ್ತು. ಇದು ಓಪನ್ ಎಐ ಅವರ ಮೊದಲ ಹಂತವಾಗಿತ್ತು. ಇದರ ನಂತರ ಸ್ವಲ್ಪ ದಿನದಲ್ಲಿ DALL-ಉಮತ್ತು ಮಿಡ್ಜರ್ನಿಯಂತಹ ಟೆಕ್ಸ್ಟ್ ಟು-ಇಮೇಜ್ ತಂತ್ರಜ್ಞಾನ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದರಲ್ಲಿ ಟೆಕ್ಸ್ಟ್ (ಬರಹ) ಮೂಲಕ ಗ್ರಾಹಕರು ತಮಗೆ ಯಾವ ರೀತಿಯ ಪೋಟೋ ಬೇಕು ಎಂದು ಸಂದೇಶವನ್ನು ರವಾನಿಸಿದರೆ ಸಾಕು, ಅದಕ್ಕೆ ತಕ್ಕಂತೆ ಪೋಟೋ ಸಿದ್ಧವಾಗುತ್ತಿತ್ತು. ಆದರೆ ಈಗ ಪರಿಚಯಿಸಲಾದ ಸೋರಾ ಎಂಬುದು ಟೆಕ್ಸ್ಟ್-ಟು-ವಿಡಿಯೋ ಜನರೇಟರ್ ಆಗಿದೆ. ಇಲ್ಲಿ ಗ್ರಾಹಕರು ತಮಗೆ ಯಾವ ರೀತಿಯ ವಿಡಿಯೋ ಬೇಕೆಂದು ಸರಳ ಇಂಗ್ಲೀಷ್ ಭಾಷೆಯಲ್ಲಿ ಜನರೇಟಿವ್ ಎಐ ಅನ್ನು ಬಳಸಿಕೊಂಡು ಲಿಖಿತ ಪ್ರಾಂಪ್ಟ್‌ಗಳ ಆಧಾರದ ಮೇಲೆ 60 ಸೆಕೆಂಡುಗಳವರೆಗೆ ವೀಡಿಯೊಗಳನ್ನು ರಚಿಸುವಂತೆ ಸಿದ್ಧಪಡಿಸಲಾಗಿದೆ.

ಇಷ್ಟೇ ಅಲ್ಲ ಸೋರಾ ಬಳಸಿ ‘ಇಮೇಜ್ ಟು-ವಿಡಿಯೋ’ ಹಾಗೂ ‘ವಿಡಿಯೋ ಟು- ವಿಡಿಯೋ’ ಸಹ ಮಾಡಲಾಗುತ್ತದೆ. ಅಂದರೆ ನಿಮ್ಮ ಬಳಿ ಇರುವ ಒಂದು ಪೋಟೋಗೆ ಪ್ರಾಂ ಬಳಸಿ ಅಪ್ಲೋಡ್ ಮಾಡಿದರೆ ಸಾಕು ಅದು ಕ್ಷಣ ಮಾತ್ರದ ವಿಡಿಯೋ ಆಗಿ ಬದಲಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ‘ನೀವು ಬಿಳಿ ಬಣ್ಣದ ಕಾರಿನಲ್ಲಿ ಚಲಿಸುತ್ತಿರುವ ವಿಡಿಯೋ ಇದ್ದರೆ ಅದಕ್ಕೆ ಪ್ರಾಂನಲ್ಲಿ ಈ ಕಾರಿನ ಬಣ್ಣ ಬದಲಾಗದೆ ಇದು 70ರ
ದಶಕದ ನಗರದಲ್ಲಿ ಸಂಚರಿಸುವಂತೆ ವಿಡಿಯೋ ರಚಿಸಿ ಎಂದು ತಿಳಿಸಿದರೆ ಸಾಕು, ನೋಡ ನೋಡುತ್ತಿದ್ದಂತೆ 70ರ ದಶಕದ ನಗರದಲ್ಲಿ ನೀವು ಬಿಳಿ ಕಾರಿನಲ್ಲಿ ಚಲಿಸುತ್ತಿದ್ದ ಹಾಗೇ ವಿಡಿಯೋ ಸಿದ್ಧವಾಗುತ್ತದೆ. ಇದನ್ನು ಸೋರಾ ಮೂಲಕ ನಿರ್ಮಿಸಲಾದ ವಿಡಿಯೋ ಎಂದು ಪತ್ತೆ
ಹಚ್ಚುವುದು ಅಸಾಧ್ಯವೆನಿಸುವಷ್ಟರ ಮಟ್ಟಿಗೆ ಅದು ತನ್ನ ಕಾರ್ಯವನ್ನು ಮಾಡುತ್ತದೆ.

ಈಗ ಒಮ್ಮೆ ಯೋಚಿಸಿ ಸೋರಾ ಬಳಕೆಗೆ ಬಂದರೆ ಎನಿಮೇಟರ್ಸ್, ವಿಡಿಯೋ ಗೇಮ್ ಡಿಸೈನರ್, ಗ್ರಾಫಿಕ್ ಡಿಸೈನರ್ ಅಂತವರ ಅವಶ್ಯಕತೆ ಇನ್ನು ಮುಂದೆ ಇದೆ ಎಂದೆನಿಸುತ್ತದೆಯೇ? ಅಷ್ಟೇ ಅಲ್ಲ ಸ್ಟಾಕ್ ಪೋಟೋ ತಂತ್ರಜ್ಞಾನ, ಸ್ಟಾಕ್ ವಿಡಿಯೋ ತಂತ್ರಜ್ಞಾನವೆಲ್ಲವೂ ಮುಚ್ಚಲ್ಪಡು ತ್ತದೆ. ಅರ್ಥಾತ್ ಜಾಗತಿಕವಾಗಿ ಎಲ್ಲವೂ ಬುಡಮೇಲಾಗುತ್ತದೆ. ಸೋರಾ ಮಾರುಕಟ್ಟೆಗೆ ಕಾಲಿಡುವ ಮುನ್ನ ಟೆಕ್ಸ್ಟ್ ಟು-ವಿಡಿಯೋ ಮಾಡಲು ಪಿಕಾ ಲ್ಯಾಬ್ಸ್ ಮತ್ತು ರನ್ ವೇ ಎಂಬ ಕಂಪನಿಗಳು ಜಾಗತಿಕವಾಗಿ ಹೆಚ್ಚು‌ ಬಳಕೆಯಲ್ಲಿದ್ದವು, ವಿಶೇಷವಾಗಿ ಹಾಲಿವುಡ್ ಚಿತ್ರ ಜಗತ್ತಿನಲ್ಲಿ ಇವುಗಳನ್ನು ಬಳಸಲಾಗುತ್ರಿತ್ತು. ಆದರೆ ಸೋರಾ ತಂತ್ರಜ್ಞಾನವು ಅವೆಲ್ಲವನ್ನೂ ಹಿಂದಿಕ್ಕಿದೆ.

ಸೋರಾ ದಿಂದ ನಿರ್ಮಿಸಲಾದ ವಿಡಿಯೋ ಅಷ್ಟು ನೈಜತೆಯಿಂದ ಕೂಡಿರಲು ಕಾರಣವೆಂದರೆ ಇದು ಭೌತಶಾಸ್ತ್ರದ ಚಲನೆಯ ನಿಯಮಗಳ ಬಗ್ಗೆ, ಜೀವಿಗಳ ಭಾವನೆ, ಭಾಷೆಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಕೇವಲ ಪದಗಳು ಮತ್ತು ವಾಕ್ಯಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ, ಸಂದರ್ಭಗಳ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಭಾಷೆಯ ಹಿಂದಿನ ಉದ್ದೇಶವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ.

ಉದಾಹರಣೆಗೆ ಒಂದು ಆನೆ ಮತ್ತು ಬೆಕ್ಕು ಹೇಗೆ ಚಲಿಸುತ್ತವೆ ಹಾಗೂ ಅವುಗಳು ಚಲಿಸುವ ಕ್ರಮ ಇತ್ಯಾದಿ. ಇದೆಲ್ಲವೂ ಸಾಧ್ಯವಾಗಲು
ಕಾರಣ ಇದರಲ್ಲಿ ಬಳಸಲಾಗಿರುವ ತಂತ್ರಜ್ಞಾನ. ಸೋರಾ ಚಾಟ್‌ಜಿಪಿಟಿಯಲ್ಲಿ ಬಳಸಲಾದ ಪ್ರಾಥಮಿಕ ತಂತ್ರಾಂಶದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.ವು ಚಾಟ್ ಜಿಪಿಟಿ ಟೋಕನ್‌ಗಳ ಬಳಕೆ ಮಾಡುತ್ತಿತ್ತು, ಆದರೆ ಇಲ್ಲಿ ಪ್ಯಾಚಸ್‌ಗಳ ಬಳಕೆ ಮಾಡಲಾಗಿದೆ. ಅಂದರೆ ಸೋರಾ ಕಾರ್ಯವು ಅಲ್ಗಾರಿದಮ್‌ಗಳು ಮತ್ತು ಯಂತ್ರ ಕಲಿಕೆಯ ತಂತ್ರಗಳ ಸಂಕೀರ್ಣ ಮಿಶ್ರಣವನ್ನು ಆಧರಿಸಿದೆ. ಇದು ಮೂರು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ.

ದೃಶ್ಯ (ವಿಷುಯಲ)ಎನ್ಕೋಡಿಂಗ್, ಡಿ-ಷನ್ ಟ್ರಾನ್ಸಾರ್ಮರ್ (ಡಿಐಟಿ) ಮತ್ತು ದೃಶ್ಯ (ವಿಷುಯಲ) ಡಿಕೋಡಿಂಗ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಜಗತ್ತನ್ನೇ ಆವರಿಸಿರುವ ಓಪನ್ ಎಐ ಸೋರಾ ದಿಂದ ನಿರ್ಮಿಸಲಾದ ಪ್ರತಿಯೊಂದು ವಿಡಿಯೋ ನೈಜ್ಯವೆಂಬಂತೆ
ಭ್ರಮೆಯನ್ನು ಮೂಡಿಸಿದರೂ ಸಹ, ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲೂ ಹಲವು ದೋಷಗಳು ಇರುವುದು ಕಂಡುಬರುತ್ತದೆ. ಉದಾಹರಣೆಗೆ ತಪ್ಪಾದ ಭೌತಿಕ ಸಿಮ್ಯುಲೇಶನ್‌ಗಳು ಇತ್ಯಾದಿ. ಇವುಗಳ ಬಗ್ಗೆ ಓಪನ್ ಎಐ ತನ್ನ ಅಽಕೃತ ವೆಬ್ಸೈಟ್‌ನಲ್ಲಿ ಹೇಳೊಕೊಂಡಿದೆ. ಆದರೆ
ಮುಂದಿನ ದಿನಗಳಲ್ಲಿ ಆ ದೋಷಗಳನ್ನು ಗುರುತಿಸಲು ಸಾಧ್ಯವಿಲ್ಲದಂತೆ ಮಾಡುವ ಸಾಮರ್ಥ್ಯವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಇಂದು ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನವು ಭವಿಷ್ಯದ ನೈತಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಭಯವನ್ನು ಉಂಟುಮಾಡುತ್ತದೆ. ಮುಂದೊಂದು ದಿನ ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಗುರುತಿಸಲು ನಮ್ಮ ಕಣ್ಣುಗಳಿಂದಲೂ ಸಾಧ್ಯವಾಗದೆ ಹೋಗಬಹುದು. ಆದ್ದರಿಂದಲೇ ಸೋರಾ ಇನ್ನೂ ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲ. ಈ ಉಪಕರಣವನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲು ಮುಂದಾಗುವ ಎಲ್ಲ ಅಪಾಯಗಳ ಬಗ್ಗೆ, ಕುಂದುಕೊರೆತೆ ಹಾಗೂ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಇದು ತನ್ನ ‘ರೆಡ್ ಟೀಮ್’ (ಸೈಬರ್ ಸೆಕ್ಯುರಿಟಿ)ನಿಂದ ‌ನಿರಂತರವಾಗಿ ಪರೀಕ್ಷೆಗೆ ಒಳಪಡಿಸುತ್ತಿದೆ. ಓಪನ್‌ಎಐಅವರು ಹೇಳಿರುವಂತೆ ಸೋರಾ ದಿಂದ ನಿರ್ಮಿಸಲ್ಪಟ್ಟ ವಿಡಿಯೋಗಳಿಗೆ ವಾಟರ್ ಮಾರ್ಕ್ ಹಾಕಲಾಗುತ್ತದೆ.

ಇದರಿಂದ ಇದು ಎಐ ನಿರ್ಮಿತ ವಿಡಿಯೋ ಎಂದು ತಿಳಿಯಲು ಸಾಧ್ಯ ಎಂದು ಹೇಳಿಕೊಂಡಿದೆ. ಇತ್ತೀಚಿನ ಡೀಪ್ ಫೇಕ್ ತಂತ್ರಜ್ಞಾನದಿಂದ ಏನೆಲ್ಲ
ಅನಾಹುತಗಳಾಗಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇಂತಹ ತಂತ್ರಜ್ಞಾನವನ್ನು ಒಳ್ಳೆಯದಕ್ಕಿಂತ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವವರೇ ಹೆಚ್ಚು. ಇದರಿಂದ ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆಯೂ ಆತಂಕ ಹೆಚ್ಚಿಸುತ್ತದೆ. ಎಲ್ಲವುದಕ್ಕಿಂತಲೂ ಮುಖ್ಯವಾಗಿ ಈಗಾಗಲೇ ಹಲವಾರು ಜನರು ಪ್ರಸುತ್ತ ಬಳಕೆಯಲ್ಲಿರುವ ತಂತ್ರಜ್ಞಾನದ ಕಾರಣದಿಂದಾಗಿ ತಮ್ಮ
ಉದ್ಯೋಗಗಳನ್ನು ಕಳೆದುಕೊಳ್ಳುತ್ತಿzರೆ, ಒಂದು ವೇಳೆ ಸೋರಾ ಬಳಕೆಗೆ ಬಂದರೆ ಜಾಗತಿಕ ಮಟ್ಟದಲ್ಲಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಭಾರತದಂತಹ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಭಂಗಗೊಳಿಸಲು ಇದರ ಬಳಕೆಯಾದರೆ ಆಡಳಿತ ಹದಗೆಡುವುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ದೇಶದ ರಕ್ಷಣೆಯ ವಿಷಯದ
ಮೇಲೂ ಋಣಾತ್ಮಕ ಪ್ರಭಾವ ಬೀರುವ ಸಂಭವ ಹೆಚ್ಚಾಗಿರುತ್ತದೆ.

ಪ್ರತಿಯೊಂದು ಆವಿಷ್ಕಾರವು ಮನುಕುಲದ ಏಳ್ಗೆಗಾಗಿಯೇ ಮಾಡಲಾಗುತ್ತದೆ ಎಂಬುದು ಸತ್ಯ. ಇಲ್ಲೂ ಸಹ ಓಪನ್ ಎಐ ಸೋರಾದಿಂದ ಉಪಯೋಗವು ಬಹಳಷ್ಟಿದೆ. ತಂತ್ರಜ್ಞಾನದ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಅದನ್ನು ಸ್ವೀಕರಿಸಿ ಅನುಸರಿಸುವು ದರ ಬುದ್ಧಿವಂತಿಕೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಜಗತ್ತಿನಲ್ಲಿ ಕೆಲವು ರಾಷ್ಟ್ರಗಳು ಸೋರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಿಂಗಾಪುರದಂತಹ ದೇಶವು ತನ್ನ ೪೦ ವರ್ಷ ಮೇಲ್ಪಟ್ಟ ಪ್ರಜೆಗಳಿಗೆ ಡಿಪ್ಲೊಮಾ ಕೋರ್ಸ್ ಕಲಿಯಲು ಸಬ್ಸಿಡಿ ನೀಡಲು ನಿರ್ಧರಿಸಿದೆ. ಸೋರಾವನ್ನು ಮನರಂಜನೆ ಮತ್ತು ಚಲನಚಿತ್ರ ನಿರ್ಮಾಣ, ಜಾಹೀರಾತು ಮತ್ತು ಮಾರ್ಕೆಟಿಂಗ್, ವಿಡಿಯೋ ಗೇಮ್ಗಳು ಮತ್ತು ವರ್ಚುವಲ್ ರಿಯಾಲಿಟಿ, ಶಿಕ್ಷಣ ಮತ್ತು ಕಲಿಕೆ ಮುಂತಾದ ಕ್ಷೇತ್ರದಲ್ಲಿ ಬಳಸಬಹುದು.

ಒಟ್ಟಿನಲ್ಲಿ ಈ ತಂತ್ರಜ್ಞಾನದ ಭರಾಟೆ ಯಲ್ಲಿ ನಾವೆಲ್ಲರೂ ಸಹ ನಮ್ಮ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುವುದರೊಂದಿಗೆ , ಪಾರಂಪರಿಕ ಆಹಾರ ಕ್ರಮ, ಸಂಸ್ಕೃತಿ, ಭಾಷೆ, ಅಚರಣೆಗಳು, ಜೀವವೈವಿಧ್ಯತೆಯನ್ನು ದೂರ ಮಾಡುತ್ತಾ ಮಾಡುತ್ತಾ ಯಂತ್ರಗಳ ದಾಸರಾಗಿ ಉಳಿಯು
ತ್ತಿದ್ದೇವೆ. ಇದು ನಿಜವಾದ ಅಭಿವೃದ್ಧಿಯೇ ಅಥವಾ ಅವನತಿಯೇ ಎಂಬುದನ್ನು ನಾವೊಮ್ಮೆ ಅವಲೋಕಿಸುವ ಸಮಯ ಬಂದಿದೆ. ಕೆಲವೊಮ್ಮೆ ಯೋಚಿಸಿದಾಗ ನಾವು ತೊಡಿದ ಹಳ್ಳದಲ್ಲಿ ನಾವೇ ಬಿzವಾ ಎಂದೆನಿಸುತ್ತದೆ.

(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)