ಮೂರ್ತಿ ಪೂಜೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊನ್ನೆ ದೆಹಲಿಯ ವಿಮಾನ ಹತ್ತು ವಾಗ ಖುಷಿಯಾಗಿದ್ದರಂತೆ. ಬಿಜೆಪಿ ಮೂಲಗಳ ಪ್ರಕಾರ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಗೆಲ್ಲುತ್ತದೆ ಅಂತ ಅಮಿತ್ ಷಾ ರವಾನೆ ಮಾಡಿದ ಸಂದೇಶವೇ ಇದಕ್ಕೆ ಕಾರಣ.
ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ ತಮ್ಮ ಕೈಲಿರುವ ರಿಪೋರ್ಟಿನ ಆಧಾರದ ಮೇಲೆ ಕಹಿಯಾಗಿ ಮಾತನಾಡಿದ್ದರಂತೆ. ಇವತ್ತಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ ನಾವು ತೊಂಬತ್ತು ಸೀಟು ಗೆಲ್ಲಬಹುದು. ಹಾಗೇನಾದರೂ ಆದರೆ ಜೆಡಿಎಸ್ ಪಕ್ಷ ಮಿನಿಮಮ್ ಮೂವತ್ತೈದು ಸೀಟು ಗೆಲ್ಲಲು ನಾವೂ ಸಹಕಾರ ನೀಡಬೇಕು ಎಂಬುದು ಅಮಿತ್ ಷಾ ಮಾತು. ಆದರೆ ಇದೀಗ ಇದ್ದಕ್ಕಿದ್ದಂತೆ ಅಮಿತ್ ಷಾ ಅವರು ಫುಲ್ಲು ಕಾನಿಡೆಂಟಾಗಿ ಮಾತ ನಾಡಿದ್ದಾರಂತೆ.
ಬೊಮ್ಮಾಯೀಜೀ… ನಾವು ಕನಿಷ್ಠ ನೂರಿಪ್ಪತ್ತು ಸೀಟು ಗೆಲ್ಲುತ್ತೇವೆ. ನೀವೆಲ್ಲ ಭರವಸೆಯಿಂದ ಕೆಲಸ ಮಾಡಿ ಅಂತ ಅವರು ರವಾನಿಸಿದ ಸಂದೇಶ ಸಹಜ ವಾಗಿಯೇ ಬೊಮ್ಮಾಯಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಂದ ಹಾಗೆ ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ಇದ್ದಕ್ಕಿದ್ದಂತೆ ಭೀಮನ ಗೆಟಪ್ಪು ಹಾಕಿಕೊಂಡ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದರು.
ದಮ್ಮಿದ್ರೆ… ತಾಖತ್ತಿದ್ರೆ ನಮ್ಮ ಅಶ್ವಮೇಧದ ಕುದುರೆಯನ್ನು ತಡೆಯಿರಿ ಎಂಬರ್ಥದಲ್ಲಿ ಮಾತನಾಡಿದ ಬೊಮ್ಮಾಯಿ ಅಂದೇ ಕೈ ಪಾಳಯಕ್ಕೆ ಪಂಥಾಹ್ವಾನ ನೀಡಿದ್ದರು. ಆದರೆ ಇದಾದ ನಂತರ ಬೊಮ್ಮಾಯಿ ಅವರ ಸವಾಲಿಗೆ ಪೂರಕವಾದ ಓಟ
ರಾಜ್ಯ ಬಿಜೆಪಿಯಿಂದ ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಬಿಜೆಪಿ ಶಿಬಿರದಲ್ಲಿ ಇದ್ದಕ್ಕಿದ್ದಂತೆ ಉತ್ಸಾಹದ ವಾತಾವರಣ ಕಾಣುತ್ತಿದೆ. ಇದಕ್ಕೇನು ಕಾರಣ ಅಂತ ಹುಡುಕಲು ಹೋದರೆ ಕಾಂಗ್ರೆಸ್ ಹೈಕಮಾಂಡ್‌ನ ಈ ನಾಯಕ ಕಣ್ಣಿಗೆ ಕಾಣುತ್ತಾರೆ. ಅವರ ಹೆಸರು- ರಣದೀಪ್ ಸಿಂಗ್ ಸುರ್ಜೇವಾಲ.
ಅಂದ ಹಾಗೆ ಕೆಲ ದಿನಗಳ ಹಿಂದೆ ಸುರ್ಜೇವಾಲ ಇದ್ದಕ್ಕಿದ್ದಂತೆ ದೆಹಲಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕದ ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ದಾಳಿ ನಡೆಸಲು ಕೇಂದ್ರ ಸರ್ಕಾರ ದೊಡ್ಡ ದಂಡನ್ನೇ ರವಾನಿಸಿದೆ ಎಂಬುದು ಸುರ್ಜೇವಾಲ ಅವರ ಆರೋಪ. ಅವರ ಈ ಆರೋಪ ಸಿಡಿದ ಒಂದೆರಡು ದಿನಗಳಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಒಂದು ಗುಸುಗುಸು ಶುರುವಾಯಿತು. ಅದೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸೈನ್ಯಕ್ಕೆ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ಒದಗಿಸಲು ಮುಂದಾಗಿದ್ದ ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇದ್ದಕ್ಕಿದ್ದಂತೆ ಹಿಂದೆ ಸರಿದಿದ್ದಾರೆ ಎಂಬುದು.
ಅಂದ ಹಾಗೆ ತಮಿಳ್ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಬೆಂಬಲ ಪಡೆಯಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಯತ್ನಿಸಿದ್ದು ರಹಸ್ಯವೇನಲ್ಲ. ಈ ಸಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆ ಆಗೋದು ಗ್ಯಾರಂಟಿ. ಹೀಗಾಗಿ ನೀವು ನಮಗೆ ಶಕ್ತಿ ತುಂಬಿದರೆ ಅನುಕೂಲವಾಗುತ್ತದೆ ಅಂತ ಕುಮಾರಸ್ವಾಮಿ ಸಂದೇಶ ರವಾನಿಸಿದ್ದರೂ ಸ್ಟಾಲಿನ್ ನಿರಾಸಕ್ತಿ ತೋರಿದ್ದರು.
ಕಾರಣ? ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೂರನೇ ಶಕ್ತಿ ರಚನೆಯಾಗಬೇಕು. ಹಾಗಾಗಬೇಕು ಎಂದರೆ ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬರಬೇಕು ಎಂಬುದು ಸ್ಟಾಲಿನ್ ಲೆಕ್ಕಾಚಾರ. ಇದೇ ಕಾರಣಕ್ಕಾಗಿ ಕುಮಾರ ಸ್ವಾಮಿ ಅವರ ಪ್ರಪೋಸಲ್ಲಿಗೆ ನಿರಾಸಕ್ತಿ ತೋರಿದ ಸ್ಟಾಲಿನ್ ಅವರು, ಕಾಂಗ್ರೆಸ್ ನಾಯಕರ ಸತತ ಸಂಪರ್ಕದಲ್ಲಿದ್ದರು. ಆದರೆ ಹೀಗೆ ಸಂಪರ್ಕದಲ್ಲಿದ್ದವರು ಈಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರಂತೆ. ಏನೇ ಮಾಡಿದರೂ ಅಗತ್ಯದ ಶಸ್ತ್ರಾಸ್ತ್ರ ರವಾನಿಸಲು ನಮಗೆ ಕಷ್ಟವಾಗುತ್ತಿದೆ ಎಂದಿದ್ದಾರಂತೆ.
ಇದೇ ರೀತಿ ಕೆಪಿಸಿಸಿಯ ಉನ್ನತ ನಾಯಕರ ಸಂಪರ್ಕದಲ್ಲಿದ್ದ ದುಬೈನ ಇಬ್ಬರು ಪವರ್ ಫುಲ್ ಉದ್ಯಮಿಗಳನ್ನು ಕೇಂದ್ರ ಸರ್ಕಾರ ಟೈಟು ಮಾಡಿದೆ ಎಂಬ ಮತ್ತೊಂದು ಸುದ್ದಿಯೂ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ. ಇನ್ನು, ಕರ್ನಾಟಕದಲ್ಲಿ ಪಕ್ಷಕ್ಕೆ ಪವರ್ ನೀಡಬಲ್ಲವರ ಪಟ್ಟಿ ರೆಡಿ ಮಾಡಿಟ್ಟುಕೊಂಡಿದ್ದ ಕೇಂದ್ರದ ಬಿಜೆಪಿ ವರಿಷ್ಠರು, ಅವರ ಕೈಗೂ ಹಗ್ಗ ಕಟ್ಟಿದ್ದಾರಂತೆ.
ಅರ್ಥಾತ್, ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಎಷ್ಟು ಬಂಡವಾಳ ಹೂಡಬೇಕೋ? ಅಷ್ಟು ಬಂಡವಾಳ ಹೂಡಲು ಅದಕ್ಕೆ ಸಾಧ್ಯವೇ ಇಲ್ಲ.
ಹೀಗಾಗಿ ಸ್ವಯಂಬಲದ ಮೇಲೆ ಗೆಲ್ಲುವುದಿರಲಿ, ಎಪ್ಪತ್ತಕ್ಕಿಂತ ಹೆಚ್ಚು ಸೀಟು ಗೆಲ್ಲಲು ಅದಕ್ಕೆ ಸಾಧ್ಯವಿಲ್ಲ ಎಂಬುದು ಬಿಜೆಪಿಯ
ಟಾಪ್ ಲೆವೆಲ್ ನಾಯಕರೊಬ್ಬರ ಮಾತು. ಅಂದ ಹಾಗೆ ಅವರ ಪ್ರಕಾರ, ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಕಂತಿನ ಪಟ್ಟಿಯಲ್ಲಿರುವ ಕ್ಯಾಂಡಿಡೇಟುಗಳ ಪೈಕಿ ನಲವತ್ತು ಮಂದಿ ಗೆದ್ದರೆ ಹೆಚ್ಚು. ಎರಡನೇ ಕಂತಿನ ಪಟ್ಟಿಯಲ್ಲಿ ಹದಿನೈದು ಮಂದಿ ದಡ ಸೇರುವುದು ಕಷ್ಟ.
ಇದಕ್ಕೆ ಕ್ಯಾಂಡಿಡೇಟುಗಳು ಎಷ್ಟರ ಮಟ್ಟಿಗೆ ಕಾರಣವೋ? ಸಮರ್ಪಕ ಪ್ರಮಾಣದ ಶಸ್ತ್ರಾಸ್ತ್ರ ಬಳಸಲು ಬಹುತೇಕರಿಗೆ
ಸಾಧ್ಯವಾಗದಂತೆ ಮಾಡಿರುವುದು ಇನ್ನೊಂದು ಮುಖ್ಯ ಕಾರಣ. ಅರ್ಥಾತ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್
ಕ್ಯಾಂಡಿಡೇಟುಗಳು ಪಾರ್ಟಿ ಫಂಡ್ ನಿರೀಕ್ಷಿಸುವುದು ಕಷ್ಟ. ಬದಲಿಗೆ ಸ್ವಂತದ ಬಂಡವಾಳವನ್ನೇ ನೆಚ್ಚಿಕೊಳ್ಳಬೇಕು. ಇವತ್ತಿನ ಸ್ಥಿತಿಯಲ್ಲಿ ಹಲ ಕ್ಯಾಂಡಿಡೇಟುಗಳು ಅದಕ್ಕೆ ತಯಾರಿದ್ದರೂ, ಪಾರ್ಟಿ ಫಂಡಿನ ಕೊರತೆ ಬಹುತೇಕರನ್ನು ಬಾಧಿಸುವುದು ನಿಶ್ಚಿತ. ಅಂದ ಹಾಗೆ ಚುನಾವಣೆಯ ಸೋಲು- ಗೆಲುವುಗಳನ್ನು ನಿರ್ಧರಿಸುವಲ್ಲಿ ಮತದಾರರ ಬೆಂಬಲ ಮುಖ್ಯ ಎಂಬುದು ನಿಜವಾದರೂ, ಹಣಕಾಸಿನ ಕೊರತೆ ಇಂತಹ ಬೆಂಬಲ ಚೆಲ್ಲಾಪಿಲ್ಲಿಯಾಗುವಂತೆ ಮಾಡಬಹುದು ಎಂಬುದೂ ನಿಜ.
ಇದಕ್ಕೆ 2018 ರ ವಿಧಾನಸಭಾ ಚುನಾವಣೆಯೇ ಉದಾಹರಣೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವಿರುದ್ಧ ಹೇಳಿಕೊಳ್ಳುವಂತಹ ಆಡಳಿತ ವಿರೋಧಿ ಅಲೆ ಇರಲಿಲ್ಲ. ಹೀಗಾಗಿ ತಮ್ಮ ಸರ್ಕಾರದ ಜನಪ್ರಿಯ ಯೋಜನೆ ಗಳು ತಮ್ಮನ್ನು ಮರಳಿ ಅಧಿಕಾರಕ್ಕೆ ತರುತ್ತವೆ ಅಂತ ಸಿದ್ದರಾಮಯ್ಯ ಭಾವಿಸಿದ್ದರು. ಆದರೆ ಚುನಾ ವಣೆಯ ಕಾವು ಏರು ತ್ತಿದ್ದಂತೆಯೇ ಸಿದ್ದರಾಮಯ್ಯ ಬ್ರಿಗೇಡಿನ ಪ್ರಮುಖ ಲೆಫ್ಟಿನೆಂಟುಗಳು ಅಸಹಾಯಕ ಧ್ವನಿಯಲ್ಲಿ ಕೂಗಾಡ ತೊಡಗಿದರು. ಯುದ್ಧಕ್ಕೆ ಅಂತ ನಾವು ಸ್ಟಾಕ್ ಮಾಡಿಕೊಂಡಿದ್ದ ಶಸ್ತ್ರಾಸ್ತ್ರಗಳ ಸುತ್ತ ವಿರೋಧಿಗಳು ಬೇಲಿ ಕಟ್ಟಿದ್ದಾರೆ ಅಂತ ಈ ಲೆಫ್ಟಿನೆಂಟು ಗಳು ಕೂಗು ಹಾಕತೊಡಗಿದಾಗ ಸಿದ್ದರಾಮಯ್ಯ ಕೂಡ ಅಸಹಾಯಕರಾದರು.
ಇವತ್ತು ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅಸಹಾಯಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರೇನೇ ಕಸರತ್ತು ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಿಜೆಪಿ ಪಾಳಯದ ಮಾತು. ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುಷಿಯಾಗಿರಲು ಇದು ಮುಖ್ಯ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಕರ್ನಾಟಕದ ರಾಜಕಾರಣದಲ್ಲಿ ಮೂವತ್ತೆಂಟು ವರ್ಷಗಳ ನಂತರ ಆಡಳಿತ ಪಕ್ಷ ಮರಳಿ ಅಧಿಕಾರ ಹಿಡಿದಂತಾಗುತ್ತದೆ. ಅರ್ಥಾತ್, 1983 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷ 1985 ರಲ್ಲಿ ಮರಳಿ ಅಧಿಕಾರ ಹಿಡಿದಿತ್ತು. ಈಗ ಬಿಜೆಪಿ ಮರಳಿ ಅಽಕಾರ ಹಿಡಿದರೆ ಆ ಸಾಧನೆ ಪುನರಾವರ್ತನೆಯಾಗುತ್ತದೆ.
ಇದು ಸಾಧ್ಯವೇ? ಎಂಬ ಪ್ರಶ್ನೆ ಉಳಿದಿದ್ದರೂ ಬೊಮ್ಮಾಯಿ ಅವರ ಕಿವಿಗೆ ಮಾತ್ರ ಹರ್ಷದ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಂದ ನಂತರ ಇದೇ ಜೋಶ್ ಅವರಲ್ಲಿ ಉಳಿಯುತ್ತದೆಯಾ ಅಂತ ನೋಡಬೇಕು.
ಡಿಕೆಶಿ ಮಾತಿನ ಅರ್ಥವೇನು?
ಅಂದ ಹಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇದ್ದಕ್ಕಿದ್ದಂತೆ ಬಾಂಬ್ ಸಿಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧ ಎಂಬುದು ಈ ಬಾಂಬ್. ಹಾಗಂತ ಡಿಕೆಶಿ ಸಿಎಂ ಆಗುವ ಕನಸಿನಿಂದ ದೂರವಾಗುತ್ತಿದ್ದಾರೆ ಅಂತಲ್ಲ. ಯಾಕೆಂದರೆ ಅವರು ತುಂಬ ನಂಬುವ ನೊಣವಿನಕೆರೆ ಅಜ್ಜಯ್ಯ ಅವರು, ನಿಮಗೆ ಸಿಎಂ ಆಗುವ ಯೋಗ ಹತ್ತಿರ ಬಂದಿದೆ. ಹೀಗಾಗಿ ಈ ವಿಷಯದಲ್ಲಿ ಹೆಚ್ಚು ಮಾತನಾಡದೆ ಮೌನವಾಗಿರಿ ಎಂದಿದ್ದಾರೆ.
ಹೀಗಾಗಿ ಸಿಎಂ ಹುದ್ದೆಯ ಹಂಚಿಕೆ ಕುರಿತು ಸಿದ್ದರಾಮಯ್ಯ ಗ್ಯಾಂಗು ಅದೇನೇ ಪ್ರಸ್ತಾಪ ತಂದರೂ ಡಿಕೆಶಿ ಅದನ್ನು ತಳ್ಳಿ ಹಾಕುತ್ತಿದ್ದಾರೆ. ಈ ಮಧ್ಯೆ ಖರ್ಗೆಯವರ ಹೆಸರನ್ನು ಅವರು ಮಧ್ಯೆ ತರಲು ಒಂದು ಕಾರಣವಿದೆ. ನಾಳೆ ಸಿಎಂ ಹುದ್ದೆಗಾಗಿ ತಮ್ಮ ಮತ್ತು ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಹೆಚ್ಚಾದರೆ, ಇಬ್ಬರಿಗೂ ಬೇಡ, ಮೂರನೆಯವರಿಗಿಗೆ ಅವಕಾಶ ಕೊಡಲು ನಾನು ರೆಡಿ ಎಂಬ ಸಂದೇಶ ರವಾನಿಸುವುದು. ಇದೇ ರೀತಿ ಇಂತಹ ಮಾತುಗಳನ್ನಾಡುವ ಮೂಲಕ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ತಾವು ಪೈಪೋಟಿ ನಡೆಸಿದರೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ತಮ್ಮ ಜತೆ ನಿಲ್ಲಬಹುದು ಎಂಬ ಯೋಚನೆ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ವಿಫಲವಾದರೆ ಮುಂದಿನ ಸನ್ನಿವೇಶವನ್ನು ಎದುರಿಸಲು ಅನುಕೂಲವಾಗಲಿ ಎಂಬ ಯೋಚನೆ. ಹೀಗೆ ಹಲವು ಲೆಕ್ಕಾಚಾರಗಳೊಂದಿಗೆ ಅವರು ಪ್ರಯೋಗಿಸಿರುವ ಅಸ ರಾಜಕೀಯ ವಲಯಗಳನ್ನು ಅಚ್ಚರಿಗೆ ನೂಕಿದೆ.
ದತ್ತ ಮೇಷ್ಟ್ರಿಗೆ ಅಡ್ಡಗಾಲು ಹಾಕಿದವರು
ಅಂದ ಹಾಗೆ ಇತ್ತೀಚೆಗಷ್ಟೇ ಜೆಡಿಎಸ್ ಪಾಳಯದಿಂದ ಕಾಂಗ್ರೆಸ್ ಶಿಬಿರಕ್ಕೆ ಬಂದಿದ್ದ ಹಿರಿಯ ನಾಯಕ ವೈಎಸ್‌ವಿ ದತ್ತಾ ಅವರಿಗೆ ನಿರಾಸೆಯಾಗಿದೆ. ಕಾಂಗ್ರೆಸ್ಸಿಗೆ ಬಂದ ತಮಗೆ ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆ ಅಂತ ದತ್ತ ನಂಬಿದ್ದರು. ಆದರೆ ಅವರ ನಂಬಿಕೆ ಸುಳ್ಳಾಗಿದೆ. ಈಗ ದತ್ತ ಮೇಷ್ಟ್ರಿಗೆ ಟಿಕೆಟ್ ಸಿಗದೆ ಇರಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರಣ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆಯಾದರೂ ಇದರ ಹಿಂದೆ ರಾಜ್ಯ ಕಾಂಗ್ರೆಸ್ಸಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರ ಪಾತ್ರವೂ ಇದೆಯಂತೆ.
ಮೊನ್ನೆ ದೆಹಲಿಯಲ್ಲಿ ಪಕ್ಷದ ಎರಡನೇ ಕಂತಿನ ಟಿಕೆಟ್ ಕೊಡಲು ಸಭೆ ನಡೆದಾಗ ಕಡೂರಿನ ವಿಷಯವೂ ಬಂದಿದೆ. ಅಲ್ಲಿ ದತ್ತ ಮೇಷ್ಟ್ರ ವಿಷಯ ಪ್ರಸ್ತಾಪವಾದಾಗ, ಚುನಾವಣೆಯಲ್ಲಿ ಖರ್ಚು ಮಾಡಲು ಇವರ ಹತ್ತಿರ ಎಷ್ಟು ದುಡ್ಡಿದೆ? ಅಂತ ಸುರ್ಜೇವಾಲ ಕೇಳಿದರಂತೆ. ಆಗ ಸಭೆಯಲ್ಲಿದ್ದ ಕರ್ನಾಟಕದ ನಾಯಕರು, ಇದು ಮೆರಿಟ್ ಸೀಟು. ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಜಾಸ್ತಿ. ಹೀಗಾಗಿ ಇವರಿಗೆ ಪಾರ್ಟಿ ಫಂಡೇ ಮೂಲ ಎಂದರಂತೆ. ಅವರ ಮಾತು ಕೇಳಿದ ಸುರ್ಜೇವಾಲ ದಿಗಿಲು ಬಿದ್ದು, ದುಡ್ಡಿಲ್ಲದೆ
ಚುನಾವಣೆ ಮಾಡಲು ಸಾಧ್ಯವಾ? ನೋ, ನೋ ಮಿನಿಮಮ್ ಟ್ವೆಂಟಿ ಫೈವ್ ಇಲ್ಲದೆ ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ ಎಂದರಂತೆ.
ಆಗ ಆನಂದ್ ಅವರ ಹೆಸರು ಮುಂದೆ ಬಂದು ದತ್ತ ಮೇಷ್ಟ್ರಿಗೆ ಸೀಟು ತಪ್ಪಿದೆ. ಅಂದ ಹಾಗೆ ಕಾಂಗ್ರೆಸ್ಸಿಗೆ ಡಿಕೆಶಿ ಭಾರ ಅಂತ ದತ್ತ ಮೇಷ್ಟ್ರು ಹೇಳಿದ್ದೆನ್ನಲಾದ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಡಿಕೆಶಿ ದತ್ತ ಮೇಷ್ಟ್ರಿಗೆ ಟಿಕೆಟ್ ತಪ್ಪಿಸಿದರು ಎಂಬ ಸುದ್ದಿ ಈಗ ಸುನಾಮಿಯಂತೆ ಮೇಲೆದ್ದಿದೆ. ಆದರೆ ತೆರೆಯ ಹಿಂದೆ ನಡೆದ ಸತ್ಯ ಇದು
ಎಂಬುದು ಕಾಂಗ್ರೆಸ್ ನಾಯಕರೊಬ್ಬರ ಮಾತು.