ತಿಳಿರುತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಅಲ್ಪಾಯುಷಿಯೋ ಅಮರತ್ವವುಳ್ಳದ್ದೋ ಎಂಬುದನ್ನು ವಿಶ್ಲೇಷಿಸುವ ಮೊದಲು ಈ ಪದಚಮತ್ಕಾರವನ್ನೊಮ್ಮೆ ಗಮನಿಸಿ: ಕಳೆದ ಒಂದು ಸಹಸ್ರಮಾನಕ್ಕಿಂತಲೂ ಹೆಚ್ಚು ವರ್ಷಗಳಿಂದ ಪ್ರತಿ ಹೊಸ ವರ್ಷದ ಇಸವಿಯನ್ನು ಉಚ್ಚರಿಸುವಾಗೆಲ್ಲ ‘ಸಾವಿರದ’ ಎಂಬ ಪದವನ್ನು (ಒಂದು ಸಾವಿರದ…, ಎರಡು ಸಾವಿರದ… ಇತ್ಯಾದಿ) ಉಪಯೋಗಿಸುತ್ತಲೇ ಬಂದಿದ್ದೇವೆ. ವಿಪರ್ಯಾಸವೆಂದರೆ ಒಂದೊಂದು ಇಸವಿಯೂ ನಮ್ಮ ನಿರೀಕ್ಷೆಯನ್ನು ಮೀರಿ ‘ಸಾವಿರುವ’ ವರ್ಷವಾಗಿಯೇ ಪರಿಣಮಿಸಿದೆ, ನಮ್ಮನ್ನು ದಂಗುಬಡಿಸಿದೆ, ದಿಗ್ಭ್ರಮೆಗೊಳಿಸಿದೆ!
ಮೊನ್ನೆಯಷ್ಟೇ ಮುಗಿದ ಎರಡು ‘ಸಾವಿರದ’ ಇಪ್ಪತ್ತನಾಲ್ಕು ಏನು ಕಡಿಮೆಯಿತ್ತೇ? ವರ್ಷದುದ್ದಕ್ಕೂ ಸಂಭವಿಸಿದ ಸಾವು-ನೋವುಗಳು ಸಾಲದೇನೋ ಎಂಬಂತೆ ಕೊನೆಯ ದಿನಗಳಲ್ಲಂತೂ ನಮ್ಮ ಆಪ್ತವಲಯದ ಬಂಧುಮಿತ್ರರಲ್ಲಿ ಮತ್ತು ರಾಜ್ಯ-ದೇಶ-ವಿಶ್ವ ಸ್ತರದಲ್ಲಿ ಪರಿಚಿತರು, ಝಾಕಿರ್ ಹುಸೇನ್, ಶ್ಯಾಮ್ ಬೆನಗಲ್, ಮನಮೋಹನ್ ಸಿಂಗ್, ಜಿಮ್ಮಿ ಕಾರ್ಟರ್ ಮುಂತಾದ ಪ್ರಸಿದ್ಧರು- ಹೀಗೆ ಅನೇಕರು ಕೊನೆಯುಸಿರೆಳೆದರು.
ಡಿಸೆಂಬರ್ ತಿಂಗಳೇಕೆ ಇಷ್ಟೊಂದು ಕ್ರೂರಿ ಎಂದು ದಿಗಿಲುಪಡುವಂತಾಯಿತು. ಅಂದರೆ 2024 ಸಹ ‘ಸಾವಿರುವ’ ಇಪ್ಪತ್ತನಾಲ್ಕು ಎಂಬ ಮುದ್ರೆಯನ್ನೊತ್ತಿಕೊಂಡು ಕರಾಳ ಛಾಯೆಯೊಂದಿಗೇ ಇತಿಹಾಸಕ್ಕೆ ಸೇರಿತು. ಹಾಗಂತ, ಯಾರಿಗೂ ಯಾವತ್ತಿಗೂ ಸಾವಿರಲೇ ಬಾರದು ಎಂದು ಅಪೇಕ್ಷಿಸುವುದೂ ಸರಿಯಲ್ಲವೆನ್ನಿ. ಸಾವಿರದ ಮನೆಯ ಸಾಸಿವೆಕಾಳಿನ ಕತೆ ನಮಗೆಲ್ಲ ಗೊತ್ತೇ ಇದೆ. ‘ಜಾತಸ್ಯ ಮರಣಂ ಧ್ರುವಮ್’ ಎಂಬಂತೆ ಹುಟ್ಟಿದವರು ಸಾಯಲೇಬೇಕು. ಕೆಲವರು ಬೇಗ, ಕೆಲವರು ತಡವಾಗಿ, ಅಷ್ಟೇ. ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ.
ಇರಲಿ, ಎರಡು ‘ಸಾವಿರದ’ ಇಪ್ಪತ್ತೈದು ಶುರುವಾಗಿ ಈಗಿನ್ನೂ ಐದು ದಿನಗಳೂ ಕಳೆದಿಲ್ಲ ಸದ್ಯಕ್ಕೆ ಸಾವಿನ ಸುದ್ದಿ ಬೇಡ. ಆದರೂ
ಏನ್ಮಾಡೋದು ಸಾವು ಸಂಭವಿಸಿದೆ, ಸಂಭವಿಸುತ್ತಿದೆ, ಸಂಭವಿಸುವುದಿದೆ. ಯಾರ ಸಾವು ಅಂತೀರಾ? ನಮ್ಮ ನಿಮ್ಮ ನ್ಯೂ ಇಯರ್
ರಿಸೊಲ್ಯುಷನ್ಗಳದ್ದು! “ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುತ್ತೇನೆ”ಯಿಂದ ಹಿಡಿದು “ರಾತ್ರಿ ಮಲಗುವ ಮುನ್ನ ಒಳ್ಳೆಯ ದೊಂದು ಪುಸ್ತಕದ ಕೆಲವು ಪುಟಗಳನ್ನಾದರೂ ಓದಿ ಮಲಗುತ್ತೇನೆ”ವರೆಗೆ; “ದಿನಾ 108 ಸೂರ್ಯನಮಸ್ಕಾರ ಮಾಡುತ್ತೇನೆ, ಹಿತಮಿತವಾಗಿ ತಿಂದು ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೇನೆ”ಯಿಂದ ಹಿಡಿದು “ವಕ್ಫ್ ಲೈಫ್ ಫ್ಯಾಮಿಲಿ ಲೈಫ್ ಸಮತೋಲನ ಸಾಧಿಸುತ್ತೇನೆ”ವರೆಗೆ, “ಮೂರುಹೊತ್ತೂ ಸೋಷಿಯಲ್ ಮೀಡಿಯಾದಲ್ಲಿ ಓತ್ಲಾ ಹೊಡೆಯುವುದನ್ನು ನಿಲ್ಲಿಸು ತ್ತೇನೆ”ಯಿಂದ ಹಿಡಿದು “ಜನವರಿ 1ರ ವಿಶ್ವವಾಣಿಯ ಮುಖಪುಟದಲ್ಲಿ ಬಂದ 25 ಯಶಸ್ಸೂತ್ರಗಳನ್ನು ಪಾಲಿಸುತ್ತ ನಡೆ-ನುಡಿಯಲ್ಲಿ ಸವ್ಯಸಾಚಿಯಾಗುತ್ತೇನೆ”ವರೆಗೆ- ತೀವ್ರತೆಯ ವಿವಿಧ ಪ್ರಮಾಣದಲ್ಲಿ ಕೈಗೊಂಡ, ಅನುಷ್ಠಾನಕ್ಕೆ ತಂದ ನಿರ್ಧಾರಗಳೆಲ್ಲ ಒಂದೊಂದಾಗಿ ಗೊಟಕ್ ಎನ್ನುತ್ತವೆ.
ಬಹುಶಃ ಅವುಗಳದೂ ನೀರಿನ ಮೇಲಿನ ಗುಳ್ಳೆಯ ತೆರದಿ ಮೂರು ದಿನದ ಬಾಳು. ಜನವರಿ ಮೂರನೆಯ ತಾರೀಖಿಗೆ ಅವುಗಳ ಆಯುಷ್ಯ ಮುಗಿಯುತ್ತದೆ. ನನ್ನೊಬ್ಬ ಸ್ನೇಹಿತನಂತೂ ಉತ್ಪ್ರೇಕ್ಷೆಯಿಂದ ಹೇಳುವುದೇನೆಂದರೆ ನ್ಯೂ ಇಯರ್ ರಿಸೊಲ್ಯುಷನ್ಸ್ ಬರೀ ಅಲ್ಪಾಯುಷಿಗಳಲ್ಲ, ಅವು ಹುಟ್ಟುವಾಗಲೇ ಸತ್ತಿರುತ್ತವೆ. ಇಂಗ್ಲಿಷ್ನಲ್ಲಿ stillbirth ಎನ್ನುವಂತೆ. ಹೀಗೇಕಾಗುತ್ತದೆ? ಹೊಸವರ್ಷಕ್ಕೆಂದು ಮಾಡಿದ ನಿರ್ಧಾರಗಳೇಕೆ ಮುರಿದು ಬೀಳುತ್ತವೆ? ಈ ಬಗ್ಗೆ ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಏನನ್ನುತ್ತಾರೆ? ಇಲ್ಲಿವೆ, ಅಧ್ಯಯನಗಳನ್ನಾಧರಿಸಿದ ಒಂದಿಷ್ಟು ಅಂಶಗಳು.
ಒಂದು ನಂಬಿಕೆಯಿದೆ ಏನೆಂದರೆ, ಬದಲಾವಣೆಗೆ ವಿರೋಧ (resistance to change) ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸ್ವಲ್ಪವಾದರೂ ಇದ್ದೇಇರುತ್ತದೆ. ಈಗಿದ್ದಂತೆಯೇ ಇರೋಣ, ಸುಮ್ಮನೆ ಬದಲಾಗುವುದೇಕೆ ಎಂಬ ಉದಾಸೀನತೆ. ಅಥವಾ ಒಂದು ನಮೂನೆಯ ತಾತ್ಸಾರ. ಅದೇವೇಳೆಗೆ, ಎಲ್ಲರಲ್ಲೂ ಅಲ್ಲದಿದ್ದರೂ ಹೆಚ್ಚಿನವರಲ್ಲಿ ಮಹತ್ತ್ವಾಕಾಂಕ್ಷೆಗಳೂ ಮನೆಮಾಡಿರುತ್ತವೆ ಎನ್ನುವುದೂ ಅಷ್ಟೇ ಸತ್ಯ. ಮಹತ್ತರವೇನನ್ನಾದರೂ ಸಾಧಿಸಬೇಕು, ಸಂಶೋಧಿಸಬೇಕು, ತಾನು ಬದಲಾಗುವುದಷ್ಟೇ ಅಲ್ಲ ಪ್ರಪಂಚಕ್ಕೂ ಒಳ್ಳೆಯ ರೀತಿಯ ಬದಲಾವಣೆಯನ್ನು ತರಬೇಕು ಎಂಬ ಕನಸುಳ್ಳವರು ಇರುತ್ತಾರೆ.
ಅವರು ಸರ್ ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಮ್, ಸುಧಾ ಮೂರ್ತಿಯಂಥವರಷ್ಟೇ ಆಗಿರಬೇಕಂತೇನಿಲ್ಲ; ನಮ್ಮಂಥ ಸಾಮಾನ್ಯರ ನಡುವೆಯೂ ಆ ರೀತಿ ಕನಸು ಹೊತ್ತವರು ಎಷ್ಟೋ ಜನರಿರುತ್ತೇವೆ. ಅಂಥವರ ಅಂತರಾಳದಲ್ಲಿ ಅದಮ್ಯ ಉತ್ಸಾಹವಿರುತ್ತದೆ. ಇಲ್ಲದಿದ್ದರೂ ಸೃಷ್ಟಿಸಿಕೊಳ್ಳುವ ಛಲವಿರುತ್ತದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿ ಬದುಕನ್ನು ಬದಲಾಯಿಸಿಕೊಳ್ಳುವ, ದುರಭ್ಯಾಸಗಳನ್ನು ಕಿತ್ತೆಸೆಯುವ, ಉಪಯೋಗಕ್ಕೆ ಬಾರದ ಆಚಾರ-ವಿಚಾರಗಳಿಂದ ದೂರವುಳಿಯುವ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಧೂಮಪಾನ ಮಾಡುವುದಿಲ್ಲ, ಮದ್ಯ ಸೇವಿಸುವುದಿಲ್ಲ, ಮೂರು ಬಿಳಿವಿಷ (ಸಕ್ಕರೆ, ಮೈದಾ, ಉಪ್ಪು)ಗಳನ್ನು ಮುಟ್ಟುವುದಿಲ್ಲ ಅಂತಲೋ, ಸಜ್ಜನ ರೊಂದಿಗಷ್ಟೇ ಸಖ್ಯ ಬೆಳೆಸುತ್ತೇನೆ ಅಂತಲೋ, ಹೊಸದೊಂದು ತಂತ್ರಜ್ಞಾನವನ್ನು ಕಲಿತುಕೊಳ್ಳುತ್ತೇನೆ ಅಂತಲೋ ಬಹಳ ಸ್ಟ್ರಾಂಗ್ ವಿಲ್ಪವರ್ ಪ್ರಯೋಗಿಸಿ ಕೈಗೊಳ್ಳುವ ನಿರ್ಧಾರಗಳು ಅವು. ಫಲರೂಪವಾಗಿ ಅಲ್ಪಸ್ವಲ್ಪ ಆರಂಭಿಕ ಯಶಸ್ಸನ್ನೂ ಕಂಡುಕೊಳ್ಳುತ್ತೇವೆ. ಅದು ಮತ್ತಷ್ಟು ಸಾಧನೆಗೆ ಸೋಪಾನವಾಗಬಹುದು ಅಂತಲೂ ಅಂದುಕೊಳ್ಳುತ್ತೇವೆ. ಆದರೆ, ಕೆಲವರಿಗಷ್ಟೇ ಅದು ಸಿದ್ಧಿಸುತ್ತದೆ, ಇನ್ನುಳಿದವರಿಗೆ ‘ಮೊದಲೆಲ್ಲಿದ್ದೆವೋ ಅಲ್ಲಿಗೇ ಹಿಂದಿರುಗಿದೆವು’ ಅಂತಾಗುವುದೇ ಹೆಚ್ಚು. ಅಷ್ಟೇಅಲ್ಲ, ಬದಲಾಗಬೇಕೆಂಬ ಉತ್ಸಾಹ, ಅಲ್ಪ ಯಶಸ್ಸು, ನಿರಾಸಕ್ತಿ, ಮರುಪ್ರಯತ್ನ… ಇವು ಒಂಥರ ಆವರ್ತನಗೊಳ್ಳುವ ಸಂದರ್ಭಗಳೂ ಇರುತ್ತವೆ. ಉದಾಹರಣೆಗೆ ಪ್ರತಿ 3-4 ವರ್ಷಗಳಿಗೊಮ್ಮೆ ಉದ್ಯೋಗ ಬದಲಾವಣೆ (ಈಗೀಗ ಕಾರು ಬದಲಾವಣೆ, ಮನೆ ಬದಲಾವಣೆ, ತೀರಾ ವಿಪರೀತ ಕೇಸ್ಗಳಲ್ಲಿ ಸಂಗಾತಿಯ ಬದಲಾವಣೆ ಎಂದು ಬೇಕಾದರೂ ಅನ್ನಿ) ಮಾಡುವವರು ನಮ್ಮಲ್ಲಿ ಬೇಕಷ್ಟಿದ್ದಾರೆ.
ಲಂಡನ್ನಲ್ಲಿ ಥೇಮ್ಸ್ ನದಿಗೆ ಅಡ್ಡವಾಗಿ ‘ಮಿಲೇನಿಯಮ್ ಬ್ರಿಡ್ಜ್’ ಎಂಬ ಒಂದು ಕಾಲ್ಸೇತುವೆಯನ್ನು ಕಟ್ಟಲಾಯಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಸೇತುವೆ. ಇಸವಿ 2000ದಲ್ಲಿ ಅದು ಸಾರ್ವಜನಿಕ ಸಂಚಾರಕ್ಕೆ ತೆರೆಯಲ್ಪಟ್ಟಿತು. ತಾಂತ್ರಿಕ ಕೌಶಲದ ಪರಮಾವಧಿ ಎನಿಸಿಕೊಂಡಿದ್ದ ಆ ಸೇತುವೆ ಜನಸಂಚಾರಕ್ಕೆ ಮೈಯೊಡ್ಡಿಕೊಳ್ಳುವವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಹೆಚ್ಚುಹೆಚ್ಚು ಜನರು ಅದನ್ನು ಉಪಯೋಗಿಸತೊಡಗಿದಂತೆ ಸೇತುವೆ ಓಲಾಡತೊಡಗಿತು.
ಅದರ ಮೇಲೆ ನಡೆದುಕೊಂಡು ಹೋಗುವುದು ಅಪಾಯವೆಂದಾಯಿತು! ಕೊನೆಗೂ ಅದನ್ನು ಮುಚ್ಚಿಬಿಡಬೇಕಾಯಿತು. ಕಟ್ಟುವಾಗ
ಸುದೃಢವಾಗಿಯೇ ಇದ್ದ ಸೇತುವೆಗೆ ಜನರು ನಡೆದಾಡತೊಡಗಿದಾಗ ಏನಾಯ್ತು? ಆ ಸೇತುವೆಯನ್ನು ಮತ್ತೆ ಉಪಯೋಗಿಸು ವಂತಾಗಲು ಪರಿಹಾರೋಪಾಯವೇನು? ಸೇತುವೆಯನ್ನು ಹಾಗೆಯೇ ಉಳಿಸಿ ಅದರ ಮೇಲೆ ಜನಸಂಚಾರವನ್ನು ನಿಯಂತ್ರಿಸುವುದು (ಅಂದರೆ ಒಮ್ಮೆಗೆ ಇಂತಿಷ್ಟು ಜನರು ಮಾತ್ರ ಸೇತುವೆಯ ಮೇಲಿರಬಹುದು, ಒಂದು ದಿಕ್ಕಿನಲ್ಲಿ ಇಂತಿಷ್ಟು ಜನರು ಮಾತ್ರ ಸಂಚರಿಸಬಹುದು ಇತ್ಯಾದಿ) ಒಂದು ಉಪಾಯ. ಅಥವಾ, ಸೇತುವೆಯ ಮೂಲಭೂತ ರಚನೆಯನ್ನೇ ಬದಲಾಯಿಸುವುದು ಇನ್ನೊಂದು ಉಪಾಯ. ಸಹಜವಾಗಿಯೇ ಎರಡನೆಯದು ಹೆಚ್ಚು ಪ್ರಾಕ್ಟಿಕಲ್ ಪರಿಹಾರ. ಅದನ್ನೇ ಮಾಡಿದರು. ಸೇತುವೆ ಮತ್ತೊಮ್ಮೆ ಸಾರ್ವಜನಿಕ ಉಪಯೋಗಕ್ಕೆ ತೆರೆದುಕೊಂಡಿತು. ಲಂಡನ್ ಬ್ರಿಡ್ಜ್ನ ಕಥೆ ಹೇಳಿದ್ದೇಕೆಂದರೆ, ಎಷ್ಟೋ ಸಲ ನಾವು ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ನಮ್ಮ ವ್ಯಕ್ತಿತ್ವದ ಸಂರಚನೆಯನ್ನು ಬದಲಾಯಿಸುವ (structural change) ಗೋಜಿಗೆ ಹೋಗುವುದಿಲ್ಲ,
ವರ್ತನೆಯನ್ನಷ್ಟೇ ಬದಲಾಯಿಸುವ ಪ್ರಯತ್ನ ಮಾಡುತ್ತೇವೆ.
ಅದು ನಮ್ಮ ವರ್ತನೆಯಾದರೂ ಸೈ, ಇತರರ ವರ್ತನೆಯಾದರೂ ಸೈ. ಎಷ್ಟೋ ಸಂದರ್ಭಗಳಲ್ಲಿ ನಮಗೆ ನಮ್ಮ ವ್ಯಕ್ತಿತ್ವದ್ದೊಂದು
ಸಂರಚನೆ (structure) ಅಂತ ಇರುತ್ತದೆ ಮತ್ತು ಅದರ ಮೇಲೆಯೇ ನಮ್ಮ ವರ್ತನೆ ಅವಲಂಬಿತವಾಗಿರುತ್ತದೆ ಎನ್ನುವ ಅಂಶವೇ ಗೊತ್ತಿರುವುದಿಲ್ಲ. ವ್ಯಕ್ತಿತ್ವದ ಸಂರಚನೆಯನ್ನು ಸರಿಯಾಗಿ ಅರ್ಥಮಾಡಿಕೊಂಡರಷ್ಟೇ ಅದನ್ನು ಬದಲಾಯಿಸಬಹುದು. ಕೆಟ್ಟ ವರ್ತನೆ ಅಂತ ಏನಿದೆಯೋ ಅದು ಕೆಟ್ಟ ಸಂರಚನೆಯಿಂದಲೇ ಉಂಟಾಗುವುದು. ಆದ್ದರಿಂದ ಕೆಟ್ಟ ವರ್ತನೆಯನ್ನು ಬದಲಾಯಿಸಬೇಕಾದರೆ ಕೆಟ್ಟ ಸಂರಚನೆಗಳನ್ನು ಬದಲಾಯಿಸಬೇಕು. ಒಳ್ಳೆಯದಿರಲಿ ಕೆಟ್ಟದಿರಲಿ ವರ್ತನೆಯನ್ನಷ್ಟೇ ಬದಲಾಯಿಸಲು ಹೊರಟರೆ ಹೊಸವರ್ಷದ ರಿಸೊಲ್ಯುಷನ್ಗಳದೇ ಗತಿಯಾಗುವುದು.
ಒಮ್ಮೆ ಆರಂಭಿಕ ಯಶಸ್ಸು, ಆಮೇಲೆ ಅದೇ ಹಳೆಯ ಚಾಳಿಯ ಮರುಕಳಿಕೆ. ಸರಿ, ಆದರೆ ವ್ಯಕ್ತಿತ್ವದ ಸಂರಚನೆ ಎಂದರೇನು? ಅದನ್ನು
ಬದಲಾಯಿಸುವುದಾದರೂ ಸುಲಭಸಾಧ್ಯ ಕಾರ್ಯವೇ? ಭೌತಶಾಸ್ತ್ರದ ಕೆಲವು ತತ್ತ್ವಗಳನ್ನು ಅನ್ವಯಿಸಿ ಇದನ್ನು ಅರ್ಥ
ಮಾಡಿಕೊಳ್ಳಬಹುದು. ಒಂದನೆಯದಾಗಿ, ಶಕ್ತಿಯ ಪ್ರವಾಹವು ಯಾವಾಗಲೂ ಅತ್ಯಂತ ಕಡಿಮೆ ನಿರೋಧದ ಮಾರ್ಗವನ್ನೇ ಆಯ್ದುಕೊಳ್ಳುತ್ತದೆ. ಇಂಗ್ಲಿಷ್ನಲ್ಲಿ ಇದನ್ನೇ Least resistance path ಎನ್ನುವುದು. ಎರಡನೆಯದಾಗಿ ಒತ್ತಡ (ಟೆನ್ಷನ್) ಇರುವ ಸನ್ನಿವೇಶ ಶೀಘ್ರವಾಗಿ ಅದರ ನಿವಾರಣೆ ಯನ್ನು ಕಂಡುಕೊಳ್ಳುತ್ತದೆ. ಏನೋ ಒಂದು ವಸ್ತು ಅಥವ ಸೌಕರ್ಯ ನಮ್ಮಲ್ಲಿಲ್ಲ, ಆದರೆ ನಮಗದು ಬೇಕು ಅಂತಿಟ್ಟುಕೊಳ್ಳಿ.
ಭೌತಶಾಸ್ತ್ರದ ದೃಷ್ಟಿಯಿಂದ ನೋಡುವುದಾದರೆ, ಬೇಕು ಎಂಬ ಆ ಬಯಕೆಯೇ ಒಂದು ‘ಟೆನ್ಷನ್’. ಅದೇರೀತಿ ಏನೋ ಒಂದು
ವಸ್ತು ಅಥವಾ ದುರಭ್ಯಾಸ ನಮ್ಮಲ್ಲಿದೆ, ಅದರಿಂದ ಮುಕ್ತಿ ಪಡೆಯಬೇಕಾಗಿದೆ, ಆಗಲೂ ಅಲ್ಲೊಂದು ‘ಟೆನ್ಷನ್’ ನಿರ್ಮಾಣವಾಗಿರುತ್ತದೆ. ಇಂಥ ಅದೆಷ್ಟೋ ಟೆನ್ಷನ್ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಬಿಟ್ಟಿರುತ್ತವೆ. ಅಷ್ಟೇಅಲ್ಲ ಬಹಳ ಸಂಕೀರ್ಣವಾಗಿಯೂ ಇರುತ್ತವೆ. ಉದಾಹರಣೆಗೆ, ಹಸಿವು (ಆಹಾರ ಬೇಕು) ಎನ್ನುವುದು ಒಂದು ಟೆನ್ಷನ್. ಅದರ ನಿವಾರಣೆಯಾಗಬೇಕಾದರೆ ಆಹಾರ ತಿನ್ನಲೇಬೇಕು. ಆದರೆ, ಸ್ಥೂಲಕಾಯ ಎನ್ನುವುದೂ ಒಂದು ಟೆನ್ಷನ್. ಅದರ ನಿವಾರಣೆಯಾಗಬೇಕಾದರೆ ಆಹಾರ ತಿನ್ನಬಾರದು.
ಒಂದಕ್ಕೊಂದು ವಿರುದ್ಧ ಟೆನ್ಷನ್ಗಳು! ಅವುಗಳ ನಿವಾರಣೆ ಕಷ್ಟಸಾಧ್ಯವಾಗುತ್ತ ಹೋಗುತ್ತದೆ, ಹತಾಶೆಯಾಗುತ್ತದೆ, ಆಗ ಅದೇ ಒಂದು ಹೊಸ ಟೆನ್ಷನ್!
ಸಂಕೀರ್ಣ ಟೆನ್ಷನ್ ಸಿಸ್ಟಮ್ನ ಇನ್ನೊಂದು ಉದಾಹರಣೆಯನ್ನು ನೋಡೋಣ. ಪ್ರಾಣಕ್ಕಿಂತಲೂ ಹೆಚ್ಚಾಗಿ ಪರಸ್ಪರ ಪ್ರೀತಿಸುವ ಒಂದು ಗಂಡು-ಹೆಣ್ಣು ಜೋಡಿ. ಅವರಿಬ್ಬರಲ್ಲಿ ಎಲ್ಲ ಚೆನ್ನಾಗಿಯೇ ಇದೆ, ಆದರೆ ಹುಡುಗನ ಗುಣದಲ್ಲಿ ಏನೋ ಒಂದು ಸಣ್ಣ ಅಂಶ ಹುಡುಗಿಗೆ ಇಷ್ಟವಿಲ್ಲ. ಅದರಿಂದ ಅವನು ಮುಕ್ತನಾಗಬೇಕು ಎನ್ನುವುದು ಅವಳ ಬಯಕೆ. ಹಾಗಾಗಬೇಕಿದ್ದರೆ ಅದನ್ನವಳು ಆತನಲ್ಲಿ ಹೇಳಬೇಕು. ಅವನೆಲ್ಲಿ ನೊಂದುಕೊಳ್ಳುತ್ತಾನೋ ಎಂದು ಆಕೆ ಅದನ್ನು ಪ್ರಸ್ತಾವಿಸುವುದೇ ಇಲ್ಲ. ಆದರೂ ಮನದಲ್ಲಿ ಕೊರಗು, ಛೇ ಅದೊಂದು ಕೆಟ್ಟ
ಅಭ್ಯಾಸವಿಲ್ಲದಿರುತ್ತಿದ್ದರೆ ಎಷ್ಟು ಒಳ್ಳೆಯ ಸಂಗಾತಿ ಸಿಕ್ಕಿದ್ದಾನೆ ತನಗೆ! ಒಂದುವೇಳೆ ಹೇಳಿಬಿಡುವ ಧೈರ್ಯ ಮಾಡಿದರೆ ಆಗ
ಅವನು ನೊಂದುಕೊಂಡು ತನ್ನನ್ನು ತೊರೆದರೆ? ಅಂದರೆ, ಕೆಟ್ಟ ಗುಣದ ಬಗ್ಗೆ ಅವಳು ಪ್ರಸ್ತಾವಿಸದೆ ಇದ್ದರೆ ಅವರ ಪ್ರೇಮ ಖಂಡಿತವಾಗಿ ಹೆಚ್ಚುತ್ತದೆ, ಆದರೆ ಪ್ರೀತಿ-ಸಲಿಗೆಯಿಂದಾಗಿ ಅವಳು ಅದನ್ನು ಪ್ರಸ್ತಾವಿಸುವ ಸಂಭವನೀಯತೆಯೂ ಹೆಚ್ಚುತ್ತದೆ!
ಪ್ರಸ್ತಾವಿಸಿದ್ದೇ ಆದರೆ ಅವನು ನೊಂದುಕೊಂಡು ಅವಳನ್ನು ಬಿಟ್ಟುಬಿಡುವ ಸಾಧ್ಯತೆಯೂ ಹೆಚ್ಚುತ್ತದೆ. ಅವೆಲ್ಲ ಒಂದಕ್ಕೊಂದು ತಳುಕು ಹಾಕಿಕೊಂಡ ಒತ್ತಡಗಳು. ಈ ರೀತಿ ಸಂಕೀರ್ಣ ಒತ್ತಡಗಳ ಒಟ್ಟು ವ್ಯವಸ್ಥೆಯನ್ನೇ ವ್ಯಕ್ತಿತ್ವದ ಸಂರಚನೆ ಎನ್ನುವುದು. ಮನಃಶಾಸ್ತ್ರದಲ್ಲಿ ಇಂಥ ಸಂಕೀರ್ಣ ಒತ್ತಡಗಳ ಬಗ್ಗೆ, ಅವುಗಳ ನಿವಾರಣೋಪಾಯಗಳ ಬಗ್ಗೆ ಇನ್ನಷ್ಟು ವಿಸ್ತೃತವಾಗಿ ವಿವರಿಸಿದ್ದಿರುತ್ತದೆ. ಒತ್ತಡಗಳನ್ನು ನಿವಾರಿಸಬೇಕೆಂಬ ಆಸೆಯಿರುವುದು ಸಹಜವೇ, ಅವುಗಳ ನಿವಾರಣೆ ಕಷ್ಟಸಾಧ್ಯ ಎಂಬ ಅರಿವು ಬೇಕೆನ್ನುವುದೂ ಅಷ್ಟೇ ಸಹಜ. ಪ್ರೇರಣೆ ಇದ್ದರೆ ಮಾತ್ರ ಒತ್ತಡವನ್ನು ನಿವಾರಿಸಬಹುದು.
ಒತ್ತಡ ಕಡಿಮೆಯಾದಂತೆಲ್ಲ ಪ್ರೇರಣೆ ಸಹ ಕಡಿಮೆಯಾಗಬಹುದು! ಉದ್ದೇಶಿತ ಗುರಿ ಸಮೀಪಿಸಿದಂತೆಲ್ಲ ಕಾರ್ಯಸಾಧನೆ ಕಷ್ಟಕರವಾಗುತ್ತ ಹೋಗುವುದು ಅದೇ ಕಾರಣಕ್ಕೆ. ಡಿಸೆಂಬರ್ ೩೧ರ ಮಧ್ಯರಾತ್ರಿ ಹನ್ನೆರಡು ಹೊಡೆದಾಗ ‘ಹ್ಯಾಪಿ ನ್ಯೂ ಇಯರ್!’ ಎಂದು ಚೀರಿದ ಆ ಕ್ಷಣದಿಂದ ಬದಲಾಗಿಬಿಡುತ್ತೇನೆ ಎಂದು ಕೈಗೊಂಡ ನಿರ್ಧಾರಗಳು ಹೊಸವರ್ಷದ ಮೊದಲ ವಾರದಲ್ಲೇ, ಮೂರು ದಿನಗಳಲ್ಲೇ ಮುರಿದು ಬೀಳುವುದೂ ಅದೇ ಕಾರಣಕ್ಕೆ! ಅಂದಹಾಗೆ ನೀವೇನಾದರೂ 2025ಕ್ಕೆಂದು ನಿರ್ಧಾರಗಳನ್ನು
ಕೈಗೊಂಡಿದ್ದೀರಾದರೆ ಹೀಗೆ ಅಪಶಕುನ ನುಡಿಯಲಾರೆ. ನಿಮ್ಮ ನಿರ್ಧಾರಗಳು ಅಲ್ಪಾಯುಷಿಗಳಾಗದೆ ಯಶಸ್ಸನ್ನು ಕಾಣಲೆಂದೇ
ನನ್ನ ಹಾರೈಕೆ.
ಮಾತು ನ್ಯೂ ಇಯರ್ ರಿಸೊಲ್ಯುಷನ್ಗಳದ್ದಾದ್ದರಿಂದ ಮೊನ್ನೆ ಒಂದು ಕಡೆ ಓದಿದ ಒಂದು ಪಟ್ಟಿಯನ್ನು ಇಲ್ಲಿ ಹಂಚಿಕೊಳ್ಳುತ್ತಿ
ದ್ದೇನೆ. ಇದು ರಿಸೊಲ್ಯುಷನ್ಗಳ ಪಟ್ಟಿಯಲ್ಲ. ವ್ಯಕ್ತಿತ್ವವಿಕಸನದ ಮ್ಯಾನೇಜ್ಮೆಂಟ್ ಗುರುಗಳ ಬೋಧನೆಯೂ ಅಲ್ಲ. ವಿಜ್ಞಾನಿ
ಗಳು ಸಂಶೋಧನೆ ಮತ್ತು ಸಮೀಕ್ಷೆಗಳನ್ನು ಆಧರಿಸಿ ಮಾಡಿರುವುದು. ಪ್ರಕೃತಿಯ ಒಡನಾಟದಿಂದ, ಹೊರಾಂಗಣ (ಔಟ್ ಡೋರ್) ದಲ್ಲಿ ದಿನಾ ಸ್ವಲ್ಪ ಹೊತ್ತು ಕಳೆಯುವುದರಿಂದ ನಮ್ಮ ಮಿದುಳಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ವೈಜ್ಞಾನಿಕ ರೀತ್ಯಾ ಪ್ರಯೋಜನಗಳೇನು ಎಂಬ ಪಟ್ಟಿ. ‘ಹದುಳ ಹೆಚ್ಚಿಸಲಿಕ್ಕೆ ಹೊರಾಂಗಣದಲ್ಲಿ ಹತ್ತು ಹೆಜ್ಜೆ’ ಅಂತ ಇದಕ್ಕೊಂದು ‘ಹ-ಕಾರ’ ‘ಹೆಡ್ಲೈನ್’ ಅಷ್ಟೇ ನನ್ನ ಕಡೆಯಿಂದ. ಹದುಳ ಅಂದರೆ ಕ್ಷೇಮ. ಇಷ್ಟವಾದರೆ ಇದನ್ನೊಂದು ದೀರ್ಘಾಯುಷಿ ರಿಸೊಲ್ಯುಷನ್ ಆಗಿ ನೀವೂ ಪರಿಗಣಿಸಬಹುದು.
1. ಹೊರಾಂಗಣದಲ್ಲಿ ಬರೀ 20 ನಿಮಿಷಗಳಷ್ಟಿದ್ದರೂ ಸಾಕು, ಒಂದು ಕಪ್ ಕಾಫಿ ಸೇವನೆಯು ಕೊಡಬಹುದಾದಷ್ಟು ಚೈತನ್ಯವು
ಮಿದುಳಿಗೆ ಸಿಗುತ್ತದೆ, ಕೆಫಿನ್ನ ಅಡ್ಡಪರಿಣಾಮಗಳಿಲ್ಲದೆ. 2. ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಒಳಾಂಗಣದಲ್ಲಿ
ಮಾಡುವುದಕ್ಕಿಂತ ಕಡಿಮೆ ಶ್ರಮದಾಯಕ. ಹುಲ್ಲು, ಮರಗಿಡಗಳ ಹಸುರು ಬಣ್ಣವು ಮಾನಸಿಕವಾಗಿಯೂ ಶಕ್ತಿವರ್ಧಕವಾಗುತ್ತದೆ.
3. ಚಿಕ್ಕಂದಿನಿಂದಲೇ ಹೊರಾಂಗಣ ಚಟುವಟಿಕೆಗಳ ಅಭ್ಯಾಸ ಬೆಳೆಸಿಕೊಂಡರೆ ದೃಷ್ಟಿದೋಷಗಳು ಬರುವ ಸಾಧ್ಯತೆ ಕಡಿಮೆ.
4. ಸೂರ್ಯಕಿರಣಗಳಿಗೆ ನಮ್ಮ ದೇಹದ ನೋವು ನಿವಾರಿಸುವ ಶಕ್ತಿಯಿರುತ್ತದೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೂ ಸ್ವಲ್ಪ
ಹೊತ್ತಾದರೂ ಬಿಸಿಲಿಗೆ ಮೈಯೊಡ್ಡುವ ಅವಕಾಶ ಸಿಕ್ಕಿದರೆ ಅವರ ದುಗುಡ-ದುಮ್ಮಾನ ಕಡಿಮೆಯಾಗುತ್ತದೆ.
5. ಮರಗಿಡಗಳು ಉತ್ಪಾದಿಸುವ ವಿಶೇಷ ರಾಸಾಯನಿಕಗಳು ಗಾಳಿಯಲ್ಲಿ ಸೇರಿ ನಮ್ಮ ಉಸಿರಿನ ಮೂಲಕ ದೇಹ ಪ್ರವೇಶಿಸಿದರೆ ಬಿಳಿರಕ್ತಕಣಗಳ ಸಂಖ್ಯೆ ವೃದ್ಧಿಯಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
6. ಗುಲಾಬಿ, ಸೇವಂತಿಗೆ, ಜಾಜಿಯಂಥ ಹೂವುಗಳದಿರಲಿ, ಕತ್ತರಿಸಿದ ಹುಲ್ಲಿನದಿರಲಿ, ಮರಗಳಿಂದ ಉದುರಿದ ಕಾಯಿಗಳದೇ
ಇರಲಿ- ವಿವಿಧ ಪರಿಮಳಗಳು ಉಚಿತ ಅರೋಮಾಥೆರಪಿಯಂತೆ ಕಾರ್ಯವೆಸಗಿ ಮನಸ್ಸನ್ನು ಶಾಂತ ಮತ್ತು ಒತ್ತಡರಹಿತವಾಗಿಸುತ್ತವೆ.
7. ಸೃಷ್ಟಿಯ ಮಡಿಲಲ್ಲಿ ಒಂದಿಷ್ಟು ಕಾಲ ಕಳೆಯುವುದು ನಮ್ಮಲ್ಲಿನ ಸೃಷ್ಟಿಶೀಲತೆ (ಕ್ರಿಯೇಟಿವಿಟಿ)ಯನ್ನು ಹೆಚ್ಚಿಸುತ್ತದೆ.
ನದೀತಟದಲ್ಲಿ, ಜುಳುಜುಳು ನೀರು ಹರಿಯುವಲ್ಲಿ ಕಾವ್ಯಕಲ್ಪನೆ ಹರಿಯುತ್ತದೆಂದು ಕವಿಗಳೂ ಇದನ್ನು ಅನುಮೋದಿಸಬಲ್ಲರು.
೮. ಚಳಿಗಾಲದಲ್ಲಿ ಹವಾಮಾನದ ಥಂಡಿಯಿಂದ, ಹಗಲಿನ ಅವಧಿ ಕಡಿಮೆಯಾಗುವುದರಿಂದ, ಉಂಟಾಗುವ ಸೀಸನಲ್ ಎಫೆಕ್ಟಿವ್
ಡಿಸಾರ್ಡರ್ನ ತೀವ್ರತೆ ಸಹ, ಹೊರಾಂಗಣದಲ್ಲಿ ಸ್ವಲ್ಪ ಹೊತ್ತನ್ನು ಕಳೆದರೆ ತಗ್ಗುತ್ತದೆ.
9. ನಮ್ಮ ಶರೀರಕ್ಕೆ ಅತ್ಯಾವಶ್ಯಕ ಪೋಷಕಾಂಶವಾದ ಡಿ-ಜೀವಸತ್ತ್ವವು ಸೂರ್ಯರಶ್ಮಿಯಲ್ಲೇ ಹೇರಳವಾಗಿ ಇರುವುದು. ಆಹಾರಪದಾರ್ಥಗಳಿಂದ ಅಥವಾ ಮಾತ್ರೆಗಳಿಂದ ಅದನ್ನು ಅರೆಬರೆಯಾಗಿ ಪಡೆಯುವುದಕ್ಕಿಂತ ಸೂರ್ಯಪ್ರಸಾದವೆಂಬಂತೆ ಭರಪೂರವಾಗಿ ಪಡೆಯಬಹುದು.
10. ಮನೆಯೊಳಗೆ, ಆಫೀಸಿನ ನಾಲ್ಕು ಗೋಡೆಗಳೊಳಗೆ ದೊರಕಿಸಿಕೊಳ್ಳಲಾಗದ ಏಕಾಗ್ರತೆಯನ್ನು, ಉದ್ಯಾನದಲ್ಲೋ
ಹುಲ್ಲುಗಾವಲಿನಲ್ಲೋ ಹತ್ತಿಪ್ಪತ್ತು ನಿಮಿಷ ನಡೆಯುವುದರಿಂದ ಪಡೆಯಬಹುದು. ಒಟ್ಟಿನಲ್ಲಿ ದೈನಂದಿನ ಜೀವನದ ಜಂಜಾಟಗಳನ್ನೆಲ್ಲ ಮರೆತು ಆತ್ಮ-ಪರಮಾತ್ಮ, ವ್ಯಕ್ತಿಗತ ಸಂಬಂಧಗಳು, ಸಹಬಾಳ್ವೆ-ಸಮಾಜಸಂಗ-ಸತ್ಸಂಗಗಳ ಒಳ್ಳೆಯ ವಿಚಾರಗಳನ್ನು
ಉದ್ದೀಪನಗೊಳಿಸಲಿಕ್ಕೆ, ತನ್ಮೂಲಕ ನಮ್ಮನ್ನು ಒಳ್ಳೆಯ ಮನುಷ್ಯರಾಗಿಸುವುದಕ್ಕೆ ಪ್ರಕೃತಿಯ ಮಡಿಲಿಗೆ ಪರ್ಯಾಯವಾದುದು ಬೇರೆ ಇಲ್ಲ. ಅದರ ಫಲಾನುಭವಿಗಳಾಗುತ್ತೇವೆ ಎಂಬ ಪಣ ತೊಡಬೇಕು, ಪ್ರತಿದಿನವೂ ಪ್ರವೃತ್ತರಾಗಬೇಕು ಅಷ್ಟೇ.
ಇದನ್ನೂ ಓದಿ: Srivathsa Joshi Column: ಏಳೇಳು ಜನ್ಮ ಅಂದರೆ ಹದಿನಾಲ್ಕು? 49? ಅಥವಾ ಬರೀ ಒಂದು ?