ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಅವರು ಕಳೆದ ಭಾನುವಾರವೂ ಅಂಕಣ ಬರಹಕ್ಕೆ ಪ್ರತಿಕ್ರಿಯೆ ಮಿಂಚಂಚೆ ಬರೆದಿದ್ದರು: “ಶ್ರೀವತ್ಸರೇ, ನನಗೆ ಅಲಿಬಾಬಾ ಕಥೆಯಲ್ಲಿ ಕೇಳಿದ ‘ಬಾಗಿಲು ತೆಗೆಯೇ ಸೇಸಮ್ಮ’ ನೆನಪಾಯಿತು! ಈಗ ಮೈಸೂರಿನಲ್ಲಿ ಚಳಿ ಎಷ್ಟು ಗೊತ್ತೇ? 24 ಡಿಗ್ರಿ ಸೆಂಟಿಗ್ರೇಡ್. ನಿಮ್ಮೂರಿನಂತಿಲ್ಲ, ಅದು ಬೇರೆ ಮಾತೆನ್ನಿ. ನಮಸ್ಕಾರ”. ಯಥಾಪ್ರಕಾರ ಚಿಕ್ಕ ಅಂಚೆ.
ಒಂದೆರಡು ವಾಕ್ಯಗಳು ಅಷ್ಟೇ. ತಪ್ಪುಗಳಿಲ್ಲದೆ ಚೊಕ್ಕವಾಗಿ ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳಲ್ಲೇ ಟೈಪ್ ಮಾಡಿ
ಕಳುಹಿಸಿದ್ದು. ಅಲಿಬಾಬಾ ಕಥೆಯ ಉಲ್ಲೇಖ, ಕಳೆದ ವಾರದ ಅಂಕಣದಲ್ಲಿ ಕೊನೆಯ ಪ್ಯಾರಗ್ರಾಫ್ ನಲ್ಲಿ ‘ಗಟ್ಟಯ್ಯನು, ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂದು ಗುನುಗುನಿಸುತ್ತ ಬಾಗಿಲು ತೆರೆಯಲು ಯತ್ನಿಸಿದನೇನೋ…’ ಎಂದು ಬರೆದಿದ್ದ ತಮಾಷೆಗೆ ಪೂರಕವಾಗಿ.

ಮಿಂಚಂಚೆಯ ಉಳಿದ ಭಾಗ ಮಳೆ-ಬೆಳೆ-ಹವಾಮಾನ ಉಭಯಕುಶಲೋಪರಿ ಸಾಂಪ್ರತದ ಒಂದೆರಡು ಮಾತು. ನನಗದು ಅಭ್ಯಾಸವೇ ಆಗಿಹೋಗಿದೆ. ನನ್ನ ಭಾನುವಾರ ಆರಂಭವಾಗುವುದೇ ಅವರ ಮಿಂಚಂಚೆ ಪ್ರತಿಕ್ರಿಯೆ ಓದಿ. ಕೆಲವೊಮ್ಮೆ ನಾನೂ ಒಂದೆರಡು ವಾಕ್ಯಗಳ ಉತ್ತರ ಬರೆಯುತ್ತೇನೆ. ಕೆಲವೊಮ್ಮೆ ಮರುವಾರದ ಅಂಕಣದಲ್ಲೇ ಅವರ ಹೆಸರನ್ನೂ ಉಲ್ಲೇಖಿಸಿ ಉತ್ತರಿಸುತ್ತೇನೆ.
ನಾಲ್ಕೈದು ವಾರಗಳ ಹಿಂದಿನ ‘ಬುರಿಡಾನ್‌ನ ಕತ್ತೆ ಅನಿರ್ಣೀತ; ಬುರ್ನಾಸ್ ಕತ್ತೆ ಅಭಿಜಾತ!’ ಅದರ ಹಿಂದಿನವಾರ
ವಿಜಯಭಾಸ್ಕರ್ ಸಂಗೀತದ ಚಿತ್ರಗೀತೆಗಳನ್ನು ಪೋಣಿಸಿದ್ದ ಲೇಖನಕ್ಕೆ ಅವರು ಬರೆದಿದ್ದ ‘ಚಿತ್ರಗೀತೆಗಳ ವಿಷಯ ದಲ್ಲಿ ನಾನು ಬುರ್ನಾಸು!’ ಎಂಬ ಪ್ರತಿಕ್ರಿಯೆಯಿಂದಲೇ ಮೂಡಿದುದಾಗಿತ್ತು. ಹಾಗೆ ಮೊನ್ನೆಯ ಮಿಂಚಂಚೆಯಲ್ಲಿ ಅವರು ಉಲ್ಲೇಖಿಸಿದ ಸೇಸಮ್ಮಳದೇ ಒಂದೆಳೆ ತೆಗೆದುಕೊಂಡು ಮುಂದೆಂದಾದರೂ ತೋರಣ ಕಟ್ಟುತ್ತಿದ್ದೆನೇನೊ. ಅದೇ ಅವರಿಂದ ಬಂದ ಕೊನೆಯ ಇ-ಮೇಲ್ ಎಂದು ನನಗೆ ಕನಸುಮನಸಲ್ಲೂ ಅಂದಾಜಿರಲಿಲ್ಲ. ಮಂಗಳವಾರ ಬೆಳಗ್ಗೆ ಮೈಸೂರಿನಿಂದಲೇ ಇನ್ನೊಬ್ಬ ಹಿತೈಷಿ ಓದುಗಮಿತ್ರ ರಾಘಣ್ಣ ಕಳಿಸಿದ್ದ ವಾಟ್ಸ್ಯಾಪ್ ಸಂದೇಶ ಓದಿ ಒಮ್ಮೆಲೇ ಅವಾಕ್ಕಾದೆ.
“ರಾಘವೇಂದ್ರ ಭಟ್ಟರು ಇನ್ನಿಲ್ಲ. ಇಂದು ಹೋಗಿಬಿಟ್ಟಿದ್ದಾರೆ. ಸರಳ ಸ್ನೇಹಜೀವಿ, ಪ್ರಸಿದ್ಧ ಪ್ರಕಾಶಕರಾಗಿದ್ದ ಡಿವಿಕೆ ಮೂರ್ತಿಯವರನ್ನು ನೋಡಲು ನಮ್ಮ ಬೀದಿಗೂ ಬರುತ್ತಿದ್ದರು, ಬಹಳ ಹಿಂದೆ ಪಿತೃಕಾರ್ಯ ನಿಮಿತ್ತ ನಮ್ಮ
ಮಠಕ್ಕೂ ಬಂದಿದ್ದರು” ಎಂದು ರಾಘಣ್ಣ ಬರೆದಿದ್ದರು. ಆಮೇಲೆ ಆವತ್ತೇ ಮೈಸೂರಿನ ಇಂಗ್ಲಿಷ್ ಸಂಜೆಪತ್ರಿಕೆಯಲ್ಲಿ ಪ್ರಕಟವಾದ ಶ್ರದ್ಧಾಂಜಲಿ ಸುದ್ದಿತುಣುಕನ್ನೂ ಕಳುಹಿಸಿದರು.
“ಪ್ರೊ.ರಾಘವೇಂದ್ರ ಭಟ್ಟ (87 ವರ್ಷ), ಸರಸ್ವತೀಪುರಂ 12ನೇ ಮೈನ್ ನ ನಿವಾಸಿ, ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೈಸೂರಿನ ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್‌ನಲ್ಲಿ ಕನ್ನಡ ಪ್ರಾಧ್ಯಾಪನ ಸೇವೆಯಿಂದ ನಿವೃತ್ತ, ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪಂಡಿತ, ಪ್ರತಿಸಂಕಲನ (ಕಾಪಿ ಎಡಿಟಿಂಗ್)ದಲ್ಲಿ ವಿಶೇಷ ಪರಿಣತ, ಪ್ರಗಾಢ ಓದುಗರೂ, ಸಂಗೀತರಸಿಕರೂ ಆಗಿದ್ದರು. ನಗರದಲ್ಲಿ ನಡೆವ ಸಂಗೀತ ಕಛೇರಿಗಳಲ್ಲಿ ತಪ್ಪದೇ ಹಾಜರಿರುತ್ತಿದ್ದರು. ಪ್ರೊ.ಜಿ.ಟಿ.ನಾರಾಯಣರಾಯರ ನಿಕಟವರ್ತಿ. ಮೈಸೂರಿನ ಪ್ರತಿಷ್ಠಿತ ಗಾನಭಾರತಿ ಸಂಗೀತಸಭೆಯ ಸ್ಥಾಪನೆಯಲ್ಲಿ ಕೊಡುಗೆ ಸಲ್ಲಿಸಿದವರು. ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಡಿ.5ರಂದು ಜೆಎಸ್‌ಎಸ್ ಆಸ್ಪತ್ರೆಗೆ ದಾನ ಮಾಡಲಾಗುವುದೆಂದು ಕುಟುಂಬಮೂಲಗಳು ತಿಳಿಸಿವೆ” ಎಂಬ ವಿವರಗಳು ಅದರಲ್ಲಿದ್ದವು.
ರಾಘವೇಂದ್ರ ಭಟ್ಟರು ನನಗೆ ಸುಮಾರು 20 ವರ್ಷಗಳಿಂದ ಪರಿಚಿತರು. ‘ದಟ್ಸ್‌ಕನ್ನಡ’ ಅಂತರಜಾಲ ಪತ್ರಿಕೆಯಲ್ಲಿ ನಾನು ‘ವಿಚಿತ್ರಾನ್ನ’ ಅಂಕಣ ಬರೆಯುತ್ತಿದ್ದಾಗ ಅವರು ಮೊದಲ ಬಾರಿಗೆ ಇ-ಮೇಲ್ ಪ್ರತಿಕ್ರಿಯೆ ಬರೆದಿದ್ದರು. ಆಗ ಅವರು ಅಮೆರಿಕದಲ್ಲಿ ಮಗಳ ಮನೆಗೆ ಬಂದಿದ್ದರು. ಆ ಕಾಲದಲ್ಲಿ ದಟ್ಸ್‌ಕನ್ನಡದಲ್ಲಿ ಬರೆಯುತ್ತಿದ್ದ ಹಿರಿಯ ಅಮೆರಿಕನ್ನಡಿಗ ಶಿಕಾರಿಪುರ ಹರಿಹರೇಶ್ವರ, ಡಾ.ಮೈಸೂರು ನಟರಾಜ ಮುಂತಾದವರ ಸ್ನೇಹಪರಿಚಯ ಇದೆ ಯೆಂದೂ, ಅಕ್ಷರಪ್ರೇಮಿ ಅಮೆರಿಕನ್ನಡಿಗರ ಬಗ್ಗೆ ತನಗೆ ಹೆಚ್ಚು ಪ್ರೀತಿಯೆಂದೂ ತಿಳಿಸಿದ್ದರು.
ಆಮೇಲೆ ಹರಿಹರೇಶ್ವರ ಅಮೆರಿಕದಿಂದ ಮೈಸೂರಿಗೆ ಹೋಗಿ ಸರಸ್ವತೀಪುರಂನಲ್ಲೇ ನೆಲೆಸಿದರು. ರಾಘವೇಂದ್ರ ಭಟ್ಟರಿಗೆ ಮತ್ತಷ್ಟು ಹತ್ತಿರದವರಾದರು. 2007ರಲ್ಲಿ ನಾನೊಮ್ಮೆ ಮೈಸೂರಿಗೆ ಭೇಟಿಯಿತ್ತಾಗ ಹರಿಯವರಲ್ಲಿಗೂ ಹೋಗಿದ್ದೆ. ನನ್ನನ್ನು ಭೇಟಿಯಾಗಲೆಂದೇ ರಾಘವೇಂದ್ರ ಭಟ್ಟರು ಅಲ್ಲಿಗೆ ಬಂದಿದ್ದರು. ಅವರೆಷ್ಟು ಸಹೃದಯಿ ಸ್ನೇಹಮಯಿ ಎಂದು ಅದಾಗಲೇ ನನಗೆ ಅವರ ಇ-ಮೇಲ್‌ಗಳಿಂದ ಅಂದಾಜಿತ್ತಾದರೂ ಆವತ್ತು ಪ್ರತ್ಯಕ್ಷ ಅನುಭವ.
ಮೈಸೂರಲ್ಲಿ ಹರಿಯವರ ಮನೆಯಿಂದ ನನ್ನ ಅಕ್ಕನ ಮನೆಗೆ ರಾಘವೇಂದ್ರ ಭಟ್ಟರೇ ಸ್ಕೂಟರ್ ರೈಡ್ ಕೊಟ್ಟರು.
ಅದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ನಾನವರನ್ನು ಭೇಟಿಯಾದದ್ದು ಮೈಸೂರಿನಲ್ಲಿ ಜಿ.ಟಿ.ನಾರಾ ಯಣರಾಯರ ಮೊಮ್ಮಗಳು ಅಕ್ಷರಿಯ ಮದುವೆ ಸಮಾರಂಭದಲ್ಲಿ. ಮುಖತಃ ಭೇಟಿ ಬಹುಶಃ ಅವೆರಡೇ. ಆಮೇಲೆ ಒಂದೆರಡು ಸಲ ದೂರವಾಣಿ ಮೂಲಕ ಸಮಾಚಾರ ವಿನಿಮಯ. ಆದರೆ ನೀವು ನಂಬಲಿಕ್ಕಿಲ್ಲ, 2004ರಲ್ಲಿ ‘ವಿಚಿತ್ರಾನ್ನ’ ಅಂಕಣಬರಹಕ್ಕೆ ಇ-ಮೇಲ್ ಪ್ರತಿಕ್ರಿಯೆ ಬರೆಯಲಾರಂಭಿಸಿದ ರಾಘವೇಂದ್ರ ಭಟ್ಟರು ಅಂದಿನಿಂದ ಮೊನ್ನೆಯವರೆಗೆ ಪ್ರತಿವಾರವೂ ವ್ರತವೆಂಬಂತೆ ನನ್ನ ಅಂಕಣಬರಹವನ್ನೋದಿ ಇ-ಮೇಲ್ ಬರೆದಿದ್ದಾರೆ!
ಮತ್ತು ಆ ಎಲ್ಲ ಇ-ಮೇಲ್‌ಗಳೂ ನನ್ನ ಕಂಪ್ಯೂಟರ್‌ನಲ್ಲಿ ಬೆಚ್ಚಗೆ ಭದ್ರವಾಗಿ ಕುಳಿತಿವೆ! ಇದೇನೂ ನನ್ನ ಹೆಚ್ಚು ಗಾರಿಕೆ ಅಲ್ಲವೇಅಲ್ಲ. ಅಂಥ ಒಬ್ಬ ನಿರ್ಮಲಮನಸ್ಸಿನ ಸಜ್ಜನರಿಂದ ನಿರಂತರ ನಿರ್ವ್ಯಾಜ ಪ್ರೀತಿವಾತ್ಸಲ್ಯ ಪಡೆದದ್ದು ನನ್ನ ಅದೃಷ್ಟ. “ಓದಿದೆ, ಚೆನ್ನಾಗಿದೆ”, “ಈ ಸಲದ್ದು ಸ್ವಲ್ಪ ಸುಮಾರಾಗಿದೆ ಸಪ್ಪೆಯೆನಿಸಿತು” ಎಂಬು ದಷ್ಟೇ ಆಗಿದ್ದಿದ್ದರೆ ಅವರಿಗೂ ನನಗೂ ಆ ಸಂವಹನದಲ್ಲಿ ಅದೆಂದೋ ಏಕತಾನತೆ ಬಂದುಬಿಡುತ್ತಿತ್ತು. ಆದರೆ ರಾಘವೇಂದ್ರ ಭಟ್ಟರು ನನಗೆ ಬರೆದಿರುವ ಇಮೇಲ್‌ಗಳು ಅಂಥವಲ್ಲ. ಪ್ರತಿಸಲವೂ ಮೊದಲ ವಾಕ್ಯದಲ್ಲಷ್ಟೇ ಲೇಖನದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ.
ಉಳಿದ ಭಾಗವೆಲ್ಲ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೆನಪುಗಳ ಉಗ್ರಾಣದಿಂದ ಹೆಕ್ಕಿ ತೆಗೆದ ರಸಘಟ್ಟಿಗಳು, ಜೀವನಾನುಭವಗಳು, ಇತ್ಯಾತ್ಮಕ ಹಾರೈಕೆಗಳು, ನಕ್ಕು ಹಗುರಾಗಲು ಹಾಸ್ಯಗುಳಿಗೆಗಳು, ಸರಳ ಸದಭಿರುಚಿಯ ವ್ಯಕ್ತಿತ್ವವನ್ನು ಬಿಂಬಿಸುವ ಭರಪೂರ ಪುರಾವೆಗಳು.
ಮೊನ್ನೆ ರಾಘವೇಂದ್ರ ಭಟ್ಟರ ನಿಧನವಾರ್ತೆ ತಿಳಿದೊಡನೆ ಒಂದೊಂದೇ ವಾರ ಹಿಂದಕ್ಕೆ ಹೋಗುತ್ತ ಅವರ ಇ-ಮೇಲ್ ಗಳನ್ನು ಓದತೊಡಗಿದೆ. ಹೃದಯ ತುಂಬಿಬಂತು. ಎಂಥ ಜ್ಞಾನಾನುಭವ ಭಂಡಾರವನ್ನು ಚಿಕ್ಕ-ಚೊಕ್ಕ ಟಿಪ್ಪಣಿಗಳ ರೂಪದಲ್ಲಿ ನನಗವರು ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ ಎಂದು ಭಾವಿಸಿದಾಗ ಕಣ್ಣುಗಳು ಮಂಜಾದುವು. ಈ ವಾರದಿಂದ ಇನ್ನು ಇ-ಮೇಲ್ ಬರುವುದಿಲ್ಲವಲ್ಲ ಎಂಬ ಸತ್ಯದ ಅರಿವಾದಾಗಂತೂ ಕಣ್ಣೀರು ಹರಿಯಿತು. ಅವರ ಈ ಸಾವಿರದಷ್ಟು ಇ-ಮೇಲ್ ಗಳನ್ನು ಕ್ರೋಡೀಕರಿಸಿದರೆ ಅದೊಂದು ವಿಶಿಷ್ಟ ಮೌಲ್ಯಯುತ
ಕೃತಿ ಆಗಬಹುದೆಂದೆನಿಸಿತು. ನೆಹರು ಮಗಳಿಗೆ ಬರೆದ ಪತ್ರಗಳು, ಕೃಷ್ಣಾನಂದ ಕಾಮತರು ಪ್ರೇಯಸಿ(ಪತ್ನಿ)ಗೆ ಬರೆದ ಪತ್ರಗಳು… ಇದ್ದಂತೆ ಹಿತೈಷಿ ಓದುಗನೊಬ್ಬ ಹವ್ಯಾಸಿ ಬರಹಗಾರನಿಗೆ ಬರೆದ ಪತ್ರಗಳು!
ವಾರವಾರ ಓದುತ್ತಿದ್ದಾಗ ಅನಿಸದಿದ್ದುದು ಈಗವರು ನಮ್ಮನ್ನೆಲ್ಲ ಬಿಟ್ಟುಹೋದಮೇಲೆ ಓದಿದಾಗ ಮಹತ್ತ್ವ
ಗೊತ್ತಾಗುತ್ತಿದೆ. ಅಕ್ಷರವನ್ನೇಕೆ ಅ-ಕ್ಷರ (ನಾಶವಿಲ್ಲದ್ದು) ಎನ್ನುತ್ತೇವೆಂಬುದು ಮನವರಿಕೆಯಾಗುತ್ತಿದೆ. ಅವರ ಪತ್ರ ಗಳಿಂದ ಆಯ್ದ ಕೆಲವನ್ನು ಅಂಕಣದ ಮಿತಿಯೊಳಗೆ ಇಲ್ಲಿ ದಾಖಲಿಸುತ್ತಿದ್ದೇನೆ, ಶ್ರದ್ಧಾಂಜಲಿ ಸಲ್ಲಿಕೆಯ ಅನನ್ಯ ರೀತಿಯೆಂಬಂತೆ. ರಾಘವೇಂದ್ರ ಭಟ್ಟರಿಗೆ ಅವರ ಗುರುಗಳಾದ ತೀ.ನಂ. ಶ್ರೀಕಂಠಯ್ಯರ ಬಗ್ಗೆ ಅಪಾರ ಪ್ರೀತಿಗೌರವ. ಲೇಖನದಲ್ಲೇ ನಾದರೂ ಕನ್ನಡ ಸಾಹಿತ್ಯಲೋಕಕ್ಕೆ ಸಂಬಂಧಿಸಿದ ವಿಚಾರಗಳಿದ್ದರೆ ಆ ನೆಪದಲ್ಲಿ ಗುರುಗಳನ್ನು ನೆನೆದು ಪುಳಕಿತರಾಗುತ್ತಿದ್ದರು.
ತಗಣೆ ಬಗ್ಗೆ ಬರಹದಲ್ಲಿ ತೀನಂಶ್ರೀಯವರ ಲಲಿತಪ್ರಬಂಧದ ಉಲ್ಲೇಖವೊಂದೇ ಸಾಕಾಯ್ತು ಅವರ ಅಂದಿನ ಸಂತೋಷಕ್ಕೆ. ಎಸ್.ವಿ.ರಂಗಣ್ಣರ ಮರಿಮೊಮ್ಮಗಳ ರಂಗಪ್ರವೇಶ ಬಗೆಗಿನ ಲೇಖನದಲ್ಲಿ ತೀನಂಶ್ರೀಯವರ ಉಲ್ಲೇಖ ವೇನೂ ಇರಲಿಲ್ಲ, ಆದರೆ ರಾಘವೇಂದ್ರ ಭಟ್ಟರು “ಎಸ್.ವಿ.ರಂಗಣ್ಣ ನನ್ನ ಗುರುಗಳಾದ ತೀನಂಶ್ರೀಯವರಿಗೆ ಗುರುಗಳು, ಹಾಗಾಗಿ ನನಗೆ ಗುಗ್ಗುರು! ಶಾರದಾವಿಲಾಸ ಕಾಲೇಜಿನಲ್ಲಿ ಸಂದರ್ಶನವಿಲ್ಲದೇ ಉದ್ಯೋಗ ಕೊಟ್ಟ ಸಂಸ್ಥೆಯ ಅಧ್ಯಕ್ಷರು(ಇದಕ್ಕೆ ತೀನಂಶ್ರೀ ಯವರ ಕುಮ್ಮಕ್ಕು!)” ಎಂದು ಹಿಗ್ಗಿದರು. ಮತ್ತೊಮ್ಮೆ ವಿಶ್ವೇಶ್ವರ ಭಟ್ಟರು ‘ಇದೇ ಅಂತರಂಗ ಸುದ್ದಿ’ ಅಂಕಣದಲ್ಲಿ ಅಮರಸಾಹಿತ್ಯ(epitaph) ಬಗ್ಗೆ ಬರೆದಿದ್ದಾಗ ರಾಘವೇಂದ್ರ ಭಟ್ಟರು ನನಗೆ ಇ-ಮೇಲ್ ಬರೆದು “ವಿಶ್ವೇಶ್ವರ ಭಟ್ಟರಿಗೆ ನನ್ನ ಗುರು ತೀನಂಶ್ರೀಯವರ ಅಮರಸಾಹಿತ್ಯ ಏನಿತ್ತೆಂದು ತಿಳಿಸಲು ಸಾಧ್ಯವೇ? ‘ಪದ್ಯ ಹೋಗಿ ಗದ್ಯ ಬಂತು ಡುಂ ಡುಂ! ಗದ್ಯ ಹೋಗಿ ಮಾತು ಬಂತು ಡುಂ ಡುಂ! ಮಾತು ಹೋಗಿ ಮೌನ ಬಂತು ಡುಂ ಡುಂ! This will be my epitaph ಎಂದಿದ್ದವರು This shall be my epitaph ಎಂದು ತಿದ್ದಿದ್ದರು! ತಸ್ಮೈ ಶ್ರೀ ಗುರವೇ ನಮಃ” ಎಂದು ಕೇಳಿದ್ದರು.
ಅಷ್ಟಾಗಿ, ತೀನಂಶ್ರೀ ಬಗ್ಗೆಯೇ ಅಂಕಣ ಬರೆದಾಗ ಅದಕ್ಕೆ ರಾಘವೇಂದ್ರ ಭಟ್ಟರ ಪ್ರತಿಕ್ರಿಯೆ ಏನಿತ್ತು ಗೊತ್ತೇ? ಒಂದು
ಖಾಲಿ ಇ-ಮೇಲ್! ಕೈತಪ್ಪಿ ಬಟನ್ ಒತ್ತಿದಿರಾ ಎಂದು ಕೇಳಿದ್ದಕ್ಕೆ, “ಇಲ್ಲ, ಗುರುಗಳ ಬಗ್ಗೆ ಓದಿ ಮಾತೇ ಹೊರಡ ದಾಯ್ತು. ಅದನ್ನೇ ಸೂಚ್ಯವಾಗಿ ನಿಮಗೆ ತಿಳಿಸಿದೆ!” ಎಂದರು.
ಎಸ್.ವಿ.ಪರಮೇಶ್ವರ ಭಟ್ಟರ ಬಗೆಗೂ ಅಷ್ಟೇ ಪ್ರೀತಿಗೌರವ. “ಅವರಂಥ ಜ್ಞಾನನಿಧಿಗಳ ಪದತಲದಲ್ಲಿ ಕೆಲಕಾಲ ವಿದ್ಯೆ ದೊರಕಿತೆಂಬುದೇ ನನ್ನ ಭಾಗ್ಯ” ಎನ್ನುವರು. ‘ಆರ್.ಕೆ.ಲಕ್ಷ್ಮಣ್ ಅಭಿಪ್ರಾಯದಲ್ಲಿ ಕಾಗೆಯೇ ರಾಷ್ಟ್ರಪಕ್ಷಿ!’ ಲೇಖನದಲ್ಲಿ ಎಚ್. ಕೆ.ರಂಗನಾಥ್, ಎಚ್.ಕೆ.ರಾಮಕೃಷ್ಣ ಮತ್ತು ಎಚ್. ಕೆ.ನಂಜುಂಡಸ್ವಾಮಿ ಹೆಸರುಗಳನ್ನು ಕಂಡು “ಆ ಮೂವರು ಸೋದರರು ನನ್ನ ಪ್ರಿಯ ಗುರುಗಳಾದ ಪರಮೇಶ್ವರ ಭಟ್ಟರ ಬಾಮೈದರು” ಎಂದು ಸ್ಮರಿಸಿಕೊಂಡರು. ಪರಮೇಶ್ವರ ಭಟ್ಟರ ಬಗ್ಗೆಯೇ ಅಂಕಣ ಬರೆದಾಗಂತೂ ರಾಘವೇಂದ್ರ ಭಟ್ಟರೇ ಬಹಳಷ್ಟು ಸರಕನ್ನು ನನಗೆ ಒದಗಿಸಿ ದ್ದರು. ಕನ್ನಡ ಸಾರಸ್ವತ ಲೋಕದ ಬೇರೆ ದಿಗ್ಗಜರ ಬಗ್ಗೆಯೂ ತುಂಬು ಅಭಿಮಾನ.
“ಕಟುವಾಸನೆಯ ಕೇದಗೆಯ ಬೆನ್ನಹಿಂದೆ ಬಿದ್ದ ಕನ್ನಡ ಕವಿಗಳಿದ್ದಾರೆ. ಬಿ.ಜಿ.ಎಲ್ ಸ್ವಾಮಿಯವರ ಗೇಲಿಯ ಹೊಳೆಯಲ್ಲಿ ಅವರ ಅನನ್ಯ ಹಾಸ್ಯಲಹರಿ ತುಂಬುಹೊಳೆಯಾಗಿ ಹರಿದಿದೆ…”, “ಮೂಡುವನು ರವಿ ಎಂದು ಶೀರ್ಷಿಕೆಯಲ್ಲೇ ಪಂಜೆಯವರನ್ನು ನೆನಪಿಸಿದಿರಿ. ಒಲವಿನ ಕವಿ ಕೆಎಸ್‌ನ ಚಿತ್ರಿಸಿದ ಈ ಸೂರ್ಯನನ್ನು ನೋಡಿ: ಅಕ್ಕಿರಾಶಿಗೆ ಬಿದ್ದ ಸವೆದ ಪಾವಲಿ ಸೂರ್ಯ- ಕವನ ‘ಬೆಳಗಿನ ಮಂಜು’. ನವ್ಯರ ಮೂತಿಯನ್ನೇ ತಿವಿದ ನಮ್ಮ
ಹೆಮ್ಮೆಯ ಕವಿ!”, “ಎಚ್ಚೆಸ್ಕೆ ವಾರದ ಬರಹ ಮುಗಿಸಿ ನಡೆದೇ ರೈಲ್ವೇಸ್ಟೇಷನ್‌ಗೆ ಹೋಗಿ ಬೋಗಿಯೊಳಗೆ ಹಾಕಿಬರುತ್ತಿದ್ದುದನ್ನು ನಾನು ನೋಡಿಬಲ್ಲೆ.
ಇದರ ಮುಂದೆ ಇಂದಿನವರ ವ್ರತನಿಷ್ಠೆ ಏನೇನೂ ಅಲ್ಲ”, “ಅತ್ಯಂತ ಚಮತ್ಕಾರೀಯ ಗಣಿತದ ಕುಣಿತ ಓದಿದೆ. ಬೇಂದ್ರೆ ಅವರಿಗೆ ಕೊನೆ ಕೊನೆಯ ದಿನಗಳಲ್ಲಿ ಸಂಖ್ಯಾಶಾಸ್ತ್ರ ಅಮರಿಕೊಂಡಿತ್ತಂತೆ. ನೀವು ಅದಾಗದೆ ಬೇಗ ಅಂಥ ಚಕ್ರವ್ಯೂಹದಿಂದ ಹೊರಬನ್ನಿ!”, “ಮೈಸೂರಿನ ಕಾಫೀ ಹೌಸಿನಲ್ಲಿ ಜತೆಯ ಗುಂಡುಗೋವಿಗಳ ನಡುವೆ ಅಡಿಗರ ಧೂಮವಿಲಾಸ ನಡೆಯುತ್ತಿತ್ತು”, “ಮೂರಕ್ಷರ ಹ್ರಸ್ವ ರೂಪಗಳ ಮಹಿಮೆ ಲೇಖನದಲ್ಲಿರುವ ಸಿಪಿಕೆ 1956-58ರಲ್ಲಿ ಶಿವಮೊಗ್ಗದಲ್ಲಿ ಇಂಟರ್ ಕಲಿಯುವಾಗ ನನ್ನ ಸಹಪಾಠಿ. ನಾನು ಆರ್ಟ್ಸ್(ಗಣಿತಕ್ಕೆ ಹೆದರಿ ಅಲ್ಲಿಗೆ ಓಡಿದವನು) ಅವರು ಸೈನ್ಸ್. ಅವರ ಕೆ ಎಂದರೆ ಕುಂಟ ಶಿಂಗ್ರಿ ಗೌಡ ಎಂದು. ಮೈಸೂರಿಗೆ ಬಂದಮೇಲೆ ಕೃಷ್ಣಕುಮಾರ್ ಅಂತ ನಾಮಕರಣ ಆದದ್ದು” ಮುಂತಾದ ಪ್ರತಿಕ್ರಿಯೆಗಳಲ್ಲದು ಇಣುಕುತ್ತಿತ್ತು. ಹತ್ತು ವರ್ಷಗಳ ಹಿಂದೊಮ್ಮೆ ನನಗೆ ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ…’ ಪೂರ್ಣಸಾಹಿತ್ಯ ಬೇಕಿದ್ದಾಗ, ರಾಘವೇಂದ್ರ ಭಟ್ಟರಿಂದಲೇ ಸಿಪಿಕೆಯವರ ಸಂಪರ್ಕ ಗಳಿಸಿ ದೂರವಾಣಿಯಲ್ಲಿ ಮಾತನಾಡಿಸಿ ಪದ್ಯವನ್ನು ಬರೆದುಕೊಂಡಿದ್ದೆ!
ಹಾಗೆಯೇ, ಸಾಲಿ ರಾಮಚಂದ್ರರಾಯರು ಮತ್ತು ಅವರ ಮೊಮ್ಮಗ ಡಾ.ಶ್ರೀವತ್ಸ ದೇಸಾಯಿ ಬಗೆಗಿನ ಅಂಕಣಕ್ಕೆ ಪ್ರತಿಕ್ರಿಯಿಸುತ್ತ “ಮಾಸ್ತಿಯವರಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ತಂದ ಕತೆಗಳ ಸಂಪುಟದಲ್ಲಿ ‘ಸಾಲಿಯ ಆಚಾರ್ಯರು’
ಎಂಬ ಕಥೆ ಇದೆ. ಅದನ್ನು ನಾನು ಪಾಠ ಮಾಡಿದ್ದೆ” ಎಂದು ಬರೆದಿದ್ದರು. ದೇಸಾಯಿಯವರಿಗೆ ಆ ಕಥೆಯ ವಿಚಾರ ಗೊತ್ತೇ ಇರಲಿಲ್ಲ. ಆಮೇಲೆ ಎಲ್ಲೆಲ್ಲೋ ಹುಡುಕಾಡಿ ಕೊನೆಗೆ ಯುಟ್ಯೂಬ್‌ನಲ್ಲಿ ಅದೇ ಕಥೆಯ ವಾಚನ ಸಿಕ್ಕಿದಾಗ
ದೇಸಾಯಿಯವರು ಅತ್ಯಂತ ಪುಳಕಗೊಂಡರು. ತಿಂಡಿ-ತಿನಿಸಿನ ಬಗೆಗಿನ ಲೇಖನಗಳಿಗೂ ಸ್ವಾರಸ್ಯಕರವಾಗಿಯೇ ಪ್ರತಿಕ್ರಿಯಿಸುತ್ತಿದ್ದರು.
ಜಿಲೇಬಿ ಲೇಖನಕ್ಕೆ “ನಲ್ವತ್ತು ವರ್ಷಗಳ ಹಿಂದೆ ದೆಹಲಿಯ ಪಾರ್ಕೊಂದರ ಬದಿ ನಾನೂ ಹದಿನೈದು ಬಿಸಿಬಿಸಿ ಜಿಲೇಬಿ ನುಂಗಿದ್ದೆ. ಜಹಾಂಗೀರ್ ತಯಾರಿಯಲ್ಲಿ ನನ್ನ ಭಾವ ಶಿವಮೊಗ್ಗದ ಜೈಹಿಂದ್ ಕೃಷ್ಣಮೂರ್ತಿಗಳನ್ನು
ಸರಿಗಟ್ಟುವ ಬಾವರ್ಚಿ ಇರಲಿಲ್ಲ. ಜಿಲೇಬಿ ಯಾರು ಬೇಕಾದರೂ ಮಾಡಬಹುದು; ಜಹಾಂಗೀರ್‌ಗೆ ಕಲೆಗಾರಿಕೆ ಬೇಕು” ಎಂದಿದ್ದರು.
ಮಜ್ಜಿಗೆ ಲೇಖನಕ್ಕೆ “ನನಗಂತೂ ಮಜ್ಜಿಗೆಗಿಂತ ಮೊಸರೇ ಇಷ್ಟ. ಉತ್ತರಕರ್ನಾಟಕದಲ್ಲಿ ಚಾಕುವಿನಿಂದ ಕತ್ತರಿಸು ವಂಥ ಕುಡಿಕೆಯ ಮೊಸರು ಬಾಗಲಕೋಟೆಯ ಬನಶಂಕರಿ ಗುಡಿಗೆ ಹೋದಾಗ ಸವಿದಿದ್ದೆ; ಮಜ್ಜಿಗೆ ಇದರ ಹತ್ತಿರಕ್ಕೂ ಸುಳಿಯದು” ಎಂದು ಬರೆದಿದ್ದರು. ಚಿಲ್ಲಿ ಟ್ಯಾಮರಿಂಡ್ ಬೈಟ್ಸ್ ಬಗ್ಗೆ ಓದಿ ಚಿಕ್ಕಂದಿನಲ್ಲಿ ಹುಣಿಸೆಬೀಜವನ್ನು ಕಲ್ಲಿಗೆ ಉಜ್ಜಿ ಪಕ್ಕ ಕುಳಿತ ಗೆಳೆಯನಿಗೆ ಬಿಸಿಮುಟ್ಟಿಸಿದ್ದನ್ನೂ ನೆನಪಿಸಿಕೊಂಡಿದ್ದರು. ಚಿತ್ರಗೀತೆಗಳ ವಿಷಯದಲ್ಲಿ ಬುರ್ನಾಸು ಎಂದಿದ್ದವರು ಹಿಂದೊಮ್ಮೆ “ಕರೀಂಖಾನರ ನಟವರ ಗಂಗಾಧರ… ಇಂದಿಗೂ ನನ್ನ ಅಚ್ಚುಮೆಚ್ಚು. ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ನನ್ನ ಹಿರಿಮಗಳು ಮೀರಾಳಿಗೆ ಶಾಲೆಯ ಸಂಗೀತದ ಟೀಚರ್ ‘ಈ ಕವನಕ್ಕೆ ನೀವೇ ರಾಗಹಾಕಿ ಹಾಡಲು ತಯಾರಾಗಿ ಬನ್ನಿ ಎಂದಿದ್ದಾರೆ; ಹೈಸ್ಕೂಲ್ ಓದೋ ಮಕ್ಕಳಿಗೆ ಹೆತ್ತವರೇ ಒತ್ತಾಸೆ ತಾನೆ? ಪದ್ಯ ಕುವೆಂಪು ವಿರಚಿತ ‘ನಾಡಿನ ಪುಣ್ಯದ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತಿದೆ…’ ಸಿನಿಮಾ ಸಂಗೀತದಲ್ಲಿ ಪಳಗಿದ ಅವಳಪ್ಪ ‘ರಜನೀ ಗಂಧಾ… ಧಾಟಿಯನ್ನ ಕಲಿಸಿ ಕಳಿಸಿದರೆ ಟೀಚರ್ ಅದು ಸಿನಿಮಾ ಟ್ಯೂನ್ ಎನ್ನುತ್ತ ರಿಜೆಕ್ಟ್ ಮಾಡೋದೇ? ಮಕ್ಕಳಿಗೆ ಸಿನಿಮಾ ಸಂಗೀತದಿಂದಲೂ ಸಂಗೀತದಲ್ಲಿ ರುಚಿಹತ್ತಿಸಬಹುದು ಅಂತ ಇವ್ರಿಗೆ ಕಲಿಸೋರ್ಯಾರು?” ಎಂದು ಬರೆದಿದ್ದರು.
ಮೊನ್ನೆ ಧ್ಯಾನಪೀಠ ಸಾಹಿತ್ಯ ಲೇಖನಕ್ಕೂ “ಒಂದುಕಾಲವಿತ್ತು; ಆಗ ನನಗೆ ಧ್ಯಾನಕ್ಕೆ ಒದಗಿದ್ದು ಆವಾರಾ ಚಿತ್ರದ ‘ಊ ಊ ಊ… ಗೊತ್ತಾಯ್ತಲ್ಲ?” ಎಂದು ಮುಗುಳ್ನಕ್ಕಿದ್ದರು. ಮಹಮ್ಮದ್ ರಫಿ ಕುರಿತ ಲೇಖನವನ್ನು ಆನಂದಿಸಿದ್ದರು ಮಾತ್ರವಲ್ಲ “ಪ್ರಕಾಶ ರೈಯಂಥವರ ಸ್ವಾಟೆಗೆ ನೀವಿತ್ತ ತಪರಾಕಿ ನನಗೆ ಆಪ್ಯಾಯ ಎನ್ನಿಸಿತು. ದರ್ವೇಶಿ ದ್ರಾಬೆ ಸಾಲದು. ಇನ್ನಷ್ಟು ತೀವ್ರ ಕಷಾಯ ಕಾಸಿದರೂ ಮೆಚ್ಚುತ್ತಿದ್ದೆ!” ಎಂದು ಬರೆದಿದ್ದರು. ಮತ್ತೆ ಕೆಲವೊಮ್ಮೆ ಮನ ಕಲಕುವ ಅಧ್ಯಾತ್ಮ. ‘ದೀಪ ಆರಿಹೋಗುವಾಗಿನ ವಾಸನೆ’ ಲೇಖನಕ್ಕೆ ಪ್ರತಿಕ್ರಿಯೆ- “ಕಿರಿಮಗಳು ವೀಣಾ ತನ್ನಿಬ್ಬರು ಮಕ್ಕಳೊಡನೆ ನಾಳಿದ್ದು ಅಮೆರಿಕಕ್ಕೆ ಮರು ಪಯಣಿಸುತ್ತಿದ್ದಾಳೆ. ಮಕ್ಕಳು ಬಂದು ಮೂರುವಾರ ಇದ್ದು, ಆರುವ ನಮ್ಮೀ ದೀಪಗಳಿಗೆ ಬತ್ತಿಯ ಕಜ್ಜಳವನ್ನು ಕಳೆದರು.
ಬದುಕೇ ಹೀಗೆ ತಾನೆ?” ಮತ್ತೊಂದು ಸಲ ‘ಯಥಾ ಪ್ರದೀಪ್ತಂ ಜ್ವಲನಂ ಪತಂಗಾ…’ ಲೇಖನಕ್ಕೆ “ಇಂದಿನ ಲೇಖನದಲ್ಲಿ ನನಗೆ ಬದುಕಿಗೇ ಆದರ್ಶವಾಗಬಲ್ಲ ವಾಕ್ಯ ದೊರಕಿತು. ‘ಮುಗ್ಧ ಆಗಿರುತ್ತಲೇ ದಗ್ಧ ಆಗಿ ಅವಸಾನಗೊಳ್ಳುವುದು ಅವುಗಳ ಹಣೆಬರಹ ಆಗಿದೆ. ಎಂಥ ಮಾತಿನ ಪ್ರಾಸದ ಸೊಗಸಿನಲ್ಲಿ ಮೂಡಿದ ಜೀವನರಹಸ್ಯ ತೆರೆಸಿಬಿಟ್ಟಿದ್ದೀರಪ್ಪ ನೀವು!” ಖಾಸಗಿ ದುಃಖದುಮ್ಮಾನಗಳನ್ನೆಂದೂ ಅವರು ಬರೆಯಲಿಲ್ಲ. ‘ಗಿಡಮರಬಳ್ಳಿಗಳೊಡನೆ ಉಭಯ ಕುಶಲೋ ಪರಿಯ ಒಳಿತುಗಳು’ ಲೇಖನಕ್ಕೆ ಪ್ರತಿಕ್ರಿಯೆಯಾಗಿ “ನನ್ನ ಮನೆಯೊಡತಿಗೂ ಅವರು ನೆಟ್ಟ ಗಿಡಗಳು ಪ್ರತಿಸ್ಪಂದಿಸು ತ್ತವೆಯಂತೆ.
ಭಾವಪರವಶತೆಯ ಪ್ರಸಂಗವನ್ನೇ ಆಯ್ದು ದಸರೆಯ ಪುಷ್ಪಸಂಭ್ರಮಕ್ಕೆ ಚಾಲನೆ ಕೊಟ್ಟಿದ್ದೀರಿ” ಎಂದು ಬರೆದಿ ದ್ದರು. ಅದಾಗಿ ಕೆಲದಿನಗಳಲ್ಲೇ ಅವರ ಪತ್ನಿಯ ನಿಧನ. ನನಗೆ ಆ ಸುದ್ದಿ ತಿಳಿದಿರಲಿಲ್ಲ. ನಾಲ್ಕೈದು ತಿಂಗಳ ಬಳಿಕ ನಾನೊಮ್ಮೆ ಇ-ಮೇಲ್‌ನಲ್ಲಿ “ಮತ್ತೇನು ಸಮಾಚಾರ? ನಿಮ್ಮ ಮತ್ತು ನಿಮ್ಮ ಶ್ರೀಮತಿಯವರ ಆರೋಗ್ಯ ಚೆನ್ನಾಗಿದೆ ಯೆಂದು ಆಶಿಸಿದ್ದೇನೆ” ಎಂದು ಬರೆದಿದ್ದೆ. ಅದಕ್ಕುತ್ತರವಾಗಿ “2023 ಅಕ್ಟೋಬರ್ 26ರಂದು ನನ್ನ ಮಡದಿ ಕಮಲಾಕ್ಷಿ ವಿಧಿವಶರಾದರು.
ಕ್ಯಾನ್ಸರ್‌ಗಾಗಿ ಮೂರು ವರ್ಷ ಉಪಚಾರ ನಡೆದಿತ್ತು. ವಿಧಿ ಅನುಲ್ಲಂಘನಮಲ್ತೆ? ಬದುಕಿನ ನಾಲ್ಕನೇ ಘಟ್ಟದಲ್ಲಿ ದ್ದೇನೆ. ನಿಮ್ಮಂಥವರ ಬರಹ ಮಾತುಗಳಿಂದ ಸಾಂತ್ವನ ಪಡೆಯುತ್ತೇನೆ” ಎಂದು ಬರೆದಿದ್ದರು. ಮೊನ್ನೆಯಷ್ಟೇ ಬಾಗಿಲು ತೆಗೆಯೇ ಸೇಸಮ್ಮ ಎಂದವರು ಇದೀಗ ವೈಕುಂಠದ್ವಾದಶಿಗೂ ಕಾಯದೇ, ಉತ್ತರಾಯಣಕ್ಕೂ ಕಾಯದೆ,
ಸ್ವರ್ಗದ ಬಾಗಿಲು ತೆರೆಸಿಕೊಂಡಿದ್ದಾರೆ. ಅಲ್ಲಿ ಚಳಿಯಿಲ್ಲ. ಪರಮಾತ್ಮನ ಪದತಲದಲ್ಲಿ ಬೆಚ್ಚಗೆ ಇರುತ್ತಾರೆ. ರಾಘವೇಂದ್ರ ಭಟ್ಟರು ಈ ಲೇಖನವನ್ನು ಅಲ್ಲಿಂದಲೇ ಓದುವರೇ? ಮಿಂಚಂಚೆಯಲ್ಲಿ ಪ್ರತಿಕ್ರಿಯೆ ಬರೆಯುವರೇ?
ಇದನ್ನೂ ಓದಿ: Srivathsa Joshi Column: ಗುಳಿಗೆ ರಸಗಳಿಗೆ ಹರಟೆ ಮತ್ತೊಂದು ಲೆಕ್ಕ ಮಿದುಳಿಗೆ