Sunday, 11th May 2025

ವೃಷಭ ವಿಸರ್ಜಿತ ವ್ಯಾಖ್ಯಾನ- ಶ್ರಾವಣದಲ್ಲಿ ಕಥಾಶ್ರವಣ

ತಿಳಿರು ತೋರಣ

srivathsajoshi@yahoo.com

ಅರ್ಥ ಅದೇ, ಭಾಷೆ ಮಾತ್ರ ಬೇರೆ. ಅಂದಮೇಲೆ ಬುಲ್ ಶಿಟ್ ಎಂದು ಇಂಗ್ಲಿಷ್‌ನಲ್ಲಿ ಹೇಳುವುದನ್ನೇ ಬೇರೆ ಭಾರತೀಯ ಭಾಷೆಗಳಲ್ಲಿ ಅನುವಾದಿಸಿ ಹೇಳಿದರೆ ಆಗದೇ? ಒಂದುವೇಳೆ ಹಾಗೆ ಮಾಡಿದರೆ ಆ ಜರಿತದ ಪ್ರಖರತೆ ಪರಿಣಾಮಗಳು ಇಂಗ್ಲಿಷ್‌ನದಂತೆಯೇ ಇರುವವೇ? ಕೆಲ ದಿನಗಳ ಹಿಂದೆ ಹಂಸಲೇಖ ಅವರು ಆಡಿದ ಮಾತೊಂದು ವಿವಾದಕ್ಕೊಳಗಾಗಿತ್ತು.

ಅವರು ಬಿಡಿ ಈಗೀಗ ಚಿತ್ರಸಾಹಿತ್ಯಅಥವಾ ಸಂಗೀತದಿಂದ ಪ್ರಖ್ಯಾತರಾಗುವುದಕ್ಕಿಂತ ಏನೇನೋ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಚಲಿತದಲ್ಲಿರುವುದಕ್ಕೆ ಹೆಣಗುತ್ತಿರುವವರು. ಹಿಂದೊಮ್ಮೆ ಪೇಜಾವರ ಶ್ರೀಗಳ ಬಗ್ಗೆ ತುಚ್ಛವಾಗಿ ಮಾತಾಡಿದ್ದರು. ಆಮೇಲೆ ಕನ್ನಡ ಚಿತ್ರರಂಗದ ಕೆಲ
ಹೀರೊಗಳು ರಾಷ್ಟ್ರಮಟ್ಟದಲ್ಲಿ ಜನಪ್ರಿಯರಾಗುತ್ತಿರುವುದನ್ನು ಕಂಡು ಕರುಬುತ್ತ ಕುಹಕವಾಡಿದ್ದರು. ಲೇಟೆಸ್ಟ್ ಅಂದರೆ ಅದೇ- ಪುನರ್ಜನ್ಮ ಸಿದ್ಧಾಂತದ ಬಗೆಗಿನ ನಂಬಿಕೆಗಳೆಲ್ಲ ಬುಲ್‌ಶಿಟ್ ಎಂದಿದ್ದು. ಅವರು ಹಾಗೆಂದ ಮಾತ್ರಕ್ಕೇ ಯಾವ ಧರ್ಮದ ಯಾವುದೇ ಮೌಲ್ಯಗಳಾದರೂ ಬುಲ್‌ಶಿಟ್ ಆಗುವುದಿಲ್ಲವೆನ್ನಿ.

ಅದು ಎಲ್ಲರಿಗೂ ಗೊತ್ತು. ಆದರೂ ಹಾಗೇಕೆ ಹೇಳಬೇಕು? ಇನ್ನೊಬ್ಬರ ನಂಬಿಕೆಗಳನ್ನೇಕೆ ಗೇಲಿ ಮಾಡಬೇಕು? ಸೋಷಿಯಲ್ ಮೀಡಿಯಾ ಎಂಬ ಅಗ್ನಿಗೇಕೆ ತುಪ್ಪ ಸುರಿಯಬೇಕು? ಅಷ್ಟಾಗಿ, ಅಂಥ ಅಗ್ಗದ ಮಾತುಗಳನ್ನಾಡಿದರೆ ಅವರೇ ತಮ್ಮ ಬಿರುದಿನಲ್ಲಿನ ದ-ಕಾರಕ್ಕೆ ಬದಲು ತ-ಕಾರ ತಂದುಕೊಂಡಂತಾಗುತ್ತದೆ. ನಾದ ಹೋಗಿ ನಾತ ಬಂತು ಥೈ ತಕ ಥೈ ಅಂತಾಗುತ್ತದೆ. ಹೇಳಿದ್ದೇ ಬುಲ್ ಶಿಟ್ ಎಂದಮೇಲೆ ಆಗಲೇಬೇಕಲ್ಲ? ವಿಷಯ ಅದಲ್ಲ. ಹಂಸಲೇಖ ಒಂದೊಮ್ಮೆ ಬುಲ್‌ಶಿಟ್ ಎನ್ನುವ ಬದಲಿಗೆ ಸುಸಂಸ್ಕ ತವಾಗಿ ವೃಷಭವಿಸರ್ಜಿತ ಅಂತ ಅಂದಿದ್ದರೆ? ಅಥವಾ, ಅಚ್ಚಕನ್ನಡದಲ್ಲಿ ಎತ್ತಿನ ಸೆಗಣಿ ಎಂದು ಹೇಳಿದ್ದರೆ? ಇಷ್ಟೆಲ್ಲ ರಂಪ ರಾದ್ಧಾಂತ ಆಗುವುದಿರಲಿ ಅವರೇನನ್ನುತ್ತಿದ್ದಾರೆ ಎಂದು ಹೆಚ್ಚಿನವರಿಗೆ ಅರ್ಥವೂ ಆಗುತ್ತಿರಲಿಲ್ಲ!

ಇಂಗ್ಲಿಷ್ ನಿಂದಾಗಿ ಎಲ್ಲರಿಗೂ ಅರ್ಥವಾಯಿತು. ಅಷ್ಟೊಂದು ಪ್ರಭಾವಶಾಲಿಯಾಗಿ ಇದೆ ಬುಲ್‌ಶಿಟ್ ಎಂಬ ಹೀಗಳಿಕೆ. ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಮತ್ತು ಆಗ ಇನ್ನೊಬ್ಬ ಅಭ್ಯರ್ಥಿಯಾಗಿದ್ದ ಜೋ ಬೈಡನ್ ಇವರಿಬ್ಬರದು ಯಥಾಪ್ರಕಾರ ಟಿವಿಯಲ್ಲಿ ಡಿಬೇಟ್ ನಡೆಯಿತು. ‘ಅದೊಂದು ಡಿಬೇಟ್ ಅಲ್ಲ ಬುಲ್‌ಶಿಟ್!’ ಎಂದು ಒಕ್ಕೊರಲಿನಿಂದ  ಅಭಿಪ್ರಾಯ ಪಟ್ಟರು ಇಲ್ಲಿನ ರಾಜಕೀಯ ಸಮೀಕ್ಷಕರು, ವಿಮರ್ಶಕರು, ಬಹಳಷ್ಟು ಜನ ಶ್ರೀಸಾಮಾನ್ಯ ಪ್ರಜೆಗಳೂ.

ಬುಲ್‌ಶಿಟ್ ಅನ್ನೋದೇನಿದೆ ಅದು ಅಮೆರಿಕದಲ್ಲೂ ಧಾರಾಳವಾಗಿ ಇದೆ ಎನ್ನುವುದಕ್ಕೆ ಮುದ್ದಾಂ ಆಗಿ ಆ ನಿದರ್ಶನವನ್ನಿಲ್ಲಿ ಉಲ್ಲೇಖಿಸಿದೆ. ಹೀಗೆ ಭೂಮಂಡಲದಲ್ಲೆಲ್ಲ ವ್ಯಾಪಿಸಿರುವ ಬುಲ್‌ಶಿಟ್ ವಿಚಾರ ಕೈಲಾಸದಲ್ಲೂ ಬಿಸಿಬಿಸಿ ಚರ್ಚೆಗೆ, ಸ್ವಾಮಿ-ಸೇವಕ ಸಂವಾದಕ್ಕೆ ಕಾರಣವಾಯ್ತು ಎಂಬೊಂದು ಪೌರಾಣಿಕ ಕಥೆಯಿದೆ. ಈ ಶ್ರಾವಣಮಾಸದಲ್ಲಿ ಅದರ ವಾಚನ-ಶ್ರವಣವನ್ನು ನೀವೊಮ್ಮೆ ಮಾಡಬೇಕು. ನಿಮಗದು ಪುಣ್ಯಪ್ರದವಾಗಬಹುದು. ಅಲ್ಲದೇ ಹಾಸ್ಯರಸವನ್ನು ಅಷ್ಟಿಷ್ಟು ಸಿಂಪಡಿಸಿರುವುದರಿಂದ ನಿಮ್ಮ ಮುಖದಲ್ಲಿ ಒಂದು ಕಿರುನಗೆಯನ್ನಂತೂ ಖಂಡಿತ ತರಿಸಬಹುದು.

ಕೈಲಾಸವಾಸಿ ಪರಮೇಶ್ವರನಿಗೆ ಸಂಸಾರಸಂಕಟಗಳು ನಮಗಿಂತ ಹೆಚ್ಚು. ಹೆಚ್ಚು ಎನ್ನುವುದಕ್ಕಿಂತಲೂ ಅವನ ಸಂಕಟಗಳು ವಿಚಿತ್ರ, ವಿಭಿನ್ನ ರೀತಿಯವು. ಸಂಸ್ಕ ತ ಕವಿಗಳು ಇದನ್ನು ಚೆನ್ನಾಗಿ ಲೇವಡಿ ಮಾಡಿದ್ದಾರೆ. ಗಂಗೆ-ಗೌರಿ ಸವತಿಯರ ಬಗೆಹರಿಯದ ಕಚ್ಚಾಟ. ಅದರ ಮಧ್ಯೆ ಗಣಪ-ಸುಬ್ಬಣ್ಣರ ಕಿತಾಪತಿಗಳು ಒಂದಲ್ಲ ಎರಡಲ್ಲ. ಎಷ್ಟೆಂದರೂ ಚಿಕ್ಕ ಮಕ್ಕಳು, ಜಗಳಾಡ್ತಿರ‍್ತಾವೆ ಬಿಡಿ, ಆಮೇಲೆ ಒಟ್ಟಿಗೆ ಸೇರಿ ಆಟ ಆಡ್ತಾವೆ ಎಂದು ಸಮಾಧಾನ
ತಂದುಕೊಳ್ಳುವಷ್ಟರಲ್ಲಿ ಅವರ ವಾಹನಗಳಾದ ಇಲಿ ಮತ್ತು ನವಿಲುಗಳದು ಏನಾದರೂ ರಂಪ ಶುರು.

ಅದು ಮುಗಿದ ಮೇಲೆ ಶಿವನ ಕೊರಳಿಗೆ ಟೈ ಆಗಿರುವ ಹಾವಿಗೂ ಗಣಪನ ಸೊಂಟದ ಸುತ್ತಲಿನ ಬೆಲ್ಟ್ ಆಗಿರುವ ಹಾವಿಗೂ ಬುಸುಗುಟ್ಟುತ್ತ ಜಗಳ. ಇವರಾರದೂ ತಂಟೆ ಇಲ್ಲವೆಂದಾದರೆ ತಲೆಯಲ್ಲಿರುವ ಶೀತಲ ಚಂದ್ರ ಶೀತಬಾಧೆ ತಲೆನೋವು ತರುತ್ತಾನೆ. ಬಹುಶಃ ಶಿವ ತಲೆಕೆಟ್ಟು ತಿರುಕನಾಗಿದ್ದು ಅದಕ್ಕೇ ಇರಬಹುದು. ಇದ್ದುದರಲ್ಲಿ ಶಿವನ ವಾಹನವಾದ ನಂದಿಯೇ ವಾಸಿ. ಅವನು ವಿನಮ್ರ, ವಿನೀತ ಸ್ವಭಾವದವನು. ಒಂದಿಷ್ಟು ಫ್ಯಾಟ್-ಫ್ರೀ ಬೈಹುಲ್ಲು ಮತ್ತು ಡಯಟ್-ಕಲಗಚ್ಚು ಕೊಟ್ಟರೆ ದಿನವಿಡೀ ತೆಪ್ಪಗಿರುತ್ತಾನೆ. ಅದೊಂದೇ ನೆಮ್ಮದಿ ಶಿವನಿಗೆ. ಹೀಗಿರಲು ಒಂದು ದಿನ ನಂದಿಯೂ ಬೇಸರದ ಮುಖಮಾಡಿಕೊಂಡು ಶಿವನ ಬಳಿಗೆ ಬಂದನು.

ಶಿವನಿಗೆ ಆಶ್ಚರ್ಯ- ಇವನೊಬ್ಬ ಕಾಟ ಕೊಡದವನು ಎಂದುಕೊಂಡಿದ್ದರೆ ಈಗ ರಾಗ ಎಳೆಯುತ್ತಿದ್ದಾನಲ್ಲ, ಎಲಾ ಇವನ! ‘ಏನಪ್ಪಾ ನಂದಿ, ನೀನು ನೊಂದಿದ್ದೇಕೆ?’ ಪ್ರಶ್ನಿಸಿದನು ಪರಮೇಶ್ವರ. ನಂದಿಯ ಮುಖ ನಂದಿಹೋದ ನಂದಾದೀಪದಂತಿತ್ತು. ಉಕ್ಕಿ ಬರುತ್ತಿದ್ದ ದುಃಖವನ್ನು ತಾಳಲಾರದೆ ಬಿಕ್ಕುತ್ತಲೇ ತನ್ನ ಅಳಲನ್ನು ತೋಡಿಕೊಳ್ಳತೊಡಗಿದನು. ‘ಮಹಾಪ್ರಭೂ… ನಿಮ್ಮಿಂದಾಗಲೀ, ನಿಮ್ಮ ಸಂಸಾರಸದಸ್ಯರಿಂದಾಗಲೀ, ನಿಮ್ಮ ಗಣಗಳಿಂದಾಗಲೀ ನನಗೆ ಯಾವತ್ತೂ ಯಾವ ನಮೂನೆಯ ಕಿರುಕುಳವೂ ಆಗಿಲ್ಲ. ಆ ಬಗ್ಗೆ ನನ್ನ ಕಂಪ್ಲೇಂಟ್ ಏನೂ ಇಲ್ಲ. ಆದರೆ ಈ ಭೂಲೋಕದ
ಮನುಷ್ಯರಿದ್ದಾರಲ್ಲ, ಅವರಿಂದ ನನಗೆ ತೀವ್ರ ಅವಮಾನವಾಗಿದೆ…’ ಪರಮೇಶ್ವರ ಒಂದುಕ್ಷಣ ಯೋಚಿಸಿದನು.

ಭೂಲೋಕದ ಹಳ್ಳಿಗಳಲ್ಲಿ ಈಗಲೂ ಗದ್ದೆ ಉಳುಮೆಗೆ, ಏತ ನೀರಾವರಿಗೆ, ಎಣ್ಣೆ ತೆಗೆಯುವ ಗಾಣಕ್ಕೆ, ಗಾಡಿ ಎಳೆಯಲಿಕ್ಕೆ- ಹೀಗೆ ಬೇರೆಬೇರೆ ಕೆಲಸಗಳಿಗೆ ಎತ್ತುಗಳನ್ನು ಉಪಯೋಗಿಸುತ್ತಾರಲ್ಲ ಆ ಬಗ್ಗೆ ನಂದಿಯ ದೂರು ಇರಬಹುದೇ ಎಂದುಕೊಂಡನು. ‘ಮನುಷ್ಯರು ನಿನ್ನ ಸಹೋದರರನ್ನೆಲ್ಲ ಮೈ ಮುರಿದು ದುಡಿಯುವಂತೆ ಮಾಡಿ ಸತಾಯಿಸುತ್ತಾರೆಂದು ತಾನೆ ನಿನ್ನ ಅಳಲು?’ ಎಂದು ಶಿವನು ನಂದಿಯನ್ನು ಪ್ರಶ್ನಿಸಿದನು. ‘ಇಲ್ಲ ಸ್ವಾಮಿ, ಹಾಗೇನೂ ಇಲ್ಲ. ಗಾಣದೆತ್ತಿನಂತೆ ದುಡಿತ ಎಂಬ ಗಾದೆಯಾದರೂ ಹುಟ್ಟಿದೆಯಲ್ಲ.

ದುಡಿಯುವುದಕ್ಕೇನೂ ತೊಂದರೆಯಿಲ್ಲ. ನನ್ನ ಕಂಪ್ಲೇಂಟ್ ಬೇರೆಯೇ ಇದೆ…’ ಎಂದನು ನಂದಿ. ‘ಮತ್ತೆ? ದುಡಿಸಿ ದುಡಿಸಿ ಇನ್ನು ಉಪಯೋಗಕ್ಕೆ ಬಾರದೆಂದಾದ ಮೇಲೆ ಕಸಾಯಿಖಾನೆಗೆ ಕಳಿಸಿ ಕೊಂದು ಹಾಕುತ್ತಾರೆಂದು ದುಃಖವೇ?’- ಪರಶಿವನ ಪ್ರಶ್ನೆ. ‘ನೋ, ದಟ್ಸ್ ಆಲ್ಸೊ ಓಕೆ. ಜಾತಸ್ಯ ಮರಣಂ ಧ್ರುವಂ ಎಂದಿದ್ದಾರೆ ದಾರ್ಶನಿಕರು. ಹುಟ್ಟಿದ ಮೇಲೆ ಒಂದಲ್ಲ ಒಂದುದಿನ ಸಾಯಲೇಬೇಕು. ಯಾರೂ ಶಾಶ್ವತರಲ್ಲ. ಸಂತೋಷದಿಂದಲೇ ಸಾಯೋಣ ವಂತೆ. ಅದಕ್ಕೇಕೆ ಚಿಂತೆ!’ ಗೋಣಲ್ಲಾಡಿಸಿದನು ನಂದಿ.

‘ಕೋಲೆಬಸವನನ್ನು ಆಡಿಸುವವನು ಜತೆಯಲ್ಲಿರುವ ಹೆಣ್ಣುಕರುವಿಗೆ ಮಾಲೆ ಹಾಕಿಸಿ ರಾಮ-ಸೀತೆಯರ ಮದುವೆ ಎಂದು ಬೀದಿನಾಟಕ ಮಾಡಿ ಮಕ್ಕಳನ್ನು ರಂಜಿಸುತ್ತಾನೆಂದು ನಾಚಿಕೆಯೆ? ಅಥವಾ ಫ್ರಾನ್ಸ್‌ನಂಥ ದೇಶಗಳಲ್ಲಿ ಬುಲ್-ರೇಸ್, ಬುಲ್-ಫೈಟ್ ಏರ್ಪಡಿಸಿ ಜನರು ಮೋಜು ಮಾಡುತ್ತಾ
ರೆಂದೇ?’- ಶಿವ ಕೇಳಿದ, ನಂದಿಯ ಅಸಲಿ ಸಮಸ್ಯೆಯೇನು ಎಂದು ಒಂದೂ ಅರ್ಥವಾಗದವನಂತೆ. ‘ಛೇ! ಎಲ್ಲಾದರೂ ಉಂಟೇ? ಮಕ್ಕಳಿಗೆ ಮನೋ ರಂಜನೆ ಸಿಗುತ್ತದಾದರೆ ರಾಮ-ಸೀತೆ ಮದುವೆ ಆಟ ಆಡೋದು, ಬುಲ್‌ರೇಸು, ಬುಲ್-ಟು ನಮಗೂ ಇಷ್ಟವೇ. ನನ್ನ ಸಮಸ್ಯೆ ಅದಲ್ಲ.

ನಿಜ ಹೇಳಬೇಕೆಂದರೆ ನನ್ನ ಸಮಸ್ಯೆಯನ್ನು ನಿಮ್ಮಲ್ಲಿ ಹೇಳಲಿಕ್ಕೇ ಸ್ವಲ್ಪ ನಾಚಿಕೆ-ಸಂಕೋಚ ಆಗ್ತಿರೋದೇ ಹೊರತು ರಾಮ-ಸೀತೆ ಮದುವೆಯಾಟ ದಲ್ಲೇನೂ ನಾಚಿಕೆಯಿಲ್ಲ. ಮದುವೆಯಲ್ಲಿ ಹೆಣ್ಣು ನಾಚುತ್ತಾಳೆ. ಗಂಡಿಗೆಂಥ ನಾಚಿಕೆ?’ ನಯವಿನಯದಿಂದಲೇ ನಂದಿಯ ಉವಾಚ. ‘ಹೇಳಲು ನಾಚಿಕೆಯೆನಿಸುವ ಸಮಸ್ಯೆ ಅದೇನೋ ನನಗಂತೂ ಗೊತ್ತಾಗದು. ಬೇಗ ಹೇಳಿ ಇಲ್ಲಿಂದ ಜಾಗಖಾಲಿ ಮಾಡು!’- ಮುಕ್ಕಣ್ಣ ಈಗ ಸ್ವಲ್ಪ ತಾಳ್ಮೆಗೆಟ್ಟು ಸಿಟ್ಟಾಗಿದ್ದನೆಂದು ಗೊತ್ತಾಗುತ್ತಿತ್ತು. ಇನ್ನು ಬಾಯ್ಬಿಡದಿದ್ದರೆ ಕೋಪಗೊಂಡು ಮೂರನೇ ಕಣ್ಣು ತೆರೆದು ಸುಟ್ಟೇಬಿಟ್ಟಾನು ಎಂದು ಹೆದರಿದ ನಂದಿ ‘ಅದೇ ಮಹಾಪ್ರಭೂ… ಮನುಷ್ಯರು, ಅದರಲ್ಲೂ ಇಂಗ್ಲಿಷ್ ಮಾತಾಡುವವರು (ಮತ್ತು ಇಂಗ್ಲಿಷ್ ಮಾತಾಡುವವರನ್ನು ಅನುಕರಿಸುವವರು) ಸತ್ಯದಂತೆ ತೋರುವ ಸುಳ್ಳಿನ ಕಂತೆಗಳನ್ನು ನನ್ನ ಮಲಕ್ಕೆ ಹೋಲಿಸಿ ನನಗೆ ಅವಮಾನ ಮಾಡ್ತಿರ‍್ತಾರೆ…’ ಎಂದು ಶಿವನಲ್ಲಿ ತನ್ನ ನೋವನ್ನು ತೋಡಿಕೊಂಡನು. ಹಾಗೆನ್ನುವಾಗ ನಂದಿಗೆ ಬಿಕ್ಕಿಬಿಕ್ಕಿ ಅಳುವೇ ಬಂದಿತ್ತು. ಅಂದರೆ, ಆತ ಮನಸ್ಸಿಗೆ ನೋವು ಮಾಡಿಕೊಂಡಿದ್ದು ಹೌದು.

‘ಬುಲ್‌ಶಿಟ್!’- ಜಗದೊಡೆಯ ಜಗದೀಶ್ವರನ ಬಾಯಿಂದಲೂ ಅದೇ ಮಾತು ಹೊರಡಬೇಕೆ! ಶಿವಶಿವಾ! ಪರಮೇಶ್ವರನೇ ಹಾಗೆ ಹೇಳಿದ್ದನ್ನು ಕೇಳಿದ ನಂದಿಗೆ ಗಾಯದ ಮೇಲೆ ರುಚಿಗೆ ತಕ್ಕಷ್ಟು ಟಾಟಾ ಐಯೊಡೈಜ್ಡ್ ಉಪ್ಪು ಉದುರಿಸಿದಂತಾಯಿತು. ಆದರೂ ಸಾವರಿಸಿಕೊಂಡು ತನ್ನ ಮನದಾಳದ
ನೋವನ್ನೆಲ್ಲ ಹೊರಗೆಡಹಿ ನಾನ್‌ಸ್ಟಾಪ್ ಆಗಿ ವಿಶದೀಕರಿಸಿದನು: ‘ಆಕಳಿನ ಸೆಗಣಿಗಾದರೆ ಅಷ್ಟೊಂದು ಗೌರವವಿರುವಾಗ, ನನ್ನದಕ್ಕೆ ತಾತ್ಸಾರವೇಕೆ? ಅಮೆಝಾನ್‌ನಲ್ಲೂ ಮಾರಾಟವಾಗುವ ಕೌ-ಡಂಗ್ ಅನ್ನು ಅಷ್ಟೊಂದು ಪೂಜ್ಯಭಾವದಿಂದ ಕಾಣುವವರು ಬುಲ್‌ಶಿಟ್ ಎಂದರೆ ಮಾತ್ರ ಹೀಗಳೆಯು ವುದೇಕೆ? ಹೋಗಿಹೋಗಿ ಮನುಷ್ಯರ ಹಸಿಸುಳ್ಳಿನ ಕಂತೆಗಳನ್ನು ಬುಲ್ ಶಿಟ್ ಎನ್ನುವುದೇಕೆ? ಈಗೀಗಂತೂ ಬುಲ್‌ಶಿಟ್ ಎಂಬ ಪದಪ್ರಯೋಗ ಎಷ್ಟು ಕಾಮನ್ ಆಗಿಬಿಟ್ಟಿದೆಯೆಂದು ಎಣಿಸಿಕೊಂಡರೆ ಬೇಜಾರಾಗುತ್ತದೆ…’ ನಂದಿಯ ಅಳಲಿನಲ್ಲಿ ಅಂಥದ್ದೇನೂ ಹುರುಳಿಲ್ಲ ಅನಿಸಿತು ಶಿವನಿಗೆ.

ಬುಲ್‌ಶಿಟ್ ಎಂದಮಾತ್ರಕ್ಕೇ ಅದರಲ್ಲಿ ಅವಮಾನವಾಗೋದೇನಿದೆ? ಆದರೆ ನಂದಿ ಮಾತ್ರ ಪಟ್ಟುಹಿಡಿದು ಕುಳಿತಿದ್ದನು. ಅವನು ಈ ಅಹವಾಲನ್ನು ಶಂಭೋಶಂಕರನ ಬಳಿಗೆ ತರುವ ಮೊದಲು ಸಾಕಷ್ಟು ತಯಾರಿಯನ್ನೂ ನಡೆಸಿದ್ದನು; ಟಿಪ್ಪಣಿಗಳನ್ನು ಬರೆದಿಟ್ಟುಕೊಂಡಿದ್ದನು. ಇಂಟರ್‌ನೆಟ್‌ನಲ್ಲೂ ಒಂದಿಷ್ಟು ಸರ್ಚಿಸಿ ಮಾಹಿತಿ ಸಂಗ್ರಹ ಮಾಡಿಟ್ಟುಕೊಂಡಿದ್ದನು. ಅವನ್ನೆಲ್ಲ ಒಂದೊಂದಾಗಿ ಹೊರತೆಗೆದು ತೋರಿಸಿದನು. ‘ನೋಡಿ ಪ್ರಭೂ, ಇವನ್ಯಾರೋ ಹ್ಯಾರಿ ಎಂಬುವವ ಬುಲ್‌ಶಿಟ್ ಬಗ್ಗೆ ಪ್ರೌಢಪ್ರಬಂಧ ಬರೆದಿದ್ದಾನೆ. ಇಲ್ಲಿ ನೋಡಿ’ ಎಂದಾಗ ಶಿವನಿಗೆ ಆಶ್ಚರ್ಯ. ‘ಯಾರು? ನಮ್ಮ ಶ್ರೀಹರಿ ನಿನ್ನ ಬಗ್ಗೆ ತಮಾಷೆ ಮಾಡಿದ್ನಾ?’ ಎಂದು ಕೇಳಿದನು, ನಂದಿಯನ್ನು ಛೇಡಿಸಲೆಂಬಂತೆ.

ಅಲ್ಲ ಮಹಾಪ್ರಭೂ. ಶ್ರೀಹರಿಯಲ್ಲ. ಹ್ಯಾರಿ ಜಿ. ಫ್ರಾಂಕ್ ಫರ್ಟ್ ಎಂಬಾತ ಅಮೆರಿಕದ ಪ್ರಿನ್ಸ್‌ಟನ್ ಯುನಿವರ್ಸಿಟಿಯಲ್ಲಿ ಫಿಲಾಸಫಿ ಪ್ರೊಫೆಸರ್. ೧೯೮೬ರಲ್ಲಿ ಬುಲ್‌ಶಿಟ್ ಬಗ್ಗೆ ಯಾವುದೋ ಒಂದು ಮ್ಯಾಗಜಿನ್‌ನಲ್ಲಿ ಅವನೊಂದು ಪ್ರಬಂಧ ಬರೆದಿದ್ದಾನೆ. ಅದರ ಶೀರ್ಷಿಕೆಯನ್ನು On Bullshit ಎಂದು ಇಟ್ಟಿದ್ದಾನೆ. ಪ್ರಬಂಧದ ಮೊತ್ತಮೊದಲ ವಾಕ್ಯದಲ್ಲೇ One of the most salient features of our culture is that there is so much bullshit… ಎಂದು ಬೋಲ್ಡಾಗಿ ಬರೆದಿದ್ದಾನೆ. ಮುಂದೆ ಈ ಪ್ರಬಂಧದಲ್ಲಿ ಬುಲ್‌ಶಿಟ್ ಎಂದರೇನು, ಅಪ್ಪಟ ಸುಳ್ಳಿಗಿಂತ ಅದು ಹೇಗೆ ಭಿನ್ನ, ಬುಲ್‌ಶಿಟ್ ಒಂದು ಫಲಿತಾಂಶ ಮಾತ್ರವಲ್ಲ ಅದೊಂದು ಪ್ರಕ್ರಿಯೆ ಕೂಡ… ಅಂತೆಲ್ಲ ಕೊರೆದಿದ್ದಾನೆ.

ಪ್ರಬಂಧ ಸಾಕಷ್ಟು ಜನಪ್ರಿಯವಾದ ಮೇಲೆ ಅದನ್ನೇ ಪುಸ್ತಕವಾಗಿ ಪ್ರಕಟಿಸಿದ್ದಾನೆ!’. ‘ಹೋಗಲಿ ಬಿಡು, ಅವನೊಬ್ಬ ತತ್ತ್ವಜ್ಞಾನಿ. ಬುಲ್‌ಶಿಟ್ ಬಗ್ಗೆ
ತನಗೆ ತಿಳಿದಷ್ಟನ್ನು ಇತರ ಹುಲುಮಾನವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾನೆ. ನೀನದನ್ನು ಅಷ್ಟೊಂದು ಪರ್ಸನಲ್ ಆಗಿ ತಗೊಳ್ಳುವ ಆವಶ್ಯಕತೆ ಯಿಲ್ಲ…’ ನಂದಿಯನ್ನು ಸಮಾಧಾನಿಸಿದನು ನಂಜುಂಡ. ‘ಆ ಒಬ್ಬ ಪ್ರೊಫೆಸರ್ ಅಷ್ಟೇ ಅಲ್ಲ ಪ್ರಭೂ, ಇಲ್ನೋಡಿ ಜಗದ್ವಿಖ್ಯಾತ ಎಂ.ಐ.ಟಿಯ ಕೆಲ ಕಿಡಿಗೇಡಿ ಸ್ಟೂಡೆಂಟ್ಸು ಸೇರಿ ಬುಲ್‌ಶಿಟ್ ಗೆಜೆಟ್ ಎಂಬ ವೆಬ್‌ಸೈಟ್ ಮಾಡಿದ್ದಾರೆ. ಅದರಲ್ಲಂತೂ ಸರ್ವಂ ಬುಲ್‌ಶಿಟ್‌ಮಯಂ. ಅವರ ಪ್ರಕಾರ ಬುಲ್
ಶಿಟ್ ಅಧ್ಯಯನಕ್ಕೇ ಒಂದು ಹೊಸ ಶಾಖೆ ಇದೆಯಂತೆ Tauroscatology ಎಂದು ಅದರ ಹೆಸರಂತೆ. ಈ ಮೆಸ್ಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೌರೊಸ್ಕಾಟೊಲೊಜಿಯವರೆಲ್ಲ ಬುದ್ಧಿವಂತರೇನೊ ಹೌದು, ಆದರೆ ಬುದ್ಧಿವಂತಿಕೆಯನ್ನು ಇಂಥದಕ್ಕಾ ಉಪಯೋಗಿಸೋದು?’- ನಂದಿಯ ವಾದ
ಮುಂದುವರಿಯಿತು.

ನಂದಿ ಇಷ್ಟೆಲ್ಲ ಹೋಮ್‌ವರ್ಕ್ ಮಾಡಿಟ್ಟಿದ್ದಾನೆಂದು ಅಂದುಕೊಂಡಿರಲಿಲ್ಲ ಶಿವ. ‘ಮುಂದ?’ ಎಂದ ‘ರಾಮ ಶಾಮ ಭಾಮ’ದ ಕಮಲಹಾಸನ್‌ನಂತೆ.
‘ಇಲ್ಲಿ ಇನ್ನೊಂದಿದೆ. ಇದು ಬುಲ್‌ಶಿಟ್ ಬಿಂಗೋ ಎಂಬ ಒಂದು ಆಟವಂತೆ, ಹೌಸಿ-ಓಸಿ ಅಥವಾ ತಂಬೋಲಾ ಇದ್ದಹಾಗೆ. ಮೀಟಿಂಗ್‌ಗಳಲ್ಲಿ, ಸೆಮಿನಾರ್‌ಗಳಲ್ಲಿ ತೂಕಡಿಕೆ ನಿದ್ದೆ ಬರದಂತೆ ಸುಲಭೋಪಾಯ. ಮೀಟಿಂಗ್‌ಗಳಲ್ಲಿ ಸಾಮಾನ್ಯವಾಗಿ ಮೇಲಿಂದಮೇಲೆ ಕೇಳಿಬರುವ ಮ್ಯಾನೇಜ್‌ಮೆಂಟ್ ಪದಗಳನ್ನು ಬಿಂಗೋ ಟಿಕೆಟ್‌ನಂತೆ ಪ್ರಿಂಟ್ ಮಾಡಿರುತ್ತಾರೆ. ಒಂದೊಂದು ಪದ ಮೀಟಿಂಗ್‌ನಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಅದನ್ನು ಟಿಕ್ ಮಾಡಬೇಕು.

ಐದು ಪದಗಳ ಸಾಲು ಅಥವಾ ಸ್ತಂಭವನ್ನು ಮೊದಲು ಕಂಪ್ಲೀಟ್ ಮಾಡಿದವರು ಎದ್ದುನಿಂತು ‘ಬುಲ್‌ಶಿಟ್!’ ಎಂದು ಗಟ್ಟಿಯಾಗಿ ಕಿರುಚಬೇಕು. ಆಟದ ಕಲ್ಪನೆಯಿಂದೇನೊ ನನಗೂ ನಗು ಬಂತು, ಆದರೆ ಮತ್ತೆ ಬುಲ್‌ಶಿಟ್ ಅಂತ ಇರೋದನ್ನು ಊಹಿಸಿದ ಕೂಡಲೇ ಅಳು… ಏನಾದ್ರೂ ಮಾಡಿ ಇದನ್ನು ನಿಲ್ಲಿಸಬೇಕು ಮಹಾಪ್ರಭೂ…’ ನಂದಿ ಗೋಗರೆಯುತ್ತ ಮುಂದುವರಿಸಿದನು. ‘ನಿಜ್ವಾಗ್ಲೂ ಹೇಳ್ತೇನೆ ಸ್ವಾಮೀ. ಭೂಲೋಕದಲ್ಲಿ ಈಗ ಬುಲ್‌ಶಿಟ್ ಎಷ್ಟು ಗಬ್ಬೆಬ್ಬಿಸಿದೆಯೆಂದರೆ ರಾಜಕಾರಣಿಗಳ ಉಕ್ತಿಗಳೆಲ್ಲ ಬುಲ್‌ಶಿಟ್ ಅಂತ ಆಗತಾನೆ ಹುಟ್ಟಿದ ಮಗುವಿಗೂ ಗೊತ್ತು. ಮಾಧ್ಯಮಗಳ ಸರಕು ಸಹ ಬಹುಪಾಲು
ಬುಲ್‌ಶಿಟ್ಟೇ. If you can’t dazzle them with your brilliance, baffle them with your bullshit ಎಂಬುದೇ ಅವರ ಮಂತ್ರ! ಕೊನೆಗೆ ಆಕ್ಸ್ ಫರ್ಡ್ ಡಿಕ್ಷನರಿಯಲ್ಲೂ bullshit ಸೇರಿಕೊಂಡಿದೆಯೆಂದರೆ ಎಲ್ಲಿಗೆ ಬಂತು ಕಾಲ!’.

‘ನಂದಿ, ಮಂದಿ ಏನಾದ್ರೂ ಅನ್ಲಿ ಬಿಡು, ಅದು ಅವರವರ ಸಿ(ಶಿ)ಟ್ಟೇ ಹೊರತು ನೀನು ಅದನ್ನು ನಿನ್ನದೆಂದು ತಲೆಗೆ ಹಚ್ಚಿಕೊಳ್ಳಬೇಡ. ನಿನ್ನ ಕೆಲಸ ನೀನು ಮಾಡ್ಕೊಂಡಿರು’ ಎಂದಷ್ಟೇ ಶಿವನ ಉತ್ತರ. ಅಂತೂ ತನ್ನ ಸಮಸ್ಯೆಗೆ ಪರಿಹಾರದ ವಿಚಾರ ಶಿವನಿಂದ ಬರುವ ಸೂಚನೆ ಇಲ್ಲವೆಂದು ನಂದಿ ನಿರಾಶನಾದನು. ಹ್ಯಾರಿ ಫ್ರಾಂಕ್ ಫರ್ಟ್ ಅಂದಿದ್ದು ನಿಜ.

ಬುಲ್ ಶಿಟ್ ಈಗ ಭೂಲೋಕದಲ್ಲಿ ಹಾಸುಹೊಕ್ಕಾಗಿದೆ.ಅದನ್ನು ಕಿತ್ತೊಗೆಯುವುದು ಕಷ್ಟವೇ ಇದೆ. ಆದರೆ ಸ್ವಲ್ಪವಾದರೂ ಬದಲಾವಣೆ ತರಲು,
ಅಂದರೆ ಬುಲ್‌ಶಿಟ್ ಎಂಬ ಪದಪ್ರಯೋಗ ಕಡಿಮೆ ಮಾಡಲು ಏನು ಮಾಡಬಹುದೆಂದರೆ ಅದಕ್ಕೆ ಬೇರೆ ರೂಪ ಕೊಡಬಹುದು. ಬುಲ್‌ಶಿಟ್ ಎನ್ನುವ ಬದಲು ಸುಸಂಸ್ಕ ತವಾಗಿ ‘ವೃಷಭವಿಸರ್ಜಿತ’ ಎನ್ನಬಹುದು. ಅದಕ್ಕೆ ಸ್ವಲ್ಪ ಗಾಂಭೀರ್ಯವಾದರೂ ಬರಬಹುದು. ಆ ಬಗ್ಗೆ ಶಿವನ ಸಮ್ಮತಿಯನ್ನು ತಿಳಿಯೋಣವೆನ್ನಿಸಿ ‘ಮಹಾಪ್ರಭೂ, ಇನ್ನು ಮುಂದೆ ಭೂಲೋಕವಾಸಿಗಳು ಬುಲ್‌ಶಿಟ್ ಎನ್ನುವ ಬದಲು ವೃಷಭವಿಸರ್ಜಿತ ಎಂದು ಹೇಳಬೇಕು. ಆ ರೀತಿ
ಆeಯನ್ನಾದರೂ ಹೊರಡಿಸುತ್ತೀರಾ?’ ನಂದಿ ಕೈಮುಗಿದು ಬೇಡಿದನು. ಶಿವನ ಉದ್ಗಾರ ಏನಿರಬಹುದೆಂದು ನೀವೇ ಊಹಿಸಿ!

ಅಂದಹಾಗೆ ಈ ಪೌರಾಣಿಕ ಕಥಾನಕವನ್ನು ಒಂದಾನೊಂದು ಕಾಲದಲ್ಲಿ ನಾನೇ ಹೊಸೆದದ್ದು. ಹೌದಾ? ಹಾಗಾದರೆ ಇದು ನಂ.೧ ಬುಲ್‌ಶಿಟ್ ಎಂದು ನೀವೀಗ ಜರಿದರೂ ಪರವಾಗಿಲ್ಲ. ನನಗೇನೂ ಬೇಸರವಾಗುವುದಿಲ್ಲ. ನಿಜವಾಗಿಯಾದರೆ ಈ ಕಥಾನಕ ಹುಟ್ಟುವುದಕ್ಕೂ ಒಂದು ಬುಲ್‌ಶಿಟ್ಟೇ ಕಾರಣ. ಆ ಕಾಲದಲ್ಲಿ ನಾನು ‘ವಿಚಿತ್ರಾನ್ನ’ ಎಂಬ ಅಂಕಣ ಬರೆಯುತ್ತಿದ್ದೆ. ಒಂದು ವಾರದ ಅಂಕಣಬರಹಕ್ಕೆ ಓದುಗಮಿತ್ರರೊಬ್ಬರು ಮನದಾಳದಿಂದ ಪ್ರಾಮಾಣಿಕ ಪ್ರತಿಕ್ರಿಯೆ ಬರೆದುಕಳಿಸಿದರು. ಇಂಗ್ಲಿಷ್‌ನಲ್ಲಿ ಒಂದೇ ಶಬ್ದದ ಪ್ರತಿಕ್ರಿಯೆ ಅದು, ‘ಬುಲ್‌ಶಿಟ್!’ ಎಂದು.

ನಾನು ಸ್ವಲ್ಪವೂ ಬೇಸರ ಮಾಡಿಕೊಳ್ಳಲಿಲ್ಲ. ಯಾಕಾದರೂ ಬೇಸರವಾಗಬೇಕು? ನೆಕ್ಸ್ಟ್ ವಾರದ ಅಂಕಣದಲ್ಲಿ ಈ ಕಾಲ್ಪನಿಕ ಕಥೆಯನ್ನು ನಸುನಗುತ್ತಲೇ
ಬರೆದೆ. ಓದುಗಮಿತ್ರರು ಗಹಗಹಿಸಿ ನಗುವ ಇಮೋಜಿ ಕಳುಹಿಸಿದರು. ಬುಲ್‌ಶಿಟ್ಟನ್ನು ಬುಲ್‌ಶಿಟ್ಟಿಂದಲೇ ಗೆಲ್ಲಬಹುದು ಎಂದುಕೊಂಡೆ. ಹಾಗಾಗಿ, ಇನ್ನುಮುಂದೆ ನಿಮಗೆ ಯಾರಾದರೂ ಬುಲ್‌ಶಿಟ್ ಎಂದರೆ ಟೇಕ್ ಇಟ್ ಈಸಿ!

Leave a Reply

Your email address will not be published. Required fields are marked *