Saturday, 10th May 2025

Shashi Tharoor Column: ವಾಕ್‌ ಸ್ವಾತಂತ್ರ್ಯದ ಕಟ್ಟಾ ಪ್ರತಿಪಾದಕ ಎಂ.ಟಿ.ವಾಸುದೇವನ್‌ ನಾಯರ್‌

ಸಂಸ್ಮರಣೆ

ಶಶಿ ತರೂರ್

ಮಲಯಾಳಂ ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ‘ಶಿಖರಪ್ರಾಯ ಪ್ರತಿಭೆ’ ಎನಿಸಿಕೊಂಡವರು, ಕಳೆದ
ಡಿಸೆಂಬರ್ 25ರಂದು ನಮ್ಮನ್ನಗಲಿದ ಎಂ.ಟಿ.ವಾಸುದೇವನ್ ನಾಯರ್. ನಾನು ಮತ್ತು ನನ್ನಂಥ ಇನ್ನೂ ಅಸಂಖ್ಯಾತ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರೆಯುವುದು ‘ಎಂ.ಟಿ.ಚೆಟ್ಟನ್’ ಅಂತಲೇ! ‘ಚೆಟ್ಟನ್’ ಅಂದರೆ ‘ಹಿರಿಯ ಸೋದರ’ ಎಂದರ್ಥ. ಸದ್ಯಕ್ಕೆ ಅವರನ್ನು ‘ಷಾರ್ಟ್ ಆಂಡ್ ಸ್ವೀಟ್’ ಆಗಿ ‘ಎಂಟಿವಿ’ ಎಂದೇ ಕರೆಯೋಣ!

ಸಾಹಿತ್ಯ ಮತ್ತು ಸಿನಿಮಾ ಈ ಎರಡೂ ಕ್ಷೇತ್ರಗಳಿಗೆ ‘ಎಂಟಿವಿ’ ನೀಡಿರುವ ಕೊಡುಗೆಗಳು ತಮ್ಮದೇ ಆದ ಛಾಪು ಮೂಡಿಸಿರುವುದರ ಜತೆಗೆ, ಕೇರಳ ಮಾತ್ರವಲ್ಲದೆ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿನ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ವ್ಯಕ್ತಿಗಳಲ್ಲಿ ಅವರನ್ನು ಒಬ್ಬರನ್ನಾಗಿಸಿವೆ ಎನ್ನಲಡ್ಡಿಯಿಲ್ಲ. ಜನರ ಕಡುಸಂಕಷ್ಟಗಳು ಮತ್ತು ಅವುಗಳ ಕುರಿತಾದ ಒಳನೋಟಗಳನ್ನು ಹೊಂದಿರುವ ಕಥಾನಕಗಳ ಲೇಖಕರಾಗಿ ಅವರು 9 ಕಾದಂಬರಿಗಳನ್ನೂ, ಸಣ್ಣಕಥೆಗಳ 19 ಸಂಕಲನಗಳನ್ನೂ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದು, ಈ ಪೈಕಿ ಪ್ರತಿಯೊಂದು ಕೃತಿಯೂ ಕೇರಳ
ದಲ್ಲಿನ ಸಮಾಜೋ-ರಾಜಕೀಯ ಬದಲಾವಣೆ ಗಳನ್ನು ಹಾಗೂ ಸಾಂಸ್ಕೃತಿಕ ಪುನರುತ್ಥಾನವನ್ನು ಪ್ರತಿಬಿಂಬಿಸುತ್ತವೆ ಎಂದರೆ ತಪ್ಪಾಗಲಾರದು. ‌

‘ನಾಲುಕೆಟ್ಟು’ (1958) ಎಂಬುದು ಅವರ ಮೊದಲ ಪ್ರಮುಖ ಕಾದಂಬರಿ (‘ನಾಲುಕೆಟ್ಟು’ ಎಂದರೆ ಒಳ ಅಂಗಳ ವನ್ನು ಹೊಂದಿರುವ ಮನೆ ಎಂದರ್ಥ). ನಶಿಸುತ್ತಿರುವ ಊಳಿಗಮಾನ್ಯ ನಾಯರ್ ಮನೆತನ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿ ಕೊಡುವ ಈ ಕೃತಿಯು ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
‘ಎಂಟಿವಿ’ ಅವರ ಇನ್ನಿತರ ಗಮನಾರ್ಹ ಕೃತಿಗಳಲ್ಲಿ, ‘ಅಸುರವಿಥು’ (1962), ‘ರಂದಮೂಲಂ’ (1984) ಸೇರಿವೆ. ಈ ಪೈಕಿ ‘ದೈತ್ಯಬೀಜ’ ಎಂಬ ಅರ್ಥವನ್ನು ಕೊಡುವ ‘ಅಸುರವಿಥು’ ಕೃತಿಯು ಮಾನವನ ಅವನತಿಯ ಗೊಂದಲವನ್ನು ಸಾರಿದರೆ, ‘ಎರಡನೇ ಆವರ್ತನ’ ಎಂಬ ಅರ್ಥವನ್ನು ಕೊಡುವ ‘ರಂದ ಮೂಲಂ’ ಕೃತಿಯು, ಭೀಮನ ದೃಷ್ಟಿಕೋನ ದಿಂದ ಮಹಾಭಾರತವನ್ನು ಮರುನಿರೂಪಿಸುತ್ತದೆ ಹಾಗೂ ದ್ರೌಪದಿಯೊಂದಿಗಿನ ಆತನ ಎರಡನೇ ಆವರ್ತನದ ಬದುಕನ್ನು ತೆರೆದಿಡುತ್ತದೆ.

ಮಾನವ ಸಂಬಂಧಗಳ ಸಂಕೀರ್ಣತೆಗಳು, ಕ್ಷಯಿಸುತ್ತಿರುವ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗಳು ಮತ್ತು ಕೇರಳದಲ್ಲಿ ಕಾಣಬರುವ ಸಮಾಜೋ-ಆರ್ಥಿಕ ರೂಪಾಂತರಗಳನ್ನು ‘ಎಂಟಿವಿ’ ಅವರ ಕೃತಿಗಳು ಸಾಮಾನ್ಯವಾಗಿ ಒಳಹೊಕ್ಕು ಪರಿಶೋಧಿಸುತ್ತವೆ.

ವಿಶಿಷ್ಟ ಸಾಹಿತ್ಯಿಕ ಗುಣಮಟ್ಟ, ಗಾಢ ಸಹಾನು ಭೂತಿ ಮತ್ತು ಮಾನವ ಸ್ವಭಾವದ ಆಳವಾದ ಗ್ರಹಿಕೆ ಇವನ್ನು ಒಳಗೊಂಡಿರುವುದು ‘ಎಂಟಿವಿ’ ಅವರ ಬರವಣಿಗೆಯ ಶೈಲಿಯ ಅನನ್ಯತೆ ಎನ್ನಬಹುದು. ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿಕೊಂಡಿರುವ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರ (1995) ಸೇರಿದಂತೆ, ಹತ್ತು ಹಲವು ಮಾನ್ಯತೆಗಳಿಗೆ ಪಾತ್ರರಾಗಿರುವುದು ಸಾಹಿತ್ಯ ಸೃಷ್ಟಿಯಲ್ಲಿ ಅವರು ಮುಟ್ಟಿರುವ ಶ್ರೇಷ್ಠತೆಗೆ ಸಾಕ್ಷಿ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಲ್ಲಿಸಿರುವ ಅನುಪಮ ಕೊಡುಗೆ ಗಳಿಂದಾಗಿ 2005ರಲ್ಲಿ ‘ಪದ್ಮಭೂಷಣ’ ಪುರಸ್ಕಾರಕ್ಕೂ
‘ಎಂಟಿವಿ’ ಪಾತ್ರರಾದರು ಎಂಬುದು ಗಮನಾರ್ಹ.

ಇಷ್ಟು ಸಾಲದೆಂಬಂತೆ, ‘ಮಾತೃಭೂಮಿ ಅಳಚ ಪಥಿಪ್ಪು’ ಹೆಸರಿನ ಪ್ರತಿಷ್ಠಿತ ಮಲಯಾಳಂ ವಾರ ಪತ್ರಿಕೆಯ ಸಂಪಾದಕರಾಗಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ ಕೀರ್ತಿಯೂ ‘ಎಂಟಿವಿ’ ಖಾತೆಯಲ್ಲಿ ದಾಖಲಾಗಿದೆ; ಈ ಪತ್ರಿಕೆಗೆ ಅವರು 1957 ರಲ್ಲಿ, ಓರ್ವ ತರುಣ ಉಪಸಂಪಾದಕನಾಗಿ ಮೊದಲಿಗೆ ಸೇರಿಕೊಂಡಿದ್ದು ಎಂಬುದಿಲ್ಲಿ ಉಲ್ಲೇಖನೀಯ.

ಎರಡು ಸುದೀರ್ಘ ಅವಧಿಗಳವರೆಗೆ (1968ರಿಂದ 1981 ಮತ್ತು 1989ರಿಂದ 1999ರವರೆಗೆ) ಸಂಪಾದಕರಾಗಿ ಸೇವೆ ಸಲ್ಲಿಸಿದಾಗಿನ ಅವರ ಸಂಪಾದಕೀಯ ಕೌಶಲಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾದವು ಎನ್ನಬೇಕು.

ಪತ್ರಿಕಾ ಸಂಪಾದನಾ ಕಸುಬಿನಲ್ಲಿ ತಾವು ಅನುಸರಿಸುತ್ತಿದ್ದ ನಿಖರವಾದ ವಿಧಾನಕ್ಕೆ ಹಾಗೂ ಬರಹಗಾರರ
ಪ್ರತಿಭೆಯನ್ನು ಗುರುತಿಸಿ ಅವರಿಂದ ಉತ್ತಮ ಸಾಹಿತ್ಯವು ಹೊರಹೊಮ್ಮುವಂತೆ ಮಾಡಬಲ್ಲ ಸಾಮರ್ಥ್ಯಕ್ಕೆ ‘ಎಂಟಿವಿ’ ಹೆಸರುವಾಸಿಯಾಗಿದ್ದರು. ಸಾಹಿತ್ಯ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವಲ್ಲಿ, ಅನೇಕ ಉದಯೋನ್ಮುಖ ಬರಹಗಾರರಿಗೆ ತಮ್ಮ ವಾರಪತ್ರಿಕೆಯನ್ನು ಒಂದು ಸಮರ್ಥ ವೇದಿಕೆಯಾಗಿಸುವಲ್ಲಿ ಅವರಿಗೆ ತೀವ್ರಾಸಕ್ತಿಯಿತ್ತು.

ಇಂಥ ಅನೇಕ ಉದಯೋನ್ಮುಖರು ತರುವಾಯದಲ್ಲಿ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದರು
ಎಂಬುದು ‘ಎಂಟಿವಿ’ಯವರ ಗುಣಗ್ರಾಹಿತ್ವಕ್ಕೆ ಸಾಕ್ಷಿ. ಅವರು ಹೀಗೆ ಸಾಹಿತ್ಯಿಕ ಕಸುಬುಗಾರಿಕೆಯಲ್ಲಿ
ಪರಿಚಯಿಸಿದ ಅಥವಾ ಗಮನಾರ್ಹವಾಗಿ ರೂಪಿಸಿದ ಪ್ರಸಿದ್ಧ ಲೇಖಕರಲ್ಲಿ, ಒ.ವಿ.ವಿಜಯನ್, ಸೇತು, ಎಂ.ಮುಕುಂದನ್, ಪಾಲ್ ಜಕಾರಿಯಾ ಮತ್ತು ಸಾರಾ ಜೋಸೆ- ಸೇರಿದ್ದಾರೆ.

ಹೀಗೆ ಒಬ್ಬ ಬರಹಗಾರರೂ ಪತ್ರಿಕಾ ಸಂಪಾದಕರೂ ಆಗಿದ್ದ ‘ಎಂಟಿವಿ’, ವಾಕ್ ಸ್ವಾತಂತ್ರ್ಯದ ಕಟ್ಟಾ ಸಮರ್ಥಕ ರಾಗಿದ್ದರು ಹಾಗೂ ಪ್ರಗತಿಶೀಲ ಪರಿಕಲ್ಪನೆಗಳನ್ನು ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಅವರು ತಮ್ಮ ‘ಸಂಪಾದಕ ಸ್ಥಾನ’ವನ್ನು ಅನೇಕ ಸಲ ಬಳಸಿಕೊಂಡಿದ್ದುಂಟು. ಸಂಪಾದಕೀಯ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟ ವನ್ನು ಕಾಯ್ದುಕೊಳ್ಳುವಲ್ಲಿ ಅವರು ತೋರುತ್ತಿದ್ದ ಪಟ್ಟುಹಿಡಿಯುವಿಕೆ, ಸತ್ಯ-ಸಮಗ್ರತೆ-ಋಜುತ್ವವನ್ನು ಕಾಯ್ದು ಕೊಳ್ಳುವಲ್ಲಿ ತೋರುತ್ತಿದ್ದ ಬದ್ಧತೆ ಇವುಗಳು, ಸಾಹಿತ್ಯಿಕ ಸಮುದಾಯದಲ್ಲಿ ‘ಎಂಟಿವಿ’ಯವರಿಗೆ ಅಪಾರ
ಗೌರವವನ್ನು ತಂದುಕೊಟ್ಟಿದ್ದು ಸುಳ್ಳಲ್ಲ.

ಹಾಗೆ ನೋಡಿದರೆ, ‘ಮಾತೃಭೂಮಿ..’ ವಾರಪತ್ರಿಕೆಯ ನಿಯತ ಚಂದಾದಾರರಾಗಿದ್ದ ನನ್ನ ಹೆತ್ತವರು, ಪತ್ರಿಕಾ ಸಂಪಾದನೆಯ ಬಾಬತ್ತಿಗೆ ಸಂಬಂಧಿಸಿ ‘ಎಂಟಿವಿ’ಯವರಲ್ಲಿ ಕೆನೆಗಟ್ಟಿದ್ದ ಶ್ರೇಷ್ಠತೆಯ ದೊಡ್ಡ ಅಭಿಮಾನಿ ಗಳಾಗಿದ್ದರು. ಸದರಿ ವಾರಪತ್ರಿಕೆಯಲ್ಲಿನ ಅವರ ಕಾರ್ಯಾವಧಿಯನ್ನು, ಉತ್ತಮ ಗುಣಮಟ್ಟದ ವಿಷಯಗಳ ಪ್ರಸ್ತುತಿಗಾಗಿ ಮತ್ತು ಕೇರಳದ ಸಾಹಿತ್ಯಿಕ ವಾತಾವರಣವನ್ನು ರೂಪಿಸುವಲ್ಲಿ ಆ ವಾರಪತ್ರಿಕೆಯು ನಿರ್ವಹಿಸಿದ
ಪಾತ್ರಕ್ಕಾಗಿ ಅನೇಕ ಸಲ ನೆನಪಿಸಿಕೊಳ್ಳಲಾಗುತ್ತದೆ.

‘ಮಾತೃಭೂಮಿ…’ ವಾರಪತ್ರಿಕೆಯನ್ನು ಮಲಯಾಳಂ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಏರಿಸುವಲ್ಲಿ ಓರ್ವ ಸಂಪಾದಕರಾಗಿ ‘ಎಂಟಿವಿ’ ನೀಡಿದ ಕೊಡುಗೆಗಳು ಮಹತ್ತರವಾದಂಥವು; ಆದರೆ ಅವರು ಪತ್ರಿಕೆಯ ಮಡಿಲಿನಿಂದ ನಿರ್ಗಮಿಸಿದ್ದೇ ನಿರ್ಗಮಿಸಿದ್ದು, ಆ ಸ್ಥಾನವನ್ನು ಉಳಿಸಿಕೊಳ್ಳಲು ‘ಮಾತೃ ಭೂಮಿ…’ಗೆ ಸಾಧ್ಯವಾಗಲೇ ಇಲ್ಲ.

ಈ ಎಲ್ಲವೂ, ಯಾವುದೇ ಒಬ್ಬ ಲೇಖಕನ ಪಾಲಿಗೆ ಗಣನೀಯ ಸಾಧನೆಗಳ ಒಂದು ಬುಟ್ಟಿಯೇ ಆಗಿ ಪರಿಣಮಿಸುವ ಸಾಧ್ಯತೆಯಿದೆ. ಆದರೆ ‘ಎಂಟಿವಿ’ ತಮ್ಮ ಲೇಖನಿಯನ್ನು ಇಷ್ಟಕ್ಕೇ ಸೀಮಿತಗೊಳಿಸಲಿಲ್ಲ, ೫೦ಕ್ಕೂ ಹೆಚ್ಚು ಚಲನ ಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದರು ಮತ್ತು ಸಾಲದೆಂಬಂತೆ ೭ ಚಿತ್ರಗಳನ್ನು ನಿರ್ದೇಶಿಸಿದರು. ಇದು ಮಲಯಾಳಂ ಚಿತ್ರರಂಗಕ್ಕೆ ಅವರು ನೀಡಿದ ಗಮನಾರ್ಹ ಕೊಡುಗೆ ಎಂದೇ ಪರಿಗಣಿಸಲ್ಪಟ್ಟಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಲ್ಲಿ ಮಲಯಾಳಂ ಚಿತ್ರಗಳಿಗೆ ‘ಅತ್ಯುತ್ತಮ ಚಿತ್ರ ಕಥೆ’ ಪುರಸ್ಕಾರವು ನಾಲ್ಕು ಬಾರಿ ದಕ್ಕುವುದಕ್ಕೂ ಅವರ ಪ್ರತಿಭೆ ಕಾರಣವಾಗಿದೆ.

‘ಎಂಟಿವಿ’ ನಿರ್ದೇಶಿಸಿದ ಚಲನಚಿತ್ರಗಳ ಪೈಕಿ ‘ನಿರ್ಮಾಲ್ಯಂ’ (1973) ಅಪ್ರತಿಮ ಪ್ರಸ್ತುತಿಯನ್ನು ಒಳಗೊಂಡಿದ್ದು ಮನ ವನ್ನು ಕಲಕುವಂಥದ್ದಾಗಿದೆ. ಇದು ‘ಅತ್ಯುತ್ತಮ ಕಥಾಚಿತ್ರ’ಕ್ಕಾಗಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗಾಢವಾದ ನಿರೂಪಣಾ ಶೈಲಿ, ಪರಿಣಾಮಕಾರಿಯಾಗಿರುವ ಪಾತ್ರ-ಪೋಷಣೆ ಮತ್ತು ಸಾಂಸ್ಕೃತಿಕ ವಸ್ತುನಿಷ್ಠತೆಗೆ ಅವರ ಚಿತ್ರಗಳು ಹೆಸರುವಾಸಿಯಾಗಿವೆ.

ಚಲನಚಿತ್ರ ಕ್ಷೇತ್ರದಲ್ಲಿ ‘ಎಂಟಿವಿ’ ಮಾಡಿದ ಕೃಷಿಯು ಕೇರಳದಲ್ಲಿನ ಸಮಾಜೋ-ರಾಜಕೀಯ ಬದಲಾವಣೆಗಳಿಗೆ ಕನ್ನಡಿ ಹಿಡಿದಿದ್ದರ ಜತೆಗೆ, ಶ್ರೀಸಾಮಾನ್ಯರು ದೈನಂದಿನ ಬದುಕಲ್ಲಿ ಮಾಡಬೇಕಾಗಿ ಬರುವ ಹೋರಾಟಗಳನ್ನೂ, ಅವರ ಬವಣೆಗಳನ್ನೂ ಸಮರ್ಥವಾಗಿ ಬಿಂಬಿಸಿತೆನ್ನಬೇಕು. ತರುವಾಯದಲ್ಲಿ ಉದ್ಯಮಕ್ಕೆ ಕಾಲಿಟ್ಟ ಅನೇಕ ಚಿತ್ರ
ನಿರ್ಮಾತೃಗಳ ನಿರೂಪಣಾ ಶೈಲಿಯನ್ನು ರೂಪಿಸುವಲ್ಲಿ ‘ಎಂಟಿವಿ’ ಅವರ ಚಲನಚಿತ್ರಗಳು ಹಾಗೂ ಚಿತ್ರಕಥೆಗಳ ಕುಸುರಿಗಾರಿಕೆಗಳು ಪ್ರಧಾನ ಪಾತ್ರ ವಹಿಸಿದ್ದರ ಜತೆಗೆ, ಮಲಯಾಳಂ ಸಿನಿಮಾಗಳಿಗೆ ಅಗತ್ಯವಾಗಿದ್ದ ವಿಷಯಾ ಧಾರಿತ ಗಾಢತೆಯ ಗಮನಾರ್ಹ ಮಾನದಂಡವನ್ನು ಸಜ್ಜುಗೊಳಿಸಿದವು ಎಂಬುದು ನಿರ್ವಿವಾದದ ಸಂಗತಿ.

ಬರಹಗಾರಿಕೆ ಮತ್ತು ಚಲನಚಿತ್ರ ಕೃಷಿ ಈ ಎರಡೂ ವಲಯದಲ್ಲೂ ತಮ್ಮ ಕಟ್ಟಾ ಜಾತ್ಯತೀತ ನಿಲುವು ಹಾಗೂ ಕೋಮುವಾದಿ-ವಿರೋಽ ದೃಷ್ಟಿಕೋನಗಳಿಗೆ ಹೆಸರಾಗಿದ್ದ ‘ಎಂಟಿವಿ’, ತಮ್ಮ ಕಾಲಘಟ್ಟದಲ್ಲಿ ಕಾಣ ಬರುತ್ತಿದ್ದ ಸಮಾಜೋ-ಸಾಂಸ್ಕೃತಿಕ ಸಮಸ್ಯೆಗಳನ್ನು ಅಥವಾ ಚರ್ಚಾವಿಷಯಗಳನ್ನು ತೀವ್ರವಾಗಿ ಟೀಕಿಸುವುದಕ್ಕೂ ಹಿಂದು-ಮುಂದು ನೋಡುತ್ತಿರಲಿಲ್ಲ.

ಸಮಾಜದ ಪ್ರಗತಿಯ ನಿಟ್ಟಿನಲ್ಲಿ ಪ್ರೀತಿ, ಏಕತೆ ಮತ್ತು ಆಧುನಿಕ ದೃಷ್ಟಿಕೋನಗಳಿಗೆ ಇರುವ ಮಹತ್ವವನ್ನು ಅವರ ಕೃತಿಗಳು ಒತ್ತಿಹೇಳಿದವು ಎನ್ನಬೇಕು. ಅವರು, ಮಾನವ ಸಂಬಂಧಗಳ ಸಂರ್ಕೀಣತೆಗಳನ್ನು ಎತ್ತಿ ತೋರಿಸಿದ್ದುಂಟು ಹಾಗೂ ಕೆಲವೊಮ್ಮೆ ಕೇರಳದ ಸಮಾಜೋ-ರಾಜಕೀಯ ವಾಸ್ತವತೆಗಳನ್ನು ಕಟುವಾಗಿ ಬಿಂಬಿಸಿದ್ದುಂಟು. ಈ ಕಾರಣದಿಂದಾಗಿ ಕೆಲ ವಿಮರ್ಶಕರು ‘ಎಂಟಿವಿ’ ಅವರನ್ನು ‘ಹಿಂದೂ- ವಿರೋಧಿ’ ಅಥವಾ ‘ಮುಸ್ಲಿಂ-ವಿರೋಧಿ’ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದುಂಟು. ಆದರೆ ಇಂಥ ಟೀಕೆಗಳು ಜಾಸ್ತಿ ಕಾಲ ನಿಲ್ಲಲಿಲ್ಲ.

‘ಎಂಟಿವಿ’ ಅವರು ಧಾರ್ಮಿಕ ಆಚರಣೆಗಳ ಒಂದಷ್ಟು ಮಗ್ಗುಲುಗಳನ್ನು ಹಾಗೂ ಅವುಗಳೊಂದಿಗೆ ತಳಕು ಹಾಕಿ ಕೊಂಡಿರುವ ಶೋಷಣೆಯನ್ನು ಟೀಕಿಸಿದ್ದುಂಟು; ಆದರೆ, ಯಾವುದೇ ನಿರ್ದಿಷ್ಟ ಧರ್ಮದೆಡೆಗಿನ ಹಗೆತನಕ್ಕಿಂತ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಗೆ ಸಂಬಂಧಿಸಿದ ವ್ಯಾಪಕ ಸಮಸ್ಯೆಗಳನ್ನು ಬಗೆಹರಿಸುವುದರ ಕಡೆಗೇ ಅವರ ಕಾಳಜಿ- ಕಳಕಳಿ ಇರುತ್ತಿತ್ತು ಎಂಬುದನ್ನು ಮರೆಯಲಾಗದು.

ಆದಾಗ್ಯೂ, ಈ ಎಲ್ಲ ಕಾರಣಗಳಿಂದಾಗಿ ಅವರು ಒಂದಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂತು; ತಮ್ಮ ಚಿತ್ರಗಳಲ್ಲಿ ಮಹಿಳೆಯರನ್ನು ಬಿಂಬಿಸಿದ ಪರಿಗಾಗಿ ಟೀಕೆಗಳಿಗೆ ಕಿವಿಯೊಡ್ಡಬೇಕಾಯಿತು. ಆ ಪೈಕಿ ಕೆಲವರಂತೂ, ‘ಎಂಟಿವಿ’ಯವರನ್ನು ‘ಸ್ತ್ರೀ ದ್ವೇಷಿ’ ಎಂದೂ ಕರೆದದ್ದುಂಟು. ‘ಎಂಟಿವಿ’ ಪ್ರಸ್ತುತ ಪಡಿಸುವ ಮಹಿಳಾ ಪಾತ್ರಗಳು, ಸಾಮಾನ್ಯವಾಗಿ ಸಾಂಪ್ರದಾಯಿಕ ಧೋರಣೆಗಳಿಗೆ ಅನುಗುಣವಾಗಿರುತ್ತವೆ ಮತ್ತು ಅವುಗಳಲ್ಲಿ ‘ಕಾರ್ಯಭಾರ’ದ ಕೊರತೆ ಎದ್ದು ಕಾಣುತ್ತದೆ ಎಂದೂ ಕೆಲವರು ವಾದಿಸಿದ್ದುಂಟು.

ಉದಾಹರಣೆಗೆ, ‘ನಾಲುಕೆಟ್ಟು’ ಚಿತ್ರದಲ್ಲಿ ಕಾಣಬರುವ ಸೀಪಾತ್ರವು, ಅತಿರೇಕದ ವಿಧೇಯತೆಯನ್ನು ಹೊಂದಿರು ವಂತೆ ಮತ್ತು ಪುರುಷ ಪಾತ್ರಗಳ ಮೇಲೆ ಅವು ಅವಲಂಬಿತವಾಗಿರುವಂತೆ ಚಿತ್ರಿಸಲ್ಪ ಟ್ಟಿವೆ ಎಂಬುದು ಕೆಲವರ ಟೀಕೆಯಾಗಿತ್ತು. ಇದೇ ರೀತಿಯಲ್ಲಿ, ‘ರಾಂದಮೂಲಂ’ ಚಿತ್ರದಲ್ಲೂ, ದ್ರೌಪದಿಯ ಪಾತ್ರವನ್ನು ಒಂದೇ ಆಯಾಮ ದಲ್ಲಿ ಹಾಗೂ ಪಿತೃಪ್ರಭುತ್ವದ ರೂಢಮಾದರಿಗಳನ್ನು ಬಲಪಡಿಸುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ
ಟೀಕೆಯೂ ಕೇಳಿಬಂದಿದ್ದುಂಟು.

ಈ ನಿಟ್ಟಿನಲ್ಲಿ ಸಮರ್ಥನೆ ನೀಡುವುದಾದರೆ, ‘ಎಂಟಿವಿ’ ಅವರ ಬರಹಗಳು ಅವರ ಕಾಲಘಟ್ಟದ ಸಮಾಜೋ-ಸಾಂಸ್ಕೃತಿಕ ಪರಿಸರವನ್ನು ಬಿಂಬಿಸುತ್ತವೆ ಮತ್ತು ಅವರು ಸೃಷ್ಟಿಸುವ ಪಾತ್ರಗಳು, ಓರ್ವ ಪುರುಷ (ಬರಹಗಾರ)ನಾಗಿ ಅವರು ಗಮನಿಸಿದ ಸಮಾಜದ ವಾಸ್ತವತೆಗಳನ್ನು ಹೆಚ್ಚಾಗಿ ಬಿಂಬಿಸುತ್ತವೆ ಎನ್ನಬಹುದು. ಅವರ ಕೆಲವೊಂದು ಪಾತ್ರ- ಪ್ರಸ್ತುತಿಗಳು ಸಮಕಾಲೀನ ಮಾನದಂಡಗಳಿಲ್ಲದೆಯೇ ಹಳೆಯದರಂತೆ ತೋರುತ್ತವೆಯಾದರೂ, ಅವು
ಕೇರಳದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳ ಕುರಿತಾದ ಮೌಲ್ಯಯುತ ಒಳನೋಟಗಳನ್ನೂ
ಒದಗಿಸುತ್ತವೆ ಎಂಬುದನ್ನು ತಳ್ಳಿಹಾಕಲಾಗದು.

ಅಂತಿಮವಾಗಿ ಹೇಳುವುದಾದರೆ, ಎಂ.ಟಿ.ವಾಸುದೇವನ್ ನಾಯರ್ ಅವರ ಒಟ್ಟಾರೆ ಸಾಹಿತ್ಯ- ಸಿನಿಮಾ ಪರಂಪರೆ ಯು, ಗಾಢ ಪ್ರಭಾವ ಮತ್ತು ಸ್ಪೂರ್ತಿಯನ್ನು ನೀಡುವಲ್ಲಿ ಎದ್ದು ಕಾಣುವಂಥದ್ದು, ಮಹತ್ವದ್ದು ಎಂದರೆ ಅತಿ ಶಯೋಕ್ತಿಯಲ್ಲ. ತಮ್ಮ ಸಾಹಿತ್ಯಿಕ ಉತ್ಕೃಷ್ಟತೆ ಮತ್ತು ‘ಸಿನಿಮೀಯ- ಪ್ರತಿಭೆ’ಯಿಂದಾಗಿ ಅವರ ಕೃತಿಗಳು ಈಗಲೂ ಜನರ ಮೆಚ್ಚುಗೆಗೆ, ಸಂಭ್ರಮಕ್ಕೆ ಕಾರಣವಾಗಿವೆ ಎಂಬುದು ತೆಗೆದುಹಾಕಲಾಗದ ಮಾತು. ಅವು ಹಲವು ತಲೆ
ಮಾರುಗಳ ಓದುಗರು ಮತ್ತು ಚಿತ್ರನಿರ್ಮಾತೃಗಳನ್ನು ಪ್ರಭಾವಿಸಿವೆ, ಮಲಯಾಳಂ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಮೇಲಿನ ಅವರ ಪ್ರಭಾವವು ನಿರಾಕರಿಸಲಾಗದಷ್ಟರ ಮಟ್ಟಿಗೆ ಗಾಢವಾಗಿದೆ ಎನ್ನಲಡ್ಡಿಯಿಲ್ಲ.

ಹೀಗಾಗಿ, ಭವಿಷ್ಯದ ಪೀಳಿಗೆಯ ಬರಹಗಾರರು ಮತ್ತು ಚಲನಚಿತ್ರ ನಿರ್ಮಾತೃಗಳ ಪಾಲಿಗೆ ಒಂದು ‘ತೋರುದೀಪ’ ವಾಗೇ ಉಳಿದಿರುವ ‘ಎಂಟಿವಿ’ಯವರು, ಸೃಜನಶೀಲತೆ, ವಸ್ತುನಿಷ್ಠತೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಚೈತನ್ಯ ಸ್ವರೂಪಿಯೇ ಆಗಿದ್ದಾರೆ. ತನ್ನ ಬರಹಗಾರರು ಮತ್ತು ಬುದ್ಧಿಜೀವಿಗಳನ್ನು ಇನ್ನಿಲ್ಲದಂತೆ ಗಾಢವಾಗಿ ಗೌರವಿಸುವ ಸಮಾಜವೊಂದರಲ್ಲಿ, ಯಾವುದೇ ಅಸಂಬದ್ಧತೆಗೆ ಎಡೆಯಿಲ್ಲದ ಅವರ ಸ್ಪಷ್ಟತೆ ಮತ್ತು ನಿಷ್ಠುರ ದೃಷ್ಟಿ
ಕೋನಗಳನ್ನು ಮುಂಬರುವ ದಿನಗಳಲ್ಲಿ ಕಾಣುವುದು ದುಸ್ತರವೇನೋ?!

(ಲೇಖಕರು ಸಂಸದರು)

ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?

Leave a Reply

Your email address will not be published. Required fields are marked *