ಪ್ರತಿಸ್ಪಂದನ
ಶಂಕರನಾರಾಯಣ ಭಟ್
ವಿಶ್ವವಾಣಿಯ ನ.29ರ ಸಂಚಿಕೆಯಲ್ಲಿ ಪ್ರಕಟವಾದ ‘ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ’ ಶೀರ್ಷಿಕೆಯ ಸಂಪಾದಕೀಯಕ್ಕೆ ಈ ಪ್ರತಿಕ್ರಿಯೆ. ಒಮ್ಮೆ ಗಳಿಸಿದ್ದು ಹಾಗೇ ಉಳಿದುಕೊಳ್ಳುತ್ತದೆ ಎನ್ನಲಾಗದು. ಗಳಿಸಿದಾಗ ಇದ್ದ ಎಚ್ಚರ ತರುವಾಯದಲ್ಲೂ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ರಾಜ್ಯ ಬಿಜೆಪಿ ಘಟಕವೇ ಸಾಕ್ಷಿ. ಆರ್‌ಎಸ್‌ಎಸ್ ನಿಂದ ಸ್ಪೂರ್ತಿ ಪಡೆದ ಪಕ್ಷಕ್ಕೆ ‘ಶಿಸ್ತು’ ಬಹಳ ಮುಖ್ಯ ಎಂಬ ಅರಿವು ಹಿಂದಿನ ಬಿಜೆಪಿ ನಾಯಕರಿಗೆ ಇದ್ದುದರಿಂದ, ಅವರು ಮತ್ತು ಕಾರ್ಯಕರ್ತರು ಶಿಸ್ತನ್ನೇ ಆಧಾರವಾಗಿಟ್ಟುಕೊಂಡು ವ್ಯವಹರಿಸುತ್ತಿದ್ದರು.
ಅಲ್ಲಿ ಒಂದು ರೀತಿಯ ತಿಳಿವಳಿಕೆ, ಹೊಂದಿಕೊಳ್ಳುವಿಕೆ, ಅವಶ್ಯಬಿದ್ದರೆ ಸ್ವಲ್ಪ ಬಿಟ್ಟು ಇನ್ನು ಸ್ವಲ್ಪ ಪಡೆಯುವುದು ಇತ್ಯಾದಿ ನಡೆಗಳು ಕಾಣಸಿಗು ತ್ತಿದ್ದವು. ಹಿರಿಯರ ಮಾತನ್ನು ಕಿರಿಯರು ಗೌರವಿಸುತ್ತಿದ್ದರು. ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ ಜೋಷಿ, ಸುಷ್ಮಾ ಸ್ವರಾಜ್ ಮುಂತಾದವರಲ್ಲಿ ಇಂಥ ವರ್ತನೆಯನ್ನು ಕಾಣಬಹುದಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾದಾಗ, ಪಕ್ಷವನ್ನು ಕಟ್ಟಿ ಬೆಳೆಸಿದವರನ್ನೇ ಮೂಲೆಗುಂಪು ಮಾಡಿಬಿಟ್ಟರು ಎಂಬ ಮಾತೂ ಕೇಳಿಬರುತ್ತಿತ್ತು; ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಹಿರಿಯ ನಾಯಕರು ಶಿಸ್ತಿಗೆ ಬದ್ಧರಾಗಿದ್ದರು ಎಂಬುದು ತಿಳಿದೇ ಇದೆ.
ಅಷ್ಟೇ ಅಲ್ಲ, ಅಂದು ಅಽಕಾರ/ಹುದ್ದೆಗಾಗಿ ಪಕ್ಷವಿರಲಿಲ್ಲ, ದೇಶದ ಒಳಿತಿಗಾಗಿ ಇತ್ತು ಎಂಬುದೂ ತಿಳಿದಿರುವ ವಿಷಯವೇ. ಆದರೆ ಇಂದು? ಎಲ್ಲೋ ಇದ್ದವ, ಯಾರದೋ ಮಗ ಅಂತ ಒಮ್ಮೆಲೇ ಪಕ್ಷದ ಮುಂದಾಳತ್ವ ವಹಿಸಲು ಆಯ್ಕೆ ಆಗುತ್ತಾರೆಂದರೆ, ಪಕ್ಷಕ್ಕಾಗಿ ಜೀವವನ್ನೇ ಸವೆಸಿದವರಿಗೆ ಸಹನೆ ಎಲ್ಲಿಂದ ಬರಬೇಕು? ಶಿಸ್ತನ್ನು ಕಾಪಿಟ್ಟುಕೊಳ್ಳಬೇಕೆಂದು ಹೊಂದಿದ್ದ ತಾಳ್ಮೆಗೂ ಒಂದು ಮಿತಿ ಇರುತ್ತದೆಯಲ್ಲವೇ? ಹೀಗಾಗಿ ಹಿಂದೆ ಪಕ್ಷಕ್ಕಿದ್ದ Party with a difference ಎಂಬ ಹಣೆಪಟ್ಟಿಯು ಇಂದು Party with full of differences ಎಂದು ಬದಲಾಗಿಬಿಟ್ಟಿದೆ! ರಾಜ್ಯ ಬಿಜೆಪಿಯಲ್ಲಂತೂ ಯಾವುದೂ ಸರಿಯಿಲ್ಲ.
ಆ ಬಣ, ಈ ಬಣ, ಇವುಗಳ ಮಧ್ಯೆ ಬಿಜೆಪಿ ‘ಭಣಭಣ’! ಪಕ್ಷದ ರಾಜ್ಯಾಧ್ಯಕ್ಷರ ಮೇಲೆಯೇ ನಂಬಿಕೆ ಇಲ್ಲವೆಂತಾದರೆ ಇನ್ನಾರ ಮೇಲೆ ನಂಬಿಕೆ ಬರಬೇಕು? ಮಾತ್ರವಲ್ಲ, ಪಕ್ಷದವರನ್ನೇ ಮುಜುಗರಕ್ಕೆ ಒಡ್ಡುವ ಪರಿಸ್ಥಿತಿ ಇಂದಿನದು. ಹೋರಾಟ, ಧರಣಿ, ಅಭಿಯಾನ, ಆಂದೋಲನ ಎಂಬು
ದೆಲ್ಲಾ ಬರಿ ವ್ಯರ್ಥದ ಮಾತು ಎಂಬುದೂ ಪ್ರತಿ ಬಾರಿ ಸಾಬೀತಾಗುತ್ತಲೇ ಇದೆ. ಪಕ್ಷದ ಚಿಹ್ನೆಯಿಂದ ಗೆದ್ದ ಶಾಸಕರು ಇನ್ನಾವುದೋ
ಪಕ್ಷದ ಜತೆ ‘ಹೊಂದಾಣಿಕೆ’ ಮಾಡಿಕೊಂಡಿರುವುದು ತಿಳಿದೂ ಏನೂ ಮಾಡಲಾಗದ ಅಸಹಾಯಕತೆಯಿದೆ.
ಕೆಲವರಂತೂ, ಪಕ್ಷದವರನ್ನೇ ಟೀಕಿಸುವುದು, ಮುಜುಗರ ತಂದೊಡ್ಡುವುದು, ವರಿಷ್ಠರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಕಾಣಬರುತ್ತಿದೆ. ಇದು ಶಿಸ್ತಿನ ಪಕ್ಷದವರ ನಡವಳಿಕೆಯೇ? ಹಾಗೆ ನೋಡಿದರೆ, ರಾಜ್ಯ ಬಿಜೆಪಿಗರ ಮಾತಿನಲ್ಲಿಂದು ಅಸ್ಥಿರತೆ ತಾಂಡವವಾಡುತ್ತಿದೆ. ಒಂದೊಂದು ದಿನ ಒಂದೊಂದು ಹೇಳಿಕೆ, ಬಿಜೆಪಿಯೊಳಗೇ ಒಂದು ‘ಮರಿ ಬಿಜೆಪಿ’, ಪಕ್ಷದೊಳಗೇ ಇದ್ದರೂ ಪಕ್ಷದ ವಿರುದ್ಧವೇ ಕತ್ತಿ ಮಸೆಯುವ,
ಅತಿರೇಕದ ಹೇಳಿಕೆ ನೀಡುವ ವರ್ತನೆ. ಒಂದೊಮ್ಮೆ ಬಿಜೆಪಿಯು ಹಿಂದಿನಂತೆ ‘ಶಿಸ್ತಿನ ಪಕ್ಷ’ವಾಗೇ ಉಳಿದುಕೊಂಡಿದ್ದಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಷ್ಟೊಂದು ಹೀನಾಯವಾಗಿ ಸೋಲನುಭವಿಸುವ ಪ್ರಮೇಯವೇ ಬರುತ್ತಿರಲಿಲ್ಲ.
ಅಷ್ಟೇಕೆ, ಮೊನ್ನಿನ ಉಪಚುನಾವಣೆಯಲ್ಲೂ ಪಕ್ಷಕ್ಕೆ ದೈನೇಸಿ ಸ್ಥಿತಿ ಒದಗುತ್ತಿರಲಿಲ್ಲ. ಹಾಗೆ ನೋಡಿದರೆ, ದೆಹಲಿಯಲ್ಲಿ ಕುಳಿತಿರುವ ಬಿಜೆಪಿಯ ವರಿಷ್ಠರೂ ಈ ಸ್ಥಿತಿಗೆ ಒಂದು ಮಟ್ಟಿಗೆ ಹೊಣೆಯಾಗುತ್ತಾರೆ. ದಕ್ಷಿಣ ಭಾರತದಲ್ಲಿ ‘ಕಮಲ’ ಅರಳಲು ಮೊಟ್ಟಮೊದಲು ಅನುವುಮಾಡಿಕೊಟ್ಟ ರಾಜ್ಯವೆಂಬ ಹೆಗ್ಗಳಿಕೆಯಿರುವ ಕರ್ನಾಟಕದಲ್ಲಿನ ಪಕ್ಷದ ಘಟಕದ ಮೇಲೆ ಅವರಿಗೆ ಒಂದಿಷ್ಟೂ ಹಿಡಿತವಿಲ್ಲದಂತೆ ಭಾಸವಾಗುತ್ತದೆ.
ಅದೆಷ್ಟೋ ಅರ್ಹ, ಹಿರಿಯ ನಾಯಕರಿದ್ದರೂ, ಯಾರನ್ನೋ ಸಂತೈಸಲು/ಓಲೈಸಲು ಅವರ ಮಕ್ಕಳಿಗೇ ಆಯಕಟ್ಟಿನ ಸ್ಥಾನಗಳನ್ನು
ಕೊಟ್ಟಿರುವುದು ಸದ್ಯದ ಅಪಸವ್ಯಕ್ಕೆ ಒಂದು ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಆದ್ದರಿಂದ, ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಶಿಸ್ತು ಬೇರೂರಬೇಕೆಂದರೆ ವರಿಷ್ಠರು ಒಂದಷ್ಟು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲೇಬೇಕು. ಮುಂಬರುವ ದಿನಗಳಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಸೂಕ್ತ ಬದಲಾವಣೆ ಮತ್ತು ಅಗತ್ಯವಿದ್ದಲ್ಲಿ ಶಿಸ್ತುಕ್ರಮ ಜರುಗಲೇಬೇಕು. ಇಲ್ಲವೆಂದರೆ, ಈಗಿನ ಅವ್ಯವಸ್ಥೆಯೇ ಮತ್ತಷ್ಟು ದಿನ ಮುಂದುವರಿಯುವುದು ಕಟ್ಟಿಟ್ಟಬುತ್ತಿ!
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Kannadacolumn