Monday, 12th May 2025

ರಿಷಭನಲ್ಲಿ ಶಿವನ ಅದ್ಭುತ ಪರಕಾಯ ಪ್ರವೇಶ !

ಯಶೋ ಬೆಳಗು

yashomathy@gmail.com

ಪ್ರಶಾಂತನಲ್ಲಿ ರಿಷಭನಾಗಿ, ರಿಷಭನಲ್ಲಿ ಶಿವನಾಗಿ, ಶಿವನಲ್ಲಿ ಪಂಜುರ್ಲಿಯಾಗಿ ಪ್ರೇಕ್ಷಕರನ್ನು ಸಮ್ಮೋಹನಕ್ಕೊಳ ಪಡಿಸಿಬಿಡುವ ರಿಷಭ್ ಶೆಟ್ಟಿಯ ನಟನೆ ಅದ್ಭುತ. ಅದಕ್ಕೆ ಪುಷ್ಟಿ ಕೊಡುವಂತಿರುವ ಹಿನ್ನೆಲೆ ಸಂಗೀತ, ಚಿತ್ರಮಂದಿರ ದಿಂದ ಹೊರಬಂದರೂ ಅದರದೇ ಗುಂಗಿನಲ್ಲಿರುವಂತೆ ಕಾಡುತ್ತದೆ. ಮತ್ತೆ ಮತ್ತೆ ಸಿನಿಮಾ ನೋಡುವಂತೆ ಮಾಡುತ್ತದೆ.

ಅದು ಬರುವುದು ವರ್ಷದಲ್ಲಿ ಒಮ್ಮೆ ಮಾತ್ರ. Let’s celebrate! ಅನ್ನುವುದು ಮಕ್ಕಳ, ಹಿತೈಷಿಗಳ ಸಲಹೆ. It’s my day. Let me
celebrate it as I wish. I want to spend my day happily. I want to connect myself with nature ಅನ್ನೋದು ವಾಡಿಕೆ. ಪ್ರತಿ ವರ್ಷವೂ ಒಂದೊಂದು ಹೊಸ ಪರಿಸರದಲ್ಲಿದ್ದು ಅದರ ಅನುಭವ ಪಡೆಯುವುದರಲ್ಲಿ ಖುಷಿ ಇದೆ.

ಅದಕ್ಕಾಗಿ ಇಡೀ ವರ್ಷ ಕಾಯ್ತೀನಿ. ಕೃಷ್ಣದೇವರಾಯನ ಆಸ್ಥಾನವಿದ್ದ ಹಂಪೆಗೆ ಕರೆದು ಕೊಂಡು ಹೋಗುತ್ತೇನೆಂದು ಭರವಸೆ ನೀಡಿ ‘ಬಿಗ್ ಬಾಸ್’ ಮನೆಗೆ ನಡೆದು ಹೋದರು ರವಿ. ಅಲ್ಲಿ ಅವರು ವೇದಿಕೆಯ ಮೇಲೆ ನಿಂತಿದ್ದರೆ ನಾವು ವೀಕ್ಷಕರ ಜಾಗದಲ್ಲಿ
ಕುಳಿತಿದ್ದೆವು. ಮಾತೆಲ್ಲ ಮುಗಿದ ಮೇಲೆ ನಮ್ಮೆಡೆಗೆ ಕೈಬೀಸುತ್ತ ಅವರು ನಡೆದು ಹೋಗುತ್ತಿದ್ದರೆ, ಒಮ್ಮೆ ಎದ್ದುಹೋಗಿ ಅಪ್ಪಿಕೊಳ್ಳ ಬೇಕಿತ್ತು ಅನ್ನುವ ವಿಷಾದ ನನಗೂ, ನನ್ನ ಮಗನಿಗೂ ನಿರಂತರವಾಗಿ ಕಾಡುತ್ತಲೇ ಇರುತ್ತದೆ.

ಆದರೆ ಅದಾದ ಒಂದು ವರ್ಷದ ಅಂತರದಲ್ಲಿ ಅವರು ‘ಮೇಲಿರುವ ಬಿಗ್‌ಬಾಸ್ ಮನೆಗೆ’ ಹೀಗೇ ನಡೆದುಹೋಗುತ್ತಾರೆ ಆಗಲೂ ನಾವು ಹೀಗೇ ಅಸಹಾಯಕರಾಗಿ ನೋಡುತ್ತ ಇಲ್ಲೇ ಉಳಿದುಹೋಗುತ್ತೇವೆ ಅನ್ನುವ ಸೂಚನೆಯಾಗಿತ್ತಾ ಅದು? ಗೊತ್ತಿಲ್ಲ. ಬದುಕೊಂದು ನಿತ್ಯಪಯಣ. ಅದೇ ಭೂಮಿ, ಅದೇ ಬಾನನ್ನು ಅದೇ ರೀತಿಯಲ್ಲಿ ನಿತ್ಯವೂ ಸುತ್ತುತ್ತಿದ್ದರೂ ಈ ಪಯಣ ಅನುದಿನವೂ ನಿತ್ಯನೂತನ!

ಪ್ರಕೃತಿಯ ನಡುವ ಜನ್ಮ ತಳೆದವರು ನಾವು. ಹೀಗಾಗಿ ಪ್ರಕೃತಿಗೆ ಹತ್ತಿರಾಗಿದ್ದಷ್ಟೂ ಆರೋಗ್ಯ ಉತ್ತಮವಾಗಿರುತ್ತದೆ. ‘ಅರಿ’
ಎಂದರೆ ಶತ್ರು ಎಂದರ್ಥ. ‘ಅರಿವು’ ಎಂದರೆ ತಿಳಿವಳಿಕೆ! ಆದರೆ ಅರಿಯ ಜತೆಗೆ ಒಂದಕ್ಷರ ಸೇರಿದ ಕೂಡಲೇ ಅದೆಂಥ ಬದಲಾವಣೆ. ಹಾಗೆಯೇ ನಮ್ಮ ಜೀವನವೂ. ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳೆಂಬ ಅರಿಷಡ್ವರ್ಗಗಳು ಜೀವಮಾರಕಗಳು. ಅವನ್ನು ಮೀರುವ ಔನ್ನತ್ಯವಿರುವುದು ಅಧ್ಯಾತ್ಮದಲ್ಲಿ ಮಾತ್ರ ಅನ್ನುವ ಮಾತು ಸತ್ಯವಾದರೂ ಸೃಷ್ಟಿಯ ಚಲನೆಯಿರುವುದೇ ಈ ಅರಿಷಡ್ವರ್ಗಗಳಿಂದ ಅನ್ನುವ ಮಾತನ್ನೂ ತೆಗೆದುಹಾಕುವಂತಿಲ್ಲ.

ಎಲ್ಲವೂ ಇತಿಮಿತಿಯಲ್ಲಿದ್ದಾಗ ಚೆಂದವೇ! ಆದರೆ ಅದೆಲ್ಲದರ ನಡುವೆ ಸ್ವಾರ್ಥದ ನಶೆ ತಲೆಗೇರಿದರೆ ಸಾಮರಸ್ಯ ಬದಿಗೆ ಸರಿದು ಬದುಕಿನ ನೆಮ್ಮದಿ ಕೆಡುತ್ತದೆ. ಇದರಿಂದಾಗಿಯೇ ಜೀವಕಾರಕಗಳಾಗಬೇಕಾಗಿದ್ದಂಥವು ಜೀವಮಾರಕಗಳಾಗಿ ಬದಲಾಗಿವೆ. ಅರಿಯನ್ನು ಗೆಲ್ಲುವ ಅರಿವು ಎಲ್ಲರದ್ದಾಗಲಿ.

ಪ್ರಾರ್ಥನೆ ಮತ್ತು ಹಾರೈಕೆಗಳನ್ನು ನಾನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಆದರೆ ನಡುರಾತ್ರಿಯ ಹಾರೈಕೆಗಳಿಂದ ಸದಾ ದೂರ. ರಾತ್ರಿ 12 ಗಂಟೆಗೆ ಶುಭಾಶಯ ಹೇಳುವ ಪದ್ಧತಿ ಆರಂಭವಾದದ್ದು ಬಹುಶಃ ಬ್ರಿಟಿಷರಿಂದ ಇರಬೇಕು. ಹೆರಿಗೆಗೆ ಸಾಮಾನ್ಯ ವಾಗಿ ಹೆಣ್ಣುಮಕ್ಕಳು ತವರುಮನೆಗೆ ಹೋಗುವುದು ವಾಡಿಕೆ. ಆದರೆ ನನ್ನ ಅಮ್ಮ ಹೋಗಿದ್ದು ನನ್ನ ಅಪ್ಪನ ತವರಾದ
ಚಿಕ್ಕಸಾರಂಗಿ ಎಂಬ ಕುಗ್ರಾಮಕ್ಕೆ. ಗಂಡನನ್ನು ಕಳೆದುಕೊಂಡ, ೪ ಮಕ್ಕಳ ತಾಯಿಯಾಗಿದ್ದ ನನ್ನ ಸೋದರತ್ತೆಯ ಆಶ್ರಯದ ನಡೆದ ಅಮ್ಮನ ಬಾಣಂತನದ ಕಥೆಗಳು ಆಗಾಗ ಪುನರಾವರ್ತನೆಯಾಗುತ್ತಲೇ ಇರುತ್ತವೆ.

ಕೃಷಿಯನ್ನೇ ನಂಬಿದ್ದ ನನ್ನ ಸೋದರತ್ತೆಯ ಅಂದಿನ ಬದುಕಿನ ಚಿತ್ರಣಗಳು ಆಗಾಗ ಕಣ್ಣಮುಂದೆ ಹಾದುಹೋಗುತ್ತಲೇ
ಇರುತ್ತವೆ. ಮನೆಗೆ ಬಂದಾಗ ಅವರ ಹಣೆಗೆ ಬಣ್ಣದ ಟಿಕಳಿ ಹಚ್ಚಿದ್ದು, ‘ಹಂಗೆಲ್ಲ ಹಚ್ಚಬಾರದು ಪುಟ್ಟೀ…’ ಅಂದಾಗ, ‘ಯಾಕೆ? ಅಮ್ಮ ಇಟ್ಕೊತಾರಲ್ಲ ಮತ್ತೆ?’ ಅನ್ನುವ ಬಾಲ್ಯದ ಪ್ರಶ್ನೆಗಳು, ಆ ದನದ ಕೊಟ್ಟಿಗೆ, ಸಗಣಿ ನೆಲ, ಸೀಮೆದನದ ಹಾಲಿನಲ್ಲಿ ಹೆಪ್ಪು ಹಾಕಿ ಕಡೆದ ಮಜ್ಜಿಗೆಯಿಂದ ಎದ್ದು ಬರುತ್ತಿದ್ದ ನುಣ್ಣನೆಯ ಬೆಣ್ಣೆ. ರಾಗಿಮುದ್ದೆ, ಕೆಂಪಕ್ಕಿಯ ಅನ್ನ, ಸಿಹಿನೀರಿನ ಬಾವಿ, ಮೆಟ್ಟಿಲ ಬಾವಿ, ಊರಾಚೆಯ ಹೊಲದ ಬದುವಿನಲ್ಲಿ ನಡೆದುಬರುವಾಗ ಕಾಡುತ್ತಿದ್ದ ಮೋಹಿನಿಯ ಕಥೆ, ಮರದ ನೆರಳಲ್ಲಿ ಕಾದಂಬರಿ ಓದುತ್ತ ಓದುತ್ತ ಹಾಗೆಯೇ ನಿದ್ರೆಗೆ ಜಾರಿಹೋಗುತ್ತಿದ್ದ ದಿನಗಳು ಎಲ್ಲವೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿವೆ.

ಇವತ್ತಿಗೂ ಊರಿಗೆ ಹೋದರೆ ‘ಅರ್ಧ ಊರೇ ನಿಮ್ಮ ತಾತನದ್ದಾಗಿತ್ತು. ನಾಟಕದ ಗೀಳಿನಿಂದಾಗಿ ಮನೆಕಡೆ ಗಮನವೇ ಕೊಡದೆ
ಹೋದರು. ಇದ್ದಬದ್ದ ಆಸ್ತಿಯೆಲ್ಲ ಸಂಬಂಧಿಕರ ಪಾಲಾಯ್ತು. ಎಲ್ಲ ಇದ್ದೂ ಅನಾಥರಾಗಿ ಬೆಳೆದರು ನಿಮ್ಮಪ್ಪ’ ಅನ್ನುವ ಮಾತುಗಳಿಗೆ ಏನೂ ಉತ್ತರಿಸದೆ ಮೌನವಾಗುತ್ತೇನೆ. ನಾನು ಹುಟ್ಟಿದ್ದು ೧೦ನೇ ತಿಂಗಳ ೧೧ನೇ ತಾರೀಕಿನ ಬೆಳಗ್ಗೆ ೧೧ ಗಂಟೆ ೧೦ ನಿಮಿಷಕ್ಕೆ. ತುಮಕೂರು ಜಿಲ್ಲೆಯ ನಾಗವಲ್ಲಿ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ. ಆ ವಿಷಯ ತಿಳಿಸಲು ನನ್ನ ಸೋದರತ್ತೆ ಬೆಂಗಳೂರಿನಲ್ಲಿದ್ದ ನನ್ನ ಅಪ್ಪನಿಗೆ ಬರೆದ ಪತ್ರ ಸಾಕಷ್ಟು ದಿನ ಜೋಪಾನವಾಗಿ ನನ್ನೊಡನೆ ಇತ್ತು.

ವಯಸ್ಸಾಗುವುದು ಜೀವಗಳಿಗೆ ಮಾತ್ರವಲ್ಲ. ನಮ್ಮ ಜತೆಗಿರುವ ಪ್ರತಿಯೊಂದು ಜೀವ ಹಾಗೂ ನಿರ್ಜೀವ ವಸ್ತುಗಳಿಗೂ ಅನ್ನುವುದು ಆ ಪತ್ರವನ್ನು ನೋಡಿದಾಗಲೆಲ್ಲ ಅನ್ನಿಸುತ್ತಿತ್ತು. ಜನ್ಮದಿನದ ಶುಭಹಾರೈಕೆಗಳು ಹಿಂದಿನ ರಾತ್ರಿಯಿಂದಲೇ ಆರಂಭವಾಗಿತ್ತು. ನಾನು ಹುಟ್ಟುವ ಮೊದಲೇ ಅದ್ಯಾಕೆ ಹೀಗೆ ಶುಭಾಶಯ ಹೇಳ್ತಿದ್ದಾರೋ ಅಂದುಕೊಳ್ಳುತ್ತ ಫೋನ್ ಸ್ವಿಚ್‌ಆಫ್ ಮಾಡಿ ಮಲಗಿದೆ.

ಅದೇನೇ ಕೆಲಸದ ಒತ್ತಡದಲ್ಲಿದ್ದರೂ ನನ್ನ ಜನ್ಮದಿನಕ್ಕೆ ಮರೆಯದೆ ರೇಷ್ಮೆ ಸೀರೆ, ಅರಿಶಿಣ-ಕುಂಕುಮ, ಬಳೆ, ಮಲ್ಲಿಗೆ ದಂಡೆ ಯನ್ನು ಉಡುಗೊರೆಯಾಗಿ ನೀಡುತ್ತಿದ್ದ ರವಿ ಬಿಟ್ಟೂಬಿಡದಂತೆ ನೆನಪಾಗುತ್ತಿದ್ದರು. ‘ಅಮ್ಮಾ ಹ್ಯಾಪಿ ಬರ್ತ್‌ಡೇ’ ಎಂದು ನಗೆಗಣ್ಣಿನಲ್ಲಿ ವಿಶ್ ಮಾಡಿ ಮಗ ಶಾಲೆಗೆ ಹೊರಟ. ಮೂಢನಂಬಿಕೆಗಳೆಂಬ ಕತ್ತಲಲ್ಲಿ ಕರಗಿ ಹೋಗುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹುಲಿಕಲ್ ನಟರಾಜ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಮಿತಿಯ ಸ್ಥಾಪಕ ಟ್ರಸ್ಟಿಗಳಲ್ಲಿ ನಾನೂ ಒಬ್ಬಳು.

ಅದರ ಮೂಲಕ ನಿರ್ಮಾಣವಾಗುತ್ತಿರುವ ವಿeನ ಗ್ರಾಮದ ಆರಂಭೋತ್ಸವಕ್ಕೆ ಮುನ್ನ ಸೇರಿದ ಸಮಾವೇಶದ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮೇಲಿಂದ ಮೇಲೆ ಕರೆ ಬರುತ್ತಿದ್ದರೂ ಉತ್ತರಿಸದೆ ಸುಮ್ಮನಿz. ನಿಮ್ಮ ಸಹಿಯ ಅವಶ್ಯಕತೆಯಿದೆ. ದಯವಿಟ್ಟು ಒಂದರೆಗಳಿಗೆ ಬಂದುಹೋಗಿ ಎಂದಾಗ, ಶಶಿಕಲಾ ವಸದ್‌ರವರನ್ನೂ ಜತೆಗೆ ಕರೆದುಕೊಂಡು ಹೋಗಿಬಂದೆ. ಸಂಜೆ ‘ಕಾಂತಾರ’ ಸಿನಿಮಾಕ್ಕೆ ಮಗ ಟಿಕೆಟ್ ಬುಕ್ ಮಾಡಿದ್ದ.

ಮಕ್ಕಳ ನಡುವೆ ಪೆಪ್ಸಿ-ಪಾಪ್ ಕಾರ್ನ್‌ನೊಂದಿಗೆ ಸಿನಿಮಾ ವೀಕ್ಷಿಸಲು ಕುಳಿತಾಗ ಆರಂಭದಲ್ಲಿ ಅಂಥ ವಿಶೇಷವೇನೂ
ಕಾಣಲಿಲ್ಲ. ಉತ್ತಮವಾದ ಒಂದು ಪ್ರಾದೇಶಿಕ ಕಥಾವಸ್ತುವಿರುವ ಚಿತ್ರವಿದು, ಅದಕ್ಯಾಕೆ ಈ ಮಟ್ಟಿಗಿನ ಪ್ರಚಾರ ದೊರೆಯುತ್ತಿದೆ ಅನ್ನುವ ಅನುಮಾನಕ್ಕೆ ಉತ್ತರ ದೊರಕಿದ್ದು ಚಿತ್ರದ ಕೊನೆಯ ೧೦ ನಿಮಿಷಗಳಲ್ಲಿ. ಪ್ರಶಾಂತನಲ್ಲಿ ರಿಷಭನಾಗಿ, ರಿಷಭನಲ್ಲಿ ಶಿವನಾಗಿ, ಶಿವನಲ್ಲಿ ಪಂಜುರ್ಲಿಯಾಗಿ ಇಡೀ ಪ್ರೇಕ್ಷಕ ಸಮೂಹವನ್ನು ಸಮ್ಮೋಹನಕ್ಕೊಳಪಡಿಸಿಬಿಡುವ ರಿಷಭ್ ಶೆಟ್ಟಿಯ ನಟನೆ ಅದ್ಭುತ.

ಅದಕ್ಕೆ ಪುಷ್ಟಿ ಕೊಡುವಂತಿರುವ ಹಿನ್ನೆಲೆ ಸಂಗೀತ, ಚಿತ್ರಮಂದಿರದಿಂದ ಹೊರಬಂದರೂ ಅದರದೇ ಗುಂಗಿನಲ್ಲಿರುವಂತೆ ಕಾಡುತ್ತದೆ. ಮತ್ತೆ ಮತ್ತೆ ಸಿನಿಮಾ ನೋಡುವಂತೆ ಮಾಡುತ್ತದೆ. ಚಿತ್ರದ ಟೈಟಲ, ಕಥೆ, ಹಿನ್ನೆಲೆ ಸಂಗೀತ- ಸಂಭಾಷಣೆ, ಪಾತ್ರಗಳ ಆಯ್ಕೆ ಎಲ್ಲವೂ ಸಹಜವಾಗಿವೆ.

ಶಿವಲೀಲೆಯ ಪ್ರಣಯ ಪ್ರಸಂಗಗಳೂ ಮುಜುಗರ ಹುಟ್ಟಿಸದೆ ಪ್ರೇಕ್ಷಕರಲ್ಲಿ ಮಧುರ ಭಾವವನ್ನು ಹುಟ್ಟುಹಾಕುತ್ತವೆ. ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಮನದಲ್ಲುಳಿಯುತ್ತಾರೆ. ಸಾಕಷ್ಟು ವರ್ಷಗಳ ನಂತರ ನಟ ಕಿಶೋರ್‌ರನ್ನು ತೆರೆಯ ಮೇಲೆ ನೋಡಿದ್ದು ಖುಷಿಗೆ ಮತ್ತೊಂದು ಕಾರಣ. ಯಕ್ಷ-ಯಕ್ಷಿಣಿಯರ ನಾಡಲ್ಲಿ ನಾಗಾರಾಧನೆ, ದೈವಾರಾಧನೆ, ಭೂತಾರಾಧನೆ, ಕಂಬಳ, ಕೋಲ
ಸರ್ವೇಸಾಮಾನ್ಯ! ಪಂಚಭೂತಗಳಿಂದಾದದ್ದು ಪ್ರಕೃತಿ.

ಶಿವನೆಂದರೆ ಪ್ರಕೃತಿಯ ಸ್ವರೂಪ! ಶಿವನಿಂದ ಮರುಹುಟ್ಟು ಪಡೆದು ವರಾಹರೂಪಿಯಾದ ಪಂಜುರ್ಲಿ ದೈವವಾಗಿ ಭೂಲೋಕ ದಲ್ಲಿ ಸತ್ಯ, ಧರ್ಮ, ನ್ಯಾಯವನ್ನು ರಕ್ಷಿಸುವ ದೈವವಾಗಿದೆ. ರೋಗ-ರುಜಿನಗಳನ್ನು, ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸಿ ಬೆಳೆಯನ್ನು ರಕ್ಷಿಸುವ ನಂಬಿಕೆಯ ದೈವವಾಗಿ ಪ್ರಚಲಿತದಲ್ಲಿದೆ. ನಂಬಿಕೆ ಅನ್ನುವುದೇ ಒಂದು ದೈತ್ಯಶಕ್ತಿ. ಅದೇ ರೀತಿ ಅದನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ ಸರಿದಾರಿಗೆ ತಿರುಗಿಸುವ ಶಕ್ತಿಯಾಗಿರುವ ಪಂಜುರ್ಲಿಯ ಮೂಲವಿರು ವುದು ಶಿವನ ಕ್ಷೇತ್ರವಾದ ಇಂದಿನ ಧರ್ಮಸ್ಥಳದಲ್ಲಿ.

ತಾನು ನೆಲೆ ನಿಂತ ಊರಿಗೆ ಅನುಗುಣವಾಗಿ ಪಂಜುರ್ಲಿಯ ಹೆಸರು ಬದಲಾಗುತ್ತ ಹೋಗುವುದು ಒಂದು ವಿಶೇಷ. ಅಣ್ಣಪ್ಪ ಪಂಜುರ್ಲಿ, ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ,
ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಲತ್ತಂಡೆ ಪಂಜುರ್ಲಿ ಹೀಗೆ ಸಾವಿರಕ್ಕೂ ಮಿಗಿಲಾದ ದೈವಾರಾಧನೆ ತುಳುವ, ಕೊಡವ, ಬಡಗ ನಾಡಿನಲ್ಲಿ ಇಂದಿಗೂ ರೂಢಿ ಯಲ್ಲಿದೆ.

ದಿನಬೆಳಗಾದರೆ ನಮ್ಮ ನಡುವೆ ನಡೆಯುವ ಅನೇಕ ಘಟನೆಗಳು ಚಿತ್ರಗಳಾಗಿ ಮನಃಪಟಲದ ಮೇಲೆ ಅಚ್ಚೊತ್ತಿಬಿಡುತ್ತವೆ. ಕ್ರಿಯಾಶೀಲ ಮನಸುಗಳು ಅದಕ್ಕೆ ಜೀವ ತುಂಬಿ ಮತ್ತೆ ತೆರೆಗಿಳಿಸುವ ಸಾಹಸ ಮಾಡುತ್ತಾರೆ. ಅಂಥವರಲ್ಲಿ ರಿಷಭ್ ಶೆಟ್ಟಿ ಕೂಡ ಒಬ್ಬರು ಅನ್ನುವುದನ್ನು ಸಾಬೀತು ಮಾಡಿದ್ದಾರೆ. ಈಗ ಅವರೆಡೆಗಿನ ನಿರೀಕ್ಷೆಗಳು ಇನ್ನೂ ಹೆಚ್ಚಾಗಿ, ಹೆಚ್ಚಿನ ಜವಾಬ್ದಾರಿ ಹೊರಿಸಿವೆ. ಯಶಸ್ಸು ಗಳಿಸುವುದು ಸುಲಭ, ಆದರೆ ಅದನ್ನು ನಿಭಾಯಿಸುವ ಕಷ್ಟವನ್ನು ಬಲ್ಲವರೇ ಬಲ್ಲರು. ಇನ್ನಷ್ಟು ಉತ್ತಮ ಚಿತ್ರಗಳು ಅವರ ನಿರ್ದೇಶನದಲ್ಲಿ, ನಟನೆಯಲ್ಲಿ ಮೂಡಿಬಂದು ಕನ್ನಡನಾಡಿನ ಹಿರಿಮೆ ವಿಶ್ವದೆಡೆ ಮೊಳಗುವಂತಾಗಲಿ.
ಹೊಂಬಾಳೆಗೆ ಮತ್ತೊಂದು ಗೆಲುವಿನ ಗರಿ ಮೂಡಿದೆ. ಚಿತ್ರತಂಡಕ್ಕೆ ಅಭಿನಂದನೆಗಳು.