ಯಶೋ ಬೆಳಗು
yashomathy@gmail.com
ತನ್ನ ಪಾಡಿಗೆ ತಾನು ಕೆರೆ-ಕಾಲುವೆ, ನದಿಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂ ರೆಂಬ ಪುಟ್ಟ ಊರನ್ನು ಬೃಹತ್ ಬೆಂಗಳೂರಾಗಿ ಮಾರ್ಪಾಡುಗೊಳಿಸುವ ತವಕದಲ್ಲಿ ಏನು ಮಾಡಿಟ್ಟಿದ್ದೇವೆ? ಬಸ್ಸು, ಟ್ರೇನು, ವಿಮಾನಗಳ ಮೂಲಕ ಇಳಿದು ಬರುತ್ತಲೇ ಇರುವ ಜನಸಾಗರಕ್ಕೆ ಇಲ್ಲವೆನ್ನದೆ ಎಲ್ಲರಿಗೂ ಆಶ್ರಯ ನೀಡುತ್ತ ತನಗಾದ ಎಲ್ಲ ತೊಂದರೆ ಗಳನ್ನೂ ಬೆಂಗಳೂರು ಮೌನವಾಗೇ ಸಹಿಸಿಕೊಂಡಿದೆ!
ಬೆಂಗಳೂರು ನಿನ್ನೆಯಂತಿಲ್ಲ, ನಾಳೆ ಇದು ಹೀಗಿರುವುದಿಲ್ಲ. ಬ್ಲೂ ಪ್ರಿಂಟಿನ ಮೇಲಿನ ಗೆರೆಗಳಲ್ಲಿದ್ದ ಒಂದು ಲೇ ಔಟು ನಾಳೆ ಯೊಳಗಾಗಿ ಸಿಮೆಂಟು, ಕಟ್ಟಿಗೆ, ಡಾಮರು ಮತ್ತು ಸಂಸಾರಗಳ ಸಮೇತ ಅರಳಿ ನಿಂತಿರುತ್ತದೆ. ಗಂಟೆಗೊಂದು ಲಾರಿ ಓಡುವ, ನರಮಾನ ವರು ಬರಿಗೈಲಿ ತಿರುಗಾಡಲೂ ಅಂಜಿಕೊಳ್ಳುವಂತಹ ಒಂದು ನೀರವ ರಸ್ತೆ ನೋಡನೋಡುತ್ತಿದ್ದಂತೆಯೇ ಹೋಟೆಲು, ಬಂಗಲೆ, ಪಾರ್ಕು, ಪಾರ್ಲರು, ಕಾನ್ವೆಂಟು, ಬಾರು, ವೈನ್ ಸ್ಟೋರು ಮತ್ತು ಬೆಲೆವೆಣ್ಣುಗಳ ಸಮೇತ ಸಡಗರ ಪಡತೊಡಗುತ್ತದೆ.
ದೇಶದ ಬೇರೆ ಯಾವ ಊರೂ ಬೆಳೆಯದ ವೇಗದಲ್ಲಿ ಬೆಂಗಳೂರು ಬೆಳೆಯುತ್ತಿದೆ. ತೆಲುಗರು, ತಮಿಳರು, ಮಲೆಯಾಳಿ, ಸಿಂಧಿ, ಪಂಜಾಬಿಗಳು, ಮಾರವಾಡಿಗಳು, ಕ್ರಿಶ್ಚಿಯನ್ನರು, ಮುಸಲ್ಮಾನರು ವಿದೇಶಿಯರು, ಉಗ್ರವಾದಿಗಳು, ಹಲಾಲುಕೋರರು, ಎನ್ನಾರೈಗಳು- ಇವರೆಲ್ಲರ ಮಧ್ಯೆ ಅಲ್ಲಿಷ್ಟು ಇಲ್ಲಿಷ್ಟು ಕನ್ನಡಿಗರು…. ಆಹಾ ಬೆಂಗಳೂರು!
ಇಂಥ ಶರವೇಗದ ಮಾಯಾನಗರಿಯಲ್ಲಿ ಎಲ್ಲವೂ ಇವೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಪಾರ್ಕು, ಪ್ಲಾನೆಟೋರಿಯಮ್ಮು, ಪಾಯಖಾನೆ, ಕಸಾಯಿಖಾನೆ, ಗಿರವಿ ಅಂಗಡಿ, ಬರ್ಮಾ ಬಜಾರು, ಚಿತ್ರಾನ್ನದ ತಳ್ಳುಗಾಡಿ, ಫೈವ್ ಸ್ಟಾರ್ ಹೋಟೆಲು, ಕಬಾಬ್ ಕಾರ್ನರು, ಕಾಲುಸೂಪಿನ ನಾಯ್ಡು ಹೋಟೆಲು- ಏನುಂಟು ಏನಿಲ್ಲ? ಇಲ್ಲಿ ಎಲ್ಲರೂ ಇದ್ದಾರೆ. ಗಿಣಿಶಾಸದವನಿಂದ ಹಿಡಿದು
ಕಂಪ್ಯೂಟರ್ ಭವಿಷ್ಯ ಹೇಳುವವನ ತನಕ, ಪೇದೆಯಿಂದ ಡಿ.ಜಿ., ಐ.ಜಿ.ಪಿ. ತನಕ, ಕಾರ್ಪೊರೇಟರ್‌ನಿಂದ ಹಿಡಿದು ಮುಖ್ಯ ಮಂತ್ರಿಯ ತನಕ, ಕನಸು ಮಾರುವವನಿಂದ ಹಿಡಿದು ಖಳನಾಯಕನ ತನಕ…. ಬೆಂಗಳೂರು ಎಲ್ಲರಿಗೂ ತವರುಮನೆ, ಕೆಂಪೇ ಗೌಡರು ಹಾಕಿಸಿ ಹೋದ ಪರ್ಮನೆಂಟ್ ಶಾಮಿಯಾನ….
ನಾವು ಗ್ಲೋಬಲ್ ವಿಲೇಜ್‌ನ ಗೊಂದಲಕ್ಕೆ ಬಿದ್ದು ಪಕ್ಕದ ಮನೆಯವರನ್ನು ಮರೆತಿದ್ದೇವೆ. ಇದು ಕೆಟ್ಟ ಮರೆವು. ಅಮೆರಿಕೆಯಿಂದ ಬರುವ ಫೋನ್ ಕಾಲ್‌ಗಿಂತ ಪಕ್ಕದ ಮನೆಯ ಮಗು ‘ಹಲೋ ಅಂಕಲ್’ ಅನ್ನುವುದು ಹೆಚ್ಚು ಆಪ್ಯಾಯಮಾನವಾದುದು. ಬಿಲ್ ಕ್ಲಿಂಟನ್‌ಗಿಂತ, ನರಸಿಂಹ ರಾವ್‌ಗಿಂತ ನಮ್ಮ ವಠಾರದಿಂದ ಆಯ್ಕೆಯಾದ ಕಾರ್ಪೊರೇಟರ್ ಆಪದ್ಬಾಂಧವನೆನ್ನಿಸಿಕೊಳ್ಳುತ್ತಾನೆ.
ದಿಲೀಪ್ ಕುಮಾರ್‌ಗೆ ಫಾಲ್ಕೆ ಸಿಕ್ಕ ಸಂತಸ ಸಂಜೆ ಹೊತ್ತಿಗೆ ಮುಗಿದರೆ, ನಮ್ಮ ಬಾಲಣ್ಣನ ಸಾವು ದಿನಗಟ್ಟಲೆ ಸೂತಕವಾಗಿ ಕಾಡುತ್ತದೆ.
ರಾಜ್ಯಮಟ್ಟದ ಪತ್ರಿಕೆಯಲ್ಲಿ ‘ತುಂಡುಸುದ್ದಿ’ ಆಗಬಹುದಾದದ್ದು ಸ್ಥಳೀಯರ ಪಾಲಿಗೆ ದೊಡ್ಡ ‘ಸೆನ್ಸೇಶನ್’ ಆಗಿರುತ್ತದೆ. ಜಾಫ್ನಾ ದಲ್ಲಿನ ಭೀಕರ ಕದನ ಕಡೆಗೇನಾಯಿತು ಎಂಬುದಕ್ಕಿಂತ ಶಿವಾಜಿನಗರದಲ್ಲಿ ಬಿದ್ದ ಮಳೆ ಎಷ್ಟು ಮನೆ ಕೆಡವಿತು ಎಂಬುದು ತಕ್ಷಣದ ಕನ್ಸರ್ನ್ ಆಗಿರುತ್ತದೆ. ತ್ಯಾಗರಾಜನಗರದ ಹುಡುಗಿ ಬರೆಯುವ ಓದುಗರ ಪತ್ರಕ್ಕೆ ಶ್ರೀರಾಂಪುರದ ಹುಡುಗ ಸ್ಪಂದಿಸು ವುದು ಸಹಜವಾಗಿರುತ್ತದೆ. ಜಯನಗರದ ಆಸ್ಪತ್ರೆಯಲ್ಲಿ ಕಿಡ್ನಿಗಾಗಿ ಕಾದು ಕೂತ ಗೃಹಸ್ಥನಿಗೆ ಜೆ.ಪಿ. ನಗರದ ದಾನಿಯ ವಿಳಾಸ ಜಗತ್ತಿನ ಅತಿದೊಡ್ಡ ಅವಶ್ಯಕತೆಗಳಲ್ಲಿ ಒಂದಾಗಿರುತ್ತದೆ.
ನೀವು ನೋಡದ ಬೆಂಗಳೂರೇನಲ್ಲ. ನೀವು ನನಗಿಂತ ಹಳಬರು, ದೊಡ್ಡವರು, ಬುದ್ಧಿವಂತರು, ಹೇಳಿ ಕೇಳಿ ಬೆಂಗಳೂರಿನವರು. ನಿಮ್ಮ ಮುಂದೆ ನಾನ್ಯಾವ ದೊಡ್ಡ ಚಾಣಪತ್ರಿ? ಎಲ್ಲಿಂದಲೋ ವಲಸೆ ಬಂದವನು. ಕಾಲೂರಿ ನಿಂತು ಮೂರು ವರ್ಷ ಕಳೆದಿಲ್ಲ. ಆದರೆ ಪ್ರಿಯರೇ, ನೀವು ಕಾಣದ ಬೆಂಗಳೂರನ್ನು ನಾನು ಕಂಡಿದ್ದೇನೆ!
ಮೆಜೆಸ್ಟಿಕ್ಕಿನ ಗಡಿಬಿಡಿಯ ನಡುವೆ ಇದ್ದಕ್ಕಿದ್ದಂತೆ ಚಮಕ್ ಅಂದ ಕಣ್ಣುಗಳು ಕೋರಮಂಗಲದ ಬಂಗಲೆಗಳ ಮುಂದಿನ
ಮಂದ ಬೆಳಕಿನಲ್ಲಿ ರಸ್ತೆ ನೋಡುತ್ತ ಆರ್ದ್ರಗೊಂಡು ಚಲಿಸುವುದು ಅದೇಕೋ ನನ್ನ ಕಣ್ಣಿಗೇ ಬೀಳುತ್ತದೆ. ಲೈವ್ ಬ್ಯಾಂಡಿನ ಕಿಕ್‌ನ, ರೇಸ್ ಕೋರ್ಸಿನ ಹುಯಿಲಿ ನ ಹಣ ಕಳೆದುಕೊಂಡು ಸಿಟಿ ಬಸ್ಸಿಗೆ ಕಾಸಿಲ್ಲದೆ ಮನೆಗೆ ನಡೆಯುವ ಮಧ್ಯಮವರ್ಗದ ಜೀವಿಯನ್ನು ವಿನಾಕಾರಣ ನಿಲ್ಲಿಸಿ ಹಲೋ ಅಂದವನು ನಾನು.
ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಅಬ್ಬರಿಸಿ ರೋಲ್‌ಕಾಲ್ ವಸೂಲುಮಾಡುವ ರೌಡಿ, ಲಾಕಪ್ಪಿನಲ್ಲಿ ಮಾಡುವ ಆರ್ತನಾದವನ್ನು ಹತ್ತಿರದಿಂದ ಕೇಳಿಸಿಕೊಂಡವನು ನಾನು. ಸಾವಿರಾರು ಜನಕ್ಕೆ ಗೀತಪ್ರವಚನ ಹೇಳಿಬಂದು ಗಂಡ ಸತ್ತ ಕಿರುವಿಧವೆಯ ಸೆರಗಿಗೆ ಕೈಹಾಕುವ ಪರಮಪಾಪಿಗಳನ್ನು ಕಂಡು ಹೇಸಿಕೊಂಡಿದ್ದೇನೆ. ಹುಳಾಪಾರ್ಟಿಗಳು ಮಿನಿಸ್ಟರುಗಳಾಗಿದ್ದಾರೆ. ಬಾಡಿಗೆ ಮನೆ ಕೊಡಿಸುತ್ತಿದ್ದವರು ಕೋಟ್ಯಂತರ ಲ್ಯಾಂಡ್ ಡೀಲಿಂಗ್‌ಗಳಿಗೇರಿದ್ದಾರೆ. ಹಗಲು ವೇಷಗಾರರು ಶಾಸಕರಾಗಿದ್ದಾರೆ. ಸಣ್ಣ ಸಂಬಳದ ಸರಕಾರಿ ನೌಕರರು ಮಾರುತಿ ಕಾರುಗಳನ್ನಾಳುತ್ತಿದ್ದಾರೆ.
ತುಂಬ ಕಷ್ಟದಿಂದ ನನ್ನ ಉಳಿತಾಯದ ರೊಕ್ಕ, ಗೆಳೆಯರು ಕೊಟ್ಟ ಸಾಲ, ನನ್ನೆಲ್ಲ ಸಹನೆ, ಸಮಯ, ಆಯುಷ್ಯಗಳನ್ನು ಬಸಿದು ಇಂಥzಂದು ಸಾಹಸ ಮಾಡಿದ್ದೇನೆ. ಹೆಸರು ‘ಹಾಯ್ ಬೆಂಗಳೂರ್!’ ಅಂದೆ. ಏನದು? ಅಂದರು. ಪತ್ರಿಕೆಯ ಹೆಸರು ಅಂದೆ. ವಿಚಿತ್ರವಾಗಿದೆ ಅಂದರು. ಬೆಂಗಳೂರು ಅದಕ್ಕಿಂತ ವಿಚಿತ್ರವಾಗಿದೆ. ಸಚಿತ್ರವಾಗಿದೆ. ಜತೆಗೆ ಚಿತ್ರಾನ್ನವೂ ಆಗಿದೆ. ಆಡಾಡಿ ಕೊಂಡಿದ್ದ ಮಗಳು ಇದ್ದಕ್ಕಿದ್ದಂತೆ ಮೈನೆರೆದು ಎದೆಯೆತ್ತರ ಬೆಳೆದು ನಿಂತರೆ ಅವಳ ತಾಯಿಗಾಗಬಹುದಾದ ಗಾಬರಿ ಎಂಥ
ದೆಂದು ನೀವು ಊಹಿಸಬಲ್ಲಿರಾದರೆ…. ಬೆಂಗಳೂರಿನ ಬೆಳವಣಿಗೆಯ ಗಾತ್ರ, ವೇಗ, ಅಗಾಧತೆಗಳನ್ನು ಗಮನಿಸಬಲ್ಲವರಾಗುತ್ತೀರಿ.
ಇಷ್ಟೆಲ್ಲ ಇರುವ ಊರಿಗೆ ಕನ್ನಡಿಗರು ನಮ್ದೂಂತ ಓದಿಕೊಳ್ಳಲು ಈ ಊರಂದು, ಈ ಊರಿನದೇ ಆದ ಪತ್ರಿಕೆಯಿಲ್ಲ. ಬೆಂಗಳೂರಿ ನಲ್ಲಿ ಎಲ್ಲ ಪತ್ರಿಕೆಗಳೂ ಪ್ರಿಂಟಾಗುತ್ತವೆ ಎಂಬುದು ಎಷ್ಟು ನಿಜವೋ, ಬೆಂಗಳೂರಿಗಾಗಿಯೇ ಅಂತ ಒಂದೂ ಪತ್ರಿಕೆ ಪ್ರಕಟ ವಾಗುವುದಿಲ್ಲ ಎಂಬುದೂ ಅಷ್ಟೇ ನಿಜ. ಪಕ್ಕದ ತುಮಕೂರಿಗೆ, ಮಂಡ್ಯಕ್ಕೆ, ಮೈಸೂರಿಗೆ, ಹಾಸನಕ್ಕೆ ಎಲ್ಲ ಊರುಗಳಿಗೂ ಅದರದೇ ಆದ ಪತ್ರಿಕೆಗಳಿವೆ. ನೂರೇ ಜನ ಓದಲಿ; ಅದು ಆ ಊರಿನ ಪತ್ರಿಕೆ. ಅದಕ್ಕೇ ತುಂಬ ಪ್ರೀತಿ, ಕಕ್ಕುಲತೆ ಮತ್ತು ಆಸೆಯಿಂದ ಈ ಪತ್ರಿಕೆಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಪ್ರೀತಿಯಿಂದ ಹಾಯ್ ಅನ್ನಿ ಸಾಕು.
ಕಡೆತನಕ ನನ್ನ-ನಿಮ್ಮ ಸ್ನೇಹ, ಮಾತು ತಪ್ಪದ ಹಾಗೆ ಪ್ರತಿ ಸೋಮವಾರ ಇಡೀ ಬೆಂಗಳೂರನ್ನು ನಿಮ್ಮ ಮನೆಬಾಗಿಲಿಗೆ ತಂದು ಕನ್ನಡಿಯಲ್ಲಿ ಕೂಡಿಸಿ ನಿಮ್ಮೆದುರಿಗಿಡುತ್ತೇನೆ. ಈ ಹಿಂದೆ ಇಂಥ ಪತ್ರಿಕೆ ಖಂಡಿತ ಇರಲಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡುತ್ತಲೇ, ನಿಮ್ಮೆಲ್ಲ ಕೊರತೆಗಳನ್ನು ತುಂಬಿಕೊಡುತ್ತೇನೆ. ಬೆಂಗಳೂರಿನ ದಶದಿಕ್ಕುಗಳೂ ಈ ಹದಿನಾರು ಹಾಳೆಗಳ
ಕಂತೆಯಲ್ಲಿ ಒಡಮೂಡಬೇಕು. ನಿಮಿಷಾರ್ಧದಲ್ಲಿ ನೀವು ಆ ತುದಿಯಿಂದ ಈ ತುದಿಗೆ ಸರಿದಾಡಿರಬೇಕು ಅಂಥ ದೊಂದು ಶ್ರೀಮಂತ ಅನುಭವ ನಿಮ್ಮದಾಗಿಸುತ್ತೇನೆ.
ಪ್ರಾಮಿಸ್!
-ಹೀಗೆಲ್ಲ ಬರೆದು ೨೦೨೨ರ ಸೆಪ್ಟೆಂಬರ್ ೨೫ಕ್ಕೆ ಸರಿಯಾಗಿ ೨೭ ವರುಷಗಳು ತುಂಬುತ್ತವೆ. ನಿಜಕ್ಕೂ ನಾವು ನೋಡಿರದ
ಬೆಂಗಳೂರನ್ನು ತಂದು ನಮ್ಮೆದುರಿಗಿಟ್ಟ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹದಿನಾರು ಹಾಳೆಗಳ ನಾಲ್ಕು ರುಪಾಯಿಯ ಪತ್ರಿಕೆಯಾಗಿ ಸೃಷ್ಟಿಯಾದ ಕಪ್ಪು-ಬಿಳುಪಿನ ಸುಂದರಿಗೆ ಇನ್ನಾರು ದಿನಗಳು ಕಳೆದರೆ ಇಪ್ಪತ್ತೇಳರ ಸಂಭ್ರಮ! ಇಂದು ಬೆಂಗಳೂರಿನ ಹೆಸರಲ್ಲಿ ಸಾಕಷ್ಟು ಪತ್ರಿಕೆಗಳನ್ನು, ರೇಡಿಯೋ, ಟಿವಿ ಕಾರ್ಯಕ್ರಮಗಳನ್ನು ನಿರಂತರವಾಗಿ ಓದುತ್ತ, ನೋಡುತ್ತ ಕೇಳುತ್ತಿದ್ದರೂ ಹಾಯ್ ಬೆಂಗಳೂರೆಂಬ ಮಾಯಾ ಕನ್ನಡಿಯಲ್ಲಿ ಬೆಂಗಳೂರಿನ ಚಿತ್ರಣ ಕಟ್ಟಿಕೊಡುತ್ತಿದ್ದ ರವಿ ಬೆಳಗೆರೆ ಎಂಬ
ಹೆಸರು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಹೋಗಿದೆ.
ನಾವೆಲ್ಲರೂ ಒಂದಲ್ಲ ಒಂದು ರೀತಿಯ ವಲಸಿಗರೇ. ಹೊರಗಿನವರು ಬಂದಿದ್ದಕ್ಕೇ ಬೆಂಗಳೂರು ಇಷ್ಟು ಹಾಳಾಯಿತು ಅನ್ನುವ ಮೂಲ ಬೆಂಗಳೂರಿಗರು ಒಂದು ಕಡೆಯಾದರೆ, ನಾವು ಬಂದಿದ್ದಕ್ಕೇ ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದು ಎನ್ನುವ ವಲಸಿಗರು ಮತ್ತೊಂದು ಕಡೆ. ವಾದ-ವಿವಾದಗಳೇನೇ ಇರಲಿ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಇಂದು ಹೈಟೆಕ್ ಸಿಟಿಯಾಗಿ
ಪರಿವರ್ತನೆಗೊಂಡು ಬಿಮ್ಮನೆ ಬೀಗುತ್ತಿದೆ.
ತನ್ನ ಪಾಡಿಗೆ ತಾನು ಕೆರೆ-ಕಾಲುವೆ, ನದಿಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರೆಂಬ ಪುಟ್ಟ ಊರನ್ನು ಬೃಹತ್ ಬೆಂಗಳೂರಾಗಿ ಮಾರ್ಪಾಡುಗೊಳಿಸುವ ತವಕದಲ್ಲಿ ಏನು ಮಾಡಿಟ್ಟಿದ್ದೇವೆ? ಇರುವೆಗಳಂತೆ ಸಾಲುಸಾಲಾಗಿ ಬಸ್ಸು, ಟ್ರೇನು, ವಿಮಾನಗಳ ಮೂಲಕ ಇಳಿದು ಬರುತ್ತಲೇ ಇರುವ ಜನಸಾಗರಕ್ಕೆ ಇಲ್ಲವೆನ್ನದೆ ಎಲ್ಲರಿಗೂ ಆಶ್ರಯ ನೀಡುತ್ತ ತನಗಾದ ಎಲ್ಲ ತೊಂದರೆ ಗಳನ್ನೂ ಬೆಂಗಳೂರು ಮೌನವಾಗೇ ಸಹಿಸಿಕೊಂಡಿದೆ! ವೃಷಭದಂತೆ ಬಿರುಸಾಗಿ ಹರಿಯುತ್ತಿದ್ದ ನದಿಗೆ ಚರಂಡಿ ನೀರನ್ನು ನುಗ್ಗಿಸಿ ಇಂದು ಅದರ ಪಕ್ಕದಲ್ಲಿ ಕೂರಲಾಗದೆ ಮೂಗು ಮುಚ್ಚಿಕೊಂಡಿದ್ದೇವೆ. ಇದ್ದ ಕೆರೆ, ರಾಜಕಾಲುವೆಗಳನ್ನೆಲ್ಲ ಮುಚ್ಚಿ ಹಾಕಿ ಅದರ ಮೇಲೆ ಸಾಲುಸಾಲು ಕಟ್ಟಡಗಳನ್ನು ಎದ್ದು ನಿಲ್ಲಿಸಿದ್ದೇವೆ.
ವಠಾರಗಳನ್ನೆಲ್ಲ ಗಗನಚುಂಬಿ ಅಪಾರ್ಟ್‌ಮೆಂಟುಗಳನ್ನಾಗಿ ಮಾಡಿದ್ದೇವೆ. ಬೆಳಗಾದರೆ ಬಂದು ಬೀಳುವ ಟನ್ನುಗಟ್ಟಲೆ ಕಸದ ವಿಲೇವಾರಿ ಆಗದಿದ್ದರೆ ಎಲ್ಲರ ಬದುಕುಗಳೂ ದುರ್ನಾತ ಬೀರತೊಡಗುತ್ತವೆ. ಹಸಿರು ಬೆಳೆಯುತ್ತಿದ್ದ ನೆಲದಲ್ಲಿ ವಿಷ ಉಗುಳುವ ಫ್ಯಾಕ್ಟರಿಗಳನ್ನು ತಂದು ಕೂರಿಸಿದ್ದೇವೆ. ಆದರೆ ಕುರುಡು ಕಾಂಚಾಣದ ನರ್ತನವನ್ನು ಬೆಂಗಳೂರು ಎಲ್ಲಿಯವರೆಗೆ ಸಹಿಸಿ ಕೊಂಡೀತು? ಅದಕ್ಕಾಗೇ ಪ್ರತಿ ಮಳೆಗಾಲದಲ್ಲೂ ನೀರಿನ ಮಡುವಾಗಿ ನಿಂತು ತನ್ನ ಸೇಡಿನ ಆಕ್ರೋಶವನ್ನು ತಣಿಸಿಕೊಳ್ಳುತ್ತ
ನಮ್ಮನ್ನು ಕಂಗಾಲುಗೊಳಿಸುತ್ತಿದೆ ಕರ್ನಾಟಕದ ರಾಜಧಾನಿ! ನಮ್ಮಿಂದಲೇ ಅಂದವರೆಲ್ಲ ತಮ್ಮೂರೇ ಚೆಂದ ಎನ್ನುತ್ತಾ
ಕಾಲುಕೀಳುವ ಮಾತಾಡುತ್ತಿದ್ದರೆ ಮೌನದ ಮೆಲ್ಲಗೆ ನಗುತ್ತಿದ್ದಾಳೆ ಮಾಯಾನಗರಿ!