ಚರ್ಚಾವೇದಿಕೆ
ರವೀ ಸಜಂಗದ್ದೆ
ಕಳೆದ ಕೆಲ ದಶಕಗಳಿಂದ ಶತ್ರುದೇಶಗಳೊಂದಿಗೆ ಯುದ್ಧ ಮಾಡುತ್ತಿರುವ ಸಿರಿಯಾ, ದೇಶದೊಳಗಿನ ಅನೇಕ ಅಂತರ್ಯುದ್ಧ, ಬಂಡಾಯಗಾರರ ಹೋರಾಟ ಮತ್ತು ದಾಳಿಗಳಿಂದ ನಲುಗಿದೆ. ಕೆಲವೇ ಪಟ್ಟಭದ್ರ ಹಿತಾ ಸಕ್ತಿಗಳು, ಉಗ್ರಸಂಘಟನೆಗಳು ಮತ್ತು ದುರಾಡಳಿತದಿಂದಾಗಿ ಈ ಪರಿಸ್ಥಿತಿ ರೂಪುಗೊಂಡಿದೆ. ಇದರಿಂದಾಗಿ ಸಿರಿಯಾದ ಸಾಮಾನ್ಯ ಪ್ರಜೆಗಳ ಮೇಲೆ ಸಾವಿನ ಛಾಯೆ ಆವರಿಸಿದೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯೂ ನೆಲಕಚ್ಚಿ ದೈನಂದಿನ ಜೀವನ ಸಾಗಿಸಲೂ ಪರದಾಡುತ್ತಿದ್ದಾರೆ.
ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದಲ್ಲಿನ ದಂಗೆಗಳ ಮಾದರಿಯಲ್ಲಿ ಸಿರಿಯಾ ದೇಶದಲ್ಲಿ ಅಂತರಿಕ ದಂಗೆ ನಡೆಸಿದ ಅಲ್ಲಿನ ಬಂಡುಕೋರರು, ಚುನಾಯಿತ (ವಂಶಪಾರಂಪರ್ಯ) ಸರಕಾರವನ್ನು ಉರುಳಿಸಿ ಪಾರಮ್ಯ ಮೆರೆದಿದ್ದಾರೆ. ವರ್ಷಗಳಿಂದ ಸಕ್ರಿಯವಾಗಿದ್ದ ‘ಹಯಾತ್ ತಹ್ರೀರ್ ಅಲ್-ಶಾಮ್’ ಬಂಡುಕೋರ ಸಂಘಟನೆಯು ಇದೀಗ ಸಿರಿಯಾವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂಬುದು ಸುದ್ದಿ.

ಸಿರಿಯಾದ ಸರ್ವಾಧಿಕಾರಿ ಕುಟುಂಬದ ಈಗಿನ ಅಧ್ಯಕ್ಷ ಅಲ್ ಅಸಾದ್ ತಮ್ಮ ಸ್ಥಾನ ತ್ಯಜಿಸಿ ದೇಶಬಿಟ್ಟು ಪರಾರಿ ಯಾಗಿದ್ದಾರೆ. ಸರಕಾರದ ಪದಚ್ಯುತಿಯಾಗುತ್ತಿದ್ದಂತೆ ಅನೇಕ ಯೋಧರು, ಅಧಿಕಾರಿಗಳು ಹುದ್ದೆ ತೊರೆದು ಓಡಿ ಹೋಗಿದ್ದಾರೆ, ತಲೆಮರೆಸಿಕೊಂಡಿದ್ದಾರೆ. ಜನರು ಅಧ್ಯಕ್ಷರ ಅಧಿಕೃತ ನಿವಾಸ/ಅರಮನೆ, ರಕ್ಷಣಾ ಸಚಿವಾಲಯ ಮುಂತಾದ ಕಟ್ಟಡಗಳನ್ನು ವಶಕ್ಕೆ ತೆಗೆದುಕೊಂಡು ಲೂಟಿ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.
ಈ ಹಿಂದೆ ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದಲ್ಲೂ ಇದೇ ಮಾದರಿಯಲ್ಲಿ ಸಾರ್ವಜನಿಕರು ಲೂಟಿ-ಧ್ವಂಸ ಮಾಡಿ, ಅಧಿಕಾರಸ್ಥರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಕೆಲ ದಿನಗಳಿಂದ ಸಿರಿಯಾದ ವಾಯವ್ಯ ಪ್ರದೇಶ ದಲ್ಲಿ ಬಂಡುಕೋರರು ಅಧ್ಯಕ್ಷ ಅಸಾದ್‌ಗೆ ನಿಷ್ಠವಾಗಿರುವ ಪಡೆಗಳ ಮೇಲೆ ದಾಳಿ ಮಾಡಿ ಬಹಳಷ್ಟು ಭೂ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡರು, ಇದ್ಲಿಬ್ ಪ್ರದೇಶದಿಂದ ಆಕ್ರಮಣ ಶುರುಮಾಡಿ ಅಲೆಪ್ಪೊ ನಗರದ
ಬಹುಭಾಗವನ್ನು ಕೈವಶಮಾಡಿಕೊಂಡರು.
ಕೆಲವೇ ದಿನಗಳಲ್ಲಿ ಅಲೆಪ್ಪೊ ಮೇಲೆ ನಿಯಂತ್ರಣ ಸಾಧಿಸಿ, ಸರಕಾರದ ಪಾಲಿನ ಪ್ರಮುಖ ಪ್ರದೇಶವಾದ ಹಾಮಾ ಕಡೆಗೆ ಸಾಗಿ ಅದನ್ನು ಕಬ್ಜಾ ಮಾಡಿಕೊಂಡರು. ನಂತರ ರಾಜಧಾನಿ ಡಮಾಸ್ಕಸ್‌ಗೆ ಅವರು ಮುನ್ನುಗ್ಗಿದ ಪರಿಣಾಮ ಒಂದಷ್ಟು ರಕ್ತಪಾತವಾಗಿ ಅನೇಕರು ಹತರಾದರು. ಸರಕಾರ ತನ್ನ ಹತೋಟಿಯನ್ನು ಬಹುತೇಕ ಕಳೆದುಕೊಂಡಿತು. ಈ ಬಂಡುಕೋರರ ಜತೆ ಮಾತುಕತೆ ನಡೆಸಿದ ನಂತರ ಅಲ್ ಅಸಾದ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿತ್ತು, ಬಂಡುಕೋರರಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿ ದೇಶ ಬಿಟ್ಟು ಪರಾರಿಯಾದರು.
ಅವರೆಲ್ಲಿದ್ದಾರೆ? ಯಾರ ಆಶ್ರಯದಲ್ಲಿದ್ದಾರೆ? ಅಥವಾ ಬಂಡುಕೋರರಿಂದ ಹತರಾಗಿದ್ದಾರೆಯೇ? ಎಂಬುದು ಸ್ಪಷ್ಟ ವಾಗಿಲ್ಲ. ಸಿರಿಯಾ ಪ್ರಕ್ಷುಬ್ಧವಾಗಿದ್ದು, ಆಂತರಿಕ ಕಚ್ಚಾಟ ಮತ್ತು ದಂಗೆಯಿಂದ ಹೈರಾಣಾಗಿದೆ. ಈ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಲು ಅಮೆರಿಕ, ರಷ್ಯಾ, ಇಸ್ರೇಲ್ ಯೋಜನೆಗಳನ್ನು ಹಮ್ಮಿಕೊಂಡಂತೆ ಮತ್ತು ಮೇಲುಗೈ ಸಾಧಿಸುವ ಹಪಹಪಿಗೆ ಸಿಲುಕಿದಂತೆ ಭಾಸವಾಗುತ್ತಿದೆ.
“ಬಿಕ್ಕಟ್ಟಿನಲ್ಲಿ ನನ್ನ ಪಾತ್ರವೇನಿಲ್ಲ” ಎಂದು ರಷ್ಯಾ ಹೇಳುತ್ತಿದೆಯಾದರೂ, ಅದನ್ನು ಒಪ್ಪಲಾಗದು! ಏಕೆಂದರೆ,
ಪರದೇಶದ ಮೇಲಿನ ತನ್ನ ‘ದಾಳಿ-ನಿಯಂತ್ರಣ’ ಪ್ರಯತ್ನದ ಇಂಥ ವಿಷಯಗಳನ್ನು ಯಾವ ದೇಶವೂ ಅಧಿಕೃತವಾಗಿ
ಹೇಳಿಕೊಳ್ಳುವುದಿಲ್ಲ! ಹಿಂಸಾಚಾರ ತ್ಯಜಿಸಿ, ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಈಗಿರುವ
ಅವ್ಯವಸ್ಥೆಯನ್ನು ಪರಿಹರಿಸುವಂತೆ ಬಂಡುಕೋರರಿಗೆ ರಷ್ಯಾ ಮನವಿ ಮಾಡಿ ನೈತಿಕ ಬೆಂಬಲ ಸೂಚಿಸಿದೆ.
ಅಸಾದ್ ಆಡಳಿತವನ್ನು ಕಿತ್ತೊಗೆಯಲು ರಷ್ಯಾ ದಶಕಗಳಿಂದ ಯತ್ನಿಸುತ್ತಿರುವುದು ಗೊತ್ತಿರುವಂಥದ್ದೇ; ಇಷ್ಟಾ ಗಿಯೂ ಅಲ್ಲಿನ ರಾಜಕೀಯದಲ್ಲಿ ತನ್ನ ಪಾತ್ರವಿಲ್ಲ ಎಂದು ರಷ್ಯಾ ಹೇಳಿಕೊಂಡಿರುವುದು ಈ ದಶಕದ ಜೋಕ್, ಅಷ್ಟೇ! ಇನ್ನು ಅಮೆರಿಕ, ತನ್ನ ಸಾರ್ವಭೌಮತ್ವವನ್ನು ವಿಸ್ತರಿಸಲು ಅನೇಕ ದೇಶಗಳನ್ನು ಕಾಲಕಾಲಕ್ಕೆ ತನಗೆ ಬೇಕಾದಂತೆ ಬಳಸುತ್ತಿರುವುದು ನಿತ್ಯಸತ್ಯ. ಅಮೆರಿಕವು ತನಗಾಗದ ದೇಶವನ್ನು ಹಣಿಯಲು ಅದರ ವೈರಿದೇಶಗಳಿಗೆ ನೆರವಾಗುವ ಮೂಲಕ ಆ ದೇಶವನ್ನೇ ನೀವಾಳಿಸಿ ಆಪೋಶನ ತೆಗೆದುಕೊಂಡ ಉದಾಹರಣೆಗಳಿವೆ. ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ಅಧ್ಯಕ್ಷ ಜೋ ಬೈಡನ್, “ನಿರಂಕುಶ ಆಡಳಿತದ ಅಸಾದ್ ಕುಟುಂಬವು ಸಿರಿಯಾ ವನ್ನು ತೊರೆಯುವಂತೆ ಮಾಡಿದ್ದಾರೆ ಬಂಡುಕೋರರು.
ಸಿರಿಯಾದ ಜನರ ಪಾಲಿಗೆ ಸದೃಢ ದೇಶವನ್ನು ನಿರ್ಮಿಸಲು ಇದು ಸಕಾಲ. ಇಂಥ ಸ್ಥಿರತೆಯನ್ನು ಸ್ಥಾಪಿಸುವುದರ ಜತೆಗೆ, ಸಿರಿಯಾದ ನೆರೆಯ ರಾಷ್ಟ್ರಗಳಾದ ಜೋರ್ಡಾನ್, ಇರಾಕ್, ಇಸ್ರೇಲ್, ಲೆಬನಾನ್‌ಗಳಿಗೆ ಯಾವುದೇ ಅಪಾಯ
ಸಂಭವಿಸಿದರೆ ಬೆಂಬಲಿಸಲೂ ಅಮೆರಿಕ ಸಿದ್ಧವಾಗಿದೆ” ಎಂದಿದ್ದಾರೆ. ರಷ್ಯಾಕ್ಕೆ ಟಕ್ಕರ್ ಕೊಡಲು ಈ ಪ್ರಹಸನ
ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ!
ಈ ಮಧ್ಯೆ ಸಿರಿಯಾದಲ್ಲಿನ ಐಸಿಸ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ ವರದಿಗಳು
ಬರುತ್ತಿದ್ದು, 75ಕ್ಕೂ ಹೆಚ್ಚಿನ ಪ್ರದೇಶಗಳ ಮೇಲೆ ಅಮೆರಿಕದ ಬಾಂಬ್ ಮತ್ತು ವೈಮಾನಿಕ ದಾಳಿಯಾಗಿದೆ ಎನ್ನಲಾ ಗಿದೆ. “ಸರ್ವಾಧಿಕಾರಿ ಅಸಾದ್ ದೇಶಬಿಟ್ಟ ನಂತರ ‘ಹಯಾತ್ ತಹ್ರೀರ್ ಅಲ್-ಶಾಮ್’ ನೇತೃತ್ವದ ‘ಉಗ್ರರು’
ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲಿ ಐಸಿಸ್ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಇವರು ಚಿಗುರಿ ಮತ್ತೆ ಹೋರಾಟಕ್ಕಿಳಿಯಬಾರದೆಂಬ ಕಾರಣಕ್ಕೆ ಈ ದಾಳಿ ನಡೆಸಿದ್ದೇವೆ” ಎಂಬುದು ಅಮೆರಿಕದ ಅಸಂಬದ್ಧ ವಿವರಣೆ. ಅಸಾದ್ ಸರಕಾರ ಪತನಗೊಂಡು ಇರಾನ್ ದೇಶವನ್ನು ಬಂಡುಕೋರರು ವಶಪಡಿಸಿಕೊಂಡ ಕೂಡಲೇ, ಇಸ್ರೇಲ್ ಗಡಿಭಾಗದ ‘ಗೋಲ್ಡನ್ ಹೈಟ್ಸ್’ ಸಮೀಪದ, ನೈಋತ್ಯ ಸಿರಿಯಾದ ಸೇನಾರಹಿತ ಪ್ರದೇಶದಲ್ಲಿ ‘ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ ನೆರವಾಗುವ’ ನಿಟ್ಟಿನಲ್ಲಿ ಸೇನಾಪಡೆಯನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇದರ ಜತೆಗೆ ಇರಾನ್ ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ವಿವಿಧ ಕಚೇರಿಗಳ ಕಟ್ಟಡಗಳ ಮೇಲೆ ಅದು ದಾಳಿ ನಡೆಸಿದೆ.
ಇದರಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಇರಾನ್ ವಿಜ್ಞಾನಿಗಳು ಇದೇ ಸಮುಚ್ಚಯದಲ್ಲಿ ಕ್ಷಿಪಣಿ ಅಭಿವೃದ್ಧಿಪಡಿಸಿದ್ದರು. ಹಾಗಾಗಿ ಇಸ್ರೇಲ್ ಈ ದಾಳಿ ನಡೆಸಿ ರಣಕೇಕೆ ಹಾಕಿದೆ ಎಂಬುದು ವಿಶ್ಲೇಷಣೆ. ಕಳೆದ ಕೆಲವು ದಶಕಗಳಿಂದ ಶತ್ರುದೇಶಗಳೊಂದಿಗೆ ಯುದ್ಧ ಮಾಡುತ್ತಿರುವ ಸಿರಿಯಾ, ದೇಶದೊಳಗಿನ ಅನೇಕ ಅಂತರ್ಯುದ್ಧ, ಬಂಡಾಯಗಾರರ ಹೋರಾಟ ಮತ್ತು ದಾಳಿಗಳಿಂದ ನಲುಗಿದೆ. ಕೆಲವೇ ಪಟ್ಟಭದ್ರ ಹಿತಾಸಕ್ತಿಗಳು, ಉಗ್ರಸಂಘಟನೆ ಗಳು ಮತ್ತು ದುರಾಡಳಿತದಿಂದಾಗಿ ಈ ಪರಿಸ್ಥಿತಿ ರೂಪುಗೊಂಡಿದೆ.
ಇದರಿಂದಾಗಿ ಸಿರಿಯಾದ ಸಾಮಾನ್ಯ ಪ್ರಜೆಗಳ ಮೇಲೆ ಸಾವಿನ ಛಾಯೆ ಆವರಿಸಿದೆ ಮತ್ತು ಅವರ ಆರ್ಥಿಕ ಪರಿಸ್ಥಿತಿ ಯೂ ನೆಲಕಚ್ಚಿ ದೈನಂದಿನ ಜೀವನ ಸಾಗಿಸಲೂ ಪರದಾಡುತ್ತಿದ್ದಾರೆ. ಯುದ್ಧ/ ಸಂಘರ್ಷದ ಘೋರ ಮತ್ತು ವ್ಯತಿರಿಕ್ತ ಪರಿಣಾಮವಿದು. ಕಳೆದೊಂದು ವರ್ಷದಿಂದ ಸಿರಿಯಾದ ಮೇಲೆ ಇಸ್ರೇಲ್ ನಡೆಸಿರುವ ವಾಯುದಾಳಿ ಯಿಂದಾಗಿ ಸಾಕಷ್ಟು ಸೇನಾಧಿಕಾರಿಗಳು, ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಸಾಲದೆಂಬಂತೆ, ಆಂತರಿಕ ದಂಗೆ, ಹಿಂಸಾಚಾರ, ಅಂತರ್ಯುದ್ಧದಿಂದಾಗಿ ಹಲವರು ಅಸುನೀಗಿದ್ದಾರೆ. ಹೀಗಾಗಿ ಇಲ್ಲಿನ ಜನರಿಗೆ ಶಾಂತಿ, ಸೌಹಾರ್ದ, ಸಾಮಾನ್ಯ ಜೀವನ ಮರೀಚಿಕೆಯಾಗಿವೆ. ಅಧಿಕಾರದ ಹಪಾಹಪಿಯಲ್ಲಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಇಂಥ ಸಂಘರ್ಷಗಳು, ಹಿಂಸಾಚಾರಗಳಿಂದ ಜನರ ಬದುಕು ನರಕ ವಾಗುತ್ತಿರು ವುದು ದುರಂತ.
ಚೀನಾ, ಅಮೆರಿಕ, ರಷ್ಯಾ ದೇಶಗಳು, ವೈವಿಧ್ಯಮಯ ನೆರವಿನ ಹಣೆಪಟ್ಟಿಯಡಿ ಉಗ್ರರನ್ನು ಮತ್ತು ಹಿಂಸಾಚಾರ ವನ್ನು ಪೋಷಿಸುವ, ತಂತಮ್ಮ ಪ್ರಾಬಲ್ಯ ಪ್ರದರ್ಶಿಸುವ ಕಳಪೆ ತಂತ್ರಗಾರಿಕೆಯನ್ನು ನಿಲ್ಲಿಸಬೇಕಿದೆ. ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸಿ ಅಸ್ಥಿರತೆ ಉಂಟುಮಾಡುವ ಅವುಗಳ ಚಾಳಿ ಕೊನೆಯಾಗಬೇಕಿದೆ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ )
ಇದನ್ನೂ ಓದಿ: Ravi Sajangadde Column: ಆಟದಲ್ಲಿ ಧೀಮಂತ, ದಾನದಲ್ಲಿ ಶ್ರೀಮಂತ ಈ ನಡಾಲ್ !