Saturday, 17th May 2025

Ravi Hunz Column: ಸಂಶೋಧನಾ ವೈಜ್ಞಾನಿಕ ವ್ಯವಸ್ಥೆಯನ್ನು ಅಧೋಮುಖ‌ವಾಗಿಸಿದ್ದು ಮನುಸ್ಮೃತಿ !

ಬಸವ ಮಂಟಪ

ರವಿ ಹಂಜ್

(ಭಾಗ -1)

ಭಾರತೀಯ ತರ್ಕಶಾಸ್ತ್ರವು ಕ್ರಿ.ಪೂ. 6ನೇ ಶತಮಾನದ ಗೌತಮ, ಕ್ರಿ.ಪೂ. 5ನೇ ಶತಮಾನದ ಪಾಣಿನಿಯವರಿಂದ ಆರಂಭಗೊಂಡು ನಂತರದ ವಸುಬಂಧ, ದಿಜ್ಞಾನ, ಚತುಷ್ಕೋಟಿ, ನಾಗಾರ್ಜುನರಿಂದ ವಿಕಸಿಸುತ್ತ, ನಂತರ ನ್ಯಾಯ ತರ್ಕಶಾಲೆಗಳಂಥ ತರ್ಕಶಾಲೆಗಳ ಮೂಸೆಯಲ್ಲಿ ಹದಗೊಳ್ಳುತ್ತ ಉನ್ನತಿಗೇರುತ್ತ ಅಂದಿನ ಜಗತ್ತಿನಲ್ಲಿ ತನ್ನದೇ ಆದ ಮಹತ್ತರ ಸ್ಥಾನವನ್ನು ಗಳಿಸಿತು. ವ್ಯಾಕರಣದ ಬುನಾದಿಯಿಂದ ಆರಂಭಗೊಂಡು ನ್ಯಾಯದ ಪರಿಧಿಯನ್ನೊಳ ಗೆಳೆದುಕೊಳ್ಳುತ್ತಾ ಎಡೆ ಮನ್ನಣೆ ಗಳಿಸಿತು.

ಕೇವಲ ಸಾಮಾಜಿಕ, ಆಡಳಿತಾತ್ಮಕ, ತಾತ್ವಿಕ ರೂಪದ ವೇದ ಉಪನಿಷತ್ತುಗಳಲ್ಲದೆ ಎಲ್ಲಾ ಶಾಸ್ತ್ರ-ಸೂತ್ರ-ತಂತ್ರಜ್ಞಾನದಂಥ ಆವಿಷ್ಕಾರಕ ಸಂಗತಿಗಳಿಗೆ ಸಹ ಭದ್ರ ಮೂಲ ಬುನಾದಿಯನ್ನೊದಗಿಸಿತು. ಹಿಂದೂ, ಪಾಶುಪತ, ಜೈನ, ಬೌದ್ಧಧರ್ಮಗಳು ಧರ್ಮಗಳಾಗಿ ವಿಕಾಸಗೊಳ್ಳುವ ಮೊದಲು ತರ್ಕಶಾಸ್ತ್ರದ ತಾತ್ವಿಕಶಾಲೆಗಳಾಗಿದ್ದವು. ತರ್ಕವು ಪಂಥಗಳಾಗಿ ಕವಲೊಡೆಯುವ ಶತಮಾನಗಳಿಗೂ ಮುನ್ನ ತಾರ್ಕಿಕ ವಿಕಾಸವಾದದಲ್ಲಿ ‘ನ್ಯಾಯ’ ತರ್ಕ ಶಾಲೆಯು ಹೆಚ್ಚು ಪ್ರಾಮುಖ್ಯವನ್ನು ಪಡೆಯಿತು. ಇದನ್ನು ಸಂಶೋಧಕರು ‘ಹಿಂದೂ ಆಸ್ತಿಕ ಹಿನ್ನೆಲೆಯ
ಶಾಸ್ತ್ರ’ವೆಂದೂ ಕರೆಯುತ್ತಾರೆ.

ನ್ಯಾಯ ಸಿದ್ಧಾಂತದ ಪ್ರಕಾರ ಜ್ಞಾನವು ಪ್ರಮುಖವಾಗಿ ದುಃಖ (ಕ್ಲೇಶ)ಗಳಲ್ಲಿ ಹುದುಗಿರುತ್ತದೆ. ಆ ದುಃಖವನ್ನು ಹೋಗಲಾಡಿಸಿದರೆ ಅಲ್ಲಿ ಉಳಿಯುವುದೇ ತತ್ವ ಯಾ ಜ್ಞಾನ ಯಾ ಪ್ರಗತಿ ಎನ್ನಲಾಗುತ್ತದೆ. ಅಂಥ ತತ್ವವನ್ನು ಹೆಕ್ಕಲು 4 ಆಯಾಮಗಳನ್ನು ಆಳವಡಿಸಿಕೊಳ್ಳಬೇಕು. ಗ್ರಹಿಕೆ (ಅಂತರ್ದೃಷ್ಟಿ), ತೀರ್ಮಾನ (ಅನುಮಾನ, ಊಹೆ, ಕ್ಲೀಷೆ), ತುಲನೆ (ಹೋಲಿಕೆ) ಮತ್ತು ರುಜುವಾತು (ಪ್ರಮಾಣ). ಒಂದು ವಿಷಯವನ್ನು ಈ ನಾಲ್ಕೂ ಸೂತ್ರಗಳಿಗೊಡ್ಡಿ ಸೋಸಿದಾಗ ದುಃಖವು ಕಳೆದು ಜ್ಞಾನವು ಸಿಗುತ್ತದೆ. ಆದರೆ ಆ ಜ್ಞಾನವು ಸತ್ಯವಾಗಿರಬಹುದು ಅಥವಾ ಅಲ್ಲದಿರ ಬಹುದು ಕೂಡ.

ಹಾಗಾಗಿ ಆ ಕಂಡುಕೊಂಡ ಜ್ಞಾನವನ್ನು ಮತ್ತೆ ಮತ್ತೆ ಈ 4 ಸೂತ್ರಗಳಲ್ಲಿ ಒರೆಗೆ ಹಚ್ಚಿ ಅಂತಿಮ ಪರಿಣಾಮವನ್ನು ಕಂಡುಕೊಳ್ಳಬೇಕು. ಯಾವಾಗ ಮತ್ತೆ ಮತ್ತೆ ಮರು ಒರೆಗೆ ಹಚ್ಚಿದಾಗ ಒಂದೇ ರೂಪದ ಫಲಿತಾಂಶ ಸಿಗಲಾರಂಭಿ ಸುವುದೋ ಆಗ ಆ ವಿಷಯವು ತಾರ್ಕಿಕ ಘಟ್ಟವನ್ನು ತಲುಪಿದೆ ಎಂದರ್ಥ. ಇದು ಒಟ್ಟಾರೆ ನ್ಯಾಯ ತರ್ಕಶಾಸ್ತ್ರದ ಸಂಕ್ಷಿಪ್ತ ಸೂತ್ರ. ಇದನ್ನು ಜಗತ್ತಿನ ಪ್ರಪ್ರಥಮ ‘ವಿಶ್ಲೇಷಣಾ ಸೂತ್ರ’ ಎನ್ನಬಹುದು. ಕ್ರಿ.ಶ. 18ನೇ ಶತಮಾನದವರೆಗೆ ಪ್ರಪಂಚದಾದ್ಯಂತ ತಟಸ್ಥವಾಗಿದ್ದ ವೈಜ್ಞಾನಿಕ ಮತ್ತು ಗಣಿತಾತ್ಮಕ ಚಿಂತನೆ 19ನೇ ಶತಮಾನದಲ್ಲಿ ಮಿಂಚಿನಂತೆ ಸಂಚಲಿಸಲಾರಂಭಿಸಿತು.

ಆ ಸಂಚಲನದ ಕಾರಣವಾಗಿ ಪಾಶ್ಚಿಮಾತ್ಯ ವಿದ್ವಾಂಸರು ಭಾರತೀಯ ತರ್ಕಶಾಸ್ತ್ರವನ್ನು ಬಹುವಾಗಿ ಪರಿಗಣಿಸಲಾ ರಂಭಿಸಿದರು. ಅಲ್ಲಿಯವರೆಗೆ ಅರಿಸ್ಟಾಟಲೆನಿಯನ್ ತರ್ಕವನ್ನು ಪರಿಗಣಿಸಿದ್ದ ಪಶ್ಚಿಮವು ಭಾರತೀಯ ತರ್ಕಶಾಸ್ತ್ರದ ಸೂತ್ರಗಳನ್ನು ಗ್ರೀಕ್ ತರ್ಕದೊಂದಿಗೆ ಸಮ್ಮಿಳಿತಗೊಳಿಸಿಕೊಂಡು ಜಾಗತಿಕ ತೌಲನಿಕ ಅಧ್ಯಯನದಲ್ಲಿ ತೊಡಗಿತು.

ಯುರೋಪಿನ ಪ್ರಪ್ರಥಮ ಸಂಸ್ಕೃತ ವಿದ್ವಾಂಸನೆಂದು ಖ್ಯಾತನಾಗಿದ್ದ ಗಣಿತಜ್ಞ ಹೆನ್ರಿ ಟಿ. ಕೋಲ್‌ಬ್ರೂಕ್ ಸ್ಥೂಲ ವಾಗಿಯೂ ತುಲನಾತ್ಮಕವಾಗಿಯೂ ಅರಿಸ್ಟಾಟಲ್ ಯಾ ಗ್ರೀಕ್ ತರ್ಕಶಾಸ್ತ್ರವನ್ನು ಮತ್ತು ಹಿಂದೂ ತರ್ಕ ಶಾಸ್ತ್ರ ವನ್ನು ಒರೆಗೆ ಹಚ್ಚಿ The Philosophy of Hindus: On the Nyaya and Vaisheshika Systems ಎಂಬ ಗ್ರಂಥ ವನ್ನು 1824ರಲ್ಲಿ ತಂದನು. ‌

ಅಲ್ಲಿಂದ ನಂತರ ಮ್ಯಾಕ್ಸ್ ಮ್ಯೂಲರ್, ಜಾರ್ಜ್ ಬೂಲೆ, ಅಗಸ್ಟಸ್ ಡಿ.ಮೋರ್ಗನ್, ಚಾರ್ಲ್ಸ್ ಬ್ಯಾಬೇಜ್, ಮೇರಿ ಬೂಲೆ ಮುಂತಾದ ಗಣಿತಜ್ಞರು ‌ಭಾರತೀಯ ತರ್ಕಶಾಸ್ತ್ರವನ್ನು ಪ್ರಮುಖವಾಗಿ ಬೆಳಕಿಗೆ ತಂದದ್ದಲ್ಲದೆ ತಮ್ಮ ಸಂಶೋಧನೆಗಳಲ್ಲಿ ಅಳವಡಿಸಿಕೊಂಡರು. ಈ ಪರಿಣಾಮವಾಗಿ ಜಾರ್ಜ್ ಬೂಲೆಯ ‘ಬೂಲಿಯನ್ ಆಲ್ಜೀಬ್ರಾ’
ಅಲ್ಲದೆ ಅನೇಕ ಬೀಜಗಣಿತದ ಸೂತ್ರಗಳು ಭಾರತೀಯ ತರ್ಕಶಾಸ್ತ್ರದ ಸೂತ್ರಗಳನ್ನು ಬಳಸಿಕೊಂಡು ರೂಪಿತ ಗೊಂಡವು. ಇಂದು ಬೂಲಿಯನ್ ಬೀಜಗಣಿತದ ಸಿದ್ಧಾಂತದ ಆಧಾರಿತವಾಗಿ ಕಂಪ್ಯೂಟರ್ ಕ್ರಾಂತಿಯಾಗಿ ಜಗತ್ತು ಕ್ರಾಂತಿಕಾರಕ ಪ್ರಗತಿಯನ್ನು ಕಂಡಿದೆ.

ಜಾರ್ಜ್ ಬೂಲೆಯವರ ಪತ್ನಿ ಮೇರಿ ಬೂಲೆ ತಮ್ಮ ‘Indian Thought and Western Science in the Nineteenth Century’ ಪುಸ್ತಕದಲ್ಲಿ “ಜಾರ್ಜ್ ಬೂಲೆ, ಚಾರ್ಲ್ಸ್ ಬ್ಯಾಬೇಜ್ ಮತ್ತು ಅಗಸ್ಟಸ್ ಡಿ.ಮೋರ್ಗನ್ ಅವರುಗಳು ಭಾರತೀಯ ತರ್ಕಶಾಸ್ತ್ರದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಇವರುಗಳಿಗೆ ಭಾರತದಲ್ಲಿ ಸಾಕಷ್ಟು ವರ್ಷ‌ ವಾಸವಿದ್ದ ನನ್ನ ಚಿಕ್ಕಪ್ಪನಾದ ಜಾರ್ಜ್ ಎವರೆ ಅವರು ಭಾರತೀಯ ತರ್ಕಶಾಸ್ತ್ರ ಮತ್ತು ಗಣಿತದ ನಡುವೆ ಸೇತು ವಾಗಿದ್ದರು. ಈ ನನ್ನ ಚಿಕ್ಕಪ್ಪನಾದ ಜಾರ್ಜ್ ಎವರೆ ಅವರ ಹೆಸರನ್ನೇ ವಿಶ್ವದ ಮೇರುಶಿಖರಕ್ಕೆ ಹೆಸರಿಸಿದರು”
ಎನ್ನುತ್ತಾರೆ. ಹಾಗೆಯೇ ‘Mary Everest Collected Works’ ಕೃತಿಯ ಪುಟ 947-967ರಲ್ಲಿ “1830-65ರ ಕಾಲ ಘಟ್ಟದಲ್ಲಿ ಬ್ಯಾಬೇಜ್, ಬೂಲೆ ಮತ್ತು ಡಿ.ಮೋರ್ಗನ್ ಅವರುಗಳನ್ನು ಹಿಂದೂಗಳಾಗಿಸಿ ಪರಿವರ್ತಿಸಿ ತರ್ಕಶಾಸ್ತ್ರವನ್ನು ಅರ್ಥ ಮಾಡಿಸುವ ಸಂಕಷ್ಟ ಹೇಗಿದ್ದಿರಬಹುದೆಂದು ಊಹಿಸಿಕೊಳ್ಳಿ.

ಅಂಥ ಸಂಕಷ್ಟವನ್ನು ನನ್ನ ಚಿಕ್ಕಪ್ಪ ಹೊತ್ತು ಈ ಮೂವರಿಗೆ ಭಾರತೀಯ ತರ್ಕಶಾಸ್ತ್ರವನ್ನು ಅರ್ಥಮಾಡಿಸಿದ್ದರು” ಎಂದು ಹೇಳುತ್ತಾರೆ. ಇದೆಲ್ಲದರ ಪರಿಣಾಮವಾಗಿ 1860ರಲ್ಲಿ ಅಗಸ್ಟಸ್ ಡಿ.ಮೋರ್ಗನ್ “ಸಂಸ್ಕೃತ ಮತ್ತು ಗ್ರೀಕ್ ಭಾಷಾ ಬುನಾದಿಯ ತರ್ಕಶಾಸ್ತ್ರಗಳೇ ಸ್ವತಂತ್ರವಾಗಿ ಜಾಗತಿಕ ಗಣಿತಶಾಸ್ತ್ರವನ್ನು ಸಂಸ್ಥಾಪಿಸಿದವು” ಎನ್ನುತ್ತಾರೆ.
ಹೀಗೆ ಹಿಂದೂ ಸಂಸ್ಕೃತಿಯ ಜ್ಞಾನಸಂಪತ್ತು ಅನಾವರಣಗೊಳ್ಳುತ್ತದಲ್ಲದೆ ಬೌದ್ಧ ಮತ್ತು ಜೈನಪಂಥಗಳು ತಾರ್ಕಿಕ ವಾಗಿ ಧರ್ಮಗಳು ಎನ್ನುವುದಕ್ಕಿಂತ ಹಿಂದೂ ಸಂಸ್ಕೃತಿಯ ಪ್ರಭೇದದ ತಾರ್ಕಿಕ ತತ್ವ-ಸಿದ್ಧಾಂತ ಗಳಾಗಿದ್ದವಷ್ಟೇ ಎಂದೂ ಸಾಬೀತಾಗುತ್ತದೆ.

ಅದೇ ರೀತಿ ಹಿಂದೂ ಪ್ರಭೇದದ ಸಮಗ್ರ ಪಾಶುಪತ, ಕಾಳಾಮುಖ, ಕಾಪಾಲಿಕ, ಶೈವ ಪರಂಪರೆಯ ಇಂದಿನ ರೂಪ ವಾದ ವೀರಶೈವವು ಸಹ. ಅಲ್ಲಮ, ಅಕ್ಕ ಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಹಡಪದ ಅಪ್ಪಣ್ಣ, ತೋಂಟದ ಸಿದ್ಧಲಿಂಗ ಮುಂತಾದ ಅನೇಕ ವಚನಕಾರರ ವಚನಗಳಲ್ಲಿರುವ ಹಿಂದೂ ಸಂಸ್ಕೃತಿಯ ಯೋಗ, ಅಧ್ಯಾತ್ಮ, ಪಾಣಿನಿ ಸೂತ್ರಗಳ ವಿಕಾಸ ಮತ್ತು ವೀರಶೈವೀಕರಣ, ಪಾಶುಪತ-ಲಕುಲೀಶ ಶೈವ ಸಿದ್ಧಾಂತ, ದರ್ಶನ, ತರ್ಕ, ಆಚರಣೆ ಮುಂತಾದ ಅಗತ್ಯ ಧಾರ್ಮಿಕವೆನ್ನಿಸುವ ಪರತಂತ್ರ ತತ್ವಾನುಷ್ಠಾನಗಳನ್ನು ಉಪೇಕ್ಷಿಸಿ ಕೇವಲ ಅನುಕೂಲಸಿಂಧು ಸಾಮಾಜಿಕ ಚಳವಳಿಯ ಭಾಗವನ್ನು ಮಾತ್ರ ಎತ್ತಿಕೊಂಡು “ಲಿಂಗಾಯತ ಸ್ವತಂತ್ರ ಧರ್ಮ”
ಎನ್ನಲಾಗದು. ಅದೇ ರೀತಿ ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಗದಿದ್ದರೂ ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಸೃಷ್ಟಿಸಿರುವುದನ್ನು ಸಂಶೋಧನೆ ಎಂದೂ ಕರೆಯಲಾಗದು.

‘ಬಸವರಾಜದೇವರ ರಗಳೆ’ ಮತ್ತು ‘ಬಸವಪುರಾಣ’ಗಳಲ್ಲಿ ಸಹ ಈ ವಾಚ್ಯಸೂಚಕಗಳನ್ನು ವಚನಗಳೆಂದು ಕರೆದಿಲ್ಲ. ಎಲ್ಲಾ ಇತಿಹಾಸಜ್ಞಮಾನ್ಯ ದಾಖಲೆಗಳು ಇರುವುದು ಕಾಳಾಮುಖ ವೀರಶೈವ ಸಂಬಂಧಿತ ಮಾತ್ರ! ವಚನಗಳನ್ನು ಸಮಗ್ರವಾಗಿ ಚರ್ಚಾ ದೃಷ್ಟಿಯಿಂದ ನೋಡದೆ ಕೇವಲ ಬಿಡಿಬಿಡಿಯಾಗಿ ಗ್ರಹಿಸಿ ಧರ್ಮ ಕಟ್ಟುತ್ತೇವೆನ್ನುವುದು ‘ಜಲದೊಳ್ ಲಿಖಿತ ಲಿಪಿಯಪ್ಪುದು’. ಹೀಗೆ ಈ ವಿಷಯದ ಕುರಿತಾಗಿ ಕರ್ನಾಟಕದ ಸಂಶೋಧನೆಯ ಪಿತಾಮಹ ಎಂದೇ ಪರಿಗಣಿತರಾಗಿರುವ ಎಂ.ಎಂ. ಕಲಬುರ್ಗಿಯವರ ಬಾಲಿಶ ಸಂಶೋಧನೆಗಳನ್ನು ಗಮನಿಸಿದ ಮೇಲೆ ನಮ್ಮ ವರ್ತಮಾನದ ವಿಶ್ವವಿದ್ಯಾಲಯಗಳು ಒಂದು ತಾರ್ಕಿಕ ನೆಲೆಗಟ್ಟನ್ನು ಕಟ್ಟಿಕೊಡುವಂಥ ಸಂಶೋಧನೆಗಳನ್ನಾಗಲಿ, ಐತಿಹಾಸಿಕ ಸತ್ಯವನ್ನಾಗಲಿ, ತಂತ್ರಜ್ಞಾನವನ್ನಾಗಲಿ ಎಷ್ಟರಮಟ್ಟಿಗೆ ಕಟ್ಟಿಕೊಟ್ಟಿವೆಯೋ ಎಂಬ ತೀವ್ರ ಅನುಮಾನ ಗಳು ಸಹಜವಾಗಿ ಏಳುತ್ತವೆ.

ಅದರಲ್ಲೂ ಇವುಗಳು ಕೈಗೊಂಡ ಅಸಂಖ್ಯಾತ ಸಾಮಾಜಿಕ ಹಿನ್ನೆಲೆಯ ಸಂಶೋಧನೆಗಳನ್ನು ಗಮನಿಸಿದ ಮೇಲೆ ಇವು ಕೇವಲ ಪೋ-ಡಾಕ್ಟೊರೇಟ್, ಡಾಕ್ಟೊರೇಟ್, ಸ್ನಾತಕೋತ್ತರ ಪದವಿಗಳನ್ನು ಭಾರತದ ಜನಸಂಖ್ಯಾಸ್ಪೋಟಕ್ಕೆ ಪೂರಕವಾಗಿಯೋ ಸ್ಪರ್ಧಾತ್ಮಕವಾಗಿಯೋ ಕಟ್ಟಿಕೊಟ್ಟವೇನೋ ಎನಿಸುತ್ತದೆ.

ಏಕೆಂದರೆ ‘ಶೋಧ್ ಗಂಗಾ’ https://shodhganga.inflibnet.ac.in/ ಎಂಬ ಜಾಲತಾಣದಲ್ಲಿರುವ ಲಕ್ಷಾಂತರ ಪಿಎಚ್‌ಡಿ ಥೀಸಿಸುಗಳ ಕಡೆ ಒಮ್ಮೆ ಕಣ್ಣೋಟ ಹರಿಸಿ ಮತ್ತವುಗಳಲ್ಲಿ ಕೆಲವನ್ನು ಯಾದೃಚ್ಛಿಕವಾಗಿ ಆಯ್ದು ಸ್ಥೂಲವಾಗಿ ಪರಿಗಣಿಸಿದಾಗ ಹೀಗೆನ್ನಿಸುತ್ತದೆ. ಈ ಜಾಲತಾಣದಲ್ಲಿ 5,60,745 ಥೀಸಿಸುಗಳಿದ್ದು ಭಾರತೀಯ ಸಮಾಜದಲ್ಲಿ ಸ್ಥಾಪಿತಗೊಂಡಿರುವ ಸೈದ್ಧಾಂತಿಕ, ಐತಿಹಾಸಿಕ, ಮಾನವಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಕೆಲವೇ ಕೆಲವು ಖ್ಯಾತ ಸಿದ್ಧಾಂತಗಳನ್ನು ಪರಿಶೀಲಿಸಿ ನೋಡಿದಾಗ ಆ ಸಿದ್ಧಾಂತಗಳು ಸಾಮಾನ್ಯ ತಿಳಿವಳಿಕೆಯ ವಿಶ್ಲೇಷಣೆಗೆ, ತರ್ಕಕ್ಕೆ ಮತ್ತು ಸಾಕ್ಷಿಗಳಿಗೆ ತದ್ವಿರುದ್ಧವಾಗಿವೆ. ವೀರಶೈವ-ಲಿಂಗಾಯತದ ಅಧ್ಯಯನದ ಈ ಅಧ್ವಾನ ಕೇವಲ ಇದೊಂದೇ ಸಾಮಾಜಿಕ ವಿಷಯಕ್ಕೆ ಅನ್ವಯಿಸುವುದಲ್ಲದೆ ದೇಶದ ಅನೇಕ ಸಾಮಾಜಿಕ ಸಂಶೋಧನೆ ಗಳಿಗೆ ಅನ್ವಯಿಸಿ ರಾಷ್ಟ್ರವ್ಯಾಪಿಯಾಗಿದೆ. ಇದೆಲ್ಲವೂ ಪೂರ್ವಗ್ರಹ ಎಂಬ ಸುಪ್ತ ಭಾವನೆಗಳ ಸಂಕೋಲೆಯೊಳಗಿನ ಸೃಷ್ಟಿ! ‘ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ಕಟ್ಟಲಾರರು’ ಎಂಬುದು ಅಂಬೇಡ್ಕರ್ ಅವರ ವಿಖ್ಯಾತ ಉದ್ಘೋಷ.

ಇದನ್ನು ಶೋಷಿಸುತ್ತಲೇ ಸಂಶೋಧಕರು ಪ್ರಾಗೈತಿಹಾಸಿಕ ನೆಲೆಯಿಂದ ಬಹುದೂರ ನಡೆದು ಸಂಕಥನಗಳನ್ನು ಕಟ್ಟಿಬಿಟ್ಟಿದ್ದಾರೆ. ಹೀಗೆ ಸೃಷ್ಟಿಸಿದ ಬೌದ್ಧಿಕ ದಾರಿದ್ರ್ಯದ ಅಗಾಧತೆ ಅಪಾರ. ತರ್ಕಶಾಸ್ತ್ರದ ಭವ್ಯ ಇತಿಹಾಸವನ್ನು ಧರ್ಮಾತೀತವಾಗಿ ಕಟ್ಟಿಕೊಟ್ಟಿರುವ ಹಿಂದೂ, ಜೈನ ಮತ್ತು ಬೌದ್ಧ ತರ್ಕಶಾಸ್ತ್ರಗಳು ಕೇವಲ ಗಣಿತದ ಸೂತ್ರಗಳಾಗಿ ಯಲ್ಲದೇ ಚಾರ್ಲ್ಸ್ ಬ್ಯಾಬೇಜ್‌ನ ಕಂಪ್ಯೂಟರ್ ಆವಿಷ್ಕಾರದಲ್ಲಿ ಸೇರಿ ಇಂದು ನಾವೆಲ್ಲರೂ ಬಳಸುವ‌ ಗಣಕ, ಜಂಗಮವಾಣಿಯ ಹಾರ್ಡ್‌ವೇರ್ ಮತ್ತು ಸಾಫ್ಟ್‌ ವೇರ್ ಪ್ರೋಗ್ರಾಮುಗಳ ಸೂತ್ರವಾಗಿ ಜಗತ್ತಿನ ಪ್ರಗತಿಯಲ್ಲಿ
ಬಹುದೊಡ್ಡ ಪಾಲು ಪಡೆದಿವೆ.

19ನೇ ಶತಮಾನದಿಂದಾದ ಪಾಶ್ಚಿಮಾತ್ಯ ಪ್ರಗತಿಯಲ್ಲಿ ಭಾರತೀಯ ತರ್ಕಶಾಸ್ತ್ರದ ಕೊಡುಗೆ ಅಪಾರ ಮತ್ತು ಬೈನರಿ ಯಷ್ಟೇ ನಿಖರ. ಭಾರತವನ್ನು ‘ವಿಶ್ವಗುರು’ ಎಂದೆನ್ನಲೇಬೇಕಾದರೆ ಅದು ಶತಶತಮಾನಗಳ ಭೂತಕಾಲ
ದಲ್ಲಿಯೇ ಹೊರತು ಕಳೆದ 13 ಶತಮಾನಗಳಿಂದಂತೂ ಅಲ್ಲ. ಸ್ವತಂತ್ರ ಭಾರತದ ವರ್ತಮಾನದಲ್ಲಂತೂ ಅಲ್ಲವೇ ಅಲ್ಲ!

ಹೀಗೆ ಕ್ರಿಸ್ತಪೂರ್ವದಿಂದಲೇ ನ್ಯಾಯ, ತರ್ಕ, ವೈಶೇಷಿಕ, ವ್ಯಾಕರಣ, ವೈದ್ಯ, ಯೋಗ, ಬಾಹ್ಯಾಕಾಶ, ಗಣಿತ, ಲೋಹ,
ಕಾಮ, ಅರ್ಥಶಾಸಗಳಲ್ಲದೇ ಯುದ್ಧ, ಶಸ್ತ್ರ, ಆನೆ ಪಳಗಿಸುವುದು, ಕುದುರೆಗಳ ತಳಿವರ್ಧನೆಯಂಥ ವಿಷಯಗಳ ನ್ನೊಳಗೊಂಡ 14 ವಿದ್ಯೆ, 64 ಕಲೆಗಳ ಭಾರತದ ಸಂಶೋಧನಾ ವೈಜ್ಞಾನಿಕ ವ್ಯವಸ್ಥೆಯು ಸ್ವತಂತ್ರ ಭಾರತದಲ್ಲಿ ದಾರುಣವಾಗಿ ಅಧೋಮುಖ ಪೂರ್ವಗ್ರಹಪೀಡಿತ ಪಲ್ಲಟಕ್ಕೊಳಗಾಗಲು ಕಾರಣವೇನು? ಅದುವೇ ಮನುಸ್ಮೃತಿ!
ಭಾರತದ ಇತಿಹಾಸದುದ್ದಕ್ಕೂ ಮನುಸ್ಮೃತಿ ಕೇವಲ ನಿರ್ಲರ್ಕ್ಷ್ಯಕ್ಕೆ ಒಳಗಾಗಿದ್ದ ಒಂದು ಸಾಮಾನ್ಯ ಗ್ರಂಥವಾಗಿತ್ತೇ
ಹೊರತು ಯಾವುದೇ ಸಾಮ್ರಾಜ್ಯದ ಅಧಿಕೃತ ಮಾನ್ಯತೆ ಪಡೆದಿರಲಿಲ್ಲ.

ಮನುಸ್ಮೃತಿಯನ್ನು ಯಾವುದೇ ಐತಿಹಾಸಿಕ ರಾಜಪ್ರಭುತ್ವ ಯಾ ಸಾಮ್ರಾಜ್ಯಗಳು ಒಂದು ನ್ಯಾಯಾಂಗ ವ್ಯವಸ್ಥೆ ಯಾಗಿ ಒಪ್ಪಿಕೊಂಡಿರುವ ಕುರುಹಿಲ್ಲ. ಅಷ್ಟರಮಟ್ಟಿಗೆ ಭಾರತೀಯ ಪ್ರಭುತ್ವಗಳು ಧರ್ಮಾತೀತವಾಗಿದ್ದವು! ಭಾರತದ ಮುಸ್ಲಿಂ ಸಾಮ್ರಾಜ್ಯಗಳು ಕೂಡಾ ಮುಸ್ಲಿಮರಿಗೆ ಮಾತ್ರ ಷರಿಯಾ ಕಾನೂನನ್ನು ಅನ್ವಯಿಸುತ್ತಿದ್ದವೇ ಹೊರತು ಎಲ್ಲಾ ಪ್ರಜೆಗಳಿಗೂ ಅಲ್ಲ.

ಮನುಸ್ಮೃತಿಯ ಕಾಲವು ಕ್ರಿ.ಶ. ೨ನೇ ಶತಮಾನವೆನ್ನುವ ವಾದದಿಂದ ಕ್ರಿ.ಶ. 17ನೇ ಶತಮಾನದವರೆಗೆ ಹೊಯ್ದಾಡು ತ್ತದೆ. ಒಟ್ಟಾರೆ ಕಾಲಕಾಲಕ್ಕೆ ಇದು ತಿದ್ದಲ್ಪಟ್ಟು ಪರಿವರ್ತಿತಗೊಂಡಿದೆ ಎಂಬುದು ಮಾತ್ರ ಸತ್ಯ. ಗ್ರೀಕರ ಕುರಿತಾಗಿ, ‘ಯವನರು ಬ್ರಾಹ್ಮಣ್ಯವನ್ನು ಒಪ್ಪದೇ ಕ್ಷತ್ರಿಯರಾಗಿ ಕ್ರಮೇಣ ಶೂದ್ರರಾಗುತ್ತ ಕಳೆದುಹೋದರು’ ಎನ್ನುವ ಮನುಸ್ಮೃತಿಯ ಸಾಲು ಗಳು ಇದು ಐಚ್ಛಿಕ ವೃತ್ತಿಯಾಧಾರಿತ ವರ್ಣವನ್ನು ಎತ್ತಿಹಿಡಿದಿತ್ತೇ ಹೊರತು ಹುಟ್ಟಿ ನಿಂದಾಧರಿತ ಜಾತಿಯನ್ನಲ್ಲ ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.

ಇನ್ನು ಅಸಲಿಗೆ ತನ್ನ ಸಾಕಷ್ಟು ಗೊಂದಲ, ವ್ಯತಿರಿಕ್ತತೆ, ಅಸಂಬದ್ಧತೆಗಳನ್ನು ಹೊಂದಿದ್ದ ಈ ಗ್ರಂಥಕ್ಕೆ, ಬ್ರಿಟಿಷ್-ಪೂರ್ವ ಭಾರತದ ಇತಿಹಾಸದಲ್ಲಿ ಒಂದು ಸಾಮಾನ್ಯ ಗ್ರಂಥಕ್ಕಿರುವ ಮಹತ್ವ ಕೂಡಾ ಇರದಿದ್ದರೂ ಇದಕ್ಕೆ ಪ್ರಾಮುಖ್ಯ ಕೊಟ್ಟದ್ದು ಬ್ರಿಟಿಷರು! ಅವರು ಯಾವಾಗ ಮನುಸ್ಮೃತಿಯನ್ನು ಹಿಂದೂ ಕಾನೂನಾಗಿಸಿ, ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮದೇ ಆಲೋಚನೆಯ ಶಿಷ್ಟ ಪದ್ಧತಿಯ ಸಂಪ್ರದಾಯ, ಮಡಿವಂತಿಕೆ, ಅಸ್ಪೃಶ್ಯತೆಯನ್ನು
ಹೇರಲಾರಂಭಿಸಿದರೋ ಅಂದಿನಿಂದ ಭಾರತೀಯರು ತಮ್ಮದೇ ಆದ ಮಡಿವಂತಿಕೆಯನ್ನು ಮನುಸ್ಮೃತಿ ಗನುಗುಣ ವಾಗಿ ಕ್ಷಿಪ್ರವಾಗಿ ರೂಪಿಸಿಕೊಳ್ಳುತ್ತ ಒಂದು ತಲೆಮಾರಿನ ಅಂತರದೊಳಗೆ ಆಸಕ್ತಿಕರ ಕಾಮಸೂತ್ರವನ್ನೂ ಕತ್ತಲುಸೂತ್ರವಾಗಿಸಿ ಅಳಿದುಳಿದ ಶಾಸ್ತ್ರ ಸೂತ್ರಗಳ ಪಳೆಯುಳಿಕೆಗಳನ್ನು ಮಾಯವಾಗಿಸಿದರು.

ಹೀಗೆ ಮಾಯವಾಗಿಸಲು ಕೇವಲ ಒಂದು ತಲೆಮಾರಿನ ಅಂತರದಷ್ಟು ಕಾಲ ಸಾಕು ಎಂಬುದು ಬ್ರಿಟಿಷರ ಅನುಭವ ವಾಗಿತ್ತು. ಐರ್ಲೆಂಡ್ ಭಾಷೆ, ಆಫ್ರಿಕನ್ ಸಂಸ್ಕೃತಿಗಳನ್ನು ಹೀಗೆಯೇ ಒಂದು ತಲೆಮಾರಿನ ಅಂತರದಲ್ಲಿ ಬ್ರಿಟಿಷರು ಮಾಯವಾಗಿಸಿದ್ದರು. ಅಂದಹಾಗೆ ಇತಿಹಾಸದುದ್ದಕ್ಕೂ ಪ್ರಾಮುಖ್ಯ ಇರದಿದ್ದ ಈ ಸಾಮಾನ್ಯ ಗ್ರಂಥಕ್ಕೆ ಬ್ರಿಟಿಷರಷ್ಟೇ ಅಲ್ಲದೇ ಆಧುನಿಕ ವಿಚಾರವಂತ ಚಿಂತಕರು ಕೂಡಾ ಏಕೆ ಅಷ್ಟೊಂದು ಪ್ರಾಮುಖ್ಯ ಕೊಟ್ಟಿರುವರು? ಭಾರತದ ಆಡಳಿತವನ್ನು ಮೊಘಲರಿಂದ ವಶಪಡಿಸಿಕೊಂಡ ಮೇಲೆ ಹಿಂದಿನ ಕಾನೂನುಗಳ ಪ್ರಕಾರ ಮುಸ್ಲಿಮರಿಗೆ ಷರಿಯಾ
ನ್ಯಾಯವಿದ್ದು ಮುಸ್ಲಿಮೇತರರಿಗೆ ಅನ್ವಯಿಸುವ ನ್ಯಾಯವು ಸತ್ಯ, ನೈತಿಕತೆಯ ಆಧಾರದ ಮೇಲೆ ನಿರ್ಣಯ ವಾಗುತ್ತಿತ್ತೇ ಹೊರತು ಇನ್ಯಾವ ಧರ್ಮಗ್ರಂಥ ಆಧಾರವಾಗಿ ಅಲ್ಲ.

ಹಾಗಾಗಿ ಬ್ರಿಟಿಷರಿಗೆ, “ಅಯ್ಯೋ ಪಾಪ, ಮುಸ್ಲಿಮೇತರರಿಗೆ ಸಹ ಅವರ ಧರ್ಮದ ಆಧಾರದ ಒಂದು ನ್ಯಾಯಾಂಗ ವ್ಯವಸ್ಥೆ ಕೊಡುವುದು ನಮ್ಮ ನೈತಿಕ ಜವಾಬ್ದಾರಿ” ಎಂಬ ನೈತಿಕತೆ ಬಾಧಿಸತೊಡಗಿತ್ತು. ಆ ಕಾರಣಕ್ಕಾಗಿ ಅವರಿಗೆ ನ್ಯಾಯ ನಿರ್ಣಯದ ಕೆಲವು ಲಿಖಿತ ಅಂಶಗಳನ್ನು ಹೊಂದಿದ್ದ ಏಕೈಕ ಮುಸ್ಲಿಮೇತರ ಗ್ರಂಥವಾಗಿ ನಿರ್ಲಕ್ಷಿತ ಮನುಸ್ಮೃತಿ ಗೋಚರಿಸಿತು.

ಭಾರತದಂಥ ಬೃಹತ್ ರಾಷ್ಟ್ರವನ್ನು ‘ವಿಭಜಿಸು, ಆಳು’ ನೀತಿಯಿಂದ ಮಾತ್ರ ಗೆಲ್ಲಲು ಸಾಧ್ಯವೆಂದು ನಿರ್ಧರಿಸಿದ್ದ ಬ್ರಿಟಿಷರು ಪ್ರಾಥಮಿಕ ಹಂತವಾಗಿ ಇಲ್ಲಿನ ಊಳಿಗಮಾನ್ಯ ರಾಜ, ಸರದಾರ, ಪಾಳೆಗಾರರ ನಡುವಿದ್ದ ಸ್ವಾಭಾವಿಕ ಈರ್ಷ್ಯೆಯನ್ನು ಬಳಸಿಕೊಳ್ಳುತ್ತ ತಳವೂರಿದರು. ಕ್ರಿ.ಶ. 1765ರ ಹೊತ್ತಿಗೆ ಬಹುಪಾಲು ಭಾರತವನ್ನು ವಶಪಡಿಸಿ ಕೊಂಡ ನಂತರ ಇಲ್ಲಿನ ಜನಸಾಮಾನ್ಯರನ್ನು ಹೇಗೆ ವಿಭಜಿಸಿ ಆಳ್ವಿಕೆ ನಡೆಸಬೇಕೆಂದು ಯೋಚಿಸುತ್ತಿದ್ದ
ಬ್ರಿಟಿಷರಿಗೆ ಇತಿಹಾಸದ ಕಸದಬುಟ್ಟಿಯಲ್ಲಿದ್ದ ನಿಕೃಷ್ಟ ಗ್ರಂಥವಾದ ಮನುಸ್ಮೃತಿ, ಆ ದಿವ್ಯದೃಷ್ಟಿಯ ನಕಾಶೆಯಾಗಿ ಶೋಭಾಯಮಾನವಾಗಿ ಪ್ರಕಾಶಿಸಿತು.

ಒಂದೇ ಏಟಿಗೆ 2 ಹಕ್ಕಿಗಳನ್ನು ಹೊಡೆಯುವ ಈ ಗ್ರಂಥವು ಬ್ರಿಟಿಷರ ಅತ್ಯಾಪ್ತ ಗ್ರಂಥವಾಯಿತು. ಬ್ರಿಟಿಷ್ ಇತಿಹಾಸಜ್ಞನಾದ ಸರ್ ವಿಲಿಯಂ ಜೋ, ಸಂಸ್ಕೃತ ಭಾಷೆಯು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಗಿಂತ ಉತ್ಕೃಷ್ಟ ಭಾಷೆಯೆನ್ನುತ್ತಾ ಈಜಿಪ್ಟಿನ ಪುರೋಹಿತರುಗಳು ಸಿಂಧೂ ನಾಗರಿಕತೆಗೂ ಮುಂಚೆಯೇ ಭಾರತಕ್ಕೆ ವಲಸೆ ಬಂದಿದ್ದರೆಂದು ಪ್ರತಿಪಾದಿಸುವುದಲ್ಲದೇ ಚೀನಾ ದೇಶ ಕೂಡಾ ಹಿಂದೂ ರಾಷ್ಟ್ರವಾಗಿದ್ದು ಚೀನಿಯರೆ ಹಿಂದೂ ಕ್ಷತ್ರಿಯರೆಂದು ಪ್ರತಿಪಾದಿಸಿದ್ದಾನೆ.

ಅಂದಿನ ಕಾಲದ ಅತ್ಯಂತ ಗೌರವಾನ್ವಿತ ಇತಿಹಾಸಜ್ಞ ಮತ್ತು ಭಾಷಾತಜ್ಞನಾದ ಇವನು ಸಂಸ್ಕೃತ, ಪರ್ಷಿಯನ್ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದನು. ಭಾರತೀಯರನ್ನು ಆರ್ಯ, ದ್ರಾವಿಡ, ಅರಬ(ಮುಸ್ಲಿಂ)ರೆಂದು
ಜನಾಂಗೀಯವಾಗಿ ಗುರುತಿಸ(ವಿಭಜಿಸ)ಬೇಕೆಂಬ ಮಂಡನೆ ಯನ್ನು ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ಸರಕಾರದ ಮುಂದೆ ಇರಿಸಿದವನೇ ಇವನು.

ಮುಂದೆ ಕ್ರಿ.ಶ.1794ರಲ್ಲಿ ಸರ್ ವಿಲಿಯಂ ಜೋ, ಬ್ರಿಟಿಷ್ ಸರಕಾರದ ಆಣತಿಯಂತೆ ಹಿಂದೂ ಕಾನೂನಾಗಿಸಲೆಂದೇ
ಮನುಸ್ಮೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದನು. ಈ ರೀತಿಯಾಗಿ ಮುಸ್ಲಿಮೇತರ ಶೈವ, ಜೈನ, ಬೌದ್ಧ, ವೈಷ್ಣವ, ಸಿಖ್ ಎಲ್ಲಾ ಭಾರತೀಯರಿಗೆ ‘ಹಿಂದೂ ಕಾನೂನು’ ಆದ ಮನುಸ್ಮೃತಿ, ಬ್ರಿಟಿಷ್ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿತು. ಅಸ್ಪೃಶ್ಯತೆ ಭೀಕರ ಸ್ವರೂಪ ಪಡೆಯಿತು.

ಹಿಂದೂ ಕಾನೂನಿಗೆ ತಕ್ಕನಾಗಿ ಇಸ್ಲಾಂನ ಷರಿಯಾ ಅಂಶಗಳು ‘ಮುಸ್ಲಿಂ ಕಾನೂನು’ ಆಗಿ ವ್ಯವಸ್ಥೆಯ ಭಾಗವಾಗಿ
ಆಗಲೇ ಇದ್ದವು. ಈ ಜಾತೀಯತೆಯ ವರ್ಗೀಕರಣ ಬ್ರಿಟಿಷರ ವಿಭಜಿಸಿ ಆಳುವ ಆಡಳಿತ ನೀತಿಗೆ ಅನುಕೂಲ ಉಂಟು ಮಾಡಿದ್ದಲ್ಲದೆ, ಕ್ರಿಶ್ಚಿಯನ್ ಮಿಷನರಿಗಳು ಧರ್ಮಪ್ರಸಾರ ಮಾಡಲು ಕೂಡಾ ಸಹಕಾರಿಯಾಯಿತು. ಅನಕ್ಷರತೆ, ಅಂಧಶ್ರದ್ಧೆ, ಊಳಿಗಮಾನ್ಯ, ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮುಳುಗಿ ಹೋಗಿದ್ದ ಅಂದಿನ ಭಾರತವು ಮನು ಸ್ಮೃತಿಯ ವಿಸ್ಮೃತಿಯನ್ನು ತನ್ನ ಪಿತ್ರಾರ್ಜಿತ ಆಸ್ತಿಯೆಂಬಂತೆ ಗಾಢವಾಗಿ ಅಪ್ಪಿಕೊಂಡು ಜಾತೀಯತೆಯನ್ನು ಕಾಳ್ಗಿಚ್ಚಿನಂತೆ ಪಸರಿ

(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hanz Column: ತಲೆಮಾಸಿದ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆ !