ಬಸವ ಮಂಟಪ
ರವಿ ಹಂಜ್
ಈ ಪ್ರಾಪಂಚಿಕ ಲೌಕಿಕ ಮಾರ್ಪಿಗೆ ಪ್ರಮುಖವಾಗಿ ಖಾದಿಗಿಂತ ಕಾವಿಯೇ ಸುಲಭ ಸೋಪಾನ ಎಂಬುದು ಮತ ಧರ್ಮನಿರಪೇಕ್ಷದ ಸೆಕ್ಯುಲರ್ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸಾಬೀತಾದ ಕಾರಣ ಇಂದು ಪ್ರತಿ ಜಾತಿಗೂ ಒಂದೊಂದು ಪೀಠಗಳಾಗುತ್ತಿರುವುದು ‘ನಿರಂಜನವಂಶ ರತ್ನಾಕರ’ದ ಆಧುನಿಕ ವಿಸ್ತರಣೆ ಎನ್ನಬಹುದಾದರೂ
ಎನ್ನಲಾಗದು! ಏಕೆಂದರೆ ಇವರಿಗೆಲ್ಲ ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನು ರೂಪಿಸಿದ ಗುರುದೀಕ್ಷೆಯ ವಿಧಿ ವಿಧಾನಗಳ ಪ್ರಕಾರ ಯಾವ ಚರಂತಿಕೆ, ಹರಗುರುಚರನಿರಂಜನ ದೀಕ್ಷೆಯೂ ಆಗಿಲ್ಲ. ಹಾಗಾಗಿ ಇವರ‍್ಯಾರೂ ಲಿಂಗಾಯತ ಪದ್ಧತಿಯ ಪ್ರಕಾರ ಗುರುಗಳೇ ಅಲ್ಲ! ಏನಿದ್ದರೂ ಜಾತಿಗಾಗಿ ವೇಷಧರಿಸಿದ ವೇಷಧಾರಿಗಳು ಮಾತ್ರ!
ಏಕೆಂದರೆ ಸ್ವಾಮಿಯಾಗಿ ಪಟ್ಟ ಕಟ್ಟುವ ಮೊದಲು ಓರ್ವ ಚರಮೂರ್ತಿಗಳಿಂದ ಉದ್ದೇಶಿತ ಭಾವಿ ಸ್ವಾಮಿಗೆ ಶಿವಪುರಾಣ, ಬಸವಪುರಾಣ, ಚೆನ್ನಬಸವಪುರಾಣ ಗ್ರಂಥಗಳನ್ನು ಕೊಡಿಸಿ ‘ಪುರಾಣ ಚರಂತಿ’ ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ ಮತ್ತು ಸೃಷ್ಟಿ ವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಓರ್ವ ಜಗದ್ಗುರುವಿನಿಂದ ಅಥವಾ ಓರ್ವ ಹಿರಿಯ ಶಾಖಾಮಠದ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರದಾನ ಮಾಡಿದಾಗ ಮಾತ್ರ ಆ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು.
ಪುರಾಣ ಚರಂತಿ ಮತ್ತು ವಿರಕ್ತನಾಗುವ ನಡುವೆ ಅನೇಕ ಕಠಿಣ ಸಾಧನೆಗಳ ಪರೀಕ್ಷೆಗಳಿವೆ. ಇವುಗಳನ್ನು ಸಾಧಿಸ ದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಇಂಥ ಯಾವುದೇ ನಿಯಮಬದ್ಧವಾಗಿ ಪಟ್ಟವಾಗದ ಇವರೆಲ್ಲರೂ ಸ್ಪಷ್ಟವಾಗಿ ‘ನಿರಂಜನವಂಶ ರತ್ನಾಕರ’ವಲ್ಲದೆ ಲಿಂಗಾಯತಕ್ಕೂ ಹೊರಗು. ಒಟ್ಟಾರೆ, ಇದಿಷ್ಟು ಬಸವಸ್ಥಾಪಿತ ಅಲ್ಲಮಪ್ರಭುವಿನ ಶೂನ್ಯಪೀಠವು ವಿಭಜನೆಗೊಂಡ ಸಂಕ್ಷಿಪ್ತ ಇತಿಹಾಸ! ತಾತ್ವಿಕ ಭೇದಗಳು ಕ್ರಮೇಣವಾಗಿ ವೈಯಕ್ತಿಕ ಪ್ರತಿಷ್ಠೆಗಳಾಗಿ ಬದಲಾಗುತ್ತಾ ಹೇಗೆ ಒಂದು ಪೀಠವನ್ನು ಛಿದ್ರಿಸುತ್ತ ನಡೆದವು ಎಂಬುದರ ಸ್ಪಷ್ಟ ಚಿತ್ರಣ!
ಅಂದ ಹಾಗೆ ಬಸವಣ್ಣನು ಸ್ಥಾಪಿಸಿದ್ದುದು ಆಗಲೇ ಇದ್ದ ವೀರಶೈವ ಪಂಥದ ಒಂದು ಜಗದ್ಗುರು ಪೀಠವನ್ನೇ ಹೊರತು ಹೊಚ್ಚ ಹೊಸ ಧರ್ಮವನ್ನಲ್ಲ. ವಿಪರ್ಯಾಸವೆಂದರೆ ‘ಅರಿವೇ ಗುರು’ ಎಂದ ಬಸವಣ್ಣನು ತನ್ನರಿವಿಗೆ ಬಾರದಂತೆ ‘ಶೂನ್ಯ ಸಮಯಭೇದ’ವನ್ನು ಆರಂಭಿಸಿ ‘ಸಮಯಭೇದ ಸ್ಥಾಪಕ’ ನಾದನು. ಹೀಗೆ ಶಿವನ ವೃಷಭ ನೆನ್ನುವ ಗಣನು ತನಗರಿವಿಲ್ಲದೆ ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ಕಾರಣದಿಂದ ಶಾಪಗ್ರಸ್ತನಾಗಿ ಧರೆಗೆ ಬಸವನಾಗಿ ಬಂದು ಮತ್ತೊಮ್ಮೆ ತನಗರಿವಿಲ್ಲದಂತೆ ಸಮಯಭೇದ ಸೃಷ್ಟಿಸಿ ಶಾಪಗ್ರಸ್ತನಾದನೆನಿಸುತ್ತದೆ. ಇದು ಶಾಪಗ್ರಸ್ತ ವೃಷಭ ಗಣನ ಗಮ್ಯವೇನಾಗಿತ್ತೋ ಆ ಕಾಲeನಿ ಚೆನ್ನಬಸವಣ್ಣನೇ ಬಲ್ಲ ಎಂಬಂತೆ ಬಸವನು ನಿಶ್ಶೂನ್ಯ ನಾಗಿಯೇ ಧರೆಯಿಂದ ಹಠಾತ್ ಆಗಿ ಯಾವ ಸುಳಿವನ್ನೂ ಬಿಡದೆ ನಿರ್ಗಮಿಸಿದ್ದಾನೆ!
ಇತಿಹಾಸದಲ್ಲಿ ‘ಶೂನ್ಯಪೀಠ’ ಸ್ಥಾಪನೆಯಾದ ನಂತರ ‘ಶೂನ್ಯಸಂಪಾದನೆ’ ಬಂದಂತೆ ‘ಶೂನ್ಯ ಸಮಯಭೇದ’ದ
ನಂತರ ‘ಸಂಪಾದನಾ ಸಮಯ’ ಬಂದಿದೆ, ಅಷ್ಟೇ! ಪಾಶುಪತ-ಕಾಳಾಮುಖ-ವೀರಶೈವ-ಲಿಂಗಾಯತ ಪಂಥದ
ಸಮಗ್ರ ಸ್ವರೂಪವನ್ನು ಗ್ರಹಿಸಿದರೆ ಎಲ್ಲವೂ ಕಾಲಜ್ಞಾನದಂತೆ ಪೂರ್ವನಿರ್ಧರಿತ ಶ್ರೀಮನ್ನಿರಂಜನ ಪ್ರಣವ ಸ್ವರೂಪ ಜಂಗಮಚಕ್ರದಂತೆ ಉರುಳುತ್ತಿದೆಯಷ್ಟೇ. ಈ ಉರುಳುವಿಕೆ ಕೇವಲ ವೀರಶೈವಕ್ಕಷ್ಟೇ ಅಲ್ಲದೆ ಇಡೀ ಸಿಂಧೂ/ಹಿಂದೂ/ ಸನಾತನ/ಭಾರತೀಯ/ಇಂಡಿಯತನಕ್ಕೆ ಅನ್ವಯ ಎಂಬುದು ಕಾಲಜ್ಞಾನ ಸಂಪುಟದ ಒಳಮರ್ಮ.
ಇರಲಿ, ಈ ಏಕಮೇವ ಶೂನ್ಯಪೀಠವು ಮುಂದೆ ನಾಲ್ಕು ಜಗದ್ಗುರುಗಳಾಗಿ ಭಿನ್ನವಾಗಿದೆ. ಸ್ಥಾವರಗೊಂಡ ಶೂನ್ಯ ಪೀಠದ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರುಸಾವಿರಮಠ, ಗದುಗಿನ ತೋಂಟದಾರ್ಯ ಮಠದ ಸ್ವಾಮಿಗಳಲ್ಲದೆ ಮುಂಡರಗಿಯ ಅನ್ನದಾನಸ್ವಾಮಿಗಳನ್ನು ಅಂದಿನ ಬ್ರಿಟಿಷ್ ಸರಕಾರದ ಮೂಲಕವೇ ಜಗದ್ಗುರು ಎಂದು ‘ತೀರ್ಮಾನಿಸ’ಲಾಗಿದೆ ಎಂದು ಈ ಗ್ರಂಥದ ಎರಡನೇ ಭಾಗದ ‘ಬುಡದ ಕೆಲವು ಮಾತುಗಳು’ ಎಂಬ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ, “ತಮ್ಮ ತಮ್ಮ ಮಠಗಳಲ್ಲಿ ತಾವೇ ಜಗದ್ಗುರುಗಳೆಂದು ಬರೆದುಕೊಳ್ಳುವ, ಭಕ್ತರಿಂದ ಕರೆಸಿಕೊಳ್ಳುವ ಬಹಳಷ್ಟು ಸ್ವಾಮಿಗಳಿದ್ದಾರೆ” ಎಂದೂ ಹೇಳಲಾಗಿದೆ.
ಅಂದ ಹಾಗೆ ಈ ಗ್ರಂಥವು ೧೯೩೩ರಿಂದ ೧೯೩೭ರವರೆಗೆ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ದಿವಂಗತ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಅಧ್ಯಕ್ಷೀಯ ಕಾಲದಲ್ಲಿಯೇ ಪ್ರಕಟವಾಗಿದೆ. ಈ ಬುಡದ ಮಾತುಗಳು ಇಂದು ಹೆಮ್ಮರವಾಗಿ ಬೆಳೆದು ವರ್ತಮಾನದ ೨೧ನೇ ಶತಮಾನದಲ್ಲಂತೂ ಆಸ್ಪೋಟಕರವಾಗಿ ಶಂಕರ, ಮಂಕರ ಮತ್ತು ಕಿಂಕರರೂ ಜಗದ್ಗುರುಗಳಾಗಿದ್ದಾರೆ ಎಂದು ಜಗತ್ತೇ ಬಲ್ಲದು. ಮೇಲೆ ತಿಳಿಸಿದಂತೆ ಕಾಲಜ್ಞಾನ ಸಂಪುಟದ ಒಳಮರ್ಮದ ಒಂದು ಸುಳಿಮಿಂಚಾಗಿ ‘ನಿರಂಜನವಂಶ ರತ್ನಾಕರ’ದ ಬುಡದ ಮಾತುಗಳು ಇಂದು ಪ್ರತಿಯೊಬ್ಬ ‘ಪಾಶು ಪತ-ಕಾಳಾಮುಖ-ವೀರಶೈವ-ಲಿಂಗಾಯತ’ ಅನುಯಾಯಿಯ ಆತ್ಮಲಿಂಗಕ್ಕೆ ದಿವ್ಯ ಬೆಳಕಿನ ಕಂಥೆಯಾಗಿ
ಆವರಿಸಬೇಕಾದ್ದು ಪ್ರತ್ಯೇಕ ಧರ್ಮ, ಮೀಸಲಾತಿಯಂಥ ಆಮಿಷಗಳ ಕಗ್ಗತ್ತಲಲ್ಲಿ ಅಂತೆಕಂತೆಯಾಗಿದೆ.
ಕೇವಲ ‘ಆಸನದ ಅಂತಸ್ತು’ಗಳ ಕಾರಣ ಕೆಲವು ಭೇದಗಳಾಗಿದ್ದವು ಎಂಬುದು ಇತಿಹಾಸ. ಈ ಆಸನ ಅಂತಸ್ತಿನ ಕಾರಣವನ್ನು ಹಿಡಿದು ಕೆಲವು ಹಿತಾಸಕ್ತಿಗಳು ಪಂಚಪೀಠ-ವಿರಕ್ತರಲ್ಲಿ ಪರಮಭೇದವನ್ನು ಹುಟ್ಟುಹಾಕಿದರೂ ಅದನ್ನು ಸಮಾಜವು ಭೇದವಾಗಿ ಪರಿಗಣಿಸಿರಲಿಲ್ಲ. ಶೂನ್ಯಪೀಠದ ಗುರುವರ್ಗದಲ್ಲಿ ಯಾಗಲಿ ಪಂಚಪೀಠಗಳಗಲಿ ಏನೇ ವೈಮನಸ್ಯವುಂಟಾದರೂ ಅವರೆಲ್ಲರೂ ಅಖಂಡವಾಗಿ ಎಂದಿಗೂ ಧರ್ಮವನ್ನು ಕಾಪಾಡಿದ್ದರು. ಗುರುವಿರಕ್ತ ಜಂಗಮರು ಕಂತೆಭಿಕ್ಷೆಯನ್ನೂ ಮಾಡಿ ಮಠಗಳನ್ನು ಕಟ್ಟಿ ಪಾಠಶಾಲೆಗಳನ್ನು ನಡೆಸಿದ್ದರು.
ಅನೇಕ ಗ್ರಂಥಸಂಪಾದನೆಗಳನ್ನು ಮಾಡಿ ಜ್ಞಾನದ ಭಂಡಾರವನ್ನು ಸಮಾಜಕ್ಕೆ ಅರ್ಪಿಸಿದ್ದರು. ತಮ್ಮ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾದಾಗ ಉಗ್ರರಾಗಿ ಕಾಳಾಮುಖ ಕೆಚ್ಚಿನಿಂದ ಹೋರಾಡಿದ್ದರು ಕೂಡ. ಹಾಗಾಗಿಯೇ ಮೈಸೂರಿನ ಚಿಕ್ಕದೇವರಾಜ ಒಡೆಯರನ ತೆರಿಗೆಯನ್ನು ತೀವ್ರವಾಗಿ ವಿರೋಧಿಸಿ ನಾಲ್ಕುನೂರಕ್ಕೂ ಅಧಿಕ ಜಂಗಮರು ಪ್ರಾಣಾರ್ಪಣೆ ಮಾಡಿದ್ದಾರೆ. ಚೆನ್ನಬಸವಣ್ಣನಿಂದ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿ ಗಳವರೆಗೆ ಆಗಿ ಹೋದ ಎಲ್ಲಾ ಶೂನ್ಯಪೀಠಾಧ್ಯಕ್ಷರು ಜೈನ, ವೈಷ್ಣವ ಮತ್ತಿತರೆ ಧರ್ಮೀಯರು ಆಕ್ರಮಿಸಿದ ಶೈವ
ದೇವಾಲಯಗಳನ್ನು ವಶಪಡಿಸಿಕೊಂಡು ಅಲ್ಲಿ ಶೈವಾರಾಧನೆಯನ್ನು ಮರುಸ್ಥಾಪಿಸಿದ್ದರು ಎಂದು ನಿರಂಜನ ವಂಶ
ರತ್ನಾಕರ ಗ್ರಂಥವು ದಾಖಲಿಸಿದೆ. ಎಲ್ಲಿಯೂ ಸ್ಥಾವರಗಳನ್ನು ನಿರಾಕರಿಸಿದ ಉದಾಹರಣೆಯಿಲ್ಲ.
ಇಂಥ ಪರಂಪರೆಯ ವೀರಶೈವದಲ್ಲಿ ಜಾತಿ ಸಮಯಭೇದದ ತರುವಾಯ ಜಂಗಮ ದ್ವೇಷದ ‘ವೀರಶೈವ ಬೇರೆ, ಲಿಂಗಾಯತ ಬೇರೆ’ ಎನ್ನುವ ‘ಘಾತುಕ ಸಮಯ’ ಉಂಟಾಗಲು ಕಾರಣವೇನು?!? ಅದಕ್ಕೆ ಕಾರಣ, ನಾವೀನ್ಯ ಲಿಂಗಾಂಗ ಸಾಮರಸ್ಯ! ಆರಂಭದಲ್ಲಿ ಯಾವುದೇ ಭೇದವನ್ನೆಣಿಸದೆ ಶ್ರೀಮದ್ವೀರಶೈವವನ್ನೇ ಬೋಧಿಸುತ್ತಿದ್ದ ಪ್ರಕಾಂಡ ಪ್ರವಚನಕಾರರಾದ ಲಿಂಗಾನಂದ ಸ್ವಾಮಿಗಳು “ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ” ಎಂಬಂತೆ ವರ್ತಮಾನದ ಶೂನ್ಯಪೀಠವಿರುವ ಚಿತ್ರಕಲ್ಲು ದುರ್ಗದಲ್ಲಿ ಒಂದು ಮಹಾಮಾಯೆಗೆ ಒಳಗಾದದ್ದೇ ಇದಕ್ಕೆ ಮೂಲ ಎನ್ನಬಹುದು.
ಅದು ಲಿಂಗಾನಂದರ ತಪ್ಪಲ್ಲ, ಚಿತ್ರಕಲ್ ದುರ್ಗದ ಗಾಳಿಯೇ ಹಾಗೆ! “ಅರಿತರೆ ಆರು ಪಟ್ಟ, ಮರೆತರೆ ಮೂರು ಪಟ್ಟ” ಎಂಬ ದುರ್ಗದ ಜಾತಕ ಫಲ, ತನ್ನಲ್ಲಿ ಕಾಲಿಟ್ಟ ಪಂಡಿತರನ್ನು ಕಾಡದೇ ಬಿಟ್ಟೀತೆ? ಅವರ ಮನಸ್ಸನ್ನು ಚಂಚಲ ಗೊಳಿಸಿ ಚೆಲ್ಲಾಪಿಲ್ಲಿ ಮಾಡಿಯೇಬಿಟ್ಟಿತು. ಲಿಂಗಾನಂದರ ಮತ್ತು ಮಹಾದೇವಿಯವರ ಪ್ರವಚನಗಳಿಗೆ ಗುರುವಿರಕ್ತ ಜಂಗಮರೂ ಸೇರಿದಂತೆ ಇಡೀ ವೀರಶೈವ ಸಮಾಜ ಪ್ರೋತ್ಸಾಹ, ಬೆಂಬಲ ನೀಡಿತ್ತು. ಯಾವಾಗ ಅವರ ಮಾರ್ಗ ಧರ್ಮವನ್ನು ಬಿಟ್ಟಿತೋ ಆಗ ಎಲ್ಲರೂ ವಿರೋಧಿಸತೊಡಗಿದರು.
ಈ ಮಹಾ‘ದೇವಿ’ ಮಾಯೆಯ ಕುರಿತು, ಇವರೀರ್ವರ ಲಿಂಗಾಂಗ ಸಾಮರಸ್ಯದ ಕುರಿತು ಎಲ್ಲಾ ಗುರುವಿರಕ್ತ
ಸ್ವಾಮಿಗಳೂ, ವೀರಶೈವ ಸಮಾಜವೂ ಅಂದು ನಿಷ್ಠುರವಾಗಿ ಖಂಡಿಸಿತು. ಈ ಬಗ್ಗೆ ಆಸಕ್ತರು ಆ ಕಾಲಘಟ್ಟದ ಸಮಾಚಾರ ಮಾಧ್ಯಮವನ್ನು ಗಮನಿಸಬೇಕು. ಅದರಲ್ಲೂ ‘ಲಿಂಗಾಯತ ಪ್ರತ್ಯೇಕ ಧರ್ಮ’ ಸತ್ಯಶೋಧನೆಗೆ ನಿಯೋಜಿಸಲಾಗಿದ್ದ ಸಮಿತಿಯ ಅರ್ಧಕ್ಕೂ ಹೆಚ್ಚು ಸದಸ್ಯರು ಪಳಗಿದ್ದ ಲಂಕೇಶ್ ಪತ್ರಿಕೆಯಲ್ಲಿಯೇ ಈ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ಅದೆಲ್ಲವನ್ನೂ ಮರೆತು ಈ ಸಮಿತಿಯು ಈ ಜೋಡಿ ಸೃಷ್ಟಿಸಿದ ಸಂಕಥನಕ್ಕೆ ಮತ್ತು ಕಲಬುರ್ಗಿಯ ಸುಳ್ಳಿನ ಸಂಶೋಧನೆಗಳಿಗೆ ತಕ್ಕಂತೆ ಆತ್ಮವಂಚನೆಯ ವರದಿ ನೀಡಿತ್ತು ಎನ್ನುವುದು ಇತಿಹಾಸ.
ಒಟ್ಟಾರೆ ಬಹಿಷ್ಕಾರದ ಭಯವೋ ಅಥವಾ ಇವರ ಪ್ರವಚನಗಳನ್ನು ಮೆಚ್ಚಿ ಸೇರುತ್ತಿದ್ದ ಜನಸಮೂಹವನ್ನು ಕಂಡು
ಇವರಲ್ಲುಂಟಾದ ಧಾರ್ಷ್ಟ್ಯದ ಮನೋವಿಕಾರವೋ, ಈರ್ವರೂ ಲಿಂಗಾಯತ ಬೇರೆ ಎಂದು ತಮ್ಮದೇ ಮಾರ್ಗ ವನ್ನು ಬಸವ ಕವಚದ ಶ್ರೀರಕ್ಷೆಯಲ್ಲಿ ಆರಂಭಿಸಿದರು. ಅದಕ್ಕೆ ಕೆಲವೇ ಕೆಲವು ವಿಘ್ನಸಂತೋಷಿಗಳ ಬೆಂಬಲ ಸಹ ಸಿಕ್ಕಿತು. ಈ ಬೆಂಬಲದ ನಶೆಯಲ್ಲಿ ಮಹಾಮಾಯೆಯು ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು ಎಂಬ ಅಕ್ಷತ ಮೇರಿ ಮಾತೆಯಾಗಿ ತಮ್ಮ ಹೆಸರಿನ ಹಿಂದೆ ಜಗದ್ಗುರು ಎಂದು ಸೇರಿಸಿಕೊಂಡು ಇಲ್ಲದ ಶೂನ್ಯದಲ್ಲಿ ಪೀಠವನ್ನೇರಿ ಬಿಟ್ಟರು!
ವಚನ ಚಳವಳಿಯ ಶರಣೆಯರೆಲ್ಲರೂ ಯಕಶ್ಚಿತ್ ‘ಅಕ್ಕ’ ಎಂದು ಕರೆಸಿಕೊಂಡಿದ್ದರೆ 20ನೇ ಶತಮಾನದ ನಾನು ಅವರ ‘ಹ(ಅ)ಮ್ಮ’ನಂತೆ ಎನ್ನುವ ಅಹಂನಿಂದ ‘ಮಾತೆ’ ಎಂಬ ಉಪಸರ್ಗವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇನ್ನು ಸ್ಥಾವರಗೊಂಡಿರುವ ಮೂಲ ಶೂನ್ಯಪೀಠವಿರುವ ಮತ್ತು ಈ ಮಾತೆಯ ಮೂಲವೂ ಆದ ಚಿತ್ರದುರ್ಗ ಪಟ್ಟಣದ ಒಂದು ಪಟಾಲಂ ತನ್ನ ಸದಸ್ಯರ ಕಾರುಗಳ ಹಿಂದೆ ಇತ್ತೀಚಿನ ದಶಕದಲ್ಲಿ ‘ಜಗದ್ಗುರು’ ಎಂದು ಬರೆಸಿ ಕೊಂಡಿತ್ತು ಎಂಬುವಲ್ಲಿಯವರೆಗೆ ಈ ಆಧುನಿಕ ಜಗದ್ಗುರು ಪಟ್ಟವಲ್ಲರಿ ವಿಸ್ತರಿಸಿಕೊಂಡು ಬಂದಿದೆ!
ಈ ಮಾತೆಯ ಸಂತತಿ ಬೆಳೆಸಲು ಶೈಕ್ಷಣಿಕವಾಗಿ ಸಾಧನೆ ಮಾಡಲಾಗದೆ ಬೆಳೆಸಿಕೊಂಡ ತಮ್ಮ ವೈಯಕ್ತಿಕ ಜಂಗಮ ದ್ವೇಷದಿಂದ ಮತ್ತು ಶೀಘ್ರಸ್ಖಲಿತ ಸಂಶೋಧನೆಗಳ ಕಾರಣ ಶೂನ್ಯಪೀಠದ ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳಿಂದಲೇ ಅವಮಾನಿತರಾಗಿದ್ದ ಆದರೆ ನಾಡಿನ ಸಂಶೋಧಕಪ್ರಜ್ಞೆ ಎಂದೇ ಖ್ಯಾತ ರಾಗಿರುವ ಎಂ.ಎಂ.ಕಲಬುರ್ಗಿಯವರು ತಮ್ಮ ಉದ್ದಂಡ ವೃತ್ತಿಯನ್ನೇ ಮೀಸಲಿರಿಸಿದರು. ಈ ಸಂಶೋಧಕರ ಸಂಶೋಧನೆಗಳು ಎಷ್ಟೊಂದು ಪೊಳ್ಳಾಗಿದ್ದವು ಎಂದು ಹಿಂದಿನ ಲೇಖನಗಳಲ್ಲಿ ಪುರಾವೆ ಸಮೇತ ನಾನು ಸಾಬೀತುಪಡಿಸಿರುವುದು ಇಲ್ಲಿ ಉಖಾರ್ಹ. ಇನ್ನು ಈ ಸಂಶೋಧಕರು ಮತ್ತು ಪ್ರತ್ಯೇಕವಾದಿಗಳು ಹೇಳುವ ಪಂಚಾಚಾರ್ಯರು ಈ ಧರ್ಮದಲ್ಲಿ ನುಸುಳಿದ್ದರು, ಆಂಧ್ರದ ಆರಾಧ್ಯರು ಬೇರೆ, ಲಿಂಗಾಯತ ಜಂಗಮರು ಬೇರೆ
ಇತ್ಯಾದಿ ಯಾವ ಸಂಗತಿಗಳೂ ಈ ಗ್ರಂಥದಲ್ಲಷ್ಟೇ ಅಲ್ಲದೆ ಯಾವುದೇ ಇತಿಹಾಸಜ್ಞ ಮಾನ್ಯ ದಾಖಲೆಗಳಲ್ಲಿ ಉಖವಾಗಿಲ್ಲ.
ಈ ಗ್ರಂಥವು ಐತಿಹಾಸಿಕ ಸಂಶೋಧನೆಯ ಬಹುಮುಖ್ಯವಾದ ಗ್ರಂಥ ಎಂದು ಫ.ಗು.ಹಳಕಟ್ಟಿಯವರೇ ಪ್ರಸ್ತಾವನೆ
ಯಲ್ಲಿ ನುಡಿದಿದ್ದಾರೆ. ಈ ಗ್ರಂಥದ ಗಂಧಗಾಳಿಯೂ ಗೊತ್ತಿರದೆ ದುರ್ಗಂಧ ಸೂಸಿದ ಸಂಶೋಧಕರ ಸಂಶೋಧನೆ ಎಂಥ ಸುಳ್ಳು ಎಂದು ಈಗ ಜಗತ್ತೇ ಬಲ್ಲುದು. ಹೀಗಿದ್ದರೂ ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಮೀಸೆ ತಿರುವು ವಿಕೆ ಕುತ್ಸಿತ ಕೂಪಮಂಡೂಕವಾದ ಪ್ರತ್ಯೇಕವಾದಿಗಳದ್ದು! ಒಟ್ಟಿನಲ್ಲಿ ಇವರ ವಾದವು, ‘ಎಲ್ಲಿಗೆ ಬಂತು ಸಂಗಯ್ಯ? ಇಲ್ಲಿಗೆ ಬಂತು ಸಂಗಯ್ಯ’ವಾಗಿದೆ!
ಇರಲಿ, ಹೀಗೆ ಅಲ್ಲಿಂದ ಬೆಳೆದ ಈ ಧರ್ಮಘಾತುಕ ಸಮಯವು ಅನೇಕ ಆಸೆ ಆಮಿಷಗಳಿಗೆ ಕೆಲವು ವಿರಕ್ತರನ್ನು
ಒಳಗಾಗಿಸುತ್ತ, ನವ್ಯದ ವಿದೇಶಿ ಕಮ್ಯುನಿ ಸಿದ್ಧಾಂತದ ಮಾಯೆಗೆ ಸಿಲುಕಿಸುತ್ತ, ಮುಗ್ಧ ಭಕ್ತರಲ್ಲಿ ಇಲ್ಲದ ಪುರೋಹಿತ ಶಾಹಿ ಸಂಕಥನವನ್ನು ಹೇಳುತ್ತ ಜಂಗಮದ್ವೇಷವನ್ನು ತುಂಬಿ ಪ್ರತ್ಯೇಕ ಧರ್ಮವನ್ನು ಶೂನ್ಯದಿಂದ ಸೃಷ್ಟಿಸ ತೊಡಗಿತು. ಶೂನ್ಯದಿಂದಲೇ ಪ್ರಪ್ರಥಮ ಮಹಿಳಾ ಜಗದ್ಗುರು, ಮಾತೆ ಇತ್ಯಾದಿ ಉಪಸರ್ಗಗಳನ್ನು ಸೃಷ್ಟಿಸಿ ಕೊಂಡವರಿಗೆ ಅದೇ ಶೂನ್ಯದಿಂದ ಒಂದು ನಿಶ್ಶೂನ್ಯ ಧರ್ಮವನ್ನು ಸೃಷ್ಟಿಸುವುದು ಕಷ್ಟವೇ?! ಅದರಲ್ಲೂ ‘ವೋಟಿಗೆ ನೋಟು’ ಎನ್ನುವ ಚೌಕಾಸಿ ಪ್ರಭುಗಳು, ‘ನೋಟಿಗಾಗಿ ವೋಟು’ ಎನ್ನುವ ದೈನೇಸಿ ಪ್ರಜೆಗಳ ಊಳಿಗಮಾನ್ಯ ಸ್ವೇಚ್ಛಾಚಾರದ ಪ್ರಜಾಪ್ರಭುತ್ವದಲ್ಲಿ ಮತ್ತು ಮೀಸಲಾತಿ ಎನ್ನುವ ಚೀಪುಕಡ್ಡಿ ಮಿಠಾಯಿಯ ಮಧುಮೇಹದ ವ್ಯವಸ್ಥೆಯಲ್ಲಿ! ಹಾಗಾಗಿ ಗುರುವೂ ಇಲ್ಲದೆ, ಜಂಗಮವೂ ಇಲ್ಲದೆ ಲಿಂಗವನ್ನೂ ‘ಲಿಂಗಾರ್ಪಿತ ಲಿಂಗಾರ್ಪಿತ ಲಿಂಗಾರ್ಪಿತ’ ಮಾಡಿ ಕೇವಲ ‘ಆಯತ ಆಯತ ಆಯತ’ದ ಆಯಕಟ್ಟಿಗಾಗಿ ತನುಮನವನ್ನು ಪ್ರತ್ಯೇಕ ಧರ್ಮಿಗಳು ಬಳಲಿಸುತ್ತಿದ್ದಾರೆ.
ಆಯತ ಎಂದರೆ ನೆಲೆ, ಉಚಿತ, ಕ್ರಮ, ಲಾಭ, ಒಳಹರಿವು ಎಂಬೆಲ್ಲ ಅರ್ಥವಿದೆ ಎಂಬುದು ಕನ್ನಡ ಪದ ವಿಶೇಷ. ಉಳಿದಂತೆ, “ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ. ಎನ್ನ ಸ್ವಾಯತ ಸಂದಳಿಯಿತ್ತಯ್ಯಾ. ಎನ್ನ ಸಮಾಧಾನ ತರಹವಾಯಿತ್ತಯ್ಯಾ. ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ. ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧ ವಾದೆನು”. ಬಸವ ಸ್ಥಾಪಿತ ಶೂನ್ಯಪೀಠದ ‘ನಿರಂಜನವಂಶ ರತ್ನಾಕರ’ದ ನಿಯಮಾವಳಿಗಳ ಪ್ರಕಾರವಾಗಿ ದೀಕ್ಷೆ ಪಡೆಯದೆ ಲಿಂಗಾಯತದ ಹೊರಗುಳಿದ ಇಂತಪ್ಪ ಸ್ವಘೋಷಿತ ಜಗದ್ಗುರುಗಳು ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ಬಾಲವೇ ಆನೆಯನ್ನು ಅಡಿಸಿದಂತೆ!
ದೇಶದ ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಿದಾಗ ಮನುಸ್ಮೃತಿಯಲ್ಲಿ ಇಲ್ಲದ್ದು ಇದೆಯೆಂದು ಹೇಗೆ ಸಮಗ್ರವಾಗಿ
ರಾಷ್ಟ್ರೀಯವಾಗಿ ಸಂವಿಧಾನದಲ್ಲಿ ಸಾದರಪಡಿಸಲಾಗಿದೆಯೋ ಅದೇ ಮಾದರಿಯನ್ನು ಸಂಕ್ಷಿಪ್ತವಾಗಿ ಪ್ರಾದೇಶಿಕ ವಾಗಿ ಈ ಧರ್ಮಕಾರಣದಲ್ಲಿ ಪ್ರಯೋಗಿಸಲಾಗುತ್ತಿದೆ. ವಿದೇಶಿ ಬ್ರಿಟಿಷರ ‘ವಿಭಜಿಸಿ ಆಳು’ ನೀತಿ ಬ್ರಿಟಿಷರಿಗೆ ಅನಿವಾರ್ಯವಾಗಿತ್ತು, ಮಾಡಿದರು. ಆದರೆ ಸ್ವದೇಶಿ ಚಳವಳಿ ಮಾಡಿಯೇ ಪಡೆದ ಸ್ವತಂತ್ರ ಭಾರತದಲ್ಲಿ ಮಾಡಿದ ಸಾಂವಿಧಾನಿಕ ಜಾತಿನೀತಿಯ ವಿಭಜನೆ ಯಾರಿಗೆ ಬೇಕಿತ್ತು ಎಂಬುದು ಸ್ಪಟಿಕದ ಶಲಾಕೆಯಷ್ಟೇ ಸುಸ್ಪಷ್ಟ. ಹಾಗೆಯೇ ಅಂಬೇಡ್ಕರರ ನಿಲುವೂ ಮಾಣಿಕ್ಯದ ದೀಪ್ತಿಯಷ್ಟೇ ಉಜ್ವಲ. ‘ಸತ್ಯಮೇವ ಜಯತೆ’ ಎಂಬ ಉದ್ಘೋಷದ ರಾಷ್ಟ್ರದಲ್ಲಿ ಅಸತ್ಯವೇ ಏಕಮೇವ ಜಯಶಾಲಿಯಾಗಿದೆ!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hunj Column: ಶರಣರು ಸನಾತನ ಧರ್ಮದ ವಿರುದ್ದ ಹೋರಾಡಿದ್ದರೇ ?